ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರ ಪಾಲಿಗೆ ನಿಂಬೆ ಹಣ್ಣು ಕಹಿ

ತರಕಾರಿ ಧಾರಣೆಯಲ್ಲಿ ಯಥಾಸ್ಥಿತಿ; ಹೂವಿಗೆ ಬೇಡಿಕೆ ಕುಸಿತ
Last Updated 9 ಮೇ 2022, 15:53 IST
ಅಕ್ಷರ ಗಾತ್ರ

ಚಾಮರಾಜನಗರ: ಬಿರು ಬೇಸಿಗೆ ಆರಂಭಗೊಂಡ ನಂತರ ಮಾರುಕಟ್ಟೆಯಲ್ಲಿ ನಿಂಬೆ ಹಣ್ಣಿನ ಬೆಲೆ ಗಗನಕ್ಕೇರಿದ್ದು, ಗ್ರಾಹಕರ ಕೈಗೆಟುಕದಂತಾಗಿದೆ.

ಗಾತ್ರಕ್ಕೆ ಅನುಸಾರವಾಗಿ ನಿಂಬೆ ಹಣ್ಣಿನ ಬೆಲೆ ಒಂದಕ್ಕೆ ₹ 15ರವರೆಗೂ ಇದೆ. ಸಾಮಾನ್ಯ ಗಾತ್ರದ ನಿಂಬೆಹಣ್ಣಿಗೆ ₹ 8ರಿಂದ ₹ 12 ಕೊಡಬೇಕು. ರಸ ಇಲ್ಲದ ಹೀಚು ಕಾಯಿಗೆ ₹ 5 ಕೊಡಬೇಕು.

ಯುಗಾದಿ ಹಬ್ಬದ ಬಳಿಕ ನಿಂಬೆ ಹಣ್ಣು ದುಬಾರಿಯಾಗಿದ್ದು, ಜೂನ್‌ ತಿಂಗಳವರೆಗೂ ಇದೇ ಬೆಲೆ ಇರಲಿದೆ ಎಂದು ಹೇಳುತ್ತಾರೆ ವ್ಯಾಪಾರಿಗಳು.

ಬೇಸಿಗೆಯಾಗಿರುವುದರಿಂದ ನಿಂಬೆ ಹಣ್ಣಿನ ಶರಬತ್ತಿಗೆ ಬೇಡಿಕೆ ಹೆಚ್ಚು. ಇದರ ಜೊತೆಗೆ ಹಬ್ಬಗಳು, ಉತ್ಸವಗಳು, ಜಾತ್ರೆಗಳು ನಡೆಯುತ್ತಿದ್ದು, ಧಾರ್ಮಿಕ ವಿಧಿ ವಿಧಾನಗಳಿಗೂ ನಿಂಬೆ ಹಣ್ಣು ಬೇಕು. ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿ ಬೇಡಿಕೆ ಹೆಚ್ಚಾಗಿದೆ. ಇದರಿಂದಾಗಿ ಬೆಲೆ ಜಾಸ್ತಿಯಾಗಿದೆ ಎಂಬುದು ವ್ಯಾಪಾರಿಗಳ ಅಂಬೋಣ.

‘ನಮಗೆ ವಿಜಯಪುರ, ಬಾಗಲಕೋಟೆ, ಆಂಧ್ರಪ್ರದೇಶದಿಂದ ನಿಂಬೆಹಣ್ಣು ಬರುತ್ತದೆ. ಸ್ಥಳೀಯವಾಗಿ ಹೆಚ್ಚು ಲಭ್ಯವಿಲ್ಲ. ಯುಗಾದಿ ನಂತರ ಒಂದು ಮೂಟೆ ನಿಂಬೆ ಹಣ್ಣಿಗೆ ₹ 6,000ದಿಂದ ₹8,000 ಕೊಡಬೇಕು. ಒಂದು ಮೂಟೆಯಲ್ಲಿ 700ರಿಂದ 750 ನಿಂಬೆ ಹಣ್ಣು ಬರುತ್ತದೆ. ಸಣ್ಣ ಗಾತ್ರದ್ದಾದರೆ 900ರವರೆಗೂ ಇರುತ್ತದೆ’ ಎಂದು ವ್ಯಾಪಾರಿ ಸಿದ್ದರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೇಸಿಗೆಯಲ್ಲಿ ಬೆಲೆ ಹೆಚ್ಚಾಗುವುದು ಸಾಮಾನ್ಯ. ದೊಡ್ಡ ಗಾತ್ರದ ನಿಂಬೆಗೆ ₹ 20ರವರೆಗೂ ಬೆಲೆ ಇತ್ತು. ಎರಡು ವಾರಗಳಿಂದ ಸ್ವಲ್ಪ ಕಡಿಮೆಯಾಗಿದೆ. ಈಗ ₹ 15 ಇದೆ. ಸಾಮಾನ್ಯ ಗಾತ್ರದ ನಿಂಬೆ ಹಣ್ಣನ್ನು ₹ 8ರಿಂದ ₹ 12ರವರೆಗೆ ಮಾರಾಟ ಮಾಡುತ್ತಿದ್ದೇನೆ. ಮಳೆಗಾಲ ಆರಂಭವಾಗುವವರೆಗೆ ಇಷ್ಟೇ ಬೆಲೆ ಇರಲಿದೆ’ ಎಂದರು.

ಕೈಗೆಟುಕದ ಟೊಮೆಟೊ: ತರಕಾರಿಗಳ ಪೈಕಿ ಟೊಮೆಟೊದ ದುಬಾರಿ ಬೆಲೆ ಈ ವಾರವೂ ಮುಂದುವರಿದಿದೆ. ಹಾಪ್‌ಕಾಮ್ಸ್‌ನಲ್ಲಿ ಕೆಜಿಗೆ ₹ 60 ಇದೆ. ಹೊರಗಡೆ ಇನ್ನೂ ಜಾಸ್ತಿ ಇದೆ. ಹಲವು ವಾರಗಳಿಂದ ಸ್ಥಿರವಾಗಿದ್ದ ಮೂಲಂಗಿ ಬೆಲೆಯಲ್ಲಿ ಈ ಬಾರಿ ಕೆಜಿಗೆ ₹ 10 ಹೆಚ್ಚಾಗಿದೆ. ಕೆಜಿಗೆ ₹ 30 ಇದೆ. ಬೆಂಡೆಕಾಯಿ ಬೆಲೆಯೂ ₹ 10 ಹೆಚ್ಚಾಗಿ ₹ 40ಕ್ಕೆ ತಲುಪಿದೆ.

ಉಳಿದ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಕ್ಯಾರೆಟ್ (₹ 40), ಆಲೂಗಡ್ಡೆ (₹ 30), ಈರುಳ್ಳಿ (₹ 20) ಸೇರಿದಂತೆ ಬಹುತೇಕ ತರಕಾರಿಗಳ ಧಾರಣೆ ಸ್ಥಿರವಾಗಿದೆ.

ಹಣ್ಣುಗಳ ಬೆಲೆಯಲ್ಲೂ ಯಥಾಸ್ಥಿತಿ ಮುಂದುವರಿದಿದೆ. ಸೇಬಿನ ದುಬಾರಿ ಬೆಲೆ (₹ 180) ಈ ವಾರವೂ ಮುಂದುವರಿದಿದೆ. ಕೆಜಿ ದಾಳಿಂಬೆಗೂ ₹ 160 ಇದೆ. ಸಪೋಟಕ್ಕೆ ₹ 60ರಿಂದ ₹ 80ರವರೆಗೆ ಬೆಲೆ ಇದೆ.

ಮಾಂಸದ ಮಾರುಕಟ್ಟೆಯಲ್ಲಿ ಚಿಕನ್‌ ಬೆಲೆ ಯಥಾಸ್ಥಿತಿ ಮುಂದುವರಿದಿದೆ.

ಹೂವಿಗೆ ಬೇಡಿಕೆ ಕುಸಿತ

ಹೂವುಗಳ ಮಾರುಕಟ್ಟೆಯಲ್ಲಿ ಕನಕಾಂಬರ ಬಿಟ್ಟು, ಉಳಿದ ಹೂವುಗಳ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ.

ಚೆನ್ನೀಪುರದಮೋಳೆಯ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕನಕಾಂಬರದ ಬೆಲೆ ಕೆಜಿಗೆ ₹600ರಿಂದ ₹800 ಇದೆ. ಮಲ್ಲಿಗೆಗೆ ಬೇಡಿಕೆ ಕುಸಿದಿದ್ದು, ₹160–₹200ರವರೆಗೆ ಇದೆ. ಮರ್ಲೆಗೆ ₹60ರಿಂದ ₹80, ಸುಂಗಧರಾಜಕ್ಕೆ ₹ 30, ಚೆಂಡು ಹೂವಿಗೆ ₹ 30ರಿಂದ ₹ 40 ಹಾಗೂ ಬಟನ್‌ ಗುಲಾಬಿಗೆ ₹ 120 ಇದೆ.

‘ಶುಕ್ರವಾರ, ಶನಿವಾರದವರೆಗೂ ಬೇಡಿಕೆ ಇತ್ತು. ಭಾನುವಾರದಿಂದ ಕಡಿಮೆಯಾಗಿದೆ. ಗುರುವಾರದಿಂದ ಮತ್ತೆ ಕೊಂಚ ಬೇಡಿಕೆ ಬರಬಹುದು’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT