ಬುಧವಾರ, ಮೇ 25, 2022
29 °C

ಚಾಮರಾಜನಗರ: ಕೃಷಿ ಕಾಯ್ದೆ ವಾಪಸ್‌; ಕಬ್ಬು ಬೆಳೆಗಾರರರ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಘೋಷಣೆಯನ್ನು ಸ್ವಾಗತಿಸಿರುವ ಕಬ್ಬುಬೆಳೆಗಾರರ ಸಂಘದ ಪದಾಧಿಕಾರಿಗಳು ನಗರದಲ್ಲಿ ಶುಕ್ರವಾರ ಸಿಹಿ ಹಂಚಿ, ಪಟಾಕಿ ಸಿಡಿಸಿ, ನೃತ್ಯ ಮಾಡಿ ಸಂಭ್ರಮಾಚರಣೆ ಮಾಡಿದರು.

ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಭುವನೇಶ್ವರಿ ವೃತ್ತದವರೆಗೂ ಮೆರವಣಿಗೆ ನಡೆಸಿದ ಕಬ್ಬು ಬೆಳೆಗಾರರು, ರೈತರ ಪರ ಘೋಷಣೆ ಕೂಗಿದರು. ಸಾರ್ವಜನಿಕರಿಗೆ ಸಿಹಿ ಹಂಚಿದರು. ತಮಟೆಯ ನಾದಕ್ಕೆ ಹೆಜ್ಜೆ ಹಾಕುತ್ತಾ ಖುಷಿಯಿಂದ ಕುಣಿದಾಡಿದರು. 

ಕಬ್ಬು ಬೆಳೆಗಾರರ ಸಂಘದ ಮೈಸೂರು–ಚಾಮರಾಜನಗರ ಘಟಕದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಅವರು ಮಾತನಾಡಿ, ‘ದೇಶದಲ್ಲಿ ರೈತ ವಿರೋಧಿಯಾದ ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿತ್ತು. ಇವು ರೈತರಿಗೆ ಮಾರಕವಾದ ಕಾನೂನುಗಳು. ಇವುಗಳ ವಿರುದ್ಧ ರೈತರು ದೇಶದಾದ್ಯಂತ ಸಾಕಷ್ಟು ಹೋರಾಟಗಳು ನಡೆಸಿದ್ದಾರೆ. ನೂರಾರು ರೈತರು ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಜನಸಾಮಾನ್ಯರು ಕೂಡ ಕಾಯ್ದೆಗಳನ್ನು ವಿರೋಧಿಸಿದ್ದರು. ಈ ಕಾಯ್ದೆಗಳು ಮುಂದುವರಿದರೆ ಸರ್ಕಾರ, ಪಕ್ಷಕ್ಕೆ ಉಳಿಗಾಲವಿಲ್ಲ ಎಂಬುದನ್ನು ಅರಿತು ಪ್ರಧಾನಿ ಮೋದಿ ಅವರು ಕಾನೂನುಗಳನ್ನು ವಾಪಸ್‌ ಪಡೆಯುವ ಘೋಷಣೆ ಮಾಡಿದ್ದಾರೆ’ ಎಂದರು. 

‘ಸಂಸತ್ತಿನಲ್ಲಿ ಕಾಯ್ದೆ ವಾಪಸ್‌ ಪಡೆದು, ಮೂಲ ಕಾನೂನುಗಳಿಗೆ ಧಕ್ಕೆ ತರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು. ಕನಿಷ್ಠ ಬೆಂಬಲ ಬೆಲೆ ಕಾನೂನನ್ನು ಮುಂದಿನ ಚಳಿಗಾಲ ಅಧಿವೇಶನದಲ್ಲಿ ಮಂಡಿಸಿ ಕಾನೂನುಗಳನ್ನು ಜಾರಿಗೆ ತರಬೇಕು’ ಎಂದು ಅವರು ಆಗ್ರಹಿಸಿದರು. 

ಪಟೇಲ್ ಶಿವಮೂರ್ತಿ, ಮೂಡ್ಲುಪುರ ನಾಗರಾಜ್, ಹಾಡ್ಯ ರವಿ, ಕುರುಬೂರು ಪ್ರದೀಪ್, ಉಡಿಗಾಲ ಮಂಜು, ಗುರು, ಶೇಖರ್, ರೇವಣ್ಣ, ಕೆಂಪರಾಜು, ಬಾಬು, ನಾಗರಾಜಪ್ಪ, ಸೋಮಶೇಖರ್ ಇತರರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು