ಸೋಮವಾರ, ಸೆಪ್ಟೆಂಬರ್ 20, 2021
29 °C
ಹೂಳು ಸಮಸ್ಯೆ, ನಿರ್ವಹಣೆ ಕೊರತೆಗೆ ನಲುಗಿದ ‘ಜಲಾವರಗಳು’

ಯಳಂದೂರು: ಕೆರೆಗಳಿಗೆ ನೀಡಬೇಕಿದೆ ಕಾಯಕಲ್ಪ!

ನಾ.ಮಂಜುನಾಥಸ್ವಾಮಿ‌ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ಸಾವಿರಾರು ವರ್ಷಗಳಿಂದ ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕೆರೆ, ಕುಂಟೆ, ಕಟ್ಟೆ, ಬಾವಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಇದೆ. ಇಂತಹ ಜಲ ಮೂಲಗಳೇ ಬೇಸಾಯ ಮಾಡಲು, ರೈತರಿಗೆ ಸ್ಫೂರ್ತಿ ತುಂಬಿವೆ.

ಹಿಂದಿನ ಕಾಲದಲ್ಲಿ ನಿರ್ಮಿಸಿರುವ ಕೆರೆ–ಕಟ್ಟೆಗಳು ನೂರಾರು ವರ್ಷಗಳಿಂದ ಕೃಷಿ ಭೂಮಿಗೆ ನೀರುಣಿಸುತ್ತಾ ಬಂದಿವೆ. ಆದರೆ, ತುಂಬಿದ ಹೂಳು, ಕಳೆ ಗಿಡಗಳ ಹಾವಳಿ ಮತ್ತು ಒತ್ತುವರಿ ಕಾರಣಗಳಿಂದ ಅಂತರ್ಜಲದ ಜೀವನಾಡಿಗಳಾಗಿದ್ದ ಕೆರೆಗಳು ಇದೀಗ ಕಿರಿದಾಗುವತ್ತ ಸಾಗಿವೆ.

ತಾಲ್ಲೂಕಿನಲ್ಲಿರುವ 27 ಕಂದಾಯ ಗ್ರಾಮಗಳಲ್ಲಿ 27 ಕೆರೆಗಳು ಇವೆ. ನಾಡ ಪ್ರಭುಗಳ ಮುಂದಾಲೋಚನೆಯ ಫಲವಾಗಿ ನಿರ್ಮಾಣವಾಗಿವೆ. ಸ್ವಾತಂತ್ರ್ಯ ನಂತರ ಮೂರು ಅಣೆಕಟ್ಟೆಗಳು ತಲೆ ಎತ್ತಿವೆ. ಅಗರ ಮತ್ತು ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಹರಡಿದ ಹತ್ತಾರು ದೊಡ್ಡ ಕೆರೆಗಳು 5,000ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸುವಷ್ಟು ಸಾಮರ್ಥ್ಯ ಹೊಂದಿದ್ದವು. ಆದರೆ, ಕಾಲಕಾಲಕ್ಕೆ ನಿರ್ವಹಣೆ ಕಾಣದೆ ಜಲಾವರಗಳ ವ್ಯಾಪ್ತಿ ಕುಗ್ಗುತ್ತಿವೆ.  

ಮಳೆಗಾಲದಲ್ಲಿ ಕೆರೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವ ನಾಲೆಗಳು, ಚರಂಡಿಗಳು ಮುಚ್ಚಿ ಹೋಗಿರುವುದರಿಂದ ಕೆರೆಗಳಿಗೆ ಸರಿಯಾಗಿ ನೀರು ಹರಿಯುತ್ತಿಲ್ಲ. 

‘ಕೆಸ್ತೂರು ಮತ್ತು ಯರಿಯೂರು ಕೆರೆಗಳಲ್ಲಿ ಹೂಳು ತುಂಬಿದೆ. ಕಳೆ ಗಿಡ, ಜಾಲಿ ಮುಳ್ಳಿನ ಮರ ಸಮೃದ್ಧವಾಗಿ ಬೆಳೆದಿವೆ. ಇದರಿಂದ ಮಳೆ ನೀರು ಸಕಾಲದಲ್ಲಿ ಸಂಗ್ರಹ ಆಗುತ್ತಿಲ್ಲ. ಕಾಲುವೆ ಮೂಲಕ ನೀರು ಹರಿಸಿದರೂ ಪ್ರಯೋಜನ ಇಲ್ಲ. ಹೆಚ್ಚಾದ ನೀರು ಕೆಳ ಪಾತ್ರದ ಕಾಲುವೆಗಳಿಗೆ ಹರಿದು, ಪೋಲಾಗುತ್ತಿದೆ. ಇದರಿಂದ ಬೇಸಿಗೆಯಲ್ಲಿ ಕೆರೆ ಒಣಗಿ, ಭಣಗುಡುತ್ತಿದೆ’ ಎನ್ನುತ್ತಾರೆ ಕೃಷಿಕ ಕಿನಕಳ್ಳಿ ನಂಜುಂಡ.

‘ಅಂಬಳೆ ಕೆರೆ ಸಂಪೂರ್ಣ ಪೊದೆಗಳಿಂದ ಆವೃತವಾಗಿದೆ. ಇಲ್ಲಿಗೆ ಸಂಪರ್ಕ ಕಲ್ಪಿಸುವ ಕಾಲುವೆಗಳು ಮುಚ್ಚಿಹೋಗಿವೆ. ಕೆರೆಗೆ ನೀರು ತುಂಬಿಸುವ ಯೋಜನೆ ಸಂಪೂರ್ಣ ಈಡೇರಿಲ್ಲ. ಅದಕ್ಕೂ ಮೊದಲು ಕೆರೆಯ ವಿಸ್ತೀರ್ಣ ಗುರುತಿಸಬೇಕು. ಕೆರೆ ಪಾತ್ರದ ಜನರ ಸಹಭಾಗಿತ್ವದಲ್ಲಿ ಕೆರೆ ಅಚ್ಚುಕಟ್ಟು ಸಂಘ ಸ್ಥಾಪಿಸಿ, ಅವರಿಗೆ ಜವಾಬ್ದಾರಿ ಕೊಡಬೇಕು. ನಂತರ ನೀರು ಹರಿಸುವತ್ತ ಚಿಂತಿಸಬೇಕು’ ಎಂದು ಅಂಬಳೆ ಶಿವಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು. 

'ನರೇಗಾದಡಿ ಕೆರೆಗಳ ಹೂಳು ತೆಗೆಯಲು ಎಲ್ಲ ಪಂಚಾಯಿತಿಗಳಿಗೂ ಸೂಚಿಸಲಾಗಿದೆ. ಈಗಾಗಲೇ ನಾಲೆ ಮತ್ತು ಸುವರ್ಣಾವತಿ ನದಿ ಮೂಲಕ ಹರಿಯುವ ನೀರನ್ನು ಅಗರ ಮತ್ತು ವೈ.ಕೆ.ಮೋಳೆ ಕೆರೆಗಳಿಗೆ ತಿರುಗಿಸಲಾಗಿದೆ. ಕೆರೆ ಗುರುತಿಸುವ ದೆಸೆಯಲ್ಲಿ ಸರ್ವೆ ಕಾರ್ಯ ನಡೆದಿದ್ದು, ಕೆರೆ ಜಾಗ ಅತಿಕ್ರಮಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಲ್ಲೂಕು ಆಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ' ಎಂದು ಶಾಸಕ ಎನ್.ಮಹೇಶ್ ಹೇಳಿದರು.

ರೈತರ ಮಾತು...

ನೀರು ಹರಿಸಿ, ವರ್ಷ ಪೂರ್ತಿ ನಿಲ್ಲಿಸಿ

ನಮ್ಮೂರ ಕೆರೆ ಕೃಷಿಗೆ ಮಾತ್ರವಲ್ಲ, ಒಳನಾಡು ಮೀನುಗಾರಿಕೆಗೂ ಹೆಸರುವಾಸಿ. ಆದರೆ, ನಿರ್ವಹಣೆಯ ಕೊರತೆಯಿಂದ ಬೇಸಿಗೆಯಲ್ಲಿ ಬತ್ತಿ ಹೋಗುತ್ತದೆ. ಇದರಿಂದ ಅಂತರ್ಜಲದ ಕುಸಿತಕ್ಕೂ ಕಾರಣವಾಗುತ್ತದೆ. ಹಾಗಾಗಿ, ವರ್ಷ ಪೂರ್ತಿ ನೀರು ನಿಲ್ಲುವಂತೆ ಯೋಜನೆ
ರೂಪಿಸಲಿ.

-ನಾಗೇಶ್, ಕೆಸ್ತೂರು ಕೃಷಿಕ

ಕೆರೆ ಪರಿಸರ ಉಳಿಸಿ

ಕೆರೆಗಳ ಆವಾಸವನ್ನು ಒತ್ತುವರಿಯಿಂದ ರಕ್ಷಿಸಬೇಕು. ಕಾಲಕಾಲಕ್ಕೆ ಜಲ ಮೂಲಗಳಲ್ಲಿ ನೀರು ಹರಿಸಲು ನೆರವಾಗುವಂತೆ ಕಾಲುವೆಗಳಲ್ಲಿ ಸಂಗ್ರಹವಾಗುವ ಕೆಸರು ಹಾಗೂ ಅನುಪಯುಕ್ತ ಗಿಡಗಳನ್ನು ತೆಗೆಯಬೇಕು. ನೂರಾರು ಪಕ್ಷಿ ಸಂಕುಲಗಳಿಗೆ ಆಸರೆ ಒದಗಿಸುವ ಕೆರೆ ಪರಿಸರದ ಮಹತ್ವವನ್ನು ತಿಳಿಸುವ ಕೆಲಸ ಆಗಬೇಕು.

-ನಟರಾಜು, ರೈತ ಮುಖಂಡ, ಮದ್ದೂರು

‘15 ಕೆರೆಗಳ ಒತ್ತುವರಿ ತೆರವು’

‘ತಾಲ್ಲೂಕಿನಲ್ಲಿ 3,718 ಎಕರೆ ಪ್ರದೇಶದಲ್ಲಿ 27 ಕೆರೆಗಳಿವೆ. ಎಲ್ಲ ಕೆರೆಗಳ ಸರ್ವೆ ನಡೆಸುವ ಪ್ರಕ್ರಿಯೆ ಪೂರ್ಣಗೊಂಡಿದೆ. ಇವುಗಳಲ್ಲಿ 16 ಕೆರೆಗಳ 92.14 ಎಕರೆ ಪ್ರದೇಶವನ್ನು ಒತ್ತುವರಿ ವ್ಯಾಪ್ತಿಯಲ್ಲಿ ಗುರುತಿಸಿದ್ದು, 15 ಕೆರೆಗಳ 41.29 ಎಕರೆ ಪ್ರದೇಶವನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ. ಸುಮಾರು 50.25 ಎಕರೆ ವ್ಯಾಪ್ತಿಯ 1 ಕೆರೆ ಗುರುತಿಸಲು ಬಾಕಿ ಉಳಿದಿದೆ. 11 ಕೆರೆಗಳ 3,625 ಎಕೆರೆ ಪ್ರದೇಶ ಅತಿಕ್ರಮಣದಿಂದ ಮುಕ್ತವಾಗಿದೆ’ ಎಂದು ತಹಶೀಲ್ದಾರ್ ಆರ್.ಜಯಪ್ರಕಾಶ್ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು