ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ | ಹಾಲಿ ಶಾಸಕರಿಗೆ ವಿರೋಧದ ಬಿಸಿ; ಕೈ–ಕಮಲ ನಡುವೆ ನೇರ ಹಣಾಹಣಿ

ಎರಡೂ ಪಕ್ಷಗಳಲ್ಲಿ ತಲಾ ಇಬ್ಬರು ಆಕಾಂಕ್ಷಿಗಳು, ಟಿಕೆಟ್‌ ಯಾರಿಗೆ?
Last Updated 20 ಡಿಸೆಂಬರ್ 2022, 5:11 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ರಾಜ್ಯದ ದಕ್ಷಿಣ ತುದಿಯಲ್ಲಿರುವ ಜಿಲ್ಲೆಯ ಗಡಿ ವಿಧಾನಸಭಾ ಕ್ಷೇತ್ರವಾದ ಗುಂಡ್ಲುಪೇಟೆ ರಾಜಕೀಯವಾಗಿ ಅತ್ಯಂತ ಮಹತ್ವದ ಕ್ಷೇತ್ರ.

ಒಂದು ಕಾಲದಲ್ಲಿ ಜನತಾ ಪರಿವಾರ, ಕಾಂಗ್ರೆಸ್‌ನ ಭದ್ರ ಕೋಟೆಯಾಗಿದ್ದ ಕ್ಷೇತ್ರದಲ್ಲಿ ಈಗ ಬಿಜೆಪಿ ಶಾಸಕರಿದ್ದಾರೆ. 2023ರ ವಿಧಾನಸಭಾ ಚುನಾವಣೆ ಹತ್ತಿರದಲ್ಲಿರುವಂತೆಯೇ ಕ್ಷೇತ್ರದಲ್ಲಿ ರಾಜಕೀಯ ಬಿರುಸು ಪಡೆದಿದೆ. ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಪೈಪೋಟಿ ಇದೆ.

25 ವರ್ಷಗಳ ಕಾಲ ಕ್ಷೇತ್ರವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದ ಎಚ್‌.ಎಸ್‌.ಮಹದೇವಪ್ರಸಾದ್‌ ಅವರ ನಿಧನ ನಂತರ ಕಾಂಗ್ರೆಸ್‌ನ ಶಕ್ತಿ ಕುಂದಿರುವುದು ಕಳೆದ ಚುನಾವಣೆಯಲ್ಲಿ ಸಾಬೀತಾಗಿತ್ತು. ಬಿಜೆಪಿಯ ಸಿ.ಎಸ್‌.ನಿರಂಜನಕುಮಾರ್‌ ಅವರು ಮಹದೇವಪ್ರಸಾದ್‌ ಪತ್ನಿ ಎಂ.ಸಿ.ಮೋಹನಕುಮಾರಿ ಅವರನ್ನು16,684 ಮತಗಳಿಂದ ಸೋಲಿಸಿದ್ದರು. ನಂತರ ನಡೆದ ಲೋಕಸಭಾ ಚುನಾವಣೆ, ಪುರಸಭೆ ಚುನಾವಣೆ, ಎಪಿಎಂಸಿ ಚುನಾವಣೆಗಳಲ್ಲಿ ಬಿಜೆಪಿ ಕೈ ಮೇಲಾಗಿರುವುದನ್ನು ಅಂಕಿ ಅಂಶಗಳು ಹೇಳುತ್ತವೆ.

ಐದು ಬಾರಿ ಶಾಸಕರಾಗಿದ್ದ ಮಹದೇವ ಪ್ರಸಾದ್‌ ಅವರು ವಿಧಾನಸಭಾ ಸದಸ್ಯರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಕ್ಷೇತ್ರ ಹಾಗೂ ಜಿಲ್ಲೆಗೆ ಮಾಡಿರುವ ಕೆಲಸಗಳನ್ನು ನೆನೆಸಿಕೊಳ್ಳುವವರು ಈಗಲೂ ಇದ್ದಾರೆ. ಅವರ ಮಗ, ಎಚ್‌.ಎಂ.ಗಣೇಶ್‌ ಪ್ರಸಾದ್‌ ನಾಲ್ಕೂವರೆ ವರ್ಷಗಳಿಂದ ತಮ್ಮ ತಂದೆಯ ನೆರಳಿನಲ್ಲಿ ರಾಜಕಾರಣದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಚುನಾವಣಾ ರಾಜಕೀಯಕ್ಕೂ ಧುಮಕಲು ಬಯಸಿರುವ ಅವರು ಟಿಕೆಟ್‌ ಬಯಸಿ ಕೆಪಿಸಿಸಿ‌ಗೆ ಅರ್ಜಿಯನ್ನೂ ಸಲ್ಲಿಸಿದ್ದಾರೆ. ಸಿದ್ಧರಾಮಯ್ಯ ಸೇರಿದಂತೆ ಹಲವು ಹಿರಿಯ ಮುಖಂಡರ ಆಶೀರ್ವಾದವನ್ನು ಹೊಂದಿರುವ ಅವರು, ಮುಂದಿನ ಚುನಾವಣೆಯಲ್ಲಿ ಪ‍ಕ್ಷದ ಅಭ್ಯರ್ಥಿಯಾಗುವ ವಿಶ್ವಾಸದಲ್ಲಿದ್ದಾರೆ.

‘ಮಹದೇವಪ್ರಸಾದ್‌ ಅವರ ಬೆಂಬಲಿಗರು, ಅನುಯಾಯಿಗಳು ಈಗಲೂ ಕ್ಷೇತ್ರದಲ್ಲಿದ್ದಾರೆ. ತಂದೆ ಇದ್ದಾಗ ಹೆಚ್ಚು ಕ್ಷೇತ್ರದಲ್ಲಿ ಸುತ್ತಾಡದೇ ಇದ್ದ ಗಣೇಶ್‌ ಪ್ರಸಾದ್‌ ಈಗ ಜನರೊಂದಿಗೆ ಹೆಚ್ಚು ತೊಡಗಿಕೊಳ್ಳುತ್ತಿದ್ದಾರೆ. ಕೋವಿಡ್‌ ಸಮಯದಲ್ಲಿ ಕಷ್ಟದಲ್ಲಿರುವ ಜನರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕ್ಷೇತ್ರದಾದ್ಯಂತ ಓಡಾಡಿ, ಪಕ್ಷ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವುದಕ್ಕೆ ಕಾರಣೀಭೂತರಾಗಿದ್ದಾರೆ. ಟಿಕೆಟ್‌ ಅವರಿಗೆ ಸಿಗುವುದು ಖಚಿತ. ಗೆಲುವು ಕೂಡ ಈ ಬಾರಿ ಪಕ್ಷಕ್ಕೇ ಒಲಿಯಲಿದೆ’ ಎಂಬುದು ಕ್ಷೇತ್ರದ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಹೇಳುತ್ತಾರೆ.

ಕಾಂಗ್ರೆಸ್‌ನ ಹಿರಿಯ ರಾಜಕಾರಣಿ, ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಕಾಡಾ ಅಧ್ಯಕ್ಷರಾಗಿ ಸಾರ್ವಜನಿಕ ಸೇವೆ ಮಾಡಿರುವ ಎಚ್‌.ಎಸ್‌.ನಂಜ‍ಪ್ಪ ಅವರು ಕೂಡ ಕಾಂಗ್ರೆಸ್‌ ಟಿಕೆಟ್‌ ಬಯಸಿದ್ದಾರೆ. ಹಂಗಳ ಸೇರಿದಂತೆ ಸುತ್ತಮುತ್ತ ತಮ್ಮದೇ ಬೆಂಬಲಿಗರನ್ನೂ ಅವರು ಹೊಂದಿದ್ದಾರೆ. ‍ಪಕ್ಷ ತನ್ನನ್ನು ಪರಿಗಣಿಸಲಿದೆ ಎಂಬ ನಂಬಿಕೆಯಲ್ಲಿ ಅವರಿದ್ದಾರೆ.

ಗುಂಡ್ಲುಪೇಟೆ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆಯಲು ಕಾರಣಕರ್ತರಾಗಿರುವ ಸಿ.ಎಸ್‌.ನಿರಂಜನಕುಮಾರ್‌ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಪ್ರಭಾವಿ ರಾಜಕಾರಣಿಯಾಗಿ ಬೆಳೆಯುತ್ತಿದ್ದಾರೆ. ಬಿ.ಎಸ್‌. ಯಡಿಯೂರಪ್ಪ ಆಪ್ತರಾಗಿರುವ ಅವರಿಗೆ ಮೊದಲ ಶಾಸಕತ್ವದ ಅವಧಿಯಲ್ಲೇ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಸ್ಥಾನ ಒಲಿದಿದೆ. ಕ್ಷೇತ್ರದಲ್ಲಿ ಪಕ್ಷದ ವ್ಯವಹಾರಗಳ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ. ಯುವ ಕಾರ್ಯಕರ್ತರೂ ಅವರ ಹಿಂದಿದ್ದಾರೆ.

ಮೊದಲ ಸಲ ಶಾಸಕರಾಗಿರುವುದರಿಂದ ಆರಂಭದಲ್ಲಿ ಕೊಂಚ ಅನುಭವ ಕಡಿಮೆಯಾಯಿತು ಎಂಬ ಭಾವನೆ ಜನರಲ್ಲಿ ಮೂಡಿತ್ತಾದರೂ, ದಿನ ಕಳೆದಂತೆ ಅಂತಹ ಅಭಿಪ್ರಾಯ ಕಡಿಮೆಯಾಗಿದೆ. ರಾಜಕಾರಣದಲ್ಲಿ ಜನರೊಂದಿಗೆ ಬೆರೆಯುವುದು ಮುಖ್ಯ ಎಂಬುದನ್ನು ಬಹುಬೇಗ ಅರಿತ ಅವರು, ಪ್ರತಿ ವಾರ ಜನಸಂಪರ್ಕ ಸಭೆಯಂತಹ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ಕೋವಿಡ್‌ ಸಂದರ್ಭದಲ್ಲೂ ಬಡವರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಪಕ್ಷವು ಮತ್ತೆ ತಮಗೇ ಮಣೆ ಹಾಕಲಿದೆ ಎಂಬ ಖಚಿತ ವಿಶ್ವಾಸದಲ್ಲಿ ನಿರಂಜನಕುಮಾರ್‌ ಇದ್ದಾರೆ.

ಮಹದೇವ ಪ್ರಸಾದ್‌ ಅವರು ಜೆಡಿಎಸ್‌ನಲ್ಲಿದ್ದಾಗ, ಕ್ಷೇತ್ರದಲ್ಲಿ ಪಕ್ಷ ಸದೃಢವಾಗಿತ್ತು. ಅವರು ಕಾಂಗ್ರೆಸ್‌ಗೆ ಹೋದ ಬಳಿಕ, ಜೆಡಿಎಸ್‌ ನೆಲೆ ಕುಸಿದಿದೆ. ಪಕ್ಷದ ವಕ್ತಾರ ರಾಜುಗೌಡ ಅವರು ಟಿಕೆಟ್‌ ಬಯಸಿದ್ದಾರೆ. ಆದರೆ, ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಸೋಮವಾರ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಗುಂಡ್ಲುಪೇಟೆ ಕ್ಷೇತ್ರದ ಹೆಸರಿಲ್ಲ.

ಬಹುಜನ ಸಮಾಜ ಪಕ್ಷವು ಕೂಡ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಹೇಳಿದೆ. ಬೇರೆ ಯಾವುದೇ ಪಕ್ಷಗಳು ಸ್ಪರ್ಧಿಸಿದರೂ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ನಡೆಯುವುದು ಖಚಿತ.

ನಿರಂಜನಕುಮಾರ್‌ಗೆ ವಿರೋಧದ ಬಿಸಿ

ಜನಪ್ರಿಯತೆ ಗಳಿಸುತ್ತಿರುವ ನಿರಂಜನಕುಮಾರ್‌ ಅವರನ್ನು ಪಕ್ಷದಲ್ಲಿ ಎಲ್ಲರೂ ಒಪ್ಪಿಕೊಂಡಿಲ್ಲ.ಅವರ ಕಾರ್ಯವೈಖರಿಯನ್ನು ವಿರೋಧಿಸುವವರು ಇದ್ದಾರೆ. ಚಾಮುಲ್‌ ನಿರ್ದೇಶಕರ ಚುನಾವಣೆಯಲ್ಲಿ ಇದು ಬಹಿರಂಗವಾಗಿದೆ.

ಮೈಸೂರು–ಚಾಮರಾನಗರ ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎಂ.ಪಿ.ಸುನಿಲ್‌ ಅವರು ಪಕ್ಷದ ಬೆಂಬಲಿತರಾಗಿ ಚಾಮುಲ್‌ ನಿರ್ದೇಶಕ ಸ್ಥಾನಕ್ಕೆ ಅಭ್ಯರ್ಥಿಯಾಗಲು ಬಯಸಿದ್ದರು. ಇದಕ್ಕೆ ನಿರಂಜನಕುಮಾರ್‌ ಸಮ್ಮತಿ ಇರಲಿಲ್ಲ. ತನಗೆ ಟಿಕೆಟ್‌ ಸಿಗಲಿಲ್ಲ ಎಂದು ಸ್ವತಂತ್ರವಾಗಿ ಸ್ಪರ್ಧಿಸಿ ಸುನಿಲ್‌ ಗೆದ್ದಿದ್ದರು. ಆ ಮೂಲಕ, ಕ್ಷೇತ್ರದಲ್ಲಿ ತಮಗೂ ಬೆಂಬಲಿಗರು ಇದ್ದಾರೆ ಎಂಬುದನ್ನು ಅವರು ತೋರಿಸಿದ್ದಾರೆ. ಚಾಮುಲ್‌ ಚುನಾವಣೆಯ ಬಳಿಕ ನಿರಂಜನಕುಮಾರ್‌ ಹಾಗೂ ಸುನಿಲ್‌ ಬಣಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇಬ್ಬರೂ ಪರಸ್ಪರ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಸುನಿಲ್‌ ಅವರು ಕೂಡ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ನಿರಂಜನ ಕುಮಾರ್‌ ಅವರು ಮತ್ತೆ ತಾವೇ ಅಭ್ಯರ್ಥಿ ಎಂದು ಹೇಳುತ್ತಿದ್ದಾರೆ. ಪಕ್ಷದ ವರಿಷ್ಠರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನುಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT