ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಸ್ಥರು - ಯಳಂದೂರು ಪಟ್ಟಣ ಪಂಚಾಯಿತಿ ಜಟಾಪಟಿ

ಕುದೇರು ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ವಿರೋಧ
Last Updated 7 ಸೆಪ್ಟೆಂಬರ್ 2021, 3:22 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಹೋಬಳಿಯ ಕುದೇರು ಬಳಿ ಜಮೀನೊಂದರಲ್ಲಿ ಯಳಂದೂರು ಪಟ್ಟಣ ಪಂಚಾಯಿತಿ ವತಿಯಿಂದ ನಿರ್ಮಿಸಲು ಉದ್ದೇಶಿಸಲಾಗಿರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕುದೇರು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದು, ಈ ವಿಚಾರವಾಗಿ ಎರಡು ವರ್ಷಗಳಿಂದ ಯಳಂದೂರು ಪಟ್ಟಣ ಪಂಚಾಯಿತಿ ಹಾಗೂ ಕುದೇರು ಗ್ರಾಮಸ್ಥರ ನಡುವೆ ಜಟಾಪಟಿ ನಡೆಯುತ್ತಿದೆ.

ಕುದೇರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಬಡಗಲ ಮೋಳೆ ಹಾಗೂ ತೆಂಕಲಮೋಳೆ ಗ್ರಾಮಗಳ ಸಮೀಪ ಮೂಡಲ ಅಗ್ರಹಾರಕ್ಕೆ ಸೇರಿದ ಸರ್ವೆ ನಂ 89ರಲ್ಲಿ 7.20 ಎಕರೆ ಜಮೀನನ್ನು ಜಿಲ್ಲಾಡಳಿತವು ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕಾಗಿ ಯಳಂದೂರು ಪಟ್ಟಣ ಪಂಚಾಯಿತಿಗೆ ಎರಡು ವರ್ಷಗಳ ಹಿಂದೆ ಮಂಜೂರು ಮಾಡಿದೆ.

ಈ ಸ್ಥಳದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಿದರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನೈರ್ಮಲ್ಯ ಉಂಟಾಗುತ್ತದೆ ಎಂಬ ಕಾರಣ ನೀಡಿ ಕುದೇರು ಗ್ರಾಮಸ್ಥರು ಘಟಕ ನಿರ್ಮಿಸಲು ವಿರೋಧಿಸುತ್ತಿದ್ದಾರೆ.

ಘಟಕಕ್ಕೆ ಗುರುತು ಮಾಡಿರುವ ಸ್ಥಳವು ಬಡಗಲಮೋಳೆ, ತೆಂಕಲಮೋಳೆ ಸೇರಿದಂತೆ ಕುದೇರು ಮೂಡಲ ಅಗ್ರಹಾರ ಗ್ರಾಮಗಳಿಗೆ ಮಧ್ಯ ಭಾಗದಲ್ಲಿದೆ. ಘಟಕ ನಿರ್ಮಿಸಲು ಉದ್ದೇಶಿಸಿರುವ ಸ್ಥಳದಿಂದ 100 ಮೀಟರ್‌ ದೂರದಲ್ಲಿ ಮೂಡಲ ಅಗ್ರಹಾರ ಗ್ರಾಮದ ನಿವಾಸಿಗಳು ವ್ಯವಸಾಯ ಮಾಡುತ್ತಿದ್ದಾರೆ. 200 ಮೀಟರ್ ದೂರದಲ್ಲಿ ಕವಲಂದೆ–ನಂಜನಗೂಡು ಮುಖ್ಯ ರಸ್ತೆ ಇದೆ.ಒಂದು ಕಿಮೀ ದೂರದಲ್ಲಿ ಕುದೇರು ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ಇದೆ. ಕೂಗಳತೆಯ ದೂರದಲ್ಲಿ ಹಂದಿ ಜೋಗಿ ನಿವಾಸಿಗಳ ಕಾಲೋನಿಯೂ ಇದೆ.

ನೀರಿನ ಮೂಲ ಮುಚ್ಚುವ ಆತಂಕ: ಇಲ್ಲಿರುವ ಕೆಲವು ಜಮೀನಿನಲ್ಲಿ ರೈತರು ಜಾನುವಾರುಗಳೊಂದಿಗೆ ವಾಸವಿದ್ದಾರೆ. ಈ ಭಾಗದಲ್ಲಿ ಅಡ್ಡಹಳ್ಳವೂ ಹರಿಯುತ್ತಿದೆ.

ಬಡಗಲ ಮೋಳೆ ಹಾಗೂ ತೆಂಕಲಮೋಳೆ ಗ್ರಾಮಸ್ಥರು ಪ್ಲಾಸ್ಟಿಕ್‌ ಚೀಲದಿಂದ ಹಗ್ಗ ತಯಾರಿಸಿ ಅವುಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಹೆಚ್ಚಾಗಿ ಅವರು ಸಿಮೆಂಟ್‌ ಚೀಲಗಳನ್ನು ಬಳಸುತ್ತಾರೆ. ಈ ಗ್ರಾಮಗಳ ನಿವಾಸಿಗಳು ಅಡ್ಡಹಳ್ಳಕ್ಕೆ ಕಿಂಡಿ ಅಣೆಕಟ್ಟನ್ನು ನಿರ್ಮಿಸಿ ಅದರಲ್ಲಿ ಚೀಲಗಳನ್ನು ತೊಳೆಯುತ್ತಾರೆ.

‘ತ್ಯಾಜ್ಯ ಘಟಕ ನಿರ್ಮಾಣ ಆಗಿ ನೀರಿನ ಮೂಲ ಕಲುಷಿತಗೊಂಡರೆ ಅಥವಾ ಮುಚ್ಚಿ ಹೋದರೆ ನಮ್ಮ ಜೀವನಕ್ಕೆ ಕಷ್ಟವಾಗುತ್ತದೆ’ ಎಂಬ ಆತಂಕವನ್ನು ಗ್ರಾಮಸ್ಥರು ವ್ಯಕ್ತಪಡಿಸುತ್ತಾರೆ.

‘ಘಟಕ ನಿರ್ಮಿಸಿದರೆ ಸುತ್ತಮುತ್ತಲಿನ ಜನವಸತಿ ಪ್ರದೇಶಗಳಿಗೆ ದುರ್ವಾಸನೆ ಹರಡುತ್ತದೆ. ಗಾಳಿಯ ವೇಗಕ್ಕೆ ಶಾಲಾ ಕಾಲೇಜುಗಳಿಗೂ ದುರ್ವಾಸನೆ ತಟ್ಟುತ್ತದೆ. ಜತೆಗೆ ಉಮ್ಮತ್ತೂರು ಕೆರೆಗೆ ನೀರು ತುಂಬುತ್ತಿರುವುದರಿಂದ ಅಂತರ್ಜಲ ಹೆಚ್ಚಾಗಿ ಜನರು ವ್ಯವಸಾಯ ಆರಂಭಿಸುತ್ತಾರೆ. ಜಾನುವಾರುಗಳಿಗೆ ದುರ್ವಾಸನೆ ತಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು’ ಎಂದು ಅಕ್ಕಪಕ್ಕದ ರೈತರು ದೂರುತ್ತಾರೆ.

ಉಗ್ರ ಪ್ರತಿಭಟನೆಯ ಎಚ್ಚರಿಕೆ

‘ಘಟಕ ನಿರ್ಮಿಸಲು ಉದ್ದೇಶಿಸಿರುವ ಪ್ರದೇಶದ ಪರಿಸರ ಚೆನ್ನಾಗಿದೆ. ಮುಂದೆ ವ್ಯವಸಾಯ ಮತ್ತು ಜನ ವಸತಿ ಪ್ರದೇಶ ಅಭಿವೃದ್ಧಿ ಹೊಂದಲು ಉತ್ತಮ ವಾತಾವರಣವಿದೆ. ಹೀಗಾಗಿ ಇಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುವುದು ಬೇಡ. ಬೇರೆ ತಾಲ್ಲೂಕಿನಿಂದ ಬಂದು ಇಲ್ಲಿ ಘಟಕ ನಿರ್ಮಿಸುವುದು ಎಷ್ಟರ ಮಟ್ಟಿಗೆ ಸರಿ? ಒಂದು ವೇಳೆ ಘಟಕ ನಿರ್ಮಿಸಲು ಮುಂದಾದರೆ ಗ್ರಾಮಸ್ಥರೊಂದಿಗೆ ಉಗ್ರ ಹೋರಾಟ ಮಾಡಲಾಗುವುದು’ ಎಂದು ಕುದೇರು ಗ್ರಾಮದ ಮುಖಂಡ ರಾಜೇಂದ್ರಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗಾಗಲೇ ಶಾಸಕರು ಸೇರಿದಂತೆ ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಅವರಿಗೆ ಘಟಕ ನಿರ್ಮಿಸದಂತೆ ಮನವಿ ಮಾಡಲಾಗಿದೆ. ಒಂದು ವೇಳೆ ಘಟಕ ನಿರ್ಮಿಸಲು ಮುಂದಾದರೆ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಪ್ರತಿಭಟನೆ ನಡೆಸಲು ಮುಂದಾಗಿದ್ದೇವೆ’ ಎಂದು ಮುಖಂಡ ಕೆ.ಸಿ.ರೇವಣ್ಣ ಅವರು ಹೇಳಿದರು.

--

ಕಾನೂನು ಪ್ರಕಾರ ಘಟಕ ನಿರ್ಮಾಣಕ್ಕೆ ಜಾಗ ಮಂಜೂರು ಆಗಿದೆ. ಗ್ರಾಮಸ್ಥರು ವಿರೋಧಿಸಿದರೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು

- ನಾಗರತ್ನ, ಪಟ್ಟಣ ಪಂಚಾಯಿತಿ ಯಳಂದೂರು, ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT