ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಎಕರೆಯಲ್ಲಿ ಪಪ್ಪಾಯಿ ಲೋಕ

ಸಂತೇಮರಹಳ್ಳಿ: ಕಡಿಮೆ ಜಾಗದಲ್ಲಿ ಮೂರು ಬೆಳೆಗಳನ್ನು ಬೆಳೆಯುತ್ತಿರುವ ರೈತ ಕಪ್ಪಶೆಟ್ಟಿ
Last Updated 24 ಜುಲೈ 2019, 19:45 IST
ಅಕ್ಷರ ಗಾತ್ರ

ಸಂತೇಮರಹಳ್ಳಿ:ಸಂತೇಮರಹಳ್ಳಿ ಗ್ರಾಮದ ರೈತ ಕಪ್ಪಶೆಟ್ಟಿ ಅವರು ತಮ್ಮ ತೋಟದಲ್ಲಿ ಪಪ್ಪಾಯಿ ಬೆಳೆದು ಯಶಸ್ಸು ಗಳಿಸಿದ್ದಾರೆ.

ದೇಶವಳ್ಳಿಯಲ್ಲಿರುವ ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಒಂದು ಎಕರೆ ಪ್ರದೇಶದಲ್ಲಿ ಪಪ್ಪಾಯಿ ಜೊತೆ ಸಪೋಟ ಹಾಗೂ ನಿಂಬೆಯನ್ನೂ ಬೆಳೆದಿದ್ದಾರೆ.

ರಾಸಾಯನಿಕಗ‌ಳನ್ನು ಬಳಸದೆ ಸಾವಯವ ಪದ್ಧತಿಯಲ್ಲಿ ಅವರು ವ್ಯವಸಾಯ ಮಾಡುತ್ತಿದ್ದಾರೆ. ಸಾಕಿದ ಹಸುಗಳ ಸೆಗಣಿಯ ಗೊಬ್ಬರವನ್ನೇ ಬಳಸುತ್ತಿದ್ದಾರೆ. ಹಸಿರೆಲೆ ಗೊಬ್ಬರವನ್ನೂ ಹಾಕುತ್ತಿದ್ದಾರೆ. ಪಂಪ್‍ಸೆಟ್ ಮೂಲಕ ಹನಿ ನೀರಾವರಿಯಲ್ಲಿ ಫಸಲು ತೆಗೆಯುತ್ತಿದ್ದಾರೆ.

ನರ್ಸರಿಯಲ್ಲಿ ಪಪ್ಪಾಯಿ ಗಿಡವೊಂದಕ್ಕೆ ₹ 1ರಂತೆ ತಂದು 1 ಎಕರೆ ಜಮೀನಿನಲ್ಲಿ ನಾಟಿ ಮಾಡಿದ್ದಾರೆ. ನಾಟಿ ಮಾಡಿದ 10 ತಿಂಗಳಿಗೆ ಸರಿಯಾಗಿ ಪಪ್ಪಾಯಿ ಗಿಡಗಳು ಫಸಲು ನೀಡಲು ಆರಂಭಿಸಿವೆ. ಹಣ್ಣಾದ ಪಪ್ಪಾಯಿಗಳನ್ನು ಪ್ರತಿದಿನ 20 ಕೆಜಿಗೂ ಹೆಚ್ಚಾಗಿ ಮಾರಾಟ ಮಾಡುತ್ತಾರೆ.

‘ಗ್ರಾಹಕರು ಜಮೀನಿಗೆ ಬಂದು ಕೆಜಿಗೆ ₹ 15ರಂತೆ ನೀಡಿ ಪಪ್ಪಾಯಿ ಖರೀದಿಸುತ್ತಾರೆ. ಪ್ರತಿದಿನ ₹ 300ರಿಂದ ₹ 400ರ ವರೆಗೆ ಖರ್ಚು ಬರುತ್ತದೆ. 6 ತಿಂಗಳವರೆಗೂ ಪಪ್ಪಾಯಿ ಬೀಡು ಇರುತ್ತದೆ. 2ರಿಂದ 3 ವರ್ಷದವರೆಗೂ ಗೊಬ್ಬರ, ನೀರು ಹಾಕಿ ಬೆಳೆಯನ್ನು ಕಾಪಾಡಿಕೊಳ್ಳುತ್ತೇವೆ’ ಎಂದು ಅವರು ಹೇಳುತ್ತಾರೆ.

‘ವ್ಯವಸಾಯದಲ್ಲಿ ಶ್ರಮಪಟ್ಟು ದುಡಿಯಬೇಕು. ಆಸಕ್ತಿಯೂ ಇರಬೇಕು. ಸಕಾಲದಲ್ಲಿ ಸರಿಯಾಗಿ ಗೊಬ್ಬರ ಹಾಗೂ ನೀರು ಹಾಕಿ ಬೆಳೆಗಳನ್ನು ಕಾಪಾಡಿಕೊಂಡರೆ ಕೃಷಿ ನಂಬಿದವರನ್ನು ಕೈ ಬಿಡುವುದಿಲ್ಲ’ ಎಂದು ಕಪ್ಪಶೆಟ್ಟಿ ಹೇಳುತ್ತಾರೆ.

ಮಿಶ್ರ ಬೇಸಾಯ ಪದ್ಧತಿ

ಪಪ್ಪಾಯಿ ಜೊತೆಗೆ ಸಪೋಟ, ಮಾವು, ನಿಂಬೆ ಬೆಳೆಗಳನ್ನು ಮಿಶ್ರ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಜಮೀನಿನ ತೋಟದಲ್ಲಿಯೇ 2 ಹಸುಗಳನ್ನು ಸಾಕಿಕೊಂಡು ಹೈನುಗಾರಿಕೆಯನ್ನು ಮಾಡುತ್ತಿದ್ದಾರೆ. ಹಸುಗಳಿಗೆ ಬೇಕಾದ ಮೇವನ್ನು 20 ಗುಂಟೆ ಜಮೀನಿನಲ್ಲಿ ಬೆಳೆಸಿದ್ದಾರೆ. ಪ್ರತಿದಿನ ಹಸುಗಳಿಂದ 8 ಲೀಟರ್‌ ಹಾಲು ಕರೆಯುತ್ತಾರೆ. ಮನೆ ಬಳಕೆಯ ಜೊತೆಗೆ ಹಾಲನ್ನು ಡೇರಿಗೆ ನೀಡುತ್ತಾರೆ.

ನೀರು ಪೋಲಾಗದಂತೆ ಹನಿ ನೀರಾವರಿ ವ್ಯವಸ್ಥೆಯನ್ನು ಮಾಡಿದ್ದಾರೆ. ಕಡಿಮೆ ಖರ್ಚು, ಕಡಿಮೆ ಜಮೀನು ಹಾಗೂ ಹೆಚ್ಚು ಆದಾಯ ಬರುವಂತೆ ವ್ಯವಸ್ಥೆ ಕಲ್ಪಿಸಿಕೊಂಡಿರುವ ಇವರ ಜಮೀನಿಗೆ ಇತರ ರೈತರು ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುತ್ತಾರೆ. ನಂತರ ತಮ್ಮ ಜಮೀನಿನಲ್ಲಿಯೂ ಇದೇ ಮಾದರಿಯನ್ನು ಅನುಸರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT