ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಸಿದ್ದರಾಮಯ್ಯ ಹಿಂದೂ ಸಮಾಜದ ವಿರೋಧಿ: ಕೆ.ಎಸ್.ಈಶ್ವರಪ್ಪ

Last Updated 2 ಮಾರ್ಚ್ 2023, 16:40 IST
ಅಕ್ಷರ ಗಾತ್ರ

ಚಾಮರಾಜನಗರ: 'ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹಿಂದೂ ಸಮಾಜಕ್ಕೆ ವಿರುದ್ಧವಾಗಿದ್ದಾರೆ. ಒಕ್ಕಲಿಗರು, ದಲಿತರು ಸೇರಿದಂತೆ ಎಲ್ಲರನ್ನು ದೂರ ಇಡುತ್ತಿರುವ ಅವರು, ಹೇಗಾದರೂ ಮಾಡಿ ಮುಸ್ಲಿಮರನ್ನು ತೃಪ್ತಿ ಪಡಿಸಬೇಕು ಎಂದು ಮೂರ್ನಾಲ್ಕು ವರ್ಷಗಳಿಂದ ಪ್ರಯತ್ನ ಪಡುತ್ತಿದ್ದಾರೆ' ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಎಂದು ಗುರುವಾರ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಚುನಾವಣಾ ಸ್ಪರ್ಧಿಸಲು ಇನ್ನೂ ಅವರಿಗೆ ಕ್ಷೇತ್ರ ಸಿಕ್ಕಿಲ್ಲ. ಚಾಮುಂಡೇಶ್ವರಿ, ವರುಣಾದಲ್ಲಿ ನಿಲ್ಲದೆ ಕೋಲಾರ ಕ್ಷೇತ್ರ ಅಂತ ಹೇಳುತ್ತಿದ್ದಾರೆ. ಚುನಾವಣೆಯಲ್ಲಿ ಸೋಲುವ ಭಯ ಕಾಡುತ್ತಿದೆ. ಹಾಗಾಗಿ ಸುಳ್ಳು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿಯವರಿಂತ ಕಾಂಗ್ರೆಸ್‌ನವರೇ ಒಳಗೊಳಗೆ ಅವರನ್ನು ಸೋಲಿಸುತ್ತಾರೆ' ಎಂದು ವ್ಯಂಗ್ಯವಾಡಿದರು.

ಹಿಂದುಳಿದ ವರ್ಗಗಳು, ದಲಿತರಿಗೆ ಬಿಜೆಪಿ ಏನೂ ಮಾಡಿಲ್ಲ ಎಂದು ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಅವರು ದಲಿತರನ್ನು ಅಭಿವೃದ್ಧಿ ಮಾಡಿಲ್ಲ. ದಲಿತ ಸಮುದಾಯದ ಮುಖಂಡರನ್ನು ಬೆಳೆಸಲಿಲ್ಲ. 2013ರಲ್ಲಿ ಪರಮೇಶ್ವರ ಅವರನ್ನು ಸೋಲಿಸಿದರು. ಕೋಲಾರದಲ್ಲಿ ರಮೇಶ್ ಕುಮಾರ್ ಹಾಗೂ ಇತರ ಶಿಷ್ಯದ ಮೂಲಕ ಮುನಿಯಪ್ಪ ಅವರನ್ನು ಸೋಲಿಸಿದರು' ಎಂದು ಆರೋಪಿಸಿದರು.

'224 ಕ್ಷೇತ್ರಗಳಲ್ಲಿ ಎಲ್ಲಿ ನಿಂತರೂ ಸಿದ್ಧರಾಮಯ್ಯ ಗೆಲ್ಲುತ್ತಾರೆ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದಾರೆ. ನಿಲ್ಲಲಿ. ಚಾಮುಂಡೇಶ್ವರಿಯಲ್ಲಿ ಯಾಕೆ ನಿಲ್ಲುವುದಿಲ್ಲ' ಎಂದು ಪ್ರಶ್ನಿಸಿದರು.

ಶರೀರ ಒಂದು, ಕೈಯಲ್ಲಿ ಚಾಕು: 'ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಜನರ ಮುಂದೆ ಪರಸ್ಪರ ತಬ್ಬಿಕೊಳ್ಳುವಂತೆ ರಾಹುಲ್ ಗಾಂಧಿ ಹೇಳುತ್ತಾರೆ. ಅವರಿಬ್ಬರ ಶರೀರ ಒಂದಾಗಿರಬಹುದು. ಆದರೆ ಹಿಂಭಾಗದಲ್ಲಿ ಇಬ್ಬರ ಕೈಯಲ್ಲೂ ಚಾಕು ಇದೆ' ಎಂದು ವ್ಯಂಗ್ಯವಾಡಿದರು.

ದಲಿತ, ಹಿಂದುಳಿದವರ ಅಭಿವೃದ್ಧಿ: 'ಬಿಜೆಪಿಯು ದಲಿತರು, ಹಿಂದುಳಿದ ವರ್ಗದವರ ಆಶಾಕಿರಣ. ನಮ್ಮ ಆಡಳಿತದಲ್ಲಿ ದಲಿತರು ಮತ್ತು ಹಿಂದುಳಿದವರ ವರ್ಗದವರ ಅಭಿವೃದ್ಧಿ ಆಗುತ್ತಿದೆ. ದಲಿತರು ‌ನಮ್ಮ ಜೊತೆ ಇದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಒಂದು ಸ್ಥಾನವನ್ನೂ ಗೆಲ್ಲಲ್ಲ ಎಂದು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನವರು ಹೇಳಿದ್ದರು. ನಮಗೆ 25 ಕ್ಷೇತ್ರ ಸಿಕ್ಕಿತು. ಅವರು ಒಂದರಲ್ಲಿ ಮಾತ್ರ ಗೆದ್ದರು' ಎಂದರು.

'ಬಿಜೆಪಿ ಕೇವಲ ಭರವಸೆ ಕೊಡುವುದಿಲ್ಲ. ಅವರಿಗೆ ಅನುಕೂಲ ಮಾಡುವ ಯೋಜನೆಗಳನ್ನು ಹಾಕಿಕೊಂಡು ಅವರ ಅಭಿವೃದ್ಧಿಗೆ ಶ್ರಮಿಸಲಿದೆ. ಎಸ್ ಸಿ, ಎಸ್ ಟಿ ಸಮುದಾಯದವರಿಗೆ ಮೀಸಲಾತಿ ಹೆಚ್ಚಿಸಿದೆ. ಹಿಂದುಳಿದ, ದಲಿತ ಸಮುದಾಯಗಳಿಗೆ ಅತಿ ಹೆಚ್ಚು ಹಣ ಕೊಟ್ಟಿರುವುದು ಬಿಜೆಪಿ. ಮುಂದಿನ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆದ್ದು ಅಧಿಕಾರಕ್ಕೆ‌ ಬರಲಿದೆ' ಎಂದು ಈಶ್ವರಪ್ಪ ಹೇಳಿದರು.

ಆಶಾವಾದಿಗಳಾಗಿರಬೇಕು: 'ಸಚಿವ ಸ್ಥಾನ ಸಿಗಲಿದೆ ಎಂದು ನೀವು ಹೇಳಿದ್ದೀರಿ. ಆದರೆ ಆಗಿಲ್ವಲ್ಲಾ ಎಂದು ಕೇಳಿದ್ದಕ್ಕೆ, 'ಯಾಕೆ ಸಿಗಬೇಕು? ಆಶಾಭಾವನೆ ಇರಬೇಕು. ರಾಜಕಾರಣದಲ್ಲಿ ಅದು ಸಹಜ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT