ಕೊಳ್ಳೇಗಾಲ: ಐದೂವರೆ ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿದ್ದ ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿ ಬಹುತೇಕ ಮುಕ್ತಾಯಗೊಂಡು, ಸೋಮವಾರ (ಮಾರ್ಚ್ 20) ಉದ್ಘಾಟನೆಗೊಳ್ಳುತ್ತಿದೆ.
ಕಾಮಗಾರಿ ಪೂರ್ಣಗೊಳ್ಳದೆ ಉದ್ಘಾಟನೆ ಮಾಡಬಾರದು ಎಂದು ನಗರಸಭೆಯ ಆಡಳಿತ ಪಕ್ಷ ಕಾಂಗ್ರೆಸ್‌ನ ವಿರೋಧದ ನಡುವೆಯೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಾರಿಗೆ ಸಚಿವ ಶ್ರೀರಾಮುಲು, ನಗರಾಭಿವೃದ್ಧಿ ಸಚಿವ ಎಂಟಿಬಿ ನಾಗರಾಜು, ಸಂಸದ ವಿ.ಶ್ರೀನಿವಾಸ ಪ್ರಸಾದ್, ಶಾಸಕ ಎನ್.ಮಹೇಶ್ ಸಮ್ಮುಖದಲ್ಲಿ ನಿಲ್ದಾಣ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ.
ಗಡಿ ಜಿಲ್ಲೆಯ ಪ್ರಮುಖ ವಾಣಿಜ್ಯ ನಗರವಾಗಿರುವ ಕೊಳ್ಳೇಗಾಲ ಇಡೀ ಜಿಲ್ಲೆಯ ಕೇಂದ್ರ ಸ್ಥಾನ. ಮಹದೇಶ್ವರ ಬೆಟ್ಟ ಸೇರಿದಂತೆ ವಿವಿಧ ದೇವಾಲಯ, ಪ್ರವಾಸಿ ತಾಣಗಳಿಗೆ ತೆರಳುವ ಪ್ರಯಾಣಿಕರು ಕೊಳ್ಳೇಗಾಲದಲ್ಲಿ ಇಳಿದುಕೊಳ್ಳುತ್ತಾರೆ. ಹಾಗಾಗಿ, ಇಲ್ಲಿ ಜನರ ಓಡಾಟ ಜಾಸ್ತಿ. ಇಂತಹ ಊರಿನಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಇರಲಿಲ್ಲ. ಎಲ್ಲ ಸೌಲಭ್ಯ ಹೊಂದಿರುವ ನಿಲ್ದಾಣ ಬೇಕು ಎಂಬ ಕೂಗು ಹಲವು ವರ್ಷಗಳಿಂದ ಇತ್ತು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ₹ 22.10 ಕೋಟಿ ವೆಚ್ಚದ ಹೈಟೆಕ್ ಬಸ್ ನಿಲ್ದಾಣದ ಯೋಜನೆ ರೂಪಿಸಿತ್ತು. 2017ರ ಡಿಸೆಂಬರ್‌ನಲ್ಲಿ ಅಂದಿನ ಶಾಸಕ ಕಾಂಗ್ರೆಸ್‌ನ ಎಸ್.ಜಯಣ್ಣ ಭೂಮಿಪೂಜೆ ನೆರವೇರಿಸಿದ್ದರು.
ನಗರದಲ್ಲಿ ಹಳೆಯ ಬಸ್ ನಿಲ್ದಾಣ 2.13 ಎಕರೆ ಜಾಗದಲ್ಲಿತ್ತು. ಕೆಎಸ್‌ಆರ್‌ಟಿಸಿ ಜೊತೆ ಖಾಸಗಿ ಬಸ್‌ಗಳ ಪ್ರವೇಶಕ್ಕೂ ಅವಕಾಶ ಇತ್ತು.
ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿ ಆರಂಭಗೊಂಡ ನಂತರ ಖಾಸಗಿ ಬಸ್‌ಗಳ ನಿಲುಗಡೆಗೆ 73 ಸೆಂಟ್ಸ್ ಜಾಗ ಬಿಟ್ಟುಕೊಡುವುದಾಗಿ ಮಾತಾಗಿತ್ತು. ಉಳಿದ 1.40 ಎಕರೆಯಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಹಳೆಯ ಬಸ್ ನಿಲ್ದಾಣದಲ್ಲಿ 51 ಅಂಗಡಿಗಳಿದ್ದವು. ಆ ಜಾಗದಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಿಸುವ ಪ್ರಸ್ತಾಪ ಇದೆ. ಆ ಅಂಗಡಿಗಳನ್ನು ಇನ್ನೂ ತೆರವುಗೊಳಿಸಲಾಗಿಲ್ಲ. ಮೂರು ಅಂಗಡಿಯವರು ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ಹಾಗಾಗಿ, ಆ ಭಾಗ ಹಾಗೆಯೇ ಬಿದ್ದಿದೆ.
ನಿಲ್ದಾಣ ಹೇಗಿದೆ?: ಹೊಸ ಬಸ್ ನಿಲ್ದಾಣದ ನೆಲ ಮಹಡಿಯಲ್ಲಿ ಬೈಕ್, ಕಾರು ಪಾರ್ಕಿಂಗ್, ಮೊದಲ ಅಂತಸ್ತಿನಲ್ಲಿ 17 ಅಂಗಡಿಗಳು, ಒಂದು ಹೋಟೆಲ್, ಪೊಲೀಸ್ ಚೌಕಿ, ಕೆಎಸ್ಆರ್‌ಟಿಸಿ ಸಿಬ್ಬಂದಿಗೆ ಕೊಠಡಿ, ಗಂಡಸರು, ಹೆಂಗಸರು ಹಾಗೂ ಅಂಗವಿಕಲರ ಪ್ರತ್ಯೇಕ ಶೌಚಾಲಯಗಳು, ಎರಡನೇ ಅಂತಸ್ತಿನಲ್ಲಿ 12 ಅಂಗಡಿ ಹಾಗೂ ಒಂದು ಹಾಲ್, ಮೂರನೇ ಅಂತಸ್ತಿನಲ್ಲಿ ದೊಡ್ಡ ಹಾಲ್ ಇದೆ. ಲಿಫ್ಟ್ ವ್ಯವಸ್ಥೆ ಇದೆ.
ಪ್ರಯಾಣಿಕರಿಗೆ ಅನುಕೂಲ: ಬಸ್ ನಿಲ್ದಾಣವಿಲ್ಲದೆ ಜನರು ಐದೂವರೆ ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದರು. ಈಗ ನಿಲ್ದಾಣ ಉದ್ಘಾಟನೆಯಾಗುತ್ತಿರುವುದರಿಂದ ಜನರಿಗೆ ಅನುಕೂಲವಾಗಲಿದೆ ಎಂದು ಹೇಳುತ್ತಾರೆ ಸ್ಥಳೀಯರು.
ಮತ್ತೆ ಉದ್ಘಾಟಿಸುತ್ತೇವೆ: ರೇಖಾ
ಬಸ್ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮದಲ್ಲಿ ನಗರಸಭೆಯ ಕಾಂಗ್ರೆಸ್ ಸದಸ್ಯರು ಮೌನ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.
ಕಾಮಗಾರಿ ಪೂರ್ಣಗೊಳ್ಳದೇ ಇದ್ದರೂ; ಶಾಸಕರು ತರಾತುರಿಯಲ್ಲಿ ನಿಲ್ದಾಣವನ್ನು ಉದ್ಘಾಟಿಸುತ್ತಿದ್ದು, ಎಲ್ಲ ಕೆಲಸ ಪೂರ್ಣಗೊಂಡ ಬಳಿಕ ನಗರಸಭೆಯಿಂದ ಶಿಷ್ಟಾಚಾರದಂತೆ ನಿಲ್ದಾಣ ಉದ್ಘಾಟಿಸಲಾಗುವುದು ಎಂದು ಅಧ್ಯಕ್ಷೆ ರೇಖಾ ಹೇಳಿದ್ದಾರೆ.
‘ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿಯಲ್ಲಿ ಲೋಪವಾಗಿದೆ. ಶಾಸಕ ಎನ್.ಮಹೇಶ್ ಹಿಟ್ಲರ್ ಆಡಳಿತ ನಡೆಸುತ್ತಿದ್ದಾರೆ. ಕಾಮಗಾರಿ ಮುಕ್ತಾಯವಾಗುವವರೆಗೂ ಉದ್ಘಾಟನೆ ಮಾಡುವುದು ಬೇಡ ಎಂದು ನಗರಸಭೆಯ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು. ಹಾಗಿದ್ದರೂ ಉದ್ಘಾಟನೆ ಮಾಡಲಾಗುತ್ತಿದೆ. ಸೋಮವಾರದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಗರಸಭೆ ಸದಸ್ಯರು ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ಮಾಡುತ್ತೇವೆ. ಈಗ ನಡೆಯುವ ಉದ್ಘಾಟನೆ ಪರಿಗಣಿಸುವುದಿಲ್ಲ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
--
ಬಸ್ ನಿಲ್ದಾಣದ ವಿಚಾರದಲ್ಲಿ ಯಾವುದೇ ರಾಜಕೀಯವಿಲ್ಲ. ಇದು ಸಾರ್ವಜನಿಕರ ಸ್ವತ್ತು. ನಿಲ್ದಾಣದ ಉದ್ಘಾಟನೆಗೆ ಎಲ್ಲರೂ ಸಹಕರಿಸಬೇಕು
ಎನ್.ಮಹೇಶ್, ಶಾಸಕ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.