ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿ ಹಸುಗಳಲ್ಲಿ ಗೆಲುವು ಕಂಡ ಜಮೀಲ್‌

ಸ್ಥಳೀಯ ಹಾಗೂ ಹೊರರಾಜ್ಯಗಳ 15ಕ್ಕೂ ಹೆಚ್ಚು ರಾಸುಗಳ ಸಾಕಣೆ; ಹಾಲು, ಗಂಜಲ, ಸೆಗಣಿಯಲ್ಲೂ ಆದಾಯ
Last Updated 4 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಪದವಿ ಪಡೆದ ಕೂಡಲೇ ನೌಕರಿ ಪಡೆಯಬೇಕು ಎಂಬ ಆಸೆ ಆಕಾಂಕ್ಷೆ ಯುವಜನರ ಮನಸ್ಸಿನಲ್ಲಿಯೂ ಇರುತ್ತದೆ. ಆದರೆ, ಇಲ್ಲೊಬ್ಬ ಯುವಕರು ಪದವಿ ಮುಗಿದು ನೌಕರಿ ಬಗ್ಗೆ ತಲೆ ಕೆಡಿಸಿಕೊಳ್ಳದೇ ಹೈನುಗಾರಿಕೆಯನ್ನು ಅಪ್ಪಿ ಹಿಡಿದು ಯಶಸ್ಸು ಕಂಡಿದ್ದಾರೆ.

ನಗರದ ನೂರ್ ಮೊಹಲ್ಲಾ ಬಡಾವಣೆಯ ನಿವಾಸಿ ಜಮೀಲ್‍ಪಾಷ ಅವರನ್ನು ದೇಸಿ ರಾಸುಗಳು ಕೈ ಹಿಡಿದಿವೆ. ಹೈನುಗಾರಿಕೆ ಮತ್ತು ಕೃಷಿಯಲ್ಲಿ ತೊಡಗಿ ಉತ್ತಮ ಆದಾಯಗಳಿಸುತ್ತಿದ್ದಾರೆ. ದೇಸಿ ಹಸುಗಳು ಕೂಡ ಆರ್ಥಿಕವಾಗಿ ಕೈಹಿಡಿಯಬಲ್ಲವು ಎಂಬುದನ್ನು ಅವರು ತೋರಿಸಿದ್ದಾರೆ.

ಜಮೀಲ್‌ಪಾಷ ಅವರದ್ದು ಕೃಷಿ ಕುಟುಂಬ. ತಂದೆ ಖಾದರ್ ಪಾಷ ಅವರು ಕೃಷಿ ಮತ್ತು ಹೈನುಗಾರಿಕೆ ನಡೆಸುತ್ತಿದ್ದರು. ಹಾಗಾಗಿ, ಹೈನುಗಾರಿಕೆ ಬಗ್ಗೆ ಜಮೀಲ್‌ ಅವರಿಗೆ ಮೊದಲಿನಿಂದಲೂ ಆಸಕ್ತಿ ಇತ್ತು. ಪದವಿ ಪೂರೈಸಿದ ನಂತರ ಆಸಕ್ತಿಗೆ ನೀರೆರದು ಪೋಷಣೆ ಮಾಡಿದರು.

ಸದ್ಯ ಅವರ ಕೊಟ್ಟಿಗೆಯಲ್ಲಿ 15ಕ್ಕೂ ಹೆಚ್ಚು ದೇಸಿ ಹಸುಗಳಿವೆ. ಗುಜರಾತಿನ ಗಿರ್‌ ಮತ್ತು ಆಂಧ್ರದ ಓಂಗೊಲ್‌ ತಳಿಗಳೊಂದಿಗೆ ಜಿಲ್ಲೆಯ ಸ್ಥಳೀಯ ತಳಿಗಳ 10 ಹಸುಗಳಿವೆ.

ಎಲ್ಲದರಲ್ಲೂ ಆದಾಯ: ದೇಸಿ ಹಸುಗಳ ಹಾಲು ಹಾಗೂ ಇನ್ನಿತರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಹಾಗಾಗಿ, ಜಮೀಲ್‌ ಅವರಿಗೆ ಉತ್ತಮ ಆದಾಯವೂ ಬರುತ್ತಿದೆ.

7 ರಾಸುಗಳು ದಿನಕ್ಕೆ 90 ಲೀಟರ್ ಹಾಲನ್ನು ನೀಡುತ್ತಿವೆ. ಲೀಟರ್‌ ಹಾಲಿಗೆ ₹120ರವರೆಗೂ ಅವರಿಗೆ ಸಿಗುತ್ತಿದೆ.ಗಂಜಲಕ್ಕೆ (ಮೂತ್ರ) 1 ಲೀಟರ್‌ಗೆ ₹14, ಸೆಗಣಿ ಕೆ.ಜಿಗೆ ₹10 ಇದೆ. ಜಮೀಲ್‌ ಅವರು ಪ್ರತಿನಿತ್ಯ ಹಾಲನ್ನು ಬೆಂಗಳೂರಿಗೆ ಕಳುಹಿಸುತ್ತಾರೆ.

‘ಮಕ್ಕಳು ಹಾಗೂ ಜನರ ಆರೋಗ್ಯ ದೃಷ್ಟಿಯಿಂದ ದೇಸಿ ಹಸುಗಳ ಹಾಲು ಉತ್ತಮ.ಈ ಹಾಲನ್ನು ಚಿಕ್ಕ ಸತತ 6 ತಿಂಗಳು ನೀಡಿದರೆ ಮಕ್ಕಳು ಬೌದ್ಧಿಕವಾಗಿಯೂ ದೈಹಿಕವಾಗಿಯೂ ಸದೃಢರಾಗುತ್ತಾರೆ’ ಎಂದು ಹೇಳುತ್ತಾರೆ ಜಮೀಲ್‌ಪಾಷ.

ಸುಸಜ್ಜಿತ ವ್ಯವಸ್ಥೆ: ಹಸುಗಳ ಸುರಕ್ಷೆ ನಿಟ್ಟಿನಲ್ಲಿ ಸ್ವಚ್ಚತೆಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಹಟ್ಟಿಯ ಕಲ್ಲು ಹಾಸಿಗೆ ಮ್ಯಾಟ್ ಆಳವಡಿಸಲಾಗಿದೆ. ಸೆಗಣಿ ಮತ್ತು ಮೂತ್ರ ಶೇಖರಣೆಗೆ ವ್ಯವಸ್ಥೆ, ಕುಡಿಯುವ ನೀರು, ಆಹಾರ ವ್ಯವಸ್ಥೆ, ಹಸುಗಳಿಗೆ ಸ್ನಾನ ಮಾಡಿಸಲು ವ್ಯವಸ್ಥೆ.. ಹೀಗೆ ಎಲ್ಲವೂ ಇದೆ.ಕೊಟ್ಟಿಗೆಗೆ ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಿದ್ದಾರೆ, ಮೇವನ್ನು ತುಂಡರಿಸಲು ಯಂತ್ರ ಬಳಕೆ, ಕೊಟ್ಟಿಗೆಗೆ ನಿರಂತರ ಬೆಳಕು ಮತ್ತು ಫ್ಯಾನ್‌ ಸೌಲಭ್ಯಕ್ಕಾಗಿ ಯುಪಿಎಸ್‌ ಅಳವಡಿಸಿದ್ದಾರೆ.

ಹಸುಗಳಿಗೆ ಗುಣಮಟ್ಟದ ಆಹಾರವನ್ನೇ ಜಮೀಲ್‌ ನೀಡುತ್ತಾರೆ. ಎರಡು ಹೊತ್ತು ಹಸಿ ಮೇವು, ಹುರುಳಿ ಪುಡಿ, ಜೋಳದ ಪುಡಿ, ಕಡಲೆ ಕಾಳು, ಫೀಡ್, ಹಿಂಡಿ, ಭತ್ತದ ಹೊಟ್ಟು, ಹಸಿ ತರಕಾರಿ, ಸೊಪ್ಪುಗಳು ಹಸುಗಳ ಮೆನುವಿನಲ್ಲಿ ಸ್ಥಾನ ಪಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT