ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಳ್ಳೇಗಾಲ: ಶ್ರೀಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅವ್ಯವಸ್ಥೆಯ ಆಗರ

ಕಾಲೇಜಿನಲ್ಲಿ ಅಶುಚಿತ್ವ; ಕಟ್ಟಡ ಶಿಥಿಲ
Published : 20 ಸೆಪ್ಟೆಂಬರ್ 2024, 4:50 IST
Last Updated : 20 ಸೆಪ್ಟೆಂಬರ್ 2024, 4:50 IST
ಫಾಲೋ ಮಾಡಿ
Comments

ಕೊಳ್ಳೇಗಾಲ: ಇಲ್ಲಿನ ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೂಲಸೌಕರ್ಯಗಳ ಕೊರತೆ ಎದುರಾಗಿದ್ದು, ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ.

ಕಾಲೇಜಿನಲ್ಲಿ ಬಿ.ಎ, ಬಿಕಾಂ, ಬಿ.ಎಸ್ಸಿ ವಿಭಾಗಗಳಿದ್ದು 750ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಕಾಲೇಜಿನಲ್ಲಿ ಬೋಧನೆಗೆ ಕೊಠಡಿಗಳ ಸಮಸ್ಯೆ ಇಲ್ಲ. ಬದಲಾಗಿ ಕಾಲೇಜಿನಲ್ಲಿ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ. ಕಾಲೇಜಿನ ಒಳಾಂಗಣದಲ್ಲಿ ಆಳೆತ್ತರದ ಗಿಡಗಂಟಿಗಳು ಬೆಳೆದಿದ್ದು ಮೈದಾನ ಅಶುಚಿತ್ವದಿಂದ ಕೂಡಿದೆ.

ವಿದ್ಯಾಭ್ಯಾಸಕ್ಕೆ ಪೂರಕವಾಗಿ ಕಾಲೇಜಿನ ಸುತ್ತಮುತ್ತಲಿನ ವಾತಾವರಣ ಸುಂದರವಾಗಿರಬೇಕು, ಸ್ವಚ್ಛತೆಗೆ ಒತ್ತು ನೀಡಬೇಕು. ಆದರೆ, ಕಾಲೇಜು ಪರಿಸರ ಹಾಳುಕೊಂಪೆಯಂತಾಗಿದೆ. ವಿದ್ಯಾರ್ಥಿಗಳು ತರಗತಿಯಲ್ಲಿ ಕುಳಿತು ಪಾಠಕೇಳಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಎಲ್ಲೆಂದರಲ್ಲಿ ಗಿಡಗಂಟಿಗಳು ಬೆಳೆದಿದ್ದು ಕಾಲೇಜಿನ ಕಿಟಕಿ, ಕಟ್ಟಡಗಳನ್ನು ಸುತ್ತುವರಿದಿವೆ. ಕಾಲೇಜಿನ ಕೆಲವು ಕೊಠಡಿಗಳು ಬಿರುಕು ಬಿಟ್ಟಿರುವುದು ವಿದ್ಯಾರ್ಥಿಗಳ ಆಂತಕಕ್ಕೆ ಕಾರಣವಾಗಿದೆ. ಕೊಠಡಿಯ ಕಿಟಿಕಿಗಳಿಗೆ ಗಿಡಗಳು ಸುತ್ತುವರಿದುಕೊಂಡಿರುವುದರಿಂದ ಹಾವು, ಚೇಳು ಸೇರಿದಂತೆ ವಿಷಜಂತುಗಳು ಕೊಠಡಿಯ ಒಳಗೆ ಬರುವ ಭೀತಿ ಇದೆ. 

ವಿದ್ಯಾರ್ಥಿಗಳು ನಿತ್ಯವೂ ಭಯದಲ್ಲೇ ತರಗತಿಗಳಲ್ಲಿ ಕುಳಿತು ಪಾಠ ಪ್ರವಚನ ಕೇಳಬೇಕಾಗಿದೆ. ಇಷ್ಟಾದರೂ ಕಾಲೇಜು ನಿರ್ವಹಣೆಯ ಹೊಣೆ ಹೊತ್ತಿರುವವರು ಶುಚಿತ್ವಕ್ಕೆ ಒತ್ತು ನೀಡದಿರುವುದು ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಶಾಸಕರು ಭೇಟಿ ನೀಡಲಿ: ಕಾಲೇಜಿನಲ್ಲಿ ಮೂಲಸೌಕರ್ಯಗಳ ಕೊರತೆ ಹೆಚ್ಚಾಗಿದ್ದು ಕೊಳ್ಳೇಗಾಲ ಶಾಸಕರು ಖುದ್ದು ಕಾಲೇಜಿಗೆ ಭೇಟಿನೀಡಿ ಸಮಸ್ಯೆ ಆಲಿಸಬೇಕು. ಕಾಲೇಜಿಗೆ ಅಗತ್ಯವಾಗಿ ಬೇಕಿರುವ ಮೂಲಸೌಕರ್ಯಗಳನ್ನು ಒದಗಿಸಿಕೊಡಬೇಕು. ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ಹೆಚ್ಚಾಗಿದ್ದು, ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಉಪನ್ಯಾಸಕರ ನೇಮಕಕ್ಕೆ ಒತ್ತು ನೀಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಕಾಲೇಜಿನ ಆವರಣದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಆವರಣದೊಳಗೆ ಮದ್ಯದ ಬಾಟಲಿಗಳು ಅಲ್ಲಲ್ಲಿ ಬಿದ್ದಿವೆ. ರಾತ್ರಿಯ ಹೊತ್ತು ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆಯೂ ದೂರುಗಳಿದ್ದು, ಕಾಲೇಜಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ಅತಿಥಿ ಶಿಕ್ಷಕರ ಕೊರತೆ: ಕಾಲೇಜಿನಲ್ಲಿ 18 ಕಾಯಂ ಉಪನ್ಯಾಸಕರು ಇದ್ದಾರೆ. ಆದರೆ, 25ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಕೊರತೆ ಇರುವುದರಿಂದ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ. ಕಾಲೇಜು ಕೊಳ್ಳೇಗಾಲ ತಾಲ್ಲೂಕು ಕೇಂದ್ರದಲ್ಲಿದ್ದರೂ ಕಾಯಂ ಉಪನ್ಯಾಸಕರು ಸ್ವಸ್ಥಾನದಲ್ಲಿ ವಾಸ್ತವ್ಯ ಮಾಡಿಲ್ಲ. ಕೆಲವು ಉಪನ್ಯಾಸಕರು ಮೈಸೂರಿನಿಂದ ಬರುವುದರಿಂದ ತರಗತಿ ತೆಗೆದುಕೊಳ್ಳುವುದು ತಡವಾಗುತ್ತಿದೆ.

ಕಂಪ್ಯೂಟರ್ ಲ್ಯಾಬ್, ಸೈನ್ಸ್‌ ಲ್ಯಾಬ್, ಕ್ರೀಡಾ ತರಗತಿ ಸೇರಿದಂತೆ ಹಲವು ಪ್ರಯೋಗಾಲಯಗಳು ಇದ್ದರೂ ಪ್ರಯೋಜನಕ್ಕೆ ಬಾರದಂತಾಗಿದೆ. ಗ್ರಂಥಾಲಯ ಇದ್ದರೂ ಪುಸ್ತಕಗಳೆಲ್ಲವೂ ಹಳತಾಗಿವೆ. ವಿದ್ಯಾರ್ಥಿನಿಯರಿಗೆ ಶೌಚಾಲಯಗಳಿದ್ದರೂ ಸರಿಯಾಗಿ ನೀರು ಬರುವುದಿಲ್ಲ, ಸ್ವಚ್ಛತೆ ಇಲ್ಲ. ಯುವಕರಿಗೆ ಶೌಚಾಲಯಗಳ ಕೊರತೆ ಇದ್ದು ಮೈದಾನದಲ್ಲಿ ಮೂರ್ತ ವಿಸರ್ಜನೆ ಮಾಡಬೇಕಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ಕೊಳ್ಳೇಗಾಲ ಶ್ರೀಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಠಡಿ ಬಿರುಕು ಬಿಟ್ಟಿರುವುದು
ಕೊಳ್ಳೇಗಾಲ ಶ್ರೀಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಠಡಿ ಬಿರುಕು ಬಿಟ್ಟಿರುವುದು
ಕಾಲೇಜಿನಲ್ಲಿ ಮೂಲಸೌಕರ್ಯಗಳ ಕೊರತೆ ಹೆಚ್ಚಾಗಿದೆ. ಆವರಣದಲ್ಲಿ ಗಿಡಗಂಟಿಗಳು ಬೆಳೆದಿದೆ. ಹಾವು ಚೇಳುಗಳ ಕಾಟ ಮಿತಿಮೀರಿದೆ. ಉಪನ್ಯಾಸಕರ ಕೊರತೆ ಇದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು
ಸೌಮ್ಯ ವಿದ್ಯಾರ್ಥಿನಿ

‘ಸಮಸ್ಯೆ ಶೀಘ್ರ ಪರಿಹಾರ’

ಕಾಲೇಜಿನ ಆವರಣದಲ್ಲಿ ಗಿಡಗಂಟಿಗಳು ಬೆಳೆದಿದ್ದು ಎರಡು ಮೂರು ದಿನಗಳಲ್ಲಿ ತೆರವು ಮಾಡಲಾಗುವುದು. ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ಇದ್ದು ಮೇಲಧಿಕಾರಿಗಳಿಗೆ ಸಮಸ್ಯೆ ತಿಳಿಸಿ ಅಗತ್ಯ ನೇಮಕಾತಿಗೆ ಪತ್ರ ಬರೆಯಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸಮಸ್ಯೆಗಳನ್ನು ಸರಿಪಡಿಸಲಾಗುವುದು. -ಜಯಲಕ್ಷ್ಮಿ ಪ್ರಾಂಶುಪಾಲೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT