ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಲಿಫೈನ್ಸ್‌ನಲ್ಲಿ ಕೊಳ್ಳೇಗಾಲದ ಯುವತಿ ಅತಂತ್ರ: ನೆರವಿಗೆ ಕೇಂದ್ರಕ್ಕೆ ಮನವಿ

ಕೇಂದ್ರದಿಂದ ವಿಮಾನಯಾನ ನಿರ್ಬಂಧದಿಂದ ಸ್ವದೇಶಕ್ಕೆ ಬರಲು ಆಗುತ್ತಿಲ್ಲ
Last Updated 18 ಮಾರ್ಚ್ 2020, 15:17 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಫಿಲಿಫೈನ್ಸ್ನಲ್ಲಿ ವೈದ್ಯಕೀಯ ಶಿಕ್ಷಣ ಮಾಡುತ್ತಿರುವ ನಗರದ ಯುವತಿ ರಶ್ಮಿ ಎಂಬುವವರು ಕೊರೊನಾ ವೈರಸ್‌ ಭೀತಿಯಿಂದಾಗಿ ದೇಶಕ್ಕೆ ಮರಳಲು ಸಾಧ್ಯವಾಗದೇ ಅಲ್ಲಿ ಅತಂತ್ರವಾಗಿದ್ದು, ಭಾರತಕ್ಕೆ ಹೋಗಲು ನೆರವಾಗುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ತಮ್ಮ ಸ್ನೇಹಿತೆ, ಬೆಂಗಳೂರಿನ ಸಹನಾ ಎಂಬುವವರೊಂದಿಗೆ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಹೇಳಿಕೊಂಡಿರುವ ವಿಡಿಯೊವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ನಗರದಲ್ಲಿರುವ ಅವರ ಪೋಷಕರು ಕೂಡ ಮಗಳನ್ನು ವಾಪಸ್‌ ಕರೆತರಲು ಕೇಂದ್ರ ಸರ್ಕಾರ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ರಶ್ಮಿ ಅವರು ನಗರದ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಎಎಸ್‌ಐ ಆಗಿರುವ ಸಿದ್ದಲಿಂಗೇಗೌಡ ಅವರ ಮಗಳು. ಎರಡು ವರ್ಷಗಳಿಂದ ಐವರು ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ.

ವಿಡಿಯೊದಲ್ಲಿ ಏನಿದೆ?: ‘ಫಿಲಿಫೈನ್ಸ್ನಲ್ಲಿ 180 ಕ್ಕೂ ಹೆಚ್ಚು ಮಂದಿ ಶಂಕಿತ ವೈರಸ್‌ ಶೋಂಕಿತರಿದ್ದಾರೆ. ಮೂರು ದಿನಗಳಿಂದ ಇಡೀ ದೇಶದಲ್ಲಿ ಎಲ್ಲ ವಹಿವಾಟು, ಜನರ ಓಡಾಟವನ್ನು ಸ್ಥಗಿತಗೊಳಿಸಲಾಗಿದೆ. ಎಲ್ಲರನ್ನೂ ಮನೆಯಲ್ಲಿಯೇ ಕೂಡಿ ಹಾಕಿದ್ದಾರೆ. ಜೈಲುವಾಸದಂತಹ ಪರಿಸ್ಥಿತಿ ಇದೆ. ಆರು ತಿಂಗಳ ಕಾಲ ಇಲ್ಲಿ ವಿಪತ್ತು ಘೋಷಣೆ ಮಾಡಲಾಗಿದೆ. ವಿದೇಶಿಯರಿಗೆ ಅವರ ದೇಶಕ್ಕೆ ಹೋಗಲು 72 ಗಂಟೆಗಳ ಕಾಲಾವಕಾಶ ನೀಡಲಾಗಿದೆ. ಕರ್ನಾಟಕದವರು ಮಾತ್ರವಲ್ಲ, ದೇಶದ ವಿವಿಧ ಭಾಗಗಳ ಜನರಿದ್ದಾರೆ. ಅದರಂತೆ ನಾವು ವಿಮಾನ ಟಿಕೆಟ್‌ಗಳನ್ನೂ ಕಾಯ್ದಿರಿಸಿದ್ದೆವು. 19ರವರೆಗೂ ನಮಗೆ ವಾಪಸ್‌ ಹೋಗುವುದಕ್ಕೆ ಸಮಯ ಇದೆ. ಆದರೆ, ಕೇಂದ್ರ ಸರ್ಕಾರ ಫಿಲಿಫೈನ್ಸ್ನಡುವೆ ವಿಮಾನ ಸಂಚಾರಗಳನ್ನು ನಿರ್ಬಂಧಿಸಿರುವುದರಿಂದ ನಮಗೆ ಭಾರತಕ್ಕೆ ಬರಲು ಆಗುತ್ತಿಲ್ಲ’ ಎಂದು ರಶ್ಮಿ ಅವರು ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ರಶ್ಮಿ ತಂದೆ ಸಿದ್ದಲಿಂಗೇಗೌಡ ಅವರು, ‘ನನ್ನ ಮಗಳು ಎರಡು ವರ್ಷಗಳಿಂದ ಫಿಲಿಫೈನ್ಸ್ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾಳೆ. ಕೊರೊನಾ ವೈರಸ್‌ ಕಾರಣಕ್ಕೆ ಭಾರತಕ್ಕೆ ಬರುವುದಕ್ಕಾಗಿ ವಿಮಾನ ಟಿಕೆಟ್‌ ಕಾಯ್ದಿರಿಸಿದ್ದೆವು. ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದರೆ, ಈಗ ಭಾರತಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ.ಮಗಳನ್ನು ಇಲ್ಲಿಗೆ ಕರೆತರಲು ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT