ಶನಿವಾರ, ನವೆಂಬರ್ 28, 2020
23 °C
ಜಿಲ್ಲಾಡಳಿತ ಭವನದ ಎದುರು ಸರಳ ಕಾರ್ಯಕ್ರಮ, ರಾಷ್ಟ್ರಧ್ವಜ, ನಾಡಧ್ವಜಾರೋಹಣ, ಕೊರೊನ ವಾರಿಯರ್ಸ್‌ಗಳಿಗೆ ಸನ್ಮಾನ

ಕನ್ನಡ ಹೃದಯದ ಭಾಷೆಯಾಗಬೇಕು: ಡಾ.ಎಂ.ಆರ್.ರವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಪ್ರಾಚೀನ ಇತಿಹಾಸ ಹೊಂದಿರುವ ಹಿರಿಮೆ  ಕನ್ನಡ ಭಾಷೆ ಹಾಗೂ ಪ್ರದೇಶಕ್ಕೆ ಇದೆ. ಇಂತಹ ಮೇರು ಕನ್ನಡ ಭಾಷೆ ಹೃದಯದ ಭಾಷೆಯಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಆಶಿಸಿದರು. 

ಜಿಲಾಡಳಿತದ ವತಿಯಿಂದ ಜಿಲ್ಲಾಡಳಿತ ಭವನದ ಮುಂಭಾಗ ಆಯೋಜಿಸಲಾಗಿದ್ದ 65ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘ಕನ್ನಡನಾಡು ನುಡಿಗೆ ಗೌರವ ಸಲ್ಲಿಸಬೇಕು. ಮನೆ ಮತ್ತು ಮನಸ್ಸು ಕನ್ನಡವಾಗಿರಬೇಕು. ತಂತ್ರಜ್ಞಾನ ಸಾಕಷ್ಟು ಬೆಳವಣಿಗೆಯಾಗಿದೆ. ಆಡಳಿತದಲ್ಲಿ ಕನ್ನಡ ಸಂಪೂರ್ಣವಾಗಿ ಬಳಸಬೇಕು. ಕನ್ನಡದ ಕೆಲಸ ಪ್ರೀತಿಯ ಕೆಲಸವಾಗಬೇಕು. ಶುದ್ಧ ವ್ಯಾಕರಣಕ್ಕೆ ಮಹತ್ವ ನೀಡಬೇಕು’ ಎಂದು ಪ್ರತಿಪಾದಿಸಿದರು.‌

‘ಹರಿದು ಹಂಚಿ ಹೋಗಿದ್ದ ಕನ್ನಡನಾಡಿನಲ್ಲಿ ಕರ್ನಾಟಕ ಏಕೀಕರಣ ಚಳವಳಿ ಅತ್ಯಂತ ಮಹತ್ವದ ಘಟ್ಟವಾಗಿದೆ. ಕನ್ನಡ ನಾಯಕರು ಕವಿ ಸಾಹಿತಿ, ಬರಹಗಾರರು ಸೇರಿದಂತೆ ಅನೇಕರು ನಡೆಸಿದ ಪ್ರಯತ್ನದ ಫಲವಾಗಿ ಏಕೀಕರಣವಾಗಿ ಮೈಸೂರು ರಾಜ್ಯ ಕರ್ನಾಟಕವಾಯಿತು’ ಎಂದರು.

ತಪ್ಪು ಕಲ್ಪನೆ ಬಿಡಿ: ‘ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವ ಮನೋಭಾವ ಹೊಂದಬೇಕು. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದರೆ ಉನ್ನತ ಸ್ಥಾನಮಾನ ಹಾಗೂ ದೊಡ್ಡ ಹುದ್ದೆಗಳಿಗೆ ಹೋಗಲು ಸಾಧ್ಯವಿಲ್ಲ ಎಂಬ ತಪ್ಪು ಕಲ್ಪನೆ ಹಲವರಲ್ಲಿದ್ದು, ಇದು ಹೋಗಬೇಕಿದೆ. ಮಕ್ಕಳಿಗೆ ಕನ್ನಡ ಭಾಷೆಯನ್ನು ಹೇಳಿಕೊಡಲು ಮನೆಗಳಲ್ಲಿ ಕನ್ನಡ ಪರಿಸರ ನಿರ್ಮಾಣ ಮಾಡುವುದನ್ನು ಮರೆಯಬಾರದು’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಅಭಿಪ್ರಾಯಪಟ್ಟರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡಿ, ‘ಕನ್ನಡ ನಾಡು ವಿವಿಧತೆಯಲ್ಲಿ ಏಕತೆ ಹೊಂದಿದೆ. ಕನ್ನಡ ನಾಡು, ನುಡಿಯನ್ನು ರಕ್ಷಿಸಿ ಉಳಿಸಿ ಬೆಳೆಸುವ ಅಗತ್ಯವಿದೆ. 1973ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಕನ್ನಡನಾಡಿಗೆ ಕರ್ನಾಟಕ ಎಂದು ನಾಮಕರಣ ಮಾಡಿದರು. ಕನ್ನಡ ನಾಡಿನ ಬೆಳವಣಿಗೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್, ಕೆಂಪೇಗೌಡ, ವಿಶ್ವೇಶ್ವರಯ್ಯ, ಸಂಗೊಳ್ಳಿ ರಾಯಣ್ಣ, ಮುಂತಾದವರ ಪಾತ್ರ ಪ್ರಮುಖವಾಗಿದೆ’ ಎಂದು ಹೇಳಿದರು.

ಇದಕ್ಕೂ ಮುನ್ನ ಜಿಲ್ಲಾಡಳಿತ ಭವನ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿದರು. ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.

ಸನ್ಮಾನ: 2019–20ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ ರಾಧಿಕಾ, ರೂಪಾ, ರೂಪಶ್ರೀ, ಸಂಜನಾ, ಸಿರಿನ್ ತಾಜ್, ಹೇಮಾವತಿ, ರೋಜಾ, ಶಿವಕುಮಾರಿ, ಶ್ವೇತಾ, ಸೋನು, ಕಲ್ಪನಾ, ರಶ್ಮಿ, ಮಹದೇವಪ್ರಸಾದ್, ಮನೋಜ್, ಗೌತಮ್ ಅವರಿಗೆ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಲಾಯಿತು.

ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ 100ಕ್ಕೆ 100 ಅಂಕ ಪಡೆದ ಕವಿತಾ, ರಂಜಿತಾ, ಕಾವ್ಯ, ಪ್ರಿಯಾಂಕ, ಸುದೀಪ, ಧನುಷ್ ಅವರನ್ನು‌ ಗೌರವಿಸಲಾಯಿತು. 

‌ಕೋವಿಡ್‌ ನಿಂತ್ರಣಕ್ಕಾಗಿ ಶ್ರಮಿಸಿದ ಪೌರಕಾರ್ಮಿಕರು, ವೈದ್ಯರು ಹಾಗೂ ವೈದಕೀಯ ಸಿಬ್ಬಂದಿಯನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ, ಉಪಾಧ್ಯಕ್ಷೆ ಶಶಿಕಲಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಎಚ್.ಎಸ್.ಶೋಭಾ, ಉಪಾಧ್ಯಕ್ಷ ಕೆ.ರವೀಶ್, ಚುಡಾ ಅಧ್ಯಕ್ಷ ಪಿ.ಬಿ.ಶಾಂತಮೂರ್ತಿ ಕುಲಗಾಣ, ಜಿಲ್ಲಾ ಪಂಚಾಯಿತಿ ಸದಸ್ಯ ಕೆರೆಹಳ್ಳಿ ನವೀನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೋಯರ್ ಹರ್ಷಲ್ ನಾರಾಯಣರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ಇತರರು ಇದ್ದರು.

ನಾಡಿನ ಪರಂಪರೆ, ಸಂಸ್ಕೃತಿಯ ಅರಿವು ಅಗತ್ಯ: ಎಸ್. ಸುರೇಶ್ ಕುಮಾರ್
ರಾಜ್ಯದ ಪ್ರಸಿದ್ಧ ಸಾಹಿತಿಗಳು, ಕವಿಗಳು, ಮಕ್ಕಳ ಸಾಹಿತಿಗಳ ಮುಂತಾದ ಕೃತಿಗಳನ್ನು ನಮ್ಮ ಶಾಲಾ ಮಕ್ಕಳು ಅಭ್ಯಾಸ ಮಾಡಿ ಈ ನಾಡಿನ ಪರಂಪರೆ ನೆಲಸಂಸ್ಕೃತಿಯ ಅರಿವು ಪಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಹೇಳಿದ್ದಾರೆ.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲೆಯ ಜನತೆಗೆ ಶುಭಕೋರಿ ಸಂದೇಶ ಕಳುಹಿಸಿರುವ ಅವರು, ‘ಇಂದು ಜಗತ್ತಿನಲ್ಲಿ ಅತ್ಯುತ್ತಮ ಸಾಹಿತ್ಯ ಸಂಪತ್ತನ್ನು ಹೊಂದಿರುವ ಕೆಲವೇ ಭಾಷೆಗಳಲ್ಲಿ ಕನ್ನಡವೂ ಒಂದು. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ. ನಮ್ಮ ನೆಲದಲ್ಲಿ ವಿಪುಲವಾದ ನೈಸರ್ಗಿಕ ಸಂಪತ್ತು ಇದೆ. ವಿಶಾಲವಾದ ಅರಣ್ಯ ಪ್ರದೇಶ, ಕೃಷಿ ಕ್ಷೇತ್ರಗಳು ಇವೆ. ಮೈಮುರಿದು ದುಡಿದು ಅನ್ನ ಬೆಳೆಯುವ ರೈತ ಬಂಧುಗಳಿದ್ದಾರೆ. ನಾನಾ ಕೈಗಾರಿಕೆಗಳಲ್ಲಿ ಹಗಲು ರಾತ್ರಿ ಕೆಲಸ ಮಾಡಿ ರಾಜ್ಯದ ಸಂಪತ್ತನ್ನು ಹೆಚ್ಚಿಸುವ ಶ್ರಮಜೀವಿ ಕಾರ್ಮಿಕರು ನಮ್ಮಲ್ಲಿದ್ದಾರೆ. ಇಂದಿನ ಜಾಗತೀಕರಣ ಯುಗದಲ್ಲಿ ಜ್ಞಾನ ಹಾಗೂ ಬುದ್ಧಿಬಲವನ್ನು ಚೆನ್ನಾಗಿ ಬಳಸಿಕೊಂಡು ದೇಶದಲ್ಲಿ ಹಣದ ಹೊಳೆಯನ್ನು ಹರಿಸುತ್ತಿರುವ ತಂತ್ರಜ್ಞರಿದ್ದಾರೆ. ಇಲ್ಲಿ ಎಲ್ಲ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಬೇರೆ ಬೇರೆ ವೃತ್ತಿಗಳನ್ನು ಅವಲಂಬಿಸಿರುವ ಎಲ್ಲ ಜನರು ನಾಡಿನ ಏಳಿಗೆಗಾಗಿ ನಿರಂತರ ದುಡಿಯುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ. 

‘ನಾವೆಲ್ಲರೂ ಸೇರಿ ಕನ್ನಡವನ್ನು ಎದೆಯಾಳದಲ್ಲಿ ಇಟ್ಟುಕೊಂಡು ಉಳಿಸಿ ಬೆಳೆಸಲು ಮುಂದಾಗೋಣ. ನಮ್ಮ ಕನ್ನಡ ಉಳಿದರೆ ನಾವು ಉಳಿಯುತ್ತೇವೆ. ನಮ್ಮ ಪರಂಪರೆ ಉಳಿಯುತ್ತದೆ. ಕನ್ನಡವಿಲ್ಲದೇ ನಮ್ಮ ಅಸ್ತಿತ್ವವಿಲ್ಲ. ಕಸ್ತೂರಿ ಕನ್ನಡ ಉಳಿಸಲು ನಾವೆಲ್ಲ ಬದ್ಧರಾಗೋಣ. ಆ ಮೂಲಕ ನಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳೋಣ’ ಎಂದು ಸಚಿವರು ಹೇಳಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು