ಸೋಮವಾರ, ಅಕ್ಟೋಬರ್ 21, 2019
25 °C
ಕೊಳ್ಳೇಗಾಲ ತಾಲ್ಲೂಕಿನ ಕುಣಗಳ್ಳಿ ಗ್ರಾಮದಲ್ಲಿ ಘಟನೆ, ವಿಡಿಯೊ ವೈರಲ್‌

ಮತಾಂತರ ಆರೋಪ: ಚರ್ಚ್‌ ಸದಸ್ಯರ ವಿರುದ್ಧ ಆಕ್ರೋಶ

Published:
Updated:
Prajavani

ಕೊಳ್ಳೇಗಾಲ: ಜನರನ್ನು ಮತಾಂತರ ಮಾಡಲು ಬಂದಿದ್ದಾರೆ ಎಂದು ಆರೋಪಿಸಿ ನಗರದ ಚರ್ಚೊಂದರ ಸದಸ್ಯರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ಅವರನ್ನು ವಾಪಸ್‌ ಕಳುಹಿಸಿದ ಪ್ರಕರಣ ತಾಲ್ಲೂಕಿನ ಕುಣಗಳ್ಳಿ ಗ್ರಾಮದ ನಾಯಕರ ಬಡಾವಣೆಯಲ್ಲಿ ಬುಧವಾರ ನಡೆದಿದೆ. 

ನಗರದ ಬ್ರದರನ್‌ ಚರ್ಚ್‌ನ ಸದಸ್ಯರು ಗ್ರಾಮಕ್ಕೆ ಬಂದು ‘ರೋಗಗಳು ಯಾಕೆ’, ‘ಪಾಪ ನಿವಾರಣೆಗೆ ಒಂದೇ ಮಾರ್ಗ’ ಎಂಬ ಕರಪತ್ರಗಳನ್ನು ಹಂಚಿದ್ದಾರೆ. ಇದಕ್ಕೆ ಸ್ಥಳೀಯರು ಅಡ್ಡಿಪಡಿಸಿದ್ದಾರೆ. ಎರಡೂ ಕಡೆಯವರ ನಡುವೆ ನಡೆದ ವಾಗ್ವಾದದ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

‘ಊರ ಯಜಮಾನ ಬರುವುದಕ್ಕೆ ಹೇಳಿದ್ದರು. ಅದಕ್ಕೆ ಬಂದಿದ್ದೆವು. ಶುಭ ವಾರ್ತೆ, ಸತ್ಯದ ಮಾರ್ಗ ಹೇಳಲು, ಆತ್ಮದ ರಕ್ಷಣೆಯ ಬಗ್ಗೆ ಮಾತನಾಡಲು ಬಂದಿದ್ದೇವೆ. ನಿಮಗೆ ಇಷ್ಟ ಇಲ್ಲ ಅಂದರೆ ಬೇಡ. ಒಳ್ಳೆಯದು ಇದ್ದರೆ ತೆಗೆದುಕೊಳ್ಳಬಹುದು. ಇದರಲ್ಲಿ ಬಲವಂತ ಏನೂ ಇಲ್ಲ. ಇದರಿಂದ ನಮಗೆ ಯಾವುದೇ ಲಾಭ ಇಲ್ಲ’ ಎಂದು ಚರ್ಚ್‌ ಸದಸ್ಯರು ಹೇಳುತ್ತಿರುವ ದೃಶ್ಯ ವಿಡಿಯೊದಲ್ಲಿದೆ. 

‘ಚರ್ಚ್‌ನವರು ಕರೆ ಮಾಡಿ, ಊರಿಗೆ ಬಂದು ಏಸುವ ಬಗ್ಗೆ ತಿಳಿವಳಿಕೆ ಹೇಳುತ್ತೇವೆ ಎಂದು ಹೇಳಿದ್ದರು’ ಎಂದು ಗ್ರಾಮದವರೊಬ್ಬರು ಹೇಳುವುದೂ ವಿಡಿಯೊದಲ್ಲಿದೆ.  

‘ನೀವು ಮತಾಂತರ ಮಾಡಲು ಬಂದಿದ್ದೀರಿ. ಹಿಂದಿನಿಂದಲೂ ಇದನ್ನೇ ಮಾಡುತ್ತಿದ್ದೀರಿ. ನಮಗೆ ಇದರಲ್ಲಿ ಆಸಕ್ತಿ ಇಲ್ಲ. ನೀವು ಎಲ್ಲಿಗೂ ಬರುವುದು ಬೇಡ. ಹೀಗೆ ಮುಂದುವರಿದರೆ ಪೊಲೀಸರಿಗೆ ದೂರು ನೀಡಬೇಕಾಗುತ್ತದೆ’ ಎಂದು ಕೆಲವರು ಹೇಳುತ್ತಿರುವುದೂ ವಿಡಿಯೊದಲ್ಲಿ ದಾಖಲಾಗಿದೆ.  

‘ಬ್ರದರನ್ ಚರ್ಚ್‍ನ ಸದಸ್ಯರು ಗ್ರಾಮಕ್ಕೆ ಬಂದು ಬೈಬಲ್‍ನ ಸಂದೇಶಗಳನ್ನು ಸಾರುತ್ತಿದ್ದರು. ಈ ವೇಳೆ ಊರಿನ ಜನರು ಅವರ ಭಾಷಣಕ್ಕೆ ಅಡ್ಡಿಪಡಿಸಿ ವಾಪಸ್‌ ಕಳುಹಿಸಿದ್ದಾರೆ’ ಎಂದು ಗ್ರಾಮಸ್ಥರು ಹೇಳಿದ್ದಾರೆ. 

‘ಕ್ರಿಶ್ಚಿಯನ್ನರು ನಾಯಕರ ಬಡಾವಣೆಯ ಚಾವಡಿಗೆ ಬಂದು ಧರ್ಮ ಪ್ರಚಾರಗಳ ಕರಪತ್ರಗಳನ್ನು ಹಂಚಿ, ಬಹಿರಂಗವಾಗಿ ಮತಾಂತರ ಮಾಡುತ್ತಿದ್ದರು’ ಎಂದು ಸ್ಥಳೀಯ ನಿವಾಸಿ ಸುನೇಂದ್ರ ಅವರು ಆರೋಪಿಸಿದರು.

ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿಲ್ಲ.

‘ಸದಸ್ಯರ ಮನೆಗೆ ಹೋಗಿದ್ದೆವು’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬ್ರದರನ್‌ ಚರ್ಚ್‌ ಸದಸ್ಯರಾದ ಸಂತೋಷ್‌ ಕುಮಾರ್‌ ಹಾಗೂ ವಿಜಯ್‌ ಕುಮಾರ್‌ ಅವರು, ‘ನಾವು ಮತಾಂತರ ಮಾಡಲು ಹೋಗಿರಲಿಲ್ಲ. ನಮ್ಮ ಸಭೆಯ ಸದಸ್ಯರ ಮನೆಗೆ ಹೋಗಿದ್ದೆವು. ಅವರ ಮನೆಯಲ್ಲಿ ಸ್ಥಳವಿಲ್ಲದ ಕಾರಣ ಹೊರಗೆ ಪ್ರಾರ್ಥನೆ ಮಾಡುತ್ತಿದ್ದೆವು. ಇದಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ ನಮ್ಮನ್ನು ಅಲ್ಲಿಂದ ಕಳುಹಿಸಿದರು’ ಎಂದರು. 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)