ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ಮಳೆ: ಕೆರೆ ಕಟ್ಟೆಗಳಿಗೆ ಕಳೆ

ತುಂಬಿ ಹರಿದ ಹಲವು ಕೆರೆಗಳು, ಬೆಳೆಗಳು ಜಲಾವೃತ, ರೈತರಲ್ಲಿ ಮಡುಗಟ್ಟಿದ ಆತಂಕ
Last Updated 18 ಮೇ 2022, 15:39 IST
ಅಕ್ಷರ ಗಾತ್ರ

ಚಾಮರಾಜನಗರ/ ಸಂತೇಮರಗಳ್ಳಿ: ಜಿಲ್ಲೆಯಲ್ಲಿ ಮಂಗಳವಾರ ರಾತ್ರಿಯಿಂದ ಮಳೆ ಕಡಿಮೆಯಾಗಿದೆ. ಆದರೆ, ವಾರದಿಂದೀಚೆಗೆ ಸುರಿದಿರುವ ಮಳೆಗೆ ಕೆರೆ ಕಟ್ಟೆಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಮಳೆಗಾಲ ಆರಂಭಕ್ಕೂ ಮೊದಲೇ ಜಲಮೂಲಗಳು ಭರ್ತಿಯಾಗುತ್ತಿವೆ.

ತಾಲ್ಲೂಕಿನ ಹಲವು ಕೆರೆಗಳು ಕೋಡಿ ಬೀಳಲು ಆರಂಭಿಸಿವೆ.ಹೊಂಗನೂರು– ಹಿರಿಕೆರೆ ಬುಧವಾರ ಬೆಳಿಗ್ಗೆ ಕೋಡಿ ಬಿದ್ದಿದೆ. ನಾಗವಳ್ಳಿ ಕೆರೆ, ಹೊಂಡರಬಾಳು ಕೆರೆ, ಇರಸವಾಡಿ ಕೆರೆ, ಪುಟ್ಟನಪುರ ಕೆರೆಗಳು ತುಂಬಿ ಹರಿಯುತ್ತಿವೆ. ಕೋಡಿ ಬಿದ್ದು ಹರಿಯುತ್ತಿರುವ ನೀರು ಇತರ ಕೆರೆಗಳನ್ನು ಸೇರುತ್ತಿದ್ದು, ಅವುಗಳಲ್ಲೂ ಭಾರಿ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿದೆ.

ನಾಗವಳ್ಳಿ ಕೆರೆ, ಹೊಂಡರವಾಳು ಕೆರೆಗಳಿಗೆ ಕಳೆದ ವರ್ಷ ಸುವರ್ಣಾವತಿ ಜಲಾಶಯದಿಂದ ನೀರು ಹರಿದಿತ್ತು. ನವೆಂಬರ್‌ವರೆಗೂ ಮಳೆಯಾಗಿದ್ದರಿಂದ ಬಹುತೇಕ ಎಲ್ಲ ಕೆರೆಗಳಲ್ಲಿ ಉತ್ತಮ ನೀರು ಸಂಗ್ರಹವಾಗಿತ್ತು. ಹಾಗಾಗಿ, ಬಿರು ಬೇಸಿಗೆಯಲ್ಲೂ ಕೆರೆಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ನೀರಿತ್ತು. ಮಾರ್ಚ್‌ 15ರ ನಂತರ ಜಿಲ್ಲೆಯಲ್ಲಿ ಮುಂಗಾರುಪೂರ್ವ ಮಳೆ ಆರಂಭವಾಗಿದ್ದು, ಏಪ್ರಿಲ್‌ ತಿಂಗಳಲ್ಲಿ ಉತ್ತಮ ವರ್ಷಧಾರೆಯಾಗಿದೆ. ಅಸನಿ ಚಂಡಮಾರುತದ ಕಾರಣದಿಂದ ವಾರದಿಂದೀಚೆಗೆ ಬಿಟ್ಟು ಬಿಟ್ಟು ಧಾರಾಕಾರ ಮಳೆ ಸುರಿಯುತ್ತಿದೆ.

ರೈತರಲ್ಲಿ ಆತಂಕ: ಮಳೆ ಬಂದು ಕೆರೆ ಕಟ್ಟೆಗಳು ಭರ್ತಿಯಾಗುತ್ತಿರುವುದರಿಂದ ಒಂದೆಡೆ ರೈತರು ಸಂತಸ ಪಟ್ಟರೆ, ಕೋಡಿ ಬಿದ್ದು ಬೆಳೆಗಳೆಲ್ಲ ಜಲಾವೃತವಾಗುತ್ತಿರುವ ಆತಂಕವೂ ಅವರನ್ನು ಕಾಡುತ್ತಿದೆ. ಕೆರೆಯಿಂದ ನೀರು ಹರಿದು ಹೋಗುವ ಕಾಲುವೆಗಳಲ್ಲಿ ಹೂಳು ತುಂಬಿ, ಗಿಡಗಂಟಿಗಳು ಬೆಳೆದಿರುವುದರಿಂದ ನೀರು ಸಮರ್ಪಕವಾಗಿ ಹರಿದು ಹೋಗುತ್ತಿಲ್ಲ. ಇದರಿಂದ ಕಾಲುವೆಗಳ ನೀರು ಕೃಷಿ ಜಮೀನುಗಳಿಗೆ ಉಕ್ಕುತ್ತಿವೆ.

ತಾಲ್ಲೂಕಿನ ಹೊಂಗನೂರು ಹಿರಿಕೆರೆ 800 ಎಕರೆಗಳಷ್ಟು ವಿಸ್ತಾರವಾಗಿದೆ. ಕಳೆದ ವರ್ಷದ ಮಳೆಗಾಲದಲ್ಲಿ ಕೆರೆ ಕೋಡಿ ಬಿದ್ದಿತ್ತು. ಇದರಿಂದಾಗಿಕೆರೆ ವ್ಯಾಪ್ತಿಗೆ ಒಳಪಟ್ಟಿದ್ದ ನೂರಾರು ಎಕರೆ ಫಸಲು ಬಂದಿರುವ ಜಮೀನುಗಳಲ್ಲಿ ಬೆಳೆಗಳು ಜಲಾವೃತ್ತವಾಗಿತ್ತು.

ಕೋಡಿ ಬಿದ್ದು ವರ್ಷವಾಗುವ ಮುನ್ನವೇ ಮತ್ತೆ ಕೆರೆ ತುಂಬಿ ಹರಿದಿದೆ. ಕೆರೆಯ ತಳಭಾಗದಲ್ಲಿರುವ ಜಮೀನುಗಳಿಗೆ ನೀರು ನುಗ್ಗಿದೆ. ಇದರಿಂದ ಕಟಾವು ಹಂತಕ್ಕೆ ಬಂದಿರುವ ಕಬ್ಬು ಬೆಳೆಗೆ ತೊಂದರೆಯಾಗಿದೆ. ಜತೆಗೆ ಅರಿಸಿನ ಹಾಗೂ ಬಾಳೆ ಫಸಲುಗಳಿಗೂ ನೀರು ತುಂಬಿಕೊಂಡಿದೆ. ಹೆಸರು, ಉದ್ದು, ಅಲಸಂದೆ ಬಿತ್ತನೆ ಮಾಡಿದ ಪ್ರದೇಶ ಜಲಾವೃತವಾಗಿದೆ. ಇದರಿಂದ ಫಸಲು ಜಮೀನಿನಲ್ಲಿಯೇ ಕೊಳೆಯುವ ಆತಂಕ ಎದುರಾಗಿದೆ.

‘ಕಳೆದ ವರ್ಷ ಹೊಂಗನೂರು ಹಿರಿಕೆರೆ ಕೋಡಿ ಬಿದ್ದಿದ್ದರಿಂದ ನೂರಾರು ಎಕರೆ ಫಸಲು ಜಲಾವೃತ್ತವಾಗಿತ್ತು. ಈ ವರ್ಷ ಮುಂಗಾರು ಪೂರ್ವ ಮಳೆಯ ಸಂದರ್ಭದಲ್ಲೇ ಕೆರೆಗಳು ಕೋಡಿ ಬಿದ್ದಿರುವುದರಿಂದ ಮುಂಗಾರು ಹಂಗಾಮಿನಲ್ಲಿ ರೈತರು ಫಸಲು ತೆಗೆಯುವ ಲಕ್ಷಣಗಳು ಕಾಣಿಸುತ್ತಿಲ್ಲ’ ಎಂದು ಈ ಭಾಗದ ರೈತರು ಕಳವಳ ವ್ಯಕ್ತಪಡಿಸಿದರು.

ಕೋಡಿ ಬೀಳುವ ಜಾಗದಲ್ಲಿ ಕಾಲುವೆಗಳನ್ನು ನಿರ್ಮಿಸಿ ಜಮೀನುಗಳಿಗೆ ನೀರು ನುಗ್ಗದಂತೆ ಮಾಡಬೇಕಿತ್ತು. ಆದರೆ, ಆ ಕೆಲಸ ಆಗಿಲ್ಲ ಎಂಬುದು ಗ್ರಾಮಸ್ಥರ ದೂರು.

‘ತಾಲ್ಲೂಕಿನ ಹೊಂಡರಬಾಳು ಹಾಗೂ ನಾಗವಳ್ಳಿ ಕೆರೆ ವ್ಯಾಪ್ತಿಯಲ್ಲೂ ರೈತರು ಇದೇ ಸಮಸ್ಯೆ ಎದುರಿಸುತ್ತಿದ್ದಾರೆ. ಹೊಂಡರಬಾಳು ಕೆರೆಯಿಂದ ನೀರು ಹೊರ ಹೋಗುವ ಕಾಲುವೆ ಸಮರ್ಪಕವಾಗಿಲ್ಲದೇ ಇರುವುದರಿಂದ ಭಾರಿ ಪ್ರಮಾಣದಲ್ಲಿ ನೀರು ಬಂದಾಗ ಕೃಷಿ ಜಮೀನುಗಳಿಗೆ ಚೆಲ್ಲುತ್ತಿವೆ. ಹೊಂಡರಬಾಳು ಕೆರೆಯ ಏರಿಯಲ್ಲಿ ನೀರು ಜಿನುಗುತ್ತಿದ್ದು, ಪಕ್ಕದ ರೈತರ ಕೃಷಿ ಭೂಮಿಗೆ ಹಾನಿಯಾಗುತ್ತಿದೆ’ ಎಂದು ಸ್ಥಳೀಯ ರೈತರು ಆರೋಪಿಸಿದ್ದಾರೆ.

ಮನೆ ಗೋಡೆ ಕುಸಿತ

ಸತತವಾಗಿ ಸುರಿದ ಮಳೆಯಿಂದಚಾಮರಾಜನಗರ ತಾಲ್ಲೂಕಿನ ಬಸಪ್ಪನ ಪಾಳ್ಯ ಗ್ರಾಮದಲ್ಲಿ ಬಸಮ್ಮ ಎಂಬುವವರ ಮನೆಯ ಗೋಡೆ ಕುಸಿದು ಹೋಗಿದೆ. ಅದೃಷ್ಟವಶಾತ್‌ ಜೀವ ಹಾನಿ ಸಂಭವಿಸಿಲ್ಲ.

ಮಣ್ಣಿನ ಗೋಡೆಯಾಗಿದ್ದು, ಮಳೆಯಿಂದಾಗಿ ತೇವಗೊಂಡು ಕುಸಿದಿದೆ. ಮನೆಯಲ್ಲಿದ್ದ ದವಸ ಧಾನ್ಯಗಳು ಹಾಳಾಗಿದೆ. ಗೋಡೆ ಕುಸಿದಿರುವುದರಿಂದ ಬಸಮ್ಮ ಅವರಿಗೆ ವಾಸ ಮಾಡಲು ಮನೆ ಇಲ್ಲದಂತಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ರೇವಣ್ಣ ಅವರು ಆರೋಪಿಸಿದ್ದಾರೆ.

ಗೋಪುರಕ್ಕೆ ಸಿಡಿಲು ಬಡಿದು ಕಳಶಕ್ಕೆ ಹಾನಿ

ಹನೂರು: ತಾಲ್ಲೂಕಿನ ಅಜ್ಜೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬಿಕಾಪುರದ ಅಗ್ನಿ ಮಾರಮ್ಮ ದೇವಾಲಯದ ರಾಜಗೋಪುರಕ್ಕೆ ಸಿಡಿಲು ಬಡಿದಿದ್ದು, ಕಳಶಕ್ಕೆ ಹಾನಿಯಾಗಿದೆ.

ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಸಿಡಿಲು ಬಡಿದಿರುವ ಕಳಶಕ್ಕೆ ಕಾಳಸಂತೆಯಲ್ಲಿ ಭಾರಿ ಬೆಲೆ ಸಿಗುವುದರಿಂದ ಕಳಶ ಕಳ್ಳತನವಾಗುವ ಸಾಧ್ಯತೆ ಇದೆ. ಹಾಗಾಗಿ ಕಳಶಕ್ಕೆ ರಕ್ಷಣೆ ನೀಡಬೇಕು ಎಂದು ಗ್ರಾಮಸ್ಥರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT