ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಿದ ವಾಯು, ಸ್ಪರ್ಧಿಗಳಿಗೆ ನಿರಾಸೆ

ಗಾಳಿ ಪಟ ಉತ್ಸವ: ದೊಡ್ಡಬಳ್ಳಾಪುರದ ಪಾರಮ್ಯ, ಖುಷಿ ಪಟ್ಟ ಚಿಣ್ಣರು
Last Updated 26 ಜನವರಿ 2020, 15:55 IST
ಅಕ್ಷರ ಗಾತ್ರ

ಚಾಮರಾಜನಗರ:ಬೃಹತ್‌ ಗಾತ್ರದ ಗಾಳಿಪಟಗಳನ್ನು ಹಾರಿಸಿ ಗಡಿ ಜಿಲ್ಲೆಯ ಆಗಸದಲ್ಲಿ ಚಿತ್ತಾರ ಮೂಡಿಸುವ ಉದ್ದೇಶದಿಂದ ವಿವಿಧ ಜಿಲ್ಲೆಗಳಿಂದ ಸ್ಪರ್ಧಿಗಳು ಬಂದಿದ್ದರು. ಆದರೆ, ವಾಯುದೇವ ಅದಕ್ಕೆ ಅವಕಾಶ ಕೊಡಲಿಲ್ಲ.

ಗಾಳಿ ಕಡಿಮೆ ಇದ್ದುದರಿಂದ ದೊಡ್ಡ ಗಾಳಿ ಪಟಗಳನ್ನು ತಂದಿದ್ದ ಸ್ಪರ್ಧಿಗಳು ನಿರಾಸೆ ಅನುಭವಿಸಿದರು. ಗಾತ್ರದಲ್ಲಿ ಸಣ್ಣದಾಗಿದ್ದು, ಹಗುರವಾದ ಗಾಳಿಪಟಗಳು ಮಾತ್ರ ಬಾನಂಗಳದಲ್ಲಿ ಹಾರಾಡಿದವು.

ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆದ, 31ನೇ ರಾಜ್ಯಮಟ್ಟದ ಗಾಳಿ‍ಪಟ ಉತ್ಸವಕ್ಕೆ ಗಾಳಿ ಹಾಗೂ ಪ್ರೇಕ್ಷಕರ ಕೊರತೆ ಬಹುವಾಗಿ ಕಾಡಿತು.

ಚಾಮರಾಜನಗರ ಮಾತ್ರವಲ್ಲದೆ, ನೆರೆಯ ಮಂಡ್ಯ, ಮೈಸೂರು, ಬೆಂಗಳೂರು, ತುಮಕೂರು, ಕೋಲಾರ, ದೊಡ್ಡಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳಿಂದ 50ಕ್ಕೂ ಹೆಚ್ಚು ಸ್ಪರ್ಧಿಗಳು ಬಂದಿದ್ದರು.

ನಾಲ್ಕು ವಿಭಾಗ:12 ವರ್ಷದೊಳಗಿನ ಕಿರಿಯರಿಗೆ, 13ರಿಂದ 21ವರ್ಷ, 22 ವರ್ಷ ಮೇಲ್ಪಟ್ಟವರಿಗೆ ಹಾಗೂ ಗುಂಪು ವಿಭಾಗಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಮೊದಲ ವಿಭಾಗ‌ಕ್ಕೆ 11 ಮಂದಿ, ಎರಡನೇ ವಿಭಾಗಕ್ಕೆ 7 ಮಂದಿ, ಮೂರನೇ ವಿಭಾಗದಲ್ಲಿ 12 ಹಾಗೂ ನಾಲ್ಕನೇ ವಿಭಾಗದಲ್ಲಿ 18 ತಂಡಗಳು ಹೆಸರು ನೋಂದಾಯಿಸಿಕೊಂಡಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಗಾಳಿಪಟವನ್ನು ಹಾರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.

ವೃತ್ತಿ ಪರ ಗಾಳಿಪಟ ಉತ್ಸವದಲ್ಲಿ ಭಾಗವಹಿಸಿದ್ದ ತಂಡಗಳು,ಹವ್ಯಾಸಿ ಗಾಳಿಪಟ ತಂಡಗಳು ಬಂದಿದ್ದವು. ಬೃಹದಾಕಾರದ ಡ್ರ್ಯಾಗನ್‌ ಗಾಳಿಪಟ, ಸ್ನೇಕ್‌, ರಾಣಿ ಪಟ, ರಿಂಗ್‌ ಪಟ, ಅಡಿಗೊಂದರಂತೆ ನೂರು ಸಣ್ಣ ಸಣ್ಣ ಗಾಳಿಪಟಗಳನ್ನು ಹೆಣೆದು ಮಾಡಿದ ಬೃಹತ್‌ ಪ‍ಟ ಸೇರಿದಂತೆ ದೊಡ್ಡ ಗಾತ್ರದ ಹಲವು ಗಾಳಿಪಟಗಳಿದ್ದವು. ಆದರೆ, ಇವುಗಳನ್ನು ಹಾರಿಸಲು ಅಭ್ಯರ್ಥಿಗಳಿಗೆ ಸಾಧ್ಯವಾಗಲಿಲ್ಲ.

ಗಾತ್ರದಲ್ಲಿ ಕಿರಿದಾಗಿದ್ದ, ಹಗುರದ ಗಾಳಿಪಟಗಳು ಆಗಸದಲ್ಲಿ ತೂರಾಡುತ್ತಾ ನೆರೆದಿದ್ದವರಲ್ಲಿ ರೋಮಾಂಚನ ಉಂಟು ಮಾಡಿತು. ಕೆಲವು ಸ್ಪರ್ಧಿಗಳು 150–200 ಅಡಿಗಳಿಗಿಂತಲೂ ಹೆಚ್ಚು ಎತ್ತರಕ್ಕೆ ಪಟಗಳನ್ನು ಹಾರಿಸಲು ಯಶಸ್ವಿಯಾದರು.

ರಾಧಾಕೃಷ್ಣ, ಶಿವಲಿಂಗವನ್ನು ಸುತ್ತಿರುವ ಹಾವು, ಭೂತ ಕೋಲ, ತಾಯಿ ಭುವನೇಶ್ವರಿ, ವಿವಿಧ ಪ್ರಾಣಿಗಳ ಮುಖಗಳ ಚಿತ್ರಗಳನ್ನು ಮುದ್ರಿಸಿರುವ ಗಾಳಿ ಪಟಗಳು ಗಮನ ಸೆಳೆದವು.

ಸಾಮಾಜಿಕ ಸಂದೇಶ: ‘ಹೆಣ್ಣು ಭ್ರೂಣ ಹತ್ಯೆ ತಡೆಯಿರಿ’, ‘ಪರಿಸರ ಉಳಿಸಿ’ ‘ಕಾಡು ಉಳಿಸಿ, ಹಸಿರು ಬೆಳೆಸಿ’ ಮುಂತಾದ ಸಾಮಾಜಿಕ ಸಂದೇಶಗಳನ್ನು ಹೊತ್ತ ಗಾಳಿಪಟಗಳು ಜನರನ್ನು ಆಕರ್ಷಿಸಿದವು.

ಖುಷಿ ಪಟ್ಟ ಚಿಣ್ಣರು: ಸ್ಥಳೀಯ ಶಾಲಾ ಮಕ್ಕಳು ಹಾಗೂ ಬೇರೆ ಕಡೆಯಿಂದ ಬಂದ ಮಕ್ಕಳು ಉತ್ಸವದಲ್ಲಿ ಖುಷಿ‍ಪಟ್ಟರು. ತಮಗಿಷ್ಟವಾದ ಆಕೃತಿಯ ಗಾಳಿ ಪಟ ತಯಾರಿಸಿದ್ದ ಅವರು, ದಾರವನ್ನು ಹಿಡಿದು ಬಾನಂಗಳದಲ್ಲಿ ಪಟವನ್ನು ಆಡಿಸುತ್ತಿದ್ದ ದೃಶ್ಯ ಮನಮೋಹಕವಾಗಿತ್ತು. ಉತ್ಸವ ವೀಕ್ಷಣೆಗೆ ಬಂದ ಕೆಲವು ಪೋಷಕರು ಅಲ್ಲೇ ಮಾರಾಟ‌ ಮಾಡಲಾಗುತ್ತಿದ್ದ ಗಾಳಿಪಟವನ್ನು ಖರೀದಿಸಿ ತಮ್ಮ ಮಕ್ಕಳಿಗೆ ಹಾರಿಸಲು ಪ್ರೇರೇಪಣೆ ನೀಡಿದರು.

ಕಾಡಿದ ಪ್ರೇಕ್ಷಕರ ಕೊರತೆ: ಗಾಳಿಪಟ ಉತ್ಸವಕ್ಕೆ ಪ್ರೇಕ್ಷಕರ ಕೊರತೆಯೂ ಕಾಡಿದು. ಗಣರಾಜ್ಯೋತ್ಸವ ಸಮಾರಂಭ ನಡೆದಿದ್ದ ಡಾ.ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲೇ ಉತ್ಸವವೂ ನಡೆಯಿತು. ಸಮಾರಂಭದ ನಂತರ ಉತ್ಸವದ ಉದ್ಘಾಟನೆ ನಡೆಯಿತು. ಆದರೆ, ಅಷ್ಟು ಹೊತ್ತಿಗಾಗಲೇ ಕ್ರೀಡಾಂಗಣದಲ್ಲಿದ್ದ ಜನರು ಖಾಲಿಯಾಗಿದ್ದರು. ಉಸ್ತುವಾರಿ ಸಚಿವರು ಹಾಗೂ ಇತರ ಗಣ್ಯರು ಹೋದ ನಂತರ ಪ್ರೇಕ್ಷಕರ ಸಂಖ್ಯೆ ಮತ್ತಷ್ಟು ಕಡಿಮೆಯಾಯಿತು. ಇಡೀ ಕ್ರೀಡಾಂಗಣದಲ್ಲಿ ಸ್ಪರ್ಧಿಗಳು, ಅವರ ಜೊತೆ ಬಂದಿದ್ದವರು. ಆಯೋಜಕರು ಹಾಗೂ ಬೆರಳೆಣಿಕೆಯಷ್ಟು ಕುತೂಹಲಿಗಳಿದ್ದರು.

ಉದ್ಘಾಟನೆ ಸಂದರ್ಭದಲ್ಲಿಶಾಸಕ ಸಿ. ಪುಟ್ಟರಂಗಶೆಟ್ಟಿ, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ, ಟ್ರಸ್ಟಿ ಆದಿತ್ಯ ನಂಜರಾಜ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷೆ ಕೆ.ಎಸ್.ಮಹೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಎಚ್.ಎನ್.ಶೋಭಾ, ಉಪಾಧ್ಯಕ್ಷ ಜಿ. ಬಸವಣ್ಣ, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದ ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಚ್. ನಾರಾಯಣರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಕರ್ನಾಟಕ ಜಾನಪದ ಲೋಕದ ಆಡಳಿತಾಧಿಕಾರಿ ಬಸವರಾಜು, ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಸವರಾಜು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಡೊಡ್ಡಬಳ್ಳಾಪುರ ಸ್ಪರ್ಧಿಗಳಿಗೆ ಸಿಂಹಪಾಲು

ಚಾಮರಾಜನಗರದಲ್ಲಿ ನಡೆದ ರಾಜ್ಯ ಮಟ್ಟದ 31ನೇ ಗಾಳಿಪಟ ಉತ್ಸವದಲ್ಲಿದೊಡ್ಡಬಳ್ಳಾಪುರ ಜಿಲ್ಲೆಯಿಂದ ಬಂದಿದ್ದ ಅಭ್ಯರ್ಥಿಗಳು ಹೆಚ್ಚಿನ ಬಹುಮಾನಗಳನ್ನು ತಮ್ಮದಾಗಿಸಿಕೊಂಡರು. ಗುಂಪು ವಿಭಾಗದಲ್ಲಿ ದೊಡ್ಡಬಳ್ಳಾಪುರದ ಹರೀಶ್‌ ನೇತೃತ್ವದ ಧನಸ್ಸು ತಂಡ ವಿಜೇತರಾಗುವ ಮೂಲಕ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿತು. ಈ ತಂಡವು ರಾಧಾಕೃಷ್ಣ ಜೋಡಿಯ ಚಿತ್ರವಿರುವ ಗಾಳಿಪಟವನ್ನು ಹಾರಿಸಿತ್ತು.

ಪ್ರತಿ ವಿಭಾಗದಲ್ಲೂ ಮೊದಲನೇ, ಎರಡನೇ ಮತ್ತು ಮೂರನೇ ಬಹುಮಾನಗಳ ಜೊತೆಗೆ ಎರಡು ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು.

13ರಿಂದ 23 ವರ್ಷ ವಯಸ್ಸಿನವರ ವಿಭಾಗದಲ್ಲಿ ಮೂರೂ ಬಹುಮಾನಗಳು ಚಾಮರಾಜನಗರದ ಸ್ಪರ್ಧಿಗಳ ಪಾಲಾಯಿತು. ಜಾರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ, ಟ್ರಸ್ಟಿ ಆದಿತ್ಯ ನಂಜರಾಜ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸೋಮಶೇಖರ್‌ ಮತ್ತಿತರರು ವಿಜೇತರಿಗೆ ಬಹುಮಾನ ವಿತರಿಸಿದರು.

ಫಲಿತಾಂಶದ ವಿವರ:12 ವರ್ಷದೊಳಗಿನ ಕಿರಿಯರ ವಿಭಾಗ: ಮೊದಲ ಬಹುಮಾನ–ಘನಹನಿ, ಚಾಮರಾಜನಗರ. 2ನೇ ಬಹುಮಾನ –ಕಿಂಗ್‌ ತೇಜ, ಮಂಡ್ಯ. ಮೂರನೇ ಬಹುಮಾನ–ವೇದಿಕ್‌ ಶೆಟ್ಟಿ, ದೊಡ್ಡಬಳ್ಳಾಪುರ. ಸಮಾಧಾನಕರ– ಮಾನ್ಯತಾ ಮೈಸೂರು, ತನ್ಮಯ್‌–ಚಾಮರಾಜನಗರ

13 ವರ್ಷದಿಂದ 21 ವರ್ಷದವರೆಗೆ:ಮೊದಲ ಬಹುಮಾನ–ಆದಿತ್ಯ, ಚಾಮರಾಜನಗರ. 2ನೇ ಬಹುಮಾನ –ಸಂಜಯ್‌, ಚಾಮರಾಜನಗರ, ಮೂರನೇ ಬಹುಮಾನ– ನವ್ಯಶ್ರೀ ನಾಯಕ್‌, ಚಾಮರಾಜನಗರ. ಸಮಾಧಾನಕರ– ಮಣಿಕಂಠ, ಚಾಮರಾಜನಗರ, ಚರಿನ್‌ ಫರ್ನಾಂಡಿಸ್‌–ಚಾಮರಾಜನಗರ.

22 ವರ್ಷಕ್ಕಿಂತ ಮೇಲ್ಪಟ್ಟವರು:ಮೊದಲ ಬಹುಮಾನ–ರಾಜು, ಮಂಡ್ಯ. 2ನೇ ಬಹುಮಾನ –ಎಂ.ಆರ್‌.ಗಿರೀಶ್‌, ದೊಡ್ಡಬಳ್ಳಾಪುರ, 3ನೇ ಬಹುಮಾನ– ಪ್ರಸನ್ನ ಕೆ.ಎಸ್‌, ದೊಡ್ಡಬಳ್ಳಾಪುರ. ಸಮಾಧಾನಕರ– ಪ್ರಸನ್ನ ಬಿ.ಪಿ. ದೊಡ್ಡಬಳ್ಳಾಪುರ, ವೆಂಕಟೇಶ್‌ ಎಸ್‌.ಬಿ, ದೊಡ್ಡಬಳ್ಳಾಪುರ.

23 ವರ್ಷ ಮೇಲ್ಪಟ್ಟವರು, ಗುಂಪು ವಿಭಾಗ: ಮೊದಲ ಬಹುಮಾನ: ಧನಸ್ಸು ತಂಡ ದೊಡ್ಡ ಬಳ್ಳಾಪುರ, 2ನೇ ಬಹುಮಾನ: ಶಿವಕುಮಾರ್‌ ಕೆ.ವಿ. ಕನಕನಮರಡಿ, ಮಂಡ್ಯ, 3ನೇ ಬಹುಮಾನ, ಚಂದ್ರಶೇಖರ್‌, ದೊಡ್ಡಬಳ್ಳಾಪುರ. ಸಮಾಧಾನಕರ: ಪೂರ್ಣಿಮಾ, ಮೈಸೂರು. ಮುನಿರಾಜು, ದೊಡ್ಡಬಳ್ಳಾಪುರ.

ತೀರ್ಪಿನ ವಿರುದ್ಧ ಅಸಮಾಧಾನ

ತುಮಕೂರು ಹಾಗೂ ಬೇರೆ ಜಿಲ್ಲೆಗಳಿಂದ ಬಂದಿದ್ದ ಕೆಲವು ಅಭ್ಯರ್ಥಿಗಳು ತಂಡ ವಿಭಾಗದಲ್ಲಿ ಮೊದಲ ಸ್ಥಾನಕ್ಕೆ ಧನಸ್ಸು ತಂಡವನ್ನು ಆಯ್ಕೆ ಮಾಡಿದ್ದಕ್ಕೆ ಆಕ್ಷೇಪಿಸಿದರು. ವೇದಿಕೆಯಲ್ಲಿ ಬಹುಮಾನ ವಿತರಣೆ ಮಾಡುತ್ತಿದ್ದಾಗಲೇ ಮಧ್ಯ ಪ್ರವೇಶಿಸಿ, ‘ತಂಡ ವಿಭಾಗದಲ್ಲಿ ಭಾಗವಹಿಸುವವರು ಕನಿಷ್ಠ 5 ಅಡಿಗಿಂತ ಎತ್ತರದ ಗಾಳಿಪಟ ಹಾರಿಸಬೇಕು ಎಂಬ ನಿಯಮ ಇದೆ. ಆದರೆ ಇಲ್ಲಿ 3 ಅಡಿಗಳಷ್ಟು ಎತ್ತರವಿಲ್ಲದ ಗಾಳಿಪಟಕ್ಕೆ ಬಹುಮಾನ ನೀಡಲಾಗಿದೆ. ಇದು ಸರಿಯೇ ಎಂದು ಪ್ರಶ್ನಿಸಿದರು. ಯಾರಿಗಾದರೂ ಬಹುಮಾನ ಕೊಡಿ. ಆದರೆ ನಿಯಮ ಪಾಲಿಸಿ. ನಾವು ದೊಡ್ಡ ಗಾಳಿಪಟ ತಂದಿದ್ದೇವೆ. ಗಾಳಿ ಇಲ್ಲದಿದ್ದರೆ ಏನು ಮಾಡುವುದು’ ಎಂದು ಅಸಮಾಧಾನ ಹೊರಹಾಕಿದರು.

ಬಹುಮಾನ ವಿತರಣೆಯ ನಂತರ ಆಯೋಜಕರ ಮುಂದೆ ಇದೇ ಪ್ರಶ್ನೆಯನ್ನು ಮುಂದಿಟ್ಟರು. ಸ್ಪರ್ಧಿಗಳನ್ನು ಸಮಾಧಾನ‍ಪಡಿಸಿದ ಅಧಿಕಾರಿಗಳು, ‘ಗಾಳಿಪಟ ಎತ್ತರಕ್ಕೆ ಹಾರಿದ್ದನ್ನು ಗಮನದಲ್ಲಿಟ್ಟುಕೊಂಡು ತೀರ್ಪುಗಾರರು ಆಯ್ಕೆ ಮಾಡಿದಂತೆ ಕಾಣುತ್ತದೆ. ಮುಂದಿನ ಸಲಕ್ಕೆ ಸರಿ ಮಾಡೋಣ’ ಎಂದು ಸಮಜಾಯಿಷಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT