ಮಂಗಳವಾರ, ಏಪ್ರಿಲ್ 13, 2021
29 °C
ಹೆಚ್ಚು ಪರೀಕ್ಷೆ ನಡೆದರೆ, ದೃಢ ಪಡುವ ಪ್ರಕರಣಗಳ ಸಂಖ್ಯೆಯೂ ಹೆಚ್ಚು

ಚಾಮರಾಜನಗರ: ಇಳಿಯುತ್ತಿದೆ ಕೋವಿಡ್‌ ಪರೀಕ್ಷೆಗಳ ಸಂಖ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌ ಪರೀಕ್ಷೆಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಈ ಕಾರಣಕ್ಕಾಗಿ ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿಲ್ಲ ಎಂದು ಹೇಳಲಾಗುತ್ತಿದೆ. 

ಮಂಗಳವಾರ 158 ಮಂದಿಯ ಕೋವಿಡ್‌ ಪರೀಕ್ಷಾ ವರದಿಗಳು ಬಂದಿದ್ದು, ಒಂದೂ ಪ್ರಕರಣ ವರದಿಯಾಗಿಲ್ಲ.  ಸೋಮವಾರ 373 ಪರೀಕ್ಷಾ ವರದಿಗಳು ಬಂದಿದ್ದು, ಮೂವರಿಗೆ ಕೊರೊನಾ ವೈರಸ್‌ ಸೋಂಕು ತಗುಲಿರುವುದು ದೃಢಪಟ್ಟಿತ್ತು. 

ಭಾನುವಾರದಂದು 623 ಮಂದಿಯ ಗಂಟಲು ದ್ರವದ ಪರೀಕ್ಷಾ ವರದಿ ಪ್ರಕಟವಾಗಿತ್ತು. ಈ ಪೈಕಿ ನಾಲ್ಕು ಮಂದಿ ಕೋವಿಡ್‌–19ಗೆ ತುತ್ತಾಗಿರುವುದು ಬೆಳಕಿಗೆ ಬಂದಿತ್ತು. ಶನಿವಾರ 223 ಮಂದಿಯ ಪರೀಕ್ಷಾ ವರದಿ ಬಂದಿತ್ತು. ಯಾವುದೇ ಪ್ರಕರಣ ವರದಿಯಾಗಿಲ್ಲ. 

ಎರಡು ವಾರದ ಅಂಕಿ ಅಂಶಗಳನ್ನು ಗಮನಿಸಿದರೆ, ಹೆಚ್ಚು ಪರೀಕ್ಷೆಗಳು ನಡೆದಾಗಲೆಲ್ಲ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಕೋವಿಡ್‌ ಹಾವಳಿ ಹೆಚ್ಚಿದ್ದ ಸಮಯದಲ್ಲಿ ಜಿಲ್ಲೆಯಲ್ಲಿ ಪ್ರತಿ ದಿನ 1,000ಕ್ಕೂ ಹೆಚ್ಚು ಪರೀಕ್ಷೆಗಳು ನಡೆಯುತ್ತಿದ್ದವು. ಪ್ರಕರಣಗಳು ನಿಧಾನವಾಗಿ ಕಡಿಮೆಯಾಗಲು ಆರಂಭಿಸಿದ ನಂತರ ಪರೀಕ್ಷೆಗಳ ಸಂಖ್ಯೆಯೂ ಕಡಿಮೆಯಾಗುತ್ತಿವೆ.

ಕೋವಿಡ್‌ ಲಸಿಕೆ ಅಭಿಯಾನ ಆರಂಭಗೊಂಡ ನಂತರ ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ವಿತರಣೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಈ ಕಾರಣದಿಂದ ಪರೀಕ್ಷೆಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಹೆಚ್ಚು ಪರೀಕ್ಷೆಗಳನ್ನು ನಡೆಸಿದರೆ, ದೃಢ ಪಡುವ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಲಿದೆ ಎಂದು ತಜ್ಞರು ಹೇಳುತ್ತಾರೆ. 

12 ಸಕ್ರಿಯ ಪ್ರಕರಣಗಳು: ಈ ಮಧ್ಯೆ, ಜಿಲ್ಲೆಯಲ್ಲಿ ಈಗ 12 ಸಕ್ರಿಯ ಕೋವಿಡ್‌ ಪ್ರಕರಣಗಳಿವೆ. ಈ ಪೈಕಿ 10 ಮಂದಿ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. 

ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 6,990ಕ್ಕೆ ತಲುಪಿದೆ. ಮಂಗಳವಾರ ಗುಣಮುಖರಾದ ಒಬ್ಬರು ಸೇರಿದಂತೆ ಈವರೆಗೆ 6,846 ಮಂದಿ ಸೋಂಕು ಮುಕ್ತರಾಗಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು