ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರ ಜಾತ್ರೆಗೆ ರೇಷ್ಮೆ ನಗರಿ ಸಕಲ ಸಜ್ಜು

ಜಿಲ್ಲಾ 12ನೇ ಸಾಹಿತ್ಯ ಸಮ್ಮೇಳನಕ್ಕೆ ಇಂದು ಚಾಲನೆ, ಎಂಜಿಎಸ್‌ವಿ ಕಾಲೇಜು ಮೈದಾನದಲ್ಲಿ ಎರಡು ದಿನಗಳ ಅಕ್ಷರ ಹಬ್ಬ
Last Updated 7 ಫೆಬ್ರುವರಿ 2023, 17:03 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಚಾಮರಾಜನಗರ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರೇಷ್ಮೆ ನಗರ ಕೊಳ್ಳೇಗಾಲ ಸಜ್ಜಾಗಿದೆ. ನಗರದ ಎಂಜಿಎಸ್‌ವಿ ಕಾಲೇಜು ಆವರಣದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತುಗಳು (ಕಸಾಪ) ಅಂತಿಮ ಹಂತದ ಸಿದ್ಧತೆ ಪೂರ್ಣಗೊಳಿಸಿವೆ.

ಫೆ.8 ಮತ್ತು 9ರಂದು ಸಮ್ಮೇಳನ ನಡೆಯಲಿದ್ದು, ವಿವಿಧ ವಿಚಾರಗಳ ಬಗ್ಗೆ ವಿಚಾರಗೋಷ್ಠಿ, ಕವಿಗೋಷ್ಠಿಗಳು ನಡೆಯಲಿವೆ. ಎರಡೂ ದಿನಗಳ ಕಾಲ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಹಿತ್ಯಾಸಕ್ತರನ್ನು ಮುದಗೊಳಿಸಲಿವೆ. ಜಿಲ್ಲೆಯ ರಜತ ಸಂಭ್ರಮ ವರ್ಷದಲ್ಲಿ ಸಾಹಿತ್ಯ ಜಾತ್ರೆ ನಡೆಯುತ್ತಿರುವುದರಿಂದ ಜಿಲ್ಲಾ ಕಸಾಪವು ಈ ಸಮ್ಮೇಳನಕ್ಕೆ ‘ಬೆಳ್ಳಿ ಬೆಳಕಿನಲ್ಲಿ ನುಡಿ ಜಾತ್ರೆ’ ಎಂಬ ಅಡಿ ಬರಹ ನೀಡಿದೆ.

ಕೊಳ್ಳೇಗಾಲದಲ್ಲಿ ನಡೆಯುತ್ತಿರುವ ಮೂರನೇ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ. ಈ ಹಿಂದೆ 2010ರಲ್ಲಿ ಎ.ಎಂ.ನಾಗಮಲ್ಲಪ್ಪ ಅವರು ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದಾಗ ಮೊದಲ ಬಾರಿಗೆ ಸಮ್ಮೇಳನ ನಡೆದಿತ್ತು. ಆಗ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಎರಡನೇ ಸಲ 2015ರಲ್ಲಿ ನಡೆದಿತ್ತು. ಆಗ ಸೋಮಶೇಖರ ಬಿಸಲವಾಡಿ ಅವರು ಜಿಲ್ಲಾ ಕಸಾಪದ ಅಧ್ಯಕ್ಷರಾಗಿದ್ದರೆ, ಕುಮಾರ ನಿಜಗುಣ ಅವರು ಸಮ್ಮೇಳನ ಸರ್ವಾಧ್ಯಕ್ಷರಾಗಿದ್ದರು.

ಈ ಬಾರಿ ಕೊಳ್ಳೇಗಾಲದವರೇ ಆದ ಸಾಹಿತಿ ಮಹಾದೇವ ಶಂಕನಪುರ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಾರೆ.

ವಿಶಾಲ ಪೆಂಡಾಲ್‌: ಬುಧವಾರ ಬೆಳಿಗ್ಗೆ 10ಗಂಟೆಗೆ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದೆ. ಎಂಜಿಎಸ್‌ವಿ ಕಾಲೇಜು ಮೈದಾನದಲ್ಲಿ ವಿಶಾಲವಾಗಿ ಶಾಮಿಯಾನ ಹಾಕಲಾಗಿದೆ. 1,500 ಆಸನ ವ್ಯವಸ್ಥೆ ಮಾಡಲಾಗಿದ್ದು, ಮೊದಲ ದಿನದ ಕಾರ್ಯಕ್ರಮದಲ್ಲಿ 3000ಕ್ಕೂ ಹೆಚ್ಚು ಸಾಹಿತ್ಯಾಸಕ್ತರು ಭಾಗವಹಿಸುವ ನಿರೀಕ್ಷೆಯನ್ನು ಕಸಾಪ ಹೊಂದಿದೆ.

ಅಕ್ಷರ ಜಾತ್ರೆಗೆ ಬರುವವರಿಗೆ ಕುಡಿಯುವ ನೀರಿನ ವ್ಯವಸ್ಥೆ, ಮಧ್ಯಾಹ್ನದ ಊಟದ ವ್ಯವಸ್ಥೆ, ಸಂಜೆ ಕಾಫಿ –ಟೀ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ.

ಜನಪದ ಮಹಾಮಂಟಪ, ಶ್ರೀ ಕುಮಾರ ನಿಜಗುಣ ವೇದಿಕೆಗಳಲ್ಲಿ ಕಾರ್ಯಕ್ರಮ ನಡೆಯಲಿದೆ. ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಅವರ ಹೆಸರಿನ ಮಹಾದ್ವಾರವನ್ನು ನಿರ್ಮಿಸಿ, ಅವರನ್ನು ಸ್ಮರಿಸುವ ಕೆಲಸವನ್ನೂ ಕಸಾಪ ಮಾಡಿದೆ. ಕೃತಿಗಳ ಲೋಕಾರ್ಪಣೆ, ಪುಸ್ತಕ ಮಳಿಗೆಗಳೂ
ಇರಲಿವೆ.

ನಗರದ ಮುಖ್ಯರಸ್ತೆಯಲ್ಲಿ ಕನ್ನಡ ಬಾವುಟಗಳು, ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ.

ಅದ್ಧೂರಿ ಮೆರವಣಿಗೆ: ಬುಧವಾರ ಬೆಳಿಗ್ಗೆ 8.30ಕ್ಕೆ ಧ್ವಜಾರೋಹಣದ ಮೂಲಕ ಸಮ್ಮೇಳನಕ್ಕೆ ಅಧಿಕೃತ ಚಾಲನೆ ಸಿಗಲಿದೆ. ರಾಷ್ಟ್ರಧ್ವಜವನ್ನು ಉಪವಿಭಾಗಾಧಿಕಾರಿ ಗೀತಾ ಹುಡೇದ, ನಾಡಧ್ವಜವನ್ನು ತಹಶೀಲ್ದಾರ್‌ ಎಂ.ಮಂಜುಳ ಹಾಗೂ ಪರಿಷತ್ತಿನ ಧ್ವಜವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಶೈಲಕುಮಾರ್‌ ಆರೋಹಣ ಮಾಡಲಿದ್ದಾರೆ.

ಬಳಿಕ ಸಮ್ಮೇಳನನಾಧ್ಯಕ್ಷರ ಅದ್ಧೂರಿ ಮೆರವಣಿಗೆ ನಡೆಯಲಿದೆ. ಮಹಾದೇವ ಶಂಕನಪುರ ಅವರನ್ನು ನ್ಯಾಷನಲ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಿಂದ ಡಾ.ಬಿ.ಆರ್‌.ಅಂಬೇಡ್ಕರ್‌ ರಸ್ತೆ, ಡಾ.ರಾಜ್‌ಕುಮಾರ್‌ ರಸ್ತೆ ಮಾರ್ಗವಾಗಿ ಕಲಾತಂಡಗಳ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಗುವುದು. ನಗರಸಭೆ ಅಧ್ಯಕ್ಷ ರೇಖಾ ಅವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ಬೆಳಿಗ್ಗೆ 10 ಗಂಟೆಗೆ ಸಮ್ಮೇಳನದ ಉದ್ಘಾಟನೆ ನೆರವೇರಲಿದೆ. ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮಳವಳ್ಳಿಯ ಮಂಟೇಸ್ವಾಮಿ ಮಠದ ಶ್ರೀಕಂಠಸಿದ್ಧಲಿಂಗರಾಜೇ ಅರಸ್‌ ಸಾನಿಧ್ಯವಹಿಸುವರು. ಕಸಾಪ ರಾಜ್ಯ ಅಧ್ಯಕ್ಷ ಮಹೇಶ್ ಜೋಶಿ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ಎನ್‌.ಮಹೇಶ್‌ ಅಧ್ಯಕ್ಷತೆ ವಹಿಸಲಿದ್ದಾರೆ. ನಿಕಟಪೂರ್ವ ಸಮ್ಮೇಳನದ ಅಧ್ಯಕ್ಷ ಮಂಜುಕೋಡಿ ಉಗನೆ ಅವರು ಮಾತನಾಡಲಿದ್ದಾರೆ. ಸಾಹಿತಿ ಹೊರೆಯಾಲ ದೊರೆಸ್ವಾಮಿ ಅವರಿಗೆ ಮುದ್ದುಮಾದಪ್ಪ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೂ ನೆರವೇರಲಿದೆ.

ಅನ್ಯ ಕಾರ್ಯ ನಿಮಿತ್ತ ರಜೆ

ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಇಚ್ಛಿಸುವ ಪ್ರಾಥಮಿಕ, ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಇತರೆ ಸಿಬ್ಬಂದಿ, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಹಾಗೂ ಇತರ ನೌಕರರಿಗೆ ಅನ್ಯ ಕಾರ್ಯ ನಿಮಿತ್ತ ರಜೆ ನೀಡಿ ಡಿಡಿಪಿಐ ಹಾಗೂ ಡಿಡಿಪಿಯು ಸುತ್ತೋಲೆ ಹೊರಡಿಸಿದ್ದಾರೆ.

ಭಾಗವಹಿಸಿದ್ದಕ್ಕೆ ಹಾಜರಾತಿ ಪತ್ರ ಪಡೆದು ಶಾಲೆಗೆ ಸಲ್ಲಿಸುವುದು ಕಡ್ಡಾಯವಾಗಿದೆ.

ನುಡಿ ಜಾತ್ರೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಎರಡು ದಿನಗಳ ಕಾಲ ಜಿಲ್ಲೆಗೆ ಸಂಬಂಧಿಸಿದ ಎಲ್ಲ ವಿಷಯಗಳ ಚರ್ಚೆ ನಡೆಯಲಿದೆ. ಇದರ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು

-ಎಂ.ಶೈಲಕುಮಾರ್‌, ಜಿಲ್ಲಾ ಕಸಾಪ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT