ಯಳಂದೂರು(ಚಾಮರಾಜನಗರ ಜಿಲ್ಲೆ): ತಾಲ್ಲೂಕಿನ ಅಗರ ಕೆರೆ ಸುತ್ತಮುತ್ತ ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದ ಚಿರತೆ ಸೆರೆ ಕಾರ್ಯಾಚರಣೆ ವೇಳೆ ಆಕಸ್ಮಿಕವಾಗಿ ಸಿಡಿದ ಗುಂಡು ತಗುಲಿ ನಾಲ್ವರು ಗಾಯಗೊಂಡಿದ್ದಾರೆ.
ಮದ್ದೂರು ಗ್ರಾಮದ ಮೂರ್ತಿ, ರಂಗಸ್ವಾಮಿ, ಶಿವು ಹಾಗೂ ರವಿ ಗಾಯಗೊಂಡವರು.
ಮದ್ದೂರು ಮತ್ತು ಅಗರ ಕೆರೆ ವ್ಯಾಪ್ತಿಯಲ್ಲಿ ಈಚೆಗೆ ಚಿರತೆ ಸೆರೆ ಹಿಡಿಯಲು ಬೋನು ಇರಿಸಲಾಗಿತ್ತು. ಗುರುವಾರ ಬೆಳಿಗ್ಗೆ ಈ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಕೂಡಲೇ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಹಿಡಿಯಲು ಮುಂದಾದಾಗ ಏಕಾಏಕಿ ಮೈಮೇಲೆ ಎರಗಿದೆ.
ದಾಳಿಯಿಂದ ಗಲಿಬಿಲಿಗೊಂಡ ಸಿಬ್ಬಂದಿ ತಪ್ಪಿಸಿಕೊಂಡು ನೆಲಕ್ಕೆ ಬಿದ್ದಾಗ ಅವರ ಬಳಿಯಿದ್ದ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡುಗಳು ಸಿಡಿದಿದ್ದು, ಚಿರತೆ ಸೆರೆ ಕಾರ್ಯಾಚರಣೆ ವೀಕ್ಷಿಸುತ್ತಿದ್ದವರಿಗೆ ತಗುಲಿದೆ.
ಖಾಸಗಿ ಆಸ್ಪತ್ರೆಗೆ ಗಾಯಾಳು
ಗಾಯಗೊಂಡಿದ್ದ ನಾಲ್ವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರಗೆ ಕರೆತಂದರೂ ತುರ್ತು ಚಿಕಿತ್ಸೆ ಲಭ್ಯವಾಗದ ಹಿನ್ನೆಲೆಯಲ್ಲಿ ಕೊಳ್ಳೇಗಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೂಲಿ ಮಾಡಿ ಜೀವನ ಸಾಗಿಸುವ ಕೃಷಿಕರಿಗೆ ಗುಂಡೇಟು ಬಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಕಾಳಜಿ ವಹಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಂಬಂಧಿಗಳು ದೂರಿದ್ದಾರೆ.
ಪ್ರಾಣಾಪಾಯದಿಂದ ಪಾರು:
ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದು ಆತಂಕ ಪಡುವ ಅಗತ್ಯ ಇಲ್ಲ ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶ್ರೀಧರ್ ತಿಳಿಸಿದ್ದಾರೆ.
ಚಿರತೆ ಸಾವು:
ಚಿರತೆ ಸೆರೆ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಚಿರತೆ ಎರಗಿದಾಗ ಆಕಸ್ಮಿಕವಾಗಿ ಬಂದೂಕಿನಿಂದ ಗುಂಡು ಸಿಡಿದಿದೆ. ನಿಸ್ತೇಜಗೊಂಡಿದ್ದ ಚಿರತೆ ಸಾವನ್ನಪ್ಪಿದ್ದು ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಆರ್‌ಎಫ್ಒ ಎನ್.ನಾಗರಾಜ ನಾಯಕ್ ತಿಳಿಸಿದ್ದಾರೆ.