ಗುರುವಾರ , ಅಕ್ಟೋಬರ್ 22, 2020
24 °C
ದಿನಕ್ಕೆ 55 ಸಾವಿರ ಪ್ರಯಾಣಿಕರ ಸಂಚಾರ

ಹಬ್ಬದ ಬಳಿಕ ಪ್ರತಿ ದಿನ ₹26 ಲಕ್ಷ ಸಂಗ್ರಹ, ಕೆಎಸ್‌ಆರ್‌ಟಿಸಿ ಆದಾಯದಲ್ಲಿ ಚೇತರಿಕೆ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಅನ್‌ಲಾಕ್‌ ಆರಂಭಗೊಂಡ ನಂತರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಚಾಮರಾಜನಗರ ವಿಭಾಗದ ದಿನದ ಆದಾಯದಲ್ಲಿ ಹೆಚ್ಚಳ ಕಂಡು ಬಂದಿದೆ. 

ಗಣೇಶ ಹಬ್ಬದ ನಂತರ ಪ್ರಯಾಣಿಕರ ಓಡಾಟ ಇನ್ನಷ್ಟು ಹೆಚ್ಚಾಗಿದೆ. ಕೆಲವು ದಿನಗಳಿಂದೀಚೆಗೆ ಪ್ರತಿ ದಿನ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ 55 ಸಾವಿರದಷ್ಟು ಮಂದಿ ಪ್ರಯಾಣಿಸುತ್ತಿದ್ದಾರೆ. ಪ್ರತಿ ದಿನ ₹25 ಲಕ್ಷದಿಂದ ₹26 ಲಕ್ಷ ಆದಾಯ ಸಂಗ್ರಹವಾಗುತ್ತಿದೆ. ಬಸ್‌ಗಳು ಈಗ ಪ್ರತಿ ದಿನ 1,200–1,400 ಟ್ರಿಪ್‌ ಸಂಚರಿಸುತ್ತಿವೆ.  

‘ಗಣೇಶನ ಹಬ್ಬಕ್ಕೂ ಮೊದಲು ದಿನಕ್ಕೆ ₹17ರಿಂದ 18 ಲಕ್ಷ ಆದಾಯ ಬರುತ್ತಿತ್ತು. 40 ಸಾವಿರದಿಂದ 42 ಸಾವಿರ ಜನರು ಪ್ರಯಾಣಿಸುತ್ತಿದ್ದರು. ಈಗ ಈ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ, ಆದಾಯದಲ್ಲಿ ಹೆಚ್ಚಳವಾಗಿದೆ. ಈ ಹಿಂದೆ ದಿನಕ್ಕೆ ಗರಿಷ್ಠ 950 ಟ್ರಿಪ್‌ಗಳನ್ನು ಮಾಡಲಾಗುತ್ತಿತ್ತು. ಈಗ ಟ್ರಿಪ್‌ಗಳ ಸಂಖ್ಯೆಯನ್ನೂ ಹೆಚ್ಚಿಸಿದ್ದೇವೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಶ್ರೀನಿವಾಸ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪೂರ್ಣ ಪ್ರಮಾಣದ ಅನ್‌ಲಾಕ್‌ ಜಾರಿಯಾಗುವುದಕ್ಕೂ ಮೊದಲು ಜನರ ಬೇಡಿಕೆಗೆ ಅನುಗುಣವಾಗಿ ಬಸ್‌ಗಳನ್ನು ಬಿಡಲಾಗುತ್ತಿತ್ತು. ಈಗ ಮೈಸೂರು, ಕೊಳ್ಳೇಗಾಲ, ಗುಂಡ್ಲುಪೇಟೆ ಸೇರಿದಂತೆ ಪ್ರಮುಖ ಸ್ಥಳಗಳಿಗೆ ನಿಗದಿತ ಸಮಯಕ್ಕೆ (ಉದಾ: ಕಾಲು ಗಂಟೆ, ಅರ್ಧಗಂಟೆ) ಬಸ್‌ಗಳನ್ನು ಬಿಡಲಾಗುತ್ತಿದೆ. ಇದರ ಜೊತೆಗೆ ರಾಜ್ಯದಲ್ಲಿ ಸಂಪೂರ್ಣವಾಗಿ ಅನ್‌ಲಾಕ್‌ ಜಾರಿಯಾಗಿರುವುದರಿಂದ ಜನರ ಓಡಾಟ ಹೆಚ್ಚಾಗಿದೆ ಎಂದು ಅವರು ಮಾಹಿತಿ ನೀಡಿದರು. 

ಇನ್ನೂ ಸಮಯ ಬೇಕು: ಕೋವಿಡ್‌ ಹಾವಳಿ ಆರಂಭವಾಗುವುದಕ್ಕೂ ಮುನ್ನ ನಮ್ಮ ವಿಭಾಗದ ಪ್ರತಿದಿನದ ಆದಾಯ ₹56 ಲಕ್ಷದಿಂದ ₹58 ಲಕ್ಷದವರೆಗೆ ಇತ್ತು. ಈ ಮಟ್ಟಕ್ಕೆ ತಲುಪಲು ಇನ್ನೂ ಸಮಯ ಬೇಕು ಎಂದು ಶ್ರೀನಿವಾಸ್‌ ಅವರು ಹೇಳಿದರು. 

ಬೆಟ್ಟಕ್ಕೆ ಹೋಗುವವರ ಸಂಖ್ಯೆ ಕಡಿಮೆ: ಕೆಎಸ್‌ಆರ್‌ಟಿಸಿಗೆ ಬರುವ ಆದಾಯದಲ್ಲಿ ಹೆಚ್ಚಿನ ಪಾಲು ಮಹದೇಶ್ವರ ಬೆಟ್ಟಕ್ಕೆ ಹೋಗುವ ಪ್ರಯಾಣಿಕರದ್ದು. ಈಗ ಬೆಟ್ಟಕ್ಕೆ ಹೋಗುವ ಭಕ್ತರ ಸಂಖ್ಯೆ ಕಡಿಮೆ ಆಗಿರುವುದರಿಂದ ಆದಾಯಕ್ಕೆ ಹೊಡೆತ ಬಿದ್ದಿದೆ.  

ಲಾಕ್‌ಡೌನ್‌ ತೆರವು ಆದ ನಂತರವೂ ಭಕ್ತರ ಭೇಟಿಗೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಬೆಟ್ಟದಲ್ಲಿ ರಾತ್ರಿ ತಂಗುವುದಕ್ಕೂ ಅವಕಾಶ ಇಲ್ಲ. ಹೀಗಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಚರಿಸುವವರು ಕಡಿಮೆ. ಕ್ಷೇತ್ರಕ್ಕೆ ಬರುವವರಲ್ಲಿ ಹೆಚ್ಚಿನವರು ಸ್ವಂತ ವಾಹನಗಳಲ್ಲೇ ಬರುತ್ತಿದ್ದಾರೆ. ಪ್ರಯಾಣಿಕರ ಬೇಡಿಕೆಗೆ ಅನುಸಾರವಾಗಿ ಕೆಎಸ್‌ಆರ್‌ಟಿಸಿ ಬಸ್‌ ಸೌಲಭ್ಯ ಕಲ್ಪಿಸುತ್ತದೆ. ಬೆಟ್ಟಕ್ಕೆ ಹೆಚ್ಚು ಹೆಚ್ಚು ಭಕ್ತರು ಬಂದರೆ, ರಾತ್ರಿ ಉಳಿದುಕೊಳ್ಳಲು ಅವಕಾಶ ನೀಡಿದರೆ, ಸಂಸ್ಥೆಯ ಆದಾಯ ಇನ್ನಷ್ಟು ಹೆಚ್ಚಲಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಶೇ 53 ಸಿಬ್ಬಂದಿ ಲಭ್ಯ: ಸದ್ಯ ಚಾಮರಾಜನಗರ ವಿಭಾಗದಲ್ಲಿ ಶೇ 53ರಷ್ಟು ಸಿಬ್ಬಂದಿ ಮಾತ್ರ ಲಭ್ಯ ಇದ್ದಾರೆ. ಉತ್ತರ ಕರ್ನಾಟಕ ಭಾಗದ ಸಿಬ್ಬಂದಿ ಇನ್ನೂ ಬಂದಿಲ್ಲ. ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಗಿ, ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭವಾದರೆ, ಸಿಬ್ಬಂದಿ ಕೊರತೆ ಉಂಟಾಗುವ ಸಾಧ್ಯತೆ ಇದೆ. 

‘ನಮ್ಮ ಸಿಬ್ಬಂದಿಯಲ್ಲಿ ಶೇ 30ರಷ್ಟು ಮಂದಿ ಉತ್ತರ ಕರ್ನಾಟಕದವರು. ಕೋವಿಡ್‌ ಕಾರಣದಿಂದ ಇನ್ನೂ ಎಲ್ಲರೂ ಹಾಜರಾಗಿಲ್ಲ. ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದ್ದೇವೆ. ಊರಿಂದ ವಾಪಸ್‌ ಆಗುತ್ತಿದ್ದಾರೆ’ ಎಂದು ಬಿ.ಶ್ರೀನಿವಾಸ್‌ ಅವರು ಹೇಳಿದರು. 

ಥರ್ಮಲ್‌ ಸ್ಕ್ರೀನಿಂಗ್‌ ಇಲ್ಲ: ಕೇಂದ್ರ ಸರ್ಕಾರದ ಮಾರ್ಗಸೂಚನೆಗಳ ಅನ್ವಯ, ನಿಲ್ದಾಣಗಳಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ ಸ್ಥಗಿತಗೊಳಿಸಲಾಗಿದೆ. ಸ್ಯಾನಿಟೈಸರ್‌ ನೀಡಲಾಗುತ್ತಿದೆ. ಕನಿಷ್ಠ ಅಂತರ ನಿಯಮವನ್ನು ಪಾಲಿಸಲಾಗುತ್ತಿದೆ. ಒಂದು ಬಸ್‌ನಲ್ಲಿ ಗರಿಷ್ಠ 35 ಪ್ರಯಾಣಿಕರಿಗಷ್ಟೇ ಅವಕಾಶ ನೀಡಲಾಗುತ್ತಿದೆ. 

‌ಆರಂಭವಾಗದ ಅಂತರರಾಜ್ಯ ಬಸ್‌ ಸಂಚಾರ

ಅಂತರರಾಜ್ಯಗಳ ನಡುವೆ ಮುಕ್ತ ಸಂಚಾರಕ್ಕೆ ಸರ್ಕಾರ ಅವಕಾಶ ನೀಡಿದರು. ಬಸ್‌ ಸಂಚಾರ ಆರಂಭವಾಗಿಲ್ಲ. 

‘ನಾವು ಕೇರಳ ಹಾಗೂ ತಮಿಳುನಾಡಿಗೆ ಬಸ್‌ ಓಡಿಸಲು ಸಿದ್ಧರಿದ್ದೇವೆ. ಆದರೆ, ತಮಿಳುನಾಡು ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ಕೇರಳಕ್ಕೆ ಓಣಂ ಹಬ್ಬದ ಅಂಗವಾಗಿ ಸಂಚರಿಸಲು ಅಲ್ಲಿನ ಸರ್ಕಾರ ಅವಕಾಶ ನೀಡಿದೆ. ನಮ್ಮಲ್ಲಿಂದ ಕೇರಳಕ್ಕೆ ಹೋಗುವವರ ಸಂಖ್ಯೆ ಕಡಿಮೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಶ್ರೀನಿವಾಸ್‌ ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು