ಗುಂಡ್ಲುಪೇಟೆ: ಅರಣ್ಯ ಇಲಾಖೆ ಹುಲಿಗೆ ಇರಿಸಿದ್ದ ಬೋನಿನಲ್ಲಿ ಸುಮಾರು 5ರಿಂದ 6 ವರ್ಷದ ಗಂಡು ಚಿರತೆಯೊಂದು ತಾಲ್ಲೂಕಿನ ಪಡಗೂರಿನ ಹೊರ ವಲಯದಲ್ಲಿ ಸೆರೆಯಾಗಿದೆ.
ಪಡುಗೂರು ಗ್ರಾಮದ ಶಿವಕುಮಾರ್ ಎಂಬುವವರ ಜಮೀನಿನಲ್ಲಿ ಕಳೆದ ಮೂರ್ನಾಲ್ಕು ದಿನಗಳ ಹುಲಿ ಕಾಣಿಸಿಕೊಂಡ ಹಿನ್ನೆಲೆ ರೈತರ ಒತ್ತಾಯದ ಮೇರೆಗೆ ಗುಂಡ್ಲುಪೇಟೆ ಬಫರ್ ಜೋನ್ ವಲಯ ಅರಣ್ಯಾಧಿಕಾರಿಗಳು ಬೋನ್ ಇರಿಸಿದ್ದರು. ಇದೀಗ ಆ ಬೋನಿನಲ್ಲಿ ಚಿರತೆ ಸೆರೆಯಾಗಿದೆ. ಬೋನಿನಲ್ಲಿ ಕಟ್ಟಿಹಾಕಿದ್ದ ಕರುವನ್ನು ಚಿರತೆ ತಿಂದು ಹಾಕಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ರೈತ ಶಿವಕುಮಾರ್ ಮಂಗಳವಾರ ಬೆಳಿಗ್ಗೆ ಜಮೀನಿಗೆ ಹೋಗಿದ್ದ ವೇಳೆ ಬೋನಿನಲ್ಲಿ ಚಿರತೆ ಸೆರೆಯಾಗಿರುವುದು ಗಮನಕ್ಕೆ ಬಂದಿದೆ. ಮಾಹಿತಿ ಅರಿತ ಆರ್‌ಎಫ್‍ಓ ಸತೀಶ್ ಕುಮಾರ್ ನೇತೃತ್ವದ ಅರಣ್ಯಾಧಿಕಾರಿಗಳ ತಂಡ ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ಬಂಡೀಪುರ ಅಭಯಾರಣ್ಯದ ಕಲ್ಕೆರೆ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
ನಿಟ್ಟುಸಿರು ಬಿಟ್ಟ ರೈತರು: ಪಡಗೂರು, ಪರಮಾಪುರ ವ್ಯಾಪ್ತಿಯಲ್ಲಿ ಹುಲಿ ಹಾಗೂ ಚಿರತೆ ಆಗಾಗ್ಗೆ ಜಾನುವಾರುಗಳ ಮೇಲೆ ದಾಳಿ ನಡೆಸಿ ತಿಂದು ಕೊಂದು ಹಾಕುತ್ತಿದ್ದವು. ಇದರಿಂದ ರೈತರು ಜಮೀನುಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದರು. ಇದೀಗ ಚಿರತೆ ಸೆರೆಯಿಂದ ರೈತರು ನಿಟ್ಟುಸಿರು ಬಿಡುವಂತಾಗಿದೆ.
ಹುಲಿ ಸೆರೆಗೂ ಒತ್ತಾಯ: ಪಡಗೂರು ಸುತ್ತಮುತ್ತ ಹುಲಿ ಕಾಣಿಸಿಕೊಳ್ಳುತ್ತಿದೆ. ಇದರಿಂದ ರೈತರು ಭಯಭೀತರಾಗಿದ್ದಾರೆ. ಆದ್ದರಿಂದ ಅರಣ್ಯಾಧಿಕಾರಿಗಳು ಜಮೀನಿನಲ್ಲಿ ಇರಿಸಿರುವ ಬೋನ್ ತೆರವು ಮಾಡದೆ ಹುಲಿಯನ್ನು ಸಹ ಸೆರೆ ಹಿಡಿಯಬೇಕೆಂದು ರೈತರು ಒತ್ತಾಯಿಸಿದ್ದಾರೆ.