ಶನಿವಾರ, ಆಗಸ್ಟ್ 20, 2022
21 °C
35 ಬಸ್‌ಗಳ ಸಂಚಾರ, ಶೇ 14ರಷ್ಟು ನೌಕರರಿಂದ ಕೆಲಸ, ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಸಂಚಾರ

ಚಾಮರಾಜನಗರ: ಒಲ್ಲದ ಮನಸ್ಸಿನಿಂದ ಕೆಲಸಕ್ಕೆ ಹಾಜರು, ಬೆರಳೆಣಿಕೆ ಬಸ್‌ಗಳ ಓಡಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರದಿಂದಾಗಿ ಎರಡೂವರೆ ದಿನಗಳಿಂದ ಸ್ಥಗಿತಗೊಂಡಿದ್ದ ಬಸ್‌ಗಳ ಸಂಚಾರ ಸೋಮವಾರ ಪೊಲೀಸರ ಭದ್ರತೆಯಲ್ಲಿ ಜಿಲ್ಲೆಯಾದ್ಯಂತ ಆರಂಭಗೊಂಡಿತು. ಮೊದಲ ದಿನ ಸಂಜೆಯವರೆಗೆ ಬೆರಳೆಣಿಕೆಯ ಬಸ್‌ಗಳಷ್ಟೇ ಸಂಚರಿಸಿದವು. 

ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಪಟ್ಟು ಹಿಡಿದಿರುವ ಚಾಲಕರು ಹಾಗೂ ನಿರ್ವಾಹಕರಲ್ಲಿ ಕೆಲವರು ಸೋಮವಾರ ಬೆಳಿಗ್ಗೆ ಒಲ್ಲದ ಮನಸ್ಸಿನಿಂದಲೇ ಕರ್ತವ್ಯಕ್ಕೆ ಹಾಜರಾದರು. 

ಕೆಎಸ್‌ಆರ್‌ಟಿಸಿ ವಿಭಾಗೀಯ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಶೇ 13ರಿಂದ ಶೇ 14ರಷ್ಟು ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸೋಮವಾರ ಸಂಜೆಯವರೆಗೆ ಜಿಲ್ಲೆಯ ಎಲ್ಲ ಕಡೆಗಳಿಗೆ 35 ಬಸ್‌ಗಳು ಸಂಚರಿಸಿವೆ. 420 ರೂಟ್‌ಗಳು ಇದ್ದು 40 ರೂಟ್‌ಗಳಲ್ಲಿ ಸಂಚರಿಸಿವೆ. 

ಬಸ್‌ಗಳು ಪುನರಾರಂಭ ವಿಚಾರವಾಗಿ ಹೆಚ್ಚು ಸ್ಪಷ್ಟತೆ ಇಲ್ಲದೇ ಇದ್ದುದರಿಂದ ಪ್ರಯಾಣಿಕರು ಕೂಡ ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ. ಹಾಗಾಗಿ, ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್‌ಗಳನ್ನು ಬಿಡಲಾಯಿತು. 

‘ಬೆಂಗಳೂರು ಬಿಟ್ಟು, ಜಿಲ್ಲೆಯ ಎಲ್ಲ ಕಡೆಗಳಿಗೂ ಬಸ್‌ಗಳು ಸಂಚರಿಸಿವೆ. 35 ಬಸ್‌ಗಳನ್ನು ಹಾಕಿದ್ದೇವೆ. ಪ್ರಯಾಣಿಕರು ಬಂದಂತೆ ಬಸ್‌ಗಳನ್ನು ಬಿಡಲಾಗಿದೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್‌ ಬಿ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ವಿಭಾಗದಲ್ಲಿ 1,600ರಷ್ಟು ಚಾಲಕರು, ನಿರ್ವಾಹಕರು ಇದ್ದಾರೆ. ತಾಂತ್ರಿಕ ಹಾಗೂ ಆಡಳಿತಾತ್ಮಕ ವಿಭಾಗ ಸೇರಿ 2100ದಷ್ಟು ಸಿಬ್ಬಂದಿ ಇದ್ದಾರೆ. ಈ ಪೈಕಿ ಶೇ 14ರಷ್ಟು ಮಂದಿ ಸೋಮವಾರ ಕೆಲಸಕ್ಕೆ ಹಾಜರಾಗಿದ್ದಾರೆ. ಪ್ರಯಾಣಿಕರಿಗೆ ಅನನುಕೂಲವಾದಂತೆ ಸೇವೆ ಒದಗಿಸಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು. 

ವಿಳಂಬವಾಗಿ ಸಂಚಾರ: ಸೋಮವಾರ ಬೆಳಿಗ್ಗೆ 10.30ರವರೆಗೂ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ನೌಕರರು ಕರ್ತವ್ಯಕ್ಕೆ ಹಾಜರಾಗಲು ಒಲವು ತೋರಲಿಲ್ಲ. ಮೇಲಾಧಿಕಾರಿಗಳ ಬಲವಂತ‌ಕ್ಕೆ ಕೆಲವರು ಹಾಜರಾದರು. ನಂತರ ಒಬ್ಬೊಬ್ಬರಾಗಿ ಕರ್ತವ್ಯಕ್ಕೆ ಮರಳಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಆರಂಭದ ಕೆಲವು ಬಸ್‌ಗಳಿಗೆ ಪೊಲೀಸರು ಬೆಂಗಾವಲು ಒದಗಿಸಿದರು. ‘ಬೆಂಗಾವಲಿನಲ್ಲಿ ಬಸ್‌ಗಳನ್ನು ಓಡಿಸಬೇಕು ಎಂದು ಸರ್ಕಾರದ ಸೂಚನೆ ಇದೆ. ಅದರಂತೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಮ್ಮ ಠಾಣೆ ಮಿತಿಯವರೆಗೆ ಕರೆದೊಯ್ಯುತ್ತೇವೆ. ಅಲ್ಲಿಂದ ಮುಂದಿನ ಠಾಣೆಯವರು ಭದ್ರತೆ ಒದಗಿಸುತ್ತಾರೆ‌’ ಎಂದು ಪಟ್ಟಣ ಠಾಣೆ ಇನ್‌ಸ್ಪೆಕ್ಟರ್‌ ಮಹೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಬಂಧನ: ಭಾನುವಾರ ರಾತ್ರಿ ನೌಕರರು ಹಾಗೂ ಸರ್ಕಾರದ ನಡುವೆ ಮಾತುಕತೆ ಯಶಸ್ವಿಯಾಯಿತು ಎಂದು ಸುದ್ದಿ ಪ್ರಕಟವಾದ ನಂತರ ಕೊಳ್ಳೇಗಾಲಕ್ಕೆ ಬಸ್‌ ಹಾಕಲಾಗಿತ್ತು. ಈ ಸಂದರ್ಭದಲ್ಲಿ ಚಾಲಕ ಪೀಟರ್‌ ಎಂಬುವವರು ಬಸ್‌ ತಡೆದು ಕಲ್ಲೆಸೆಯಲು ಯತ್ನಿಸಿದರು. ಅವರನ್ನು ಪೊಲೀಸರು ಬಂಧಿಸಿದರು.

‘ಚಾಲಕನ ವಿರುದ್ಧ ಸಾರ್ವಜನಿಕ ಆಸ್ತಿಗೆ ಹಾನಿ ಹಾಗೂ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಿಸಲಾಗಿದೆ’ ಎಂದು ಇನ್‌ಸ್ಪೆಕ್ಟರ್‌ ಮಹೇಶ್‌ ಅವರು ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು