ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ಗೆ ಪುಟ್ಟಸ್ವಾಮಿ: ಕೊಳ್ಳೇಗಾಲದಲ್ಲಿ ಹೊಸ ಲೆಕ್ಕಾಚಾರ

ಬೆಂಗಳೂರಿನಲ್ಲಿ ಜೆಡಿಎಸ್‌ಗೆ ಸೇರ್ಪಡೆಗೊಂಡ ಪುಟ್ಟಸ್ವಾಮಿ; ಟಿಕೆಟ್‌ಗೆ ಪೈಪೋಟಿ
Last Updated 4 ಮಾರ್ಚ್ 2023, 4:10 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಪೊಲೀಸ್‌ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿರುವ ಬಿ.ಪುಟ್ಟ ಸ್ವಾಮಿ ದಿಢೀರ್ ಬೆಳವಣಿಗೆ ಯಲ್ಲಿ ಶುಕ್ರವಾರ ಜೆಡಿಎಸ್‌ಗೆ ಸೇರ್ಪಡೆ ಯಾಗಿದ್ದು, ಕೊಳ್ಳೇಗಾಲ ದಲ್ಲಿ ಹೊಸ ರಾಜಕೀಯ ಲೆಕ್ಕಾಚಾರ ಆರಂಭವಾಗಿದೆ.

ಬೆಂಗಳೂರಿನಲ್ಲಿ ನಡೆದ ಜೆಡಿಎಸ್‌ ಸಮಾವೇಶದಲ್ಲಿ ಪುಟ್ಟಸ್ವಾಮಿ ಎಚ್‌.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಶಾಸಕ ಎಚ್‌.ಡಿ.ರೇವಣ್ಣ, ಸಂಸದ ಪ್ರಜ್ವಲ್‌ ರೇವಣ್ಣ ಸೇರಿದಂತೆ ಹಿರಿಯ ಮುಖಂಡರ ಸಮ್ಮುಖದಲ್ಲಿ ಪಕ್ಷ ಸೇರಿದ್ದಾರೆ.

ಕೆಲ ತಿಂಗಳ ಹಿಂದೆಯಷ್ಟೇ ಜೆಡಿಎಸ್‌ಗೆ ಸೇರಿದ್ದ ಗುತ್ತಿಗೆದಾರ ಓಲೆ ಮಹದೇವ ಕೊಳ್ಳೇಗಾಲದಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಈಗ ಪುಟ್ಟಸ್ವಾಮಿ ಅವರೂ ಪಕ್ಷಕ್ಕೆ ಸೇರಿರುವುದರಿಂದ ‘ತೆನೆ ಹೊತ್ತ ಮಹಿಳೆ’ ಪಕ್ಷದ ಟಿಕೆಟ್‌ಗಾಗಿ ಪೈಪೋಟಿ ನಡೆಯಲಿದೆ.

ಟಿಕೆಟ್‌ ಸಿಗಲಿದೆ ಎಂಬುದನ್ನು ಖಚಿತ ಮಾಡಿಕೊಂಡೇ ಪುಟ್ಟಸ್ವಾಮಿ ಪಕ್ಷ ಸೇರಿದ್ದಾರೆ ಎಂದು ಅವರ ಆಪ್ತರು ಹೇಳಿದ್ದಾರೆ. ಒಂದು ವೇಳೆ ನಿಜವೇ ಆಗಿದ್ದರೆ, ಓಲೆ ಮಹದೇವ ಅವರಿಗೆ ತೀವ್ರ ಹಿನ್ನಡೆಯಾಗಲಿದೆ.

ಪೊಲೀಸ್‌ ಸೇವೆಯಲ್ಲಿದ್ದಾಗಲೇ, ಅಭಿಮಾನಿಗಳ ಬಳಗದ ಮೂಲಕ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಪುಟ್ಟಸ್ವಾಮಿಯವರು ರಾಜಕೀಯ ಸೇರುವುದಕ್ಕಾಗಿ ಇನ್‌ಸ್ಪೆಕ್ಟರ್‌ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಿಜೆಪಿ ಟಿಕೆಟ್‌ ಬಯಸಿದ್ದ ಅವರು ಪ್ರಯತ್ನವನ್ನೂ ನಡೆಸಿದ್ದರು. ಅಲ್ಲಿ ಸಿಗುವುದಿಲ್ಲ ಎಂಬುದು ಖಚಿತವಾದ ನಂತರ ಜೆಡಿಎಸ್‌ ಕಡೆಗೆ ಮುಖ ಮಾಡಿದ್ದರು. ಆದರೆ, ಅಲ್ಲಿನ ಮುಖಂಡರು ಒಪ್ಪಿಗೆ ನೀಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲೂ ನಿರ್ಧಾರ ಮಾಡಿದ್ದರು. ಜನರ ಅಭಿಪ್ರಾಯ ಪಡೆಯುವುದಾಗಿ ಹೇಳುತ್ತಾ ಕೊಳ್ಳೇಗಾಲ ಹಾಗೂ ಸಂತೇಮರಹಳ್ಳಿಯಲ್ಲಿ ಬೆಂಬಲಿಗರ ಬೃಹತ್‌ ಸಮಾವೇಶವನ್ನೂ ಹಮ್ಮಿಕೊಂಡಿದ್ದರು.

ಬುಧವಾರವಷ್ಟೇ ಕೊಳ್ಳೇಗಾಲದಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ರ‍್ಯಾಲಿ ನಡೆದಿತ್ತು. ಸಮಾರಂಭದಲ್ಲಿ ಯಡಿಯೂರಪ್ಪ, ಸಿ.ಎಂ. ಬಸವರಾಜ ಬೊಮ್ಮಾಯಿ ಸೇರಿದಂತೆ ಮುಖಂಡರು ಎನ್‌.ಮಹೇಶ್‌ ಅವರ ಕೈ ಬಲಪಡಿಸುವಂತೆ ಜನರಿಗೆ ಕರೆ ನೀಡಿದ್ದರು. ಇದಾಗಿ ಎರಡೇ ದಿನಗಳಲ್ಲೇ ಪುಟ್ಟಸ್ವಾಮಿ ಜೆಡಿಎಸ್‌ಗೆ ಸೇರಿದ್ದಾರೆ.

ಬೆಂಬಲಿಗರೊಂದಿಗೆ ಸೇರ್ಪಡೆ

ಪುಟ್ಟಸ್ವಾಮಿ ಶುಕ್ರವಾರ 20ಕ್ಕೂ ಹೆಚ್ಚು ಬಸ್‌ಗಳಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ.

‘ಕ್ಷೇತ್ರದಾದ್ಯಂತ ತಮ್ಮದೇ ಅಭಿಮಾನಿಗಳ ಪಡೆ ಹೊಂದಿರುವ ಪುಟ್ಟಸ್ವಾಮಿಗೆ ಜೆಡಿಎಸ್‌ ಬಲ ದೊರಕಿರುವುದು ರಾಜಕೀಯವಾಗಿ ಇನ್ನಷ್ಟು ಶಕ್ತಿ ಸಿಕ್ಕಂತಾಗಿದೆ. ಪಕ್ಷವು ಅವರಿಗೆ ಟಿಕೆಟ್‌ ನೀಡಿದ್ದೇ ಆದರೆ, ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಪ್ರಬಲ ಪೈಪೋಟಿ ನೀಡುವುದು ಖಚಿತ’ ಎಂದು ಅವರ ಆಪ್ತರು ಹೇಳುತ್ತಿದ್ದಾರೆ.

----------

ಜೆಡಿಎಸ್ ಮುಖಂಡರ ಸಮ್ಮುಖದಲ್ಲಿ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಟಿಕೆಟ್ ನೀಡುವುದಾಗಿ ವರಿಷ್ಠರು ಭರವಸೆ ನೀಡಿದ್ದಾರೆ
-ಬಿ.ಪುಟ್ಟಸ್ವಾಮಿ, ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT