ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯ್ದೆಗಳಿದ್ದರೂ ದೌರ್ಜನ್ಯ ನಿಂತಿಲ್ಲ: ಡಿ.ಸಿ

ಎಸ್‌ಸಿ ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ, ವಿಚಾರಸಂಕಿರಣ– ಜಾಗೃತಿಗೊಳಿಸಲು ಕರೆ
Last Updated 9 ಆಗಸ್ಟ್ 2021, 16:53 IST
ಅಕ್ಷರ ಗಾತ್ರ

ಚಾಮರಾಜನಗರ: ‘ಪರಿಶಿಷ್ಟ ಜಾತಿ, ಪಂಗಡಗಳ (ದೌರ್ಜನ್ಯ ಪ್ರತಿಬಂಧಕ) ಕಾಯ್ದೆ ಜಾರಿಗೆ ಬಂದು 32 ವರ್ಷಗಳದೂ ಇಂದಿಗೂ ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯ ನಿಂತಿಲ್ಲ. ಜಿಲ್ಲೆಯಲ್ಲೇ ಪ್ರತಿ ತಿಂಗಳು ಎರಡು–ಮೂರು ಘಟನೆಗಳು ನಡೆಯುತ್ತಿವೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಹೇಳಿದರು.

ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವ-75ರ ಅಂಗವಾಗಿ ಆಯೋಜಿಸಲಾಗಿದ್ದ ನಾಗರಿಕ ಹಕ್ಕು ಸಂರಕ್ಷಣಾ ಕಾಯ್ದೆ 1955 ಮತ್ತು ಪರಿಶಿಷ್ಟ ಜಾತಿ, ಪಂಗಡಗಳ (ದೌರ್ಜನ್ಯ ಪ್ರತಿಬಂಧಕ) ಕಾಯ್ದೆ 1989 ಹಾಗೂ 1955ರ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ಸಮಾಜದಲ್ಲಿಅನಿಷ್ಟ ಪದ್ಧತಿಗಳನ್ನು ಕೇವಲ ಕಾನೂನಿನಿಂದ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಾಮಾಜಿಕ ತಿಳಿವಳಿಕೆ, ಜಾಗೃತಿ ಮೂಡಿಸುವುದು ಅಗತ್ಯ’ ಎಂದರು.

‘ಜನರಿಗೆ ಎಷ್ಟೇ ತಿಳಿವಳಿಕೆ ಇದ್ದರೂ ಸಣ್ಣತನಗಳನ್ನು ಬಿಟ್ಟಿಲ್ಲ. ಶಿಕ್ಷಣ ಕೂಡ ಜನರನ್ನು ಸಂಪೂರ್ಣವಾಗಿ ಬದಲಾಯಿಸಲು ಸಫಲವಾಗಿಲ್ಲ.ಶೈಕ್ಷಣಿಕ ಸಂಸ್ಥೆಗಳಲ್ಲಿರುವ ಜಾತಿ ಧೋರಣೆ ಬೇರೆಲ್ಲೂ ಇಲ್ಲ. ಸಮಾಜದಲ್ಲಿ ಪ್ರಬುದ್ಧತೆ ಬಂದಿಲ್ಲ.ಸಣ್ಣತನ, ಜಾತಿ ಮೋಹವನ್ನು ಬಿಟ್ಟಾಗ ಸಮಾಜದಲ್ಲಿ ಸಮಾನತೆ ಸಾಧಿಸಲು ಸಾಧ್ಯ. ಪರಿಶಿಷ್ಟ ಜಾತಿ, ಪಂಗಡದವರನ್ನು ಎಚ್ಚರಿಸುವ ಜೊತೆಗೆ ಇತರರನ್ನು ಜಾಗೃತರನ್ನಾಗಿ ಮಾಡಬೇಕು’ ಎಂದು ಅವರು ಹೇಳಿದರು.

ನಿಯೋಜಿತ ನಳಂದ ವಿಶ್ವವಿದ್ಯಾಲಯದ ಭೋದಿದತ್ತ ಬಂತೇಜಿ ಅವರು ಮಾತನಾಡಿ, ‘ಜಾತಿ ವ್ಯವಸ್ಥೆ ಇರುವವರೆಗೂ ದೌರ್ಜನ್ಯ ನಿರಂತರವಾಗಿರುತ್ತದೆ. ದೌರ್ಜನ್ಯ, ಜಾತಿ, ತಾರತಮ್ಯಗಳನ್ನು ಹೋಗಲಾಡಿಸಲು ಸಮಾಜದಲ್ಲಿ ಪರಿವರ್ತನೆಯಾಗಬೇಕು. ಮೈತ್ರಿ, ಕರುಣೆ, ಜ್ಞಾನ ಹೆಚ್ಚಾಗಬೇಕು. ಬುದ್ದ, ಬಸವ ಅಂಬೇಡ್ಕರ್ ಅವರ ವಿಚಾರ, ತತ್ವ ಆದರ್ಶಗಳು ಹೆಚ್ಚು ಪಸರಿಸುವಂತಾಗಬೇಕು’ ಎಂದರು.

ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಅವರು ಮಾತನಾಡಿ, ‘ಯಾವ ಜನಾಂಗ ಹಕ್ಕು ಮತ್ತು ಅಧಿಕಾರದಿಂದ ವಂಚಿತವಾಗುತ್ತವೆಯೋ ಅಂತಹ ಸಮಾಜದ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತದೆ. ಹೀಗಾಗಿಯೇ, ಪರಿಶಿಷ್ಟ ಜಾತಿ, ವರ್ಗ ಸೇರಿದಂತೆ ಶೋಷಿತ ಎಲ್ಲಾ ಸಮುದಾಯಗಳು ಜಾಗೃತವಾಗಬೇಕು; ಹಕ್ಕು ಅಧಿಕಾರಗಳನ್ನು ಗಳಿಸಬೇಕು ಎಂದು ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಪ್ರತಿಪಾದಿಸಿದ್ದಾರೆ’ ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್ ರಾಜ್ ಹಾಗೂ ಸಾಹಿತಿ ಸೋಮಶೇಖರ ಬಿಸಿಲವಾಡಿ ಅವರು ವಿಷಯ ಮಂಡಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೊಯರ್ ನಾರಾಯಣರಾವ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಎಚ್.ಸಿ.ಭಾಗೀರಥಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚಿಕ್ಕಬಸವಯ್ಯ, ಜನ ಹಿತಾಸಕ್ತಿ ಹೋರಾಟ ವೇದಿಕೆಯ ಜಿಲ್ಲಾಧ್ಯಕ್ಷ ರಾಮಸಮುದ್ರ ಸುರೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಎಚ್.ಎಸ್. ಗಂಗಾಧರ್ ಇತರರು ಇದ್ದರು.

ಜಿ.ಪಂ ಸಿಇಒ ವಿರುದ್ಧ ಪ್ರತಿಭಟನೆ

ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್‌ ಭೊಯರ್‌ ನಾರಾಯಣ ರಾವ್‌ ಅವರು ಅರ್ಧದಲ್ಲೇ ಎದ್ದು ಹೋಗಿದ್ದಕ್ಕೆ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಯನ್ನೂ ನಡೆಸಿದರು.

ಜಿಲ್ಲಾಡಳಿತ ಭವನದ ಎದುರುಗಡೆಯಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಕುಳಿತು ಘೋಷಣೆ ಕೂಗಿದರು. ಕಾರ್ಯಕ್ರಮ ಶಿಷ್ಟಾಚಾರ ಉಲ್ಲಂಘಿಸಿರುವ ಸಿಇಒ ಅವರು ದಲಿತ ಸಮುದಾಯದ ಅಗೌರವ ಉಂಟು ಮಾಡಿದ್ದಾರೆ. ಅವರನ್ನು ಸ್ಥಳಕ್ಕೆ ಕರೆಸಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಭಾಗೀರಥಿ ಅವರು ಭೇಟಿ ನೀಡಿ ಮನವೊಲಿಸಲು ಯತ್ನಿಸಿದರು. ಈ ಸಮಯದಲ್ಲಿ ಮಾತಿನ ಚಕಮಕಿಯೂ ನಡೆಯಿತು. ನಂತರ ಎಎಸ್‌ಪಿ ಸುಂದರ್‌ರಾಜ್‌ ಅವರು ಬಂದು, ಈ ವಿಚಾರವನ್ನು ಜಿಲ್ಲಾಧಿಕಾರಿ ಅವರ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್‌ ತೆಗೆದುಕೊಂಡರು.

ಒಕ್ಕೂಟದ ಸಂಚಾಲಕ ಸಿ.ಎಂ.ಕೃಷ್ಣಮೂರ್ತಿ,ಸಿ.ಎಂ.ನರಸಿಂಹಮೂರ್ತಿ, ಯರಿಯೂರು ರಾಜಣ್ಣ, ಆಲೂರುಮಲ್ಲು, ದೊಡ್ಡಿಂದುವಾಡಿ ಸಿದ್ದರಾಜು, ಮಹೇಶ್ ಗೌಡ, ನಾರಾಯಣ್, ಸುಭಾಷ್ ಮಾಡ್ರಳ್ಳಿ, ರಾಮಸಮುದ್ರ ಮಹೇಶ್, ನಮ್ಮನೆ ಪ್ರಶಾಂತ್ ಕುಮಾರ್, ಮರೆಯಾಲದಹುಂಡಿ ಕುಮಾರ್, ಶೋಭ, ಪುಪ್ಪಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT