ಶನಿವಾರ, ನವೆಂಬರ್ 28, 2020
24 °C
ಶಾಸಕರ ಏಳಿಗೆ ಸಹಿಸದೆ ಬಿಎಸ್‌ಪಿ ಅಧ್ಯಕ್ಷರಿಂದ ಹೇಳಿಕೆ–ಅಭಿಮಾನಿ ಬಳಗದ ಆರೋಪ

ಎನ್‌.ಮಹೇಶ್‌ ವಿರುದ್ಧ ಅಪಪ್ರಚಾರ: ಬೆಂಬಲಿಗರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರ ವರ್ಚಸ್ಸು ಈಗ ಹೆಚ್ಚಾಗಿದ್ದು, ಬೆಂಬಲಿಗರ ಸಂಖ್ಯೆಯೂ ಏರಿಕೆಯಾಗಿದೆ. ಅವರನ್ನು ಬಿಎಸ್‌ಪಿಯಿಂದ ಉಚ್ಚಾಟಿಸಿದ ನಂತರ ಅಲ್ಲಿ ಕಾರ್ಯಕರ್ತರ ಕೊರತೆ ಉಂಟಾಗಿದೆ. ಹೀಗಾಗಿ ಅದರ ಮುಖಂಡರು ಶಾಸಕರ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ’ ಎಂದು ಎನ್‌.ಮಹೇಶ್‌ ಅಭಿಮಾನಿ ಬಳಗ ಆರೋಪಿಸಿದೆ. 

ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ನಾಗಯ್ಯ ಸೇರಿದಂತೆ ಇತರರು ಶಾಸಕರ ವಿರುದ್ಧ ಮಾತನಾಡುವುದನ್ನು ಬಿಟ್ಟು, ಪಕ್ಷ ಸಂಘಟಿಸಿ ಮುಂದಿನ ಚುನಾವಣೆಯಲ್ಲಿ ಶಕ್ತಿ ತೋರಿಸಲಿ ಎಂದು ಸವಾಲು ಹಾಕಿದೆ. 

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಗದ ಮುಖಂಡ ಸೋಮಣ್ಣ ಉಪ್ಪಾರ್‌ ಅವರು, ‘ಮಹೇಶ್ ಅವರು 25 ವರ್ಷಗಳಿಂದ ರಾಜ್ಯದಲ್ಲಿ ಬಿಎಸ್‌ಪಿಯನ್ನು ಕಟ್ಟಿ ಬೆಳೆಸಿದ್ದಾರೆ. ಪಕ್ಷ ಹಾಗೂ ವೈಯಕ್ತಿಕ ವರ್ಚಸ್ಸಿನಿಂದ ಶಾಸಕರಾಗಿ ಆಯ್ಕೆಯಾಗಿ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಪಕ್ಷದ ಕೆಲವು ಮುಖಂಡರು ಪಿತೂರಿ ನಡೆಸಿ, ಬಿಎಸ್‌ಪಿಯಿಂದ ಅವರನ್ನು ಉಚ್ಚಾಟನೆ ಮಾಡಿಸಿದ್ದಾರೆ’ ಎಂದು ಆರೋಪಿಸಿದರು. 

‘ಈಗ ಮಹೇಶ್‌ ಅವರ ಏಳಿಗೆಯನ್ನು ಸಹಿಸದೇ ಕೃಷ್ಣಮೂರ್ತಿ, ನಾಗಯ್ಯ ಅವರು ಉಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಪಕ್ಷದಿಂದ ತಮ್ಮನ್ನು ಉಚ್ಚಾಟನೆ ಮಾಡಿದ್ದರೂ ಎನ್‌.ಮಹೇಶ್‌ ಅವರು ಎಲ್ಲೂ ಮಾಯಾವತಿ ಹಾಗೂ ಬಿಎಸ್‌ಪಿ ವಿರುದ್ಧ ಮಾತನಾಡಿಲ್ಲ. ಪಕ್ಷ ಹಾಗೂ ಮಾಯಾವತಿ ಬಗ್ಗೆ ಅವರಿಗೆ ಇನ್ನೂ ಗೌರವವಿದೆ. ಶಾಸಕರ ವಿರುದ್ಧ ಅನಗತ್ಯ ಅಪಪ್ರಚಾರ ಮಾಡುವುದನ್ನು ನಿಲ್ಲಿಸದೇ ಇದ್ದರೆ, ನಾವು ಕೂಡ ಬಿಎಸ್‌ಪಿ ಮುಖಂಡರ ವಿರುದ್ಧ ಮಾತನಾಡಬೇಕಾಗುತ್ತದೆ. ತಮ್ಮ ವಿರುದ್ಧವಾಗಿ ಮಾತನಾಡುತ್ತಿರುವವರ ಬಗ್ಗೆ ಏನೂ ಹೇಳಬಾರದು ಎಂದು ಶಾಸಕರು ಹೇಳಿರುವ ಕಾರಣಕ್ಕೆ ನಾವು ಸುಮ್ಮನಿದ್ದೇವೆ ’ ಎಂದರು.

ಏಜೆಂಟ್ ಅಲ್ಲ, ಸ್ವಾಭಿಮಾನಿ: ಎನ್. ಮಹೇಶ್ ಅವರು ಸ್ವಾಭಿಮಾನಿಯೇ ವಿನಾ ಬಿಜೆಪಿ ಏಜೆಂಟ್‌ ಅಲ್ಲ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಚಾಮರಾಜನಗರ, ಕೊಳ್ಳೇಗಾಲ ನಗರಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿಯಾಗಿದ್ದಾರೆ. ಏಜೆಂಟ್ ಕೆಲಸ ಮಾಡಿಲ್ಲ. ಹನೂರು ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್, ಬಿಜೆಪಿ ಮೈತ್ರಿಯಾಗಿ ಅಧಿಕಾರ ಹಿಡಿದಿದೆ. ಅದು ಏಜೆಂಟ್ ಕೆಲಸವೇ ಎಂದು ಕಿಡಿಕಾರಿದರು.

ಎನ್.ಮಹೇಶ್ ಅಭಿಮಾನಿ ಬಳಗದ ಅಧ್ಯಕ್ಷ ಆಲೂರುಮಲ್ಲು ಅವರು ಮಾತನಾಡಿದರು. 

ಎನ್.ಮಹೇಶ್ ಅಭಿಮಾನಿ ಬಳಗದ ಸಿದ್ದರಾಜು ಕೆಂಪನಪಾಳ್ಯ, ಮಾದೇಶ್‌ಉಪ್ಪಾರ್, ಕೊಳ್ಳೇಗಾಲ ನಗರಸಭಾ ಸದಸ್ಯರಾದ ರಾಮಕೃಷ್ಣ, ನಾಸೀರ್‌ಷರೀಫ್ ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.