ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲನ ಅಂತರರಾಷ್ಟ್ರೀಯ ಸಾಧನೆ

17 ವರ್ಷಗಳಿಂದ ಕ್ರೀಡಾ ಕ್ಷೇತ್ರದಲ್ಲಿ ಸಕ್ರಿಯ, ವಿದೇಶದಲ್ಲೂ ಸಾಧನೆ ಮಾಡಿರುವ ಪ್ರಭುಸ್ವಾಮಿ,
Last Updated 9 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಚಾಮರಾಜನಗರ: ಅಂಗವೈಕಲ್ಯವನ್ನು ಮೆಟ್ಟಿ ನಿಂತು17 ವರ್ಷಗಳಿಂದ ಶಾಟ್‌ಪಟ್, ಜಾವೆಲಿನ್‌ ಥ್ರೋ ಸಾಧನೆ ಮಾಡುತ್ತಿದ್ದಾರೆ ತಾಲ್ಲೂಕಿನ ಮೇಲಾಜಿಪುರ ಗ್ರಾಮದ ಎಂ.ಪ್ರಭುಸ್ವಾಮಿ.

6ನೇ ವಯಸ್ಸಿನವರಾಗಿದ್ದಾಗ ನಡೆದ ಅಪಘಾತದಲ್ಲಿ ಪ್ರಭುಸ್ವಾಮಿ ಅವರ ಕಾಲಿಗೆ ತೀವ್ರ ಪೆಟ್ಟು ಬಿದ್ದಿತ್ತು. ಹಾಗಾಗಿ ಕಾಲನ್ನು ತುಂಡರಿಸಬೇಕಾಯಿತು. ಆ ಬಳಿಕ ಕೃತಕ ಕಾಲು ಜೋಡಣೆ ಮಾಡಿಸಿಕೊಂಡು ಓದಿನತ್ತ ಗಮನ ಹರಿಸಿದರು.

ಪ್ರಾಥಮಿಕ ಶಿಕ್ಷಣ ಸ್ವಗ್ರಾಮದಲ್ಲೇ ಮುಗಿಸಿದರು. ಪ್ರೌಢಶಿಕ್ಷಣ ಮತ್ತು ಪಿಯುಸಿ, ಉನ್ನತ ಶಿಕ್ಷಣ, ಬಿಇಡಿ ಶಿಕ್ಷಣವನ್ನು ಮೈಸೂರಿನಲ್ಲಿ ಪಡೆದರು.

‘2003–04ರಲ್ಲಿ ಮಹಾರಾಜ ಕಾಲೇಜಿನಲ್ಲಿ ಓದುತ್ತಿದ್ದ ವೇಳೆ ಮಹಾಜನ ಕಾಲೇಜಿನ ಮೈದಾನದಲ್ಲಿ ಭಾರತೀಯ ಪ್ಯಾರಾ ಒಲಿಂಪಿಕ್‌ ಸಮಿತಿ ಆಯೋಜಿಸಿದ್ದ ‘ಅಂಗವಿಕಲರ ರಾಜ್ಯ ಮಟ್ಟದ ಕ್ರೀಡಾಕೂಟ’ದಲ್ಲಿ ಪ್ರಥಮ ಬಾರಿಗೆ ಭಾಗವಹಿಸಿದೆ. ಶಾಟ್‌ಪಟ್‌ ಮತ್ತು ಜಾವೆಲಿನ್‌ನಲ್ಲಿ ಚಿನ್ನದ ಪದಕ ಪಡೆದುಕೊಂಡೆ. ಅಂದಿನಿಂದ ಕ್ರೀಡೆಯಲ್ಲಿ ನಾನು ಸಾಧನೆ ಮಾಡಬೇಕು ಎಂಬ ಛಲ ಗಟ್ಟಿಯಾಗಿ ಬೇರೂರಿತು’ ಎಂದು ಪ್ರಭುಸ್ವಾಮಿ ಅವರು‘ಪ್ರಜಾವಾಣಿ’ಗೆ ತಿಳಿಸಿದರು.

‘2005–06ರಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಜಾವೆಲಿನ್‌, ಶಾಟ್‌ಪಟ್‌ ಹಾಗೂ ಉದ್ದ ಜಿಗಿತದಲ್ಲಿ 2 ಚಿನ್ನದ ಪದಕ ಹಾಗೂ ಒಂದು ಕಂಚಿನ ಪದಕ ಪಡೆದೆ. ಮತ್ತೆ ನನಗೆ ಆಸಕ್ತಿ ಬೆಳೆಯಿತು. 2016–17ರಲ್ಲಿ ಜಯಪುರದಲ್ಲಿ ನಡೆದ 17ನೇ ರಾಷ್ಟ್ರೀಯ ಮಟ್ಟದ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ಮೂಲಕಅವಕಾಶಗಳು ಹೆಚ್ಚಾಯಿತು’ ಎಂದರು.

2018ರಲ್ಲಿ ಹರಿಯಾಣದಲ್ಲಿ ನಡೆದ 18ನೇ ರಾಷ್ಟ್ರೀಯ ಮಟ್ಟದ ಪ್ಯಾರಾ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌, ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲೂ ಭಾಗವಹಿಸಿದ್ದಾರೆ.

ವಿದೇಶದಲ್ಲೂ ಛಾಪು: 2017ರಲ್ಲಿ ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ ನಡೆದ ವರ್ಲ್ಡ್ ಮಾಸ್ಟರ್ಸ್ ಗೇಮ್‌ನಲ್ಲಿಭಾರತದಿಂದ ತೆರಳಿದ್ದ ಮೂವರು ಕ್ರೀಡಾಪಟುಗಳಲ್ಲಿ ಪ್ರಭುಸ್ವಾಮಿ ಕೂಡ ಒಬ್ಬರು. ಅಲ್ಲಿ ಶಾಟ್‌ಪಟ್‌, ಜಾವೆಲಿನ್‌ನಲ್ಲಿ 2 ಚಿನ್ನದ ಪದಕ ಗಳಿಸಿದ್ದಾರೆ. ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ 3ನೇ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಿ ಚಿನ್ನ ಹಾಗೂ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ. ಇದಲ್ಲದೆ, ನೇಪಾಳ ಸೇರಿದಂತೆ ವಿದೇಶಗಳಲ್ಲೂಭಾರತದ ಛಾಪು ಮೂಡಿಸಿದ್ದಾರೆ.

‘ಈ ಬಾರಿಯ ದಸರಾ ಕ್ರೀಡಾಕೂಟದಲ್ಲಿ ನನಗೆ ಅಂಗವಿಕಲರ ಕ್ರೀಡಾಕೂಟ ಆಯೋಜನೆ ಮಾಡುವ ಅವಕಾಶ ಸಿಕ್ಕಿತ್ತು. ಅದರಂತೆ ಚಾಮರಾಜನಗರದಲ್ಲೂ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವ ಆಸೆ ಇದೆ’ ಎನ್ನುತ್ತಾರೆ ಪ್ರಭುಸ್ವಾಮಿ.

ಪ್ಯಾರಾ ಸಿಟ್ಟಿಂಗ್‌ ವಾಲಿಬಾಲ್‌ನಲ್ಲೂಸಾಧನೆ

‘ಜಾವೆಲಿನ್‌, ಶಾಟ್‌ಪ‌ಟ್‌ ಮಾತ್ರವಲ್ಲದೆ ಪ್ಯಾರಾ ಸಿಟ್ಟಿಂಗ್‌ ವಾಲಿಬಾಲ್‌ (ಕುಳಿತು ಆಡುವ ವಾಲಿಬಾಲ್‌) ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. 2018ರಲ್ಲಿಮೈಸೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಈ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದೆ. ಇಲ್ಲಿ ಕರ್ನಾಟಕವೇ ಮೊದಲ ಸ್ಥಾನ ಪಡೆಯಿತು.ನಾವುಆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದೆವು’ ಎಂದು ಪ್ರಭುಸ್ವಾಮಿ ಹೇಳಿದರು.

ತಂಡದೊಂದಿಗೆ ತಯಾರಿ: ‘ಭಾರತೀಯ ಪ್ಯಾರಾ ಒಲಿಂಪಿಕ್ಸ್‌ ಸಮಿತಿಯ ಸಹಯೋಗದಡಿ ಅಂಗವೈಕಲ್ಯ ಹೊಂದಿರುವ ಕ್ರೀಡಾಪಟುಗಳ ತಂಡವನ್ನು ಕಟ್ಟಿಕೊಂಡು ಎಲ್ಲರಿಗೂ ತರಬೇತಿ ನೀಡಬೇಕು’ ಎಂಬ ಕನ್ನಸನ್ನು‍ಪ್ರಭುಸ್ವಾಮಿ ಬಿಚ್ಚಿಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT