ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಜಿಲ್ಲೆಯಾದ್ಯಂತ ಅನುರಣಿಸಿದ ಕೋಟಿಕಂಠ ಗಾಯನ

ರಾಜ್ಯೋತ್ಸವ ಅಂಗವಾಗಿ ‘ನನ್ನ ನಾಡು– ನನ್ನ ಹಾಡು’ ಶೀರ್ಷಿಕೆ ಅಡಿಯಲ್ಲಿ ಆರು ಹಾಡುಗಳ ಗಾಯನ
Last Updated 28 ಅಕ್ಟೋಬರ್ 2022, 13:49 IST
ಅಕ್ಷರ ಗಾತ್ರ

ಚಾಮರಾಜನಗರ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕೋಟಿಕಂಠ ಗೀತಗಾಯನ ಕಾರ್ಯಕ್ರಮದಲ್ಲಿ, ಕನ್ನಡದ ನಾಡು ನುಡಿ, ಸಂಸ್ಕೃತಿಯನ್ನು ಬಿಂಬಿಸುವ ಆರು ಸರಣಿ ಹಾಡುಗಳು ಏಕ ಕಂಠದಲ್ಲಿ ಜಿಲ್ಲೆಯಾದ್ಯಂತ ಅನುರಣಿಸಿತು.

ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರಗಳಲ್ಲಿ ಮಾತ್ರ ವಲ್ಲದೆ, ಎಲ್ಲ ಸರ್ಕಾರಿ ಶಾಲಾ ಕಾಲೇಜುಗಳಲ್ಲೂ ಕೋಟಿ ಕಂಠ ಗೀತಗಾಯನ ಕಾರ್ಯಕ್ರಮ ನಡೆಯಿತು.

ನಾಡಿನ ಶ್ರೇಷ್ಠ ಕವಿಗಳು ಬರೆದಿರುವ, ನಾಡು ನುಡಿಯ ಶ್ರೇಷ್ಠತೆಯನ್ನು ಸಾರುವ ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆ ‘ಜಯಭಾರತ ಜನನಿಯ ತನುಜಾತೆ’ ನಾಡಗೀತೆಯನ್ನು ಮೊದಲಿಗೆ ಹಾಡಲಾಯಿತು. ಆ ಬಳಿಕ ಹುಯಿಲಗೋಳ ನಾರಾಯಣರಾಯರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ’, ಡಾ. ಡಿ.ಎಸ್. ಕರ್ಕಿ ಅವರ ‘ಹಚ್ಚೇವು ಕನ್ನಡದ ದೀಪ’, ಡಾ. ಚನ್ನವೀರ ಕಣವಿ ಅವರ ‘ವಿಶ್ವವಿನೂತನ ವಿದ್ಯಾಚೇತನ’ ಹಾಗೂ ಹಂಸಲೇಖ ಅವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತೆಗಳ ಸಮೂಹ ಗಾಯನ ಏಕಕಾಲದಲ್ಲಿ ಮೊಳಗಿದವು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದ ಮುಂಭಾಗದಲ್ಲಿ ಜಿಲ್ಲಾ ಮಟ್ಟದ ಪ್ರಧಾನ ಕಾರ್ಯಕ್ರಮ ನಡೆಯಿತು. 1,500ಕ್ಕೂ ಹೆಚ್ಚು ಮಂದಿ ಇದರಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಿತ್ತು.

ಶಾಸಕ ಸಿ. ಪುಟ್ಟರಂಗಶೆಟ್ಟಿ, ನಗರಸಭೆ ಅಧ್ಯಕ್ಷೆ ಆಶಾ ನಟರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್,ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ನಗರಸಭಾ ಸದಸ್ಯರು, ಕನ್ನಡ ಪರ ಸಂಘಟನೆಗಳ ಮುಖಂಡರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಇತರೆ ಜನಪ್ರತಿನಿಧಿಗಳು, ಗಣ್ಯರು, ಕಲಾವಿದರು ಹಾಡುಗಳಿಗೆ ಧ್ವನಿಯಾದರು.

ಪ್ರತಿಜ್ಞಾ ವಿಧಿ ಸ್ವೀಕಾರ: ಇದೇ ಸಂದರ್ಭದಲ್ಲಿ ಸೇರಿದ್ದ ಎಲ್ಲರಿಗೂ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಕಾತ್ಯಾಯಿನಿದೇವಿ ಅವರು ಕನ್ನಡ ಬಳಕೆ, ಕಲಿಕೆ, ನಾಡು, ನುಡಿ, ಸಂಸ್ಕೃತಿ, ಪರಂಪರೆ ಉಳಿಸಿ ಪೋಷಿಸುವ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಬಿಸಿಲಿಗೆ ಬಸವಳಿದ ಮಕ್ಕಳು
ಚಾಮರಾಜನಗರದಲ್ಲಿ ಪ್ರಧಾನ ಕಾರ್ಯಕ್ರಮ ಬೆಳಿಗ್ಗೆ 11ಕ್ಕೆ ಆಯೋಜಿಸಲಾಗಿತ್ತು. ಶಾಲಾ ಕಾಲೇಜುಗಳ ಮಕ್ಕಳು ಸ್ವಲ್ಪ ಮೊದಲೇ ಬಂದಿದ್ದರು. ರಂಗ ಮಂದಿರದ ಮುಂಭಾಗದಲ್ಲಿ ಬಿರು ಬಿಸಿನಲ್ಲಿ ಎಲ್ಲರೂ ಸರತಿ ಸಾಲಿನಲ್ಲಿ ನಿಂತು ಹಾಡುಗಳನ್ನು ಹಾಡಿದರು.

ಬಿಸಿಲಿನ ಝಳಕ್ಕೆ ಬಸವಳಿದ ಹಲವು ಮಕ್ಕಳು ತಲೆ ಸುತ್ತು ಬಂದು ಬಿದ್ದರು. ತಕ್ಷಣವೇ ಅವರನ್ನು ಮೇಲಕ್ಕೆತ್ತಿ ಉಪಚರಿಸಲಾಯಿತು.

ಗಡಿ ಭಾಗದಲ್ಲೂ ಮೊಳಗಿದ ಕನ್ನಡ ಹಾಡು
ಜಿಲ್ಲೆಯ ಎಲ್ಲ ತಾಲ್ಲೂಕುಗಳ ಗಡಿ ಗ್ರಾಮಗಳಲ್ಲೂ ಏಕಕಂಠ ಗೀತಗಾಯನ ಕಾರ್ಯಕ್ರಮ ನಡೆಯಿತು.

ಚಾಮರಾಜನಗರ ತಾಲ್ಲೂಕು ಯರಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರಗನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣ,, ಅರಕಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಎಸ್‌ಎಸ್ ಪ್ರೌಢಶಾಲೆ,ಬಿಸಲವಾಡಿ ಗ್ರಾಮದ ಪ್ರೌಢಾಶಾಲೆ ಆವರಣ, ಪುಣಜನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಳಿಪಾಳ್ಯ ಗ್ರಾಮದ ಸರ್ಕಾರಿ ಪ್ರೌಢಶಾಲೆ,ಗುಂಡ್ಲುಪೇಟೆ ತಾಲ್ಲೂಕಿನ ಗಡಿಯಂಚಿನ ಮಂಗಲ ಗ್ರಾಮ ಪಂಚಾಯಿತಿ, ಬೇರಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆ,ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯ,ಹನೂರು ತಾಲ್ಲೂಕಿನ ಬೈಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗೀತ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಶಾಲಾ ಮಕ್ಕಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಗ್ರಾಮಗಳ ಮುಖಂಡರು, ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT