ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ, ಧರ್ಮದ ಹಿಂದೆ ಬಿದ್ದ ಮಾನವ: ಶ್ರೀನಿವಾಸ ಪ್ರಸಾದ್‌

ಕನಕದಾಸ ಜಯಂತಿ; ಶ್ರೇಷ್ಠ ಸಂತನ ಸ್ಮರಣೆ, ತತ್ವ ಆದರ್ಶಗಳ ಪಾಲನೆಗೆ ಕರೆ
Last Updated 11 ನವೆಂಬರ್ 2022, 16:39 IST
ಅಕ್ಷರ ಗಾತ್ರ

ಚಾಮರಾಜನಗರ: ದೇಶದಾದ್ಯಂತ ನೂರಾರು ಸಮಾಜ ಸೇವಕರು ಬಂದಿದ್ದರೂ, ಅವರ ತತ್ವ ಆದರ್ಶಗಳು ಅವರ ಕಾಲಕ್ಕೆ ಹೊರಟು ಹೋಗಿದೆ. ಜಗತ್ತಿನಲ್ಲಿ ಎಲ್ಲ ಕ್ಷೇತ್ರಗಳು ಬದಲಾಗಿವೆ. ಆದರೆ, ಮನುಷ್ಯ ಮಾತ್ರ ಬದಲಾಗಿಲ್ಲ ಇನ್ನೂ ಜಾತಿಯ ಹಿಂದೆ ಬಿದ್ದಿದ್ದಾನೆ’ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಶುಕ್ರವಾರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ದಾಸ ಶ್ರೇಷ್ಠ ಕನಕದಾಸ ಅವರ 535ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕನಕದಾಸರು, ಕುಲ ಕುಲ ಎಂದು ಹೊಡೆದಾಡದಿರಿ ಅಂತ ಹೇಳಿದ್ದಾರೆ. ಆದರೆ ನಾವು ಜಾತಿ ಎಂದು ಹೊಡೆದಾಡುತ್ತಿದ್ದೇವೆಲ್ಲ. ಕನಕದಾಸರಂತಹ ನೂರಾರು ಸಮಾಜ ಸುಧಾರಕರು ಹೇಳಿದ್ದ ಆಚಾರ ವಿಚಾರಗಳನ್ನು ಪಾಲಿಸಿದ್ದರೆ ನಮ್ಮ ಸಮಾಜ ಎಷ್ಟೊಂದು ಬದಲಾಗಬೇಕಿತ್ತು? ನಾವೀಗ ಜಾತಿ, ಧರ್ಮವನ್ನು ವೈಭವೀಕರಿಸುತ್ತಿದ್ದೇವೆ. ಜಾತಿ, ಧರ್ಮಗಳು ಜನರ ಒಳಿತಿಗಾಗಿ ಇರಬೇಕು. ಯಾವುದೇ ಜಾತಿ, ಧರ್ಮ ಆಗಲಿ ಮನುಷ್ಯನ ಒಳಿತಿಗಾಗಿ ಚಿಂತನೆ ಮಾಡಬೇಕು’ ಎಂದರು.

‘ಭಕ್ತಿ ಪಥದಲ್ಲಿ 250ಕ್ಕೂ ಹೆಚ್ಚು ದಾಸರು ಇದ್ದಾರೆ. ಅವರಲ್ಲಿ ಕನಕದಾಸರು ಮಾತ್ರ ಹಿಂದುಳಿದ ವರ್ಗಕ್ಕೆ ಸೇರಿದವರು. ‘ಸಮಾಜದಲ್ಲಿ ಸಮಾನತೆ ಇರಬೇಕು. ಪ್ರತಿಯೊಬ್ಬರನ್ನು ಪ್ರೀತಿ ವಿಶ್ವಾಸದಲ್ಲಿ ಕಾಣಬೇಕು’ ಎಂದು ಪ್ರತಿಪಾದಿಸಿದ್ದ ಅವರು, ಇಡೀ ಸಮಗ್ರ ಸಮಾಜಕ್ಕೆ, ಜನರಿಗೆ ಬೇಕಾದವರು’ ಎಂದು ಶ್ರೀನಿವಾಸ ಪ್ರಸಾದ್ ಬಣ್ಣಿಸಿದರು.

ಮುಖ್ಯ ಭಾಷಣ ಮಾಡಿದ ನಿವೃತ್ತ ಶಿಕ್ಷಕ ಶಿವಣ್ಣ ಇಂದ್ವಾಡಿ ಮಾತನಾಡಿ, ‘ಕನಕದಾಸರು ಕೀರ್ತನೆಕಾರರು ಮಾತ್ರವಲ್ಲ; ವರಕವಿ ಆಗಿದ್ದರು.12ನೇ ಶತಮಾನದಲ್ಲಿ ಭಕ್ತಿಗೆ ಬಸವಣ್ಣ ಇದ್ದರೆ,ಜ್ಞಾನಕ್ಕೆ ಚೆನ್ನಬಸವಣ್ಣ ಅವರಿದ್ದರು. ವೈರಾಗ್ಯಕ್ಕೆ ಅಲ್ಲಮಪ್ರಭು ಆಗಿದ್ದರು. 16ನೇ ಶತಮಾನದ ದಾಸ ಪರಂಪರೆಯಲ್ಲಿ ಭಕ್ತಿ, ಜ್ಞಾನ ಹಾಗೂ ವೈರೈಗ್ಯಕ್ಕೆ ಕನಕದಾಸರು ಒಬ್ಬರೇ ಆಗಿದ್ದರು. ಸ್ವಾಭಾವಿಕವಾದ ವರ್ಣನಾ ಕೌಶಲ ಹೊಂದಿದ್ದ ಅವರ ಸಾಹಿತ್ಯ ಶ್ರೀಮಂತವಾಗಿತ್ತು. ‘ನಾನು ಹೋದರೆ ಹೋದೇನು’ ಎಂಬ ಒಂದೇ ವಾಕ್ಯದಲ್ಲಿ ಮನುಷ್ಯ ಅಹಂಕಾರವನ್ನು ಬಿಡಬೇಕು ಎಂದು ಪ್ರತಿಪಾದಿಸಿದ್ದರು. ಆತ್ಮಶಕ್ತಿಗಿಂದ ದಿವ್ಯಶಕ್ತಿ ಬೇರೊಂದು ಇಲ್ಲ ಎಂದು ಕನಕದಾಸರು ಹೇಳಿದ್ದರು’ ಎಂದು ಹೇಳಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ‘ಕನಕದಾಸರು ಬಹಳ ಅರ್ಥಗರ್ಭಿತ ಕೀರ್ತನೆಗಳನ್ನು ರಚಿಸಿ ಸಮಾಜವನ್ನು ತಿದ್ದಿ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದವರು. ಅವರ ಕೀರ್ತನೆಗಳ ಸಾರವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು’ ಎಂದರು.

ಮೈಸೂರು ಜಿಲ್ಲೆಯ ಕೆ.ಆರ್.ನಗರದ ಕಾಗಿನೆಲೆ ಕನಕ ಗುರುಪೀಠದ ಶಿವಾನಂದಪುರಿ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.

ನಗರಸಭೆ ಅಧ್ಯಕ್ಷೆ ಸಿ.ಎಂ.ಆಶಾ, ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ. ಹೆಚ್ಚುವರಿ ಪೊಲೀಸ್ ವರಿಷ್ಠಧಿಕಾರಿ ಕೆ.ಎಸ್.ಸುಂದರರಾಜ್‌, ಡಿವೈಎಸ್.ಪಿ ಪ್ರಿಯದರ್ಶಿನಿ ಸಾಣಿಕೊಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಲಿಂಗಯ್ಯ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಸಿ.ಎನ್.ಬಾಲರಾಜು, ಇತರರು ಇದ್ದರು.

ಮೆರವಣಿಗೆ: ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಕನಕದಾಸರ ಭಾವಚಿತ್ರಗಳ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ನಡೆಯಿತು. ನಗರದ ಪ್ರವಾಸಿ ಮಂದಿರದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಜಿಟಿ ಜಿಟಿ ಸುರಿಯುತ್ತಿದ್ದ ಮಳೆಯ ನಡುವೆಯೇ ಯುವಕರು ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಬಿಜೆಪಿ ಮುಖಂಡ ಅಮ್ಮನಪುರ ಮಲ್ಲೇಶ್‌ ಅವರು ಮೆರವಣಿಗೆಯಲ್ಲಿ ಭಾಗವಹಿಸಿದ್ದವರಿಗೆ ಲಾಡು ವಿತರಿಸಿದರು.

‘ಕನಕ ಭವನಕ್ಕೆ ₹10 ಲಕ್ಷ’

‘ನಗರದಲ್ಲಿ ಕನಕ ಭವನ ನಿರ್ಮಾಣ ಮಾಡಬೇಕು ಎಂಬ ಬೇಡಿಕೆಯನ್ನು ಸಮುದಾಯದವರು ಇಟ್ಟಿದ್ದಾರೆ. ಅದಕ್ಕಾಗಿ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ₹10 ಲಕ್ಞ ನೀಡುತ್ತೇನೆ’ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಘೋಷಿಸಿದರು.

‘ಕನಕ ಭವನವು ಕೇವಲ ಕಾರ್ಯಕ್ರಮಗಳಿಗೆ ಸೀಮಿತವಾಗಬಾರದು. ಅದು ದಾಸರ ಚಿಂತನೆಗಳನ್ನು ಪಸರಿಸುವ ಕೇಂದ್ರವಾಗಬೇಕು. ಅವರ ಸಂದೇಶಗಳನ್ನು ಚರ್ಚಿಸುವ ಕೆಲಸ ಅಲ್ಲಿ ಆಗಬೇಕು’ ಎಂದು ಆಶಿಸಿದರು.

ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ.ರಾಜ್‌ಕುಮಾರ್‌ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮಧ್ಯಾಹ್ನ 2.30ರವರೆಗೆ ವಿದ್ಯುತ್‌ ಪೂರೈಕೆ ಸಮರ್ಪಕವಾಗಿತ್ತು. ಸ್ವಾಮೀಜಿ ಅವರು ಮಾತನಾಡಲು ಆರಂಭಿಸುವ ಹೊತ್ತಿಗೆ ಪದೇ ಪದೇ ವಿದ್ಯುತ್‌ ಹೋಗಲು ಶುರುವಾಯಿತು. ಇದರಿಂದ ಪ್ರೇಕ್ಷಕರು ಅಸಮಾಧಾನಗೊಂಡರು. ಅಲ್ಲದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿಲ್ಲ ಎಂದು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕುರುಬ ಸಮುದಾಯದ ಹಲವರು ವೇದಿಕೆಯಲ್ಲೇ ಕೂಗಾಡುತ್ತ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಜಿಲ್ಲಾಡಳಿತ ಭವನದ ಮುಂಭಾಗ ಸೇರಿ, ಜಿಲ್ಲಾಡಳಿತ ಸರಿಯಾಗಿ ಕಾರ್ಯಕ್ರಮ ಹಮ್ಮಿಕೊಳ್ಳದೆ ಕನಕದಾಸರಿಗೆ ಅವಮಾನ ಮಾಡಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌, ಅಹವಾಲು ಸ್ವೀಕರಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸೋಮವಾರ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್‌ ಪಡೆದರು.

‘ಜಿಲ್ಲಾಡಳಿತ ಜನರೇಟರ್‌ ವ್ಯವಸ್ಥೆ ಮಾಡಬೇಕಿತ್ತು. ಸಾವಿರಕ್ಕೂ ಹೆಚ್ಚು ಜನರು ಬರುತ್ತಾರೆ ಎಂದು ಗೊತ್ತಿದ್ದರೂ, 400 ಜನರಿಗೆ ಮಾತ್ರ ಊಟದ ವ್ಯವಸ್ಥೆ ಮಾಡಲಾಗಿತ್ತು’ ಎಂದು ಮುಖಂಡರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT