ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ನಿಲ್ಲದ ಪ್ಲಾಸ್ಟಿಕ್ ಹಾವಳಿ

ಕಡತದಲ್ಲಷ್ಟೇ ಆದೇಶ, ಪ್ಲಾಸ್ಟಿಕ್ ಮಾರಾಟ, ಬಳಕೆ ಅವ್ಯಾಹತ
Last Updated 28 ನವೆಂಬರ್ 2020, 19:31 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಪ್ಲಾಸ್ಟಿಕ್ ನಿಷೇಧ ಎಂಬುದು ಇಲ್ಲಿ ಕಾಗದಲ್ಲಿರುವ ಮುದ್ರಿಸಿರುವ ಆದೇಶವಷ್ಟೇ. ತಾಲ್ಲೂಕಿನಾದ್ಯಂತ ಪರಿಸರಕ್ಕೆ ಹಾನಿ ಉಂಟು ಮಾಡುವ ನಿಷೇಧಿತ ಪ್ಲಾಸ್ಟಿಕ್‌ನ ಬಳಕೆ ಎಗ್ಗಿಲ್ಲದೇ ಸಾಗಿದೆ.

ನಗರ, ಹೋಬಳಿ, ಗ್ರಾಮೀಣ ಭಾಗಗಳಲ್ಲಿಜನರು ಈಗಲೂ ಪ್ಲಾಸ್ಟಿಕನ್ನೇ ಬಳಸುತ್ತಿದ್ದಾರೆ. ಅಂಗಡಿಗಳಲ್ಲೂ ಪ್ಲಾಸ್ಟಿಕ್ ವಸ್ತುಗಳ ಮಾರಾಟಕ್ಕೆ ಕಡಿವಾಣ ಬಿದ್ದಿಲ್ಲ.

ಪ್ಲಾಸ್ಟಿಕ್ ನಿಷೇಧದ ಆರಂಭದಲ್ಲಿ ನಗರಸಭೆ ನಡೆಸಿದ ಜಾಗೃತಿ ಕಾರ್ಯಕ್ರಮಗಳು ಹಾಗೂ ಕಾರ್ಯಾಚರಣೆಗಳಿಂದಾಗಿ ಬಳಕೆ ಸ್ಬಲ್ಪ ನಿಯಂತ್ರಣಕ್ಕೆ ಬಂದಿತ್ತು‌‌. ಕೋವಿಡ್ ಹಾವಳಿ ಆರಂಭವಾದ ನಂತರ ಸೋಂಕಿನ ಹಿಂದೆ ಬಿದ್ದ ಅಧಿಕಾರಿಗಳು ಪ್ಲಾಸ್ಟಿಕ್ ಬಗ್ಗೆ ಹೆಚ್ಚು ಗಮನ ಹರಿಸಲು ಆಗಿಲ್ಲ. ಹೀಗಾಗಿ, ಅದರ ಬಳಕೆ ಹೆಚ್ಚಾಗಿದೆ.

ನಗರಸಭೆ ಅಧಿಕಾರಿಗಳು ಆಗಾಗ ಅಂಗಡಿಗಳ ಮೇಲೆ ದಿಢೀರ್ ದಾಳಿ‌ ನಡೆಸಿ, ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡು ದಂಡ ವಿಧಿಸುತ್ತಿದ್ದಾರೆ. ಹಾಗಿದ್ದರೂ, ಅಂಗಡಿಗಳ ಮಾಲೀಕರು ಎಚ್ಚೆತ್ತುಕೊಂಡಿಲ್ಲ. ಗ್ರಾಹಕರಲ್ಲೂ ಪ್ಲಾಸ್ಟಿಕ್ ಬಗ್ಗೆ‌ ಜಾಗೃತಿ ಮೂಡಿದಂತೆ ಕಾಣುತ್ತಿಲ್ಲ. ಅಂಗಡಿಯವರು ಪ್ಲಾಸ್ಟಿಕ್ ಚೀಲ ನೀಡದಿದ್ದರೂ, ಇವರು ಕೇಳಿ ಪಡೆಯುತ್ತಾರೆ.

ರಾಜಾರೋಷವಾಗಿ ಮಾರಾಟ: ಮಾಂಸದ ಅಂಗಡಿ, ಬಟ್ಟೆ ಅಂಗಡಿ, ಹೋಟೆಲ್, ದಿನಸಿ ಅಂಗಡಿ, ಬಾರ್ ಅಂಡ್ ರೆಸ್ಟೋರೆಂಟ್, ಫಾನ್ಸಿ ಸ್ಟೋರ್, ತರಕಾರಿ, ಹಣ್ಣು ಸೇರಿದಂತೆ ಬಹುತೇಕ ಅಂಗಡಿಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಉಪಯೋಗಿಸಲಾಗುತ್ತಿದೆ.

'ಮದುವೆ ಸಮಾರಂಭಗಳಲ್ಲಿ ಕುಡಿಯುವ ನೀರಿನ ಲೋಟ, ಊಟದ ಎಲೆ ಸೇರಿದಂತೆ ಅನೇಕ ಪ್ಲಾಸ್ಟಿಕ್ ಸಾಮಗ್ರಿಗಳ ಬಳಕೆ ಮತ್ತೆ ಆರಂಭವಾಗಿದೆ. ಪ್ಲಾಸ್ಟಿಕ್ ನಿಷೇಧ ಮಾಡಿ ಅಧಿಕಾರಿಗಳು ಅನೇಕ ದಾಳಿ ನಡೆಸಿದ್ದರೂ ಪ್ಲಾಸ್ಟಿಕ್ ಮಾರಾಟ ದಂಧೆ ನಿಂತಿಲ್ಲ' ಎಂದು ನಗರ ನಿವಾಸಿ ಮಧುಸೂದನ್ ಹೇಳಿದರು.

'ಹೋಟೆಲ್‍ಗಳಲ್ಲಿ ಪಾರ್ಸೆಲ್ ಕೇಳಿದರೆ, ತಿಂಡಿಗಳನ್ನು ಪ್ಲಾಸ್ಟಿಕ್‍ ಚೀಲದಲ್ಲಿ ಕಟ್ಟಿ ಕೊಡುತ್ತಾರೆ. ನಂತರ, ಆಹಾರ ಸೇವಿಸುವ ಜನ ಪ್ಲಾಸ್ಟಿಕ್‌ ಅನ್ನು ರಸ್ತೆಗೆ ಎಸೆಯುತ್ತಾರೆ. ಮೂಕ ಪ್ರಾಣಿಗಳು ಅದನ್ನು ತಿಂದು ಅನಾರೋಗ್ಯಕ್ಕೆ ತುತ್ತಾಗುತ್ತಿವೆ'ಎಂದು ಹಿರಿಯ ನಾಗರಿಕ ರಂಗಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

5 ಟನ್ ಪ್ಲಾಸ್ಟಿಕ್ ವಶ:ನಗರಸಭೆಯ ಅಧಿಕಾರಿಗಳು ವರ್ಷದಿಂದೀಚೆಗೆ ನಗರದ ವಿವಿಧ ಅಂಗಡಿಗಳಲ್ಲಿ ಹಾಗೂ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ‌ ಐದು ಟನ್ ಪ್ಲಾಸ್ಟಿಕ್ ಜಪ್ತಿ ಮಾಡಿ, ₹20 ಸಾವಿರಕ್ಕೂ ಹೆಚ್ಚು ದಂಡ ವಸೂಲಿ ಮಾಡಿದ್ದಾರೆ.

'ಪ್ರಮುಖವಾಗಿ ನಗರದ ಬಟ್ಟೆ ಅಂಗಡಿ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಡಾ.ವಿಷ್ಣುವರ್ಧನ್ ರಸ್ತೆಗಳಲ್ಲಿ ಹೆಚ್ಚಾಗಿ ಪ್ಲಾಸ್ಟಿಕ್ ಬಳಕೆ ಕಂಡು ಬಂದಿದ್ದು ಅನೇಕ ಬಾರಿ ದಾಳಿ ನಡೆಸಲಾಗಿದೆ. ಸಂಗ್ರಹಿಸಲಾದ ಪ್ಲಾಸ್ಟಿಕ್ ಅನ್ನು ನಗರಸಭೆಯ ಕಚೇರಿಯಲ್ಲಿ ಶೇಖರಿಸಿಟ್ಟಿದ್ದೇವೆ' ಎಂದು ಅಧಿಕಾರಿಗಳು ಹೇಳುತ್ತಾರೆ.

'ನಾವು ಅನೇಕ ಕಡೆ ದಾಳಿ ನಡೆಸಿ ದಂಡ ವಿಧಿಸಿದ್ದೇವೆ. ಆದರೂ ಪ್ಲಾಸ್ಟಿಕ್ ಹಾವಳಿ ನಿಂತಿಲ್ಲ. ಪ್ಲಾಸ್ಟಿಕ್ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ‌ ಜರುಗಿಸುತ್ತೇವೆ' ಎಂದು ನಗರಸಭೆಯ ಪರಿಸರ ಎಂಜಿನಿಯರ್ ಧನಂಜಯ್ ಅವರು 'ಪ್ರಜಾವಾಣಿ'ಗೆ ತಿಳಿಸಿದರು.

ಸಾರ್ವಜನಿಕರೂ ಅರಿಯಲಿ: ‘ಪ್ಲಾಸ್ಟಿಕ್ ಮಾರಾಟಗಾರರನ್ನು ಮಾತ್ರ ದೂಷಿಸಿದರೆ ಆಗುವುದಿಲ್ಲ. ಜನರು‌ ಕೂಡ ಈ ಬಗ್ಗೆ ಜಾಗೃತರಾಗಬೇಕು. ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮದ ಬಗ್ಗೆ ತಿಳಿದಿರಬೇಕು. ಸಾಮಗ್ರಿಗಳ ಖರೀದಿಗೆ ಹೋಗುವಾಗ ಮನೆಯಿಂದಲೇ ಬಟ್ಟೆ ಚೀಲವನ್ನು ತೆಗೆದುಕೊಂಡು ಹೋಗಬೇಕು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ದೃಢ ನಿಶ್ಚಯ ಮಾಡಬೇಕು’ ಎಂದು ಹೇಳುತ್ತಾರೆ ಅಧಿಕಾರಿಗಳು ಹಾಗೂ ಪರಿಸರ ಪ್ರೇಮಿಗಳು.

'ಪ್ಲಾಸ್ಟಿಕ್‌ನಿಂದ ಅಪಾಯ ಹೆಚ್ಚು. ಹಾಗಾಗಿ ನಾವು ಅದನ್ನು ಉಪಯೋಗಿಸುತ್ತಿಲ್ಲ. ನಮ್ಮ ಆರೋಗ್ಯದ ಹಿತದೃಷ್ಟಿಯಿಂದ ಪ್ಲಾಸ್ಟಿಕ್‌ನಿಂದ ದೂರ ಇದ್ದಷ್ಟೂ ಒಳ್ಳೆಯದು' ಎಂದು ನಗರದ‌ ನಿವಾಸಿ ಕುಸುಮ‌ ಎಚ್.ಎಸ್. ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT