ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಳ್ಳೇಗಾಲ: ಮರೆಯಾದ ಸೌಜನ್ಯ ಮಾನವೀಯತೆ; ರೋಗಿಗಳು ಕಂಗಾಲು

ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಯಲ್ಲಿ ಶುಶ್ರೂಷಕರ ಕಾರ್ಯವೈಖರಿ ವಿರುದ್ಧ ರೋಗಿಗಳ ಅಸಮಾಧಾನ
Published : 2 ಅಕ್ಟೋಬರ್ 2024, 5:22 IST
Last Updated : 2 ಅಕ್ಟೋಬರ್ 2024, 5:22 IST
ಫಾಲೋ ಮಾಡಿ
Comments

ಕೊಳ್ಳೇಗಾಲ: ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಪಚರಿಸುವ, ಆರೈಕೆ ಮಾಡುವ ಜವಾಬ್ದಾರಿ ಹೊತ್ತಿರುವ ನರ್ಸ್‌ಗಳು ರೋಗಿಗಳ ಹಾಗೂ ಅವರ ಸಂಬಂಧಿಗಳ ಜೊತೆ ಒರಟಾಗಿ ವರ್ತಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದಿವೆ.

ಪ್ರತಿದಿನ ಕೊಳ್ಳೇಗಾಲ, ಹನೂರು ತಾಲ್ಲೂಕುಗಳ ಗ್ರಾಮಾಂತರ ಪ್ರದೇಶಗಲಿಂದ ಇಲ್ಲಿನ ಉಪವಿಭಾಗ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬರುವ ಬಡ ರೋಗಿಗಳು ಶುಶ್ರೂಷಕರ ಒರಟು ಸ್ವಭಾವಕ್ಕೆ ಬೆಚ್ಚುತ್ತಿದ್ದಾರೆ. ಚಿಕಿತ್ಸೆಗೆ ಬರುವ ಯಾರೊಂದಿಗೂ ಸಮಾಧಾನದಿಂದ ವರ್ತಿಸುವುದಿಲ್ಲ, ಏನು ಕಾಯಿಲೆ ಎಂದು ಕೇಳುವುದಿಲ್ಲ, ಏಕವಚನದಲ್ಲಿ ಗದರುತ್ತಾರೆ ಎಂದು ರೋಗಿಗಳು ಅಳಲು ತೋಡಿಕೊಂಡಿದ್ದಾರೆ.

ಪೊಲೀಸ್ ಠಾಣೆಗಳಿಗೆ ಹೋಗಲು ಜನರು ಹೆದರುವಂತೆ ಇಲ್ಲಿನ ಉಪ ವಿಭಾಗ ಆಸ್ಪತ್ರೆಗೆ ಬರಲೂ ಭಯ ಪಡುತ್ತಿದ್ದಾರೆ. ಪೊಲೀಸ್ ಇಲಾಖೆ ‘ಜನಸ್ನೇಹಿ’ ಪೊಲೀಸ್ ಠಾಣೆಗಳನ್ನು ಮಾಡುತ್ತಿರುವಂತೆ ಆರೋಗ್ಯ ಇಲಾಖೆಯೂ ‘ಜನಸ್ನೇಹಿ’ ಆಸ್ಪತ್ರೆ ಮಾಡಬೇಕು ಎಂದು ರೋಗಿಗಳು ಒತ್ತಾಯಿಸಿದ್ದಾರೆ.

‘ಮೇಲಧಿಕಾರಿಗಳ ಮೇಲಿನ ಕೋಪವನ್ನು, ವೈಯಕ್ತಿಕ ಸಮಸ್ಯೆಯ ಅಸಹನೆಯನ್ನು ರೋಗಿಗಳ ಮೇಲೆ ತೋರುವುದು ಸರಿಯಲ್ಲ. ಸಹನೆ, ಕರುಣೆ, ಮಾನವೀಯತೆ ಗುಣಗಳುಳ್ಳವರು ಮಾತ್ರ ಶೂಶ್ರೂಷಕರಾಗಲು ಅರ್ಹರು ಎಂಬ ಭಾವನೆ ಸಮಾಜದಲ್ಲಿ ಗಟ್ಟಯಾಗಿ ಬೇರೂರಿದೆ. ಇಂತಹ ಪವಿತ್ರ ವೃತ್ತಿಗೆ ಚ್ಯುತಿಬಾರದಂತೆ ನಡೆದುಕೊಳ್ಳಬೇಕು’ ಎಂದು ರೋಗಿಗಳು ಒತ್ತಾಯಿಸಿದ್ದಾರೆ.

‘ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಶುಶ್ರೂಷಕರ ನಡವಳಿಕೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ನಿರಂತರವಾಗಿ ಭೇಟಿ ನೀಡಿ ಪರಿಶೀಲಿಸಬೇಕು. ಆಸ್ಪತ್ರೆಯ ಪರಿಸ್ಥಿತಿಯ ಬಗ್ಗೆ ರೋಗಿಗಳಿಂದ ಅಹವಾಲು ಆಲಿಸಬೇಕು’ ಎಂದು ಆಗ್ರಹಿಸುತ್ತಾರೆ ರೋಗಿಗಳು.

ಇಲ್ಲಿನ ಉಪ ವಿಭಾಗ ಆಸ್ಪತ್ರೆ ಕೊಳ್ಳೇಗಾಲ ಹಾಗೂ ಹನೂರು ಭಾಗದ ರೋಗಿಗಳಿಗೆ ಸಂಜೀವಿನಿಯಂತಾಗಿದೆ. ಹನೂರು ತಾಲ್ಲೂಕಿನ ತಮಿಳುನಾಡಿನ ಜೊತೆ ಗಡಿ ಹಂಚಿಕೊಂಡಿರುವ ಗೋಪಿನಾಥಂ ಸೇರಿದಂತೆ ತೀರಾ ಹಿಂದುಳಿದ ಗ್ರಾಮಗಳಿಂದ, ಯಳಂದೂರು ತಾಲ್ಲೂಕಿನ ಹಲವು ಹಳ್ಳಿಗಳಿಂದ ಮೈಸೂರು ಜಿಲ್ಲೆಯ ಕಾವೇರಿ ನದಿ ಪಾತ್ರದ ಗ್ರಾಮಗಳಿಂದ ಹಾಗೂ ಮಂಡ್ಯ ಜಿಲ್ಲೆಯ ಬೆಳಕವಾಡಿ ಗ್ರಾಮದಿಂದಲೂ ಹೆಚ್ಚಿನ ಸಂಖ್ಯೆಯ ರೋಗಿಗಳು ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬರುತ್ತಾರೆ. 

‘ಆಸ್ಪತ್ರೆಯ ಶುಶ್ರೂಷಕರ ವರ್ತನೆಗೆ ರೋಗಿಗಳು ಬೇಸತ್ತಿದ್ದು ಭಯದಲ್ಲೇ ಚಿಕಿತ್ಸೆ ಪಡೆಯಬೇಕಾಗಿದೆ. ಎದುರು ಮಾತನಾಡಿದರೆ ಚಿಕಿತ್ಸೆ ನಿರಾಕರಿಸಬಹುದು ಎಂಬ ಆತಂಕದಿಂದ ಅವಮಾನ ಸಹಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಹೋರಾಟಗಾರ ವಿನಯ್ ದೂರುತ್ತಾರೆ.

‘ಆಸ್ಪತ್ರೆಯಲ್ಲಿ ರೋಗಿಗಳ ಜತೆ ಕಠೋರವಾಗಿ ವರ್ತಿಸುತ್ತಿರುವ ಬಗ್ಗೆ ತನಿಖೆ ನಡೆಸಿ ಸತ್ಯಾಂಶ ಕಂಡಂಬಂದರೆ ಬೇರೆಡೆಗೆ ವರ್ಗಾವಣೆ ಮಾಡಬೇಕು. ಬಡ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಉಚಿತವಾಗಿ ನೀಡುತ್ತಿರುವ ಸರ್ಕಾರದ ಆಶಯ ಮಣ್ಣುಪಾಲಾಗಬಾರದು. ಆಸ್ಪತ್ರೆಯಲ್ಲಿ ಹಣಕೊಟ್ಟರೆ ಮಾತ್ರ ಉತ್ತಮ ಚಿಕಿತ್ಸೆ ದೊರೆಯುತ್ತದೆ ಎಂಬ ದೂರುಗಳಿದ್ದು ತನಿಖೆ ನಡೆಸಬೇಕು. ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಬಾರದವರ ವಿರುದ್ಧವೂ ಶಿಸ್ತು ಕ್ರಮ ಜರುಗಿಸಬೇಕು’ ಎಂದು ಹೋರಾಟಗಾರ ವಿನಯ್ ಒತ್ತಾಯಿಸಿದರು.

ವಿದ್ಯಾರ್ಥಿಗಳಿಂದ ಚುಚ್ಚುಮದ್ದು ಆರೋಪ!

‘ಆಸ್ಪತ್ರೆಯಲ್ಲಿ ಶುಶ್ರೂಷಕರ ಉಸ್ತುವಾರಿ ಇಲ್ಲದೆ ನರ್ಸಿಂಗ್ ವಿದ್ಯಾರ್ಥಿಗಳೇ ರೋಗಿಗಳಿಗೆ ಚುಚ್ಚುಮದ್ದು ಹಾಕುತ್ತಿದ್ದಾರೆ ಎಂಬ ದೂರುಗಳು ಇವೆ. ಕಲಿಕಾ ಹಂತದಲ್ಲಿರುವ ವಿದ್ಯಾರ್ಥಿಗಳು ಚುಚ್ಚುಮದ್ದು ಹಾಕುವಾಗ, ಡ್ರಿಪ್‌ ಬಾಟೆಲ್‌ಗಳ ಅಳವಡಿಕೆ ಮಾಡುವಾಗ ಸಮಸ್ಯೆಗಳು ಎದುರಾಗುತ್ತಿವೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಹಾಗೂ ವೈದ್ಯರು ಉಪ ವಿಭಾಗ ಆಸ್ಪತ್ರೆಗೆ ಭೇಟಿನೀಡಿ ಪರಿಶೀಲಿಸಬೇಕು. ರೋಗಿಗಳಿಂದ ಹಣ ವಸೂಲಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳಬೇಕು. ಇಲ್ಲವಾದರೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಅಯಾಜ್ ಕನ್ನಡಿಗ ಎಚ್ಚರಿಕೆ ನೀಡಿದರು.

‘ಶೀಘ್ರ ಭೇಟಿ ಸಭೆ’

ಕೊಳ್ಳೇಗಾಲ ವಿಭಾಗ ಆಸ್ಪತ್ರೆಯಲ್ಲಿ ರೋಗಿಗಳ ಜೊತೆ ಸ್ಥಳೀಯ ಶುಶ್ರೂಷಕರ ವರ್ತನೆ ಸರಿ ಇಲ್ಲ ಎಂಬ ದೂರುಗಳು ಕೇಳಿಬಂದಿದ್ದು ಈ ಸಂಬಂಧ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಹಿರಿಯ ವೈದ್ಯರ ಜೊತೆ ಸಭೆ ನಡೆಸಿ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡುತ್ತೇನೆ. ರೋಗಿಗಳನ್ನು ಮಾನವೀಯ ನೆಲೆಯಲ್ಲಿ ಆರೈಕೆ ಮಾಡಬೇಕು ಸರ್ಕಾರದ ಕೆಲಸವನ್ನು ಜವಾಬ್ದಾರಿಯಿಂದ ನಿಭಾಯಿಸಬೇಕು’ ಎಂದು ನಗರಸಭೆ ಅಧ್ಯಕ್ಷೆ ರೇಖಾ ಹೇಳಿದರು.

‘ವರದಿ ಪಡೆದು ಶಿಸ್ತು ಕ್ರಮ’

‘ವಿಭಾಗ ಆಸ್ಪತ್ರೆಯಲ್ಲಿ ಶುಶ್ರೂಷಕರು ರೋಗಿಗಳ ಜೊತೆ ಸರಿಯಾಗಿ ವರ್ತನೆ ಮಾಡುತ್ತಿಲ್ಲ ಎಂಬ ದೂರುಗಳು ಇವೆ. ಸರ್ಕಾರದ ಸೇವೆಯನ್ನು ಸರಿಯಾಗಿ ಮಾಡದ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಕಂಡುಬಂದರೆ ಆಸ್ಪತ್ರೆಯ ಅಧಿಕಾರಿಗಳಿಂದ ಮಾಹಿತಿ ಪಡೆದು ತಪ್ಪಿತಸ್ತರ ವಿರುದ್ದ ಶಿಸ್ತು ಕ್ರಮ ಜರುಗಿಸುತ್ತೇನೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT