ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಮರಹಳ್ಳಿ: ಕೋವಿಡ್‌ ಆಸ್ಪತ್ರೆಯಲ್ಲಿ ಗ್ರಂಥಾಲಯ!

ಸಂತೇಮರಹಳ್ಳಿಯಲ್ಲಿ ಸೋಂಕಿತರಿಗಾಗಿ ಸೌಲಭ್ಯ, ಜಿಲ್ಲಾಡಳಿತದ ವಿನೂತನ ಪ್ರಯತ್ನ
Last Updated 19 ಅಕ್ಟೋಬರ್ 2020, 20:15 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಸಂತೇಮರಹಳ್ಳಿ ಹೋಬಳಿ ಕೇಂದ್ರದಲ್ಲಿನ ತಾಯಿ ಮಗುವಿನ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆರಂಭಿಸಲಾಗಿರುವ ಕೋವಿಡ್‌ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ ಗ್ರಂಥಾಲಯ ಆರಂಭಿಸಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಇದರ ಸೌಲಭ್ಯವನ್ನು ಪಡೆಯಬಹುದು. 700ಕ್ಕೂ ಹೆಚ್ಚು ಪುಸ್ತಕಗಳು ಇಲ್ಲಿವೆ.

ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಹಾಗೂ ಆರೈಕೆ ಮಾಡುವ ಉದ್ದೇಶದಿಂದ ಸಂತೇಮರಹಳ್ಳಿಯಲ್ಲಿ ಹೆಚ್ಚುವರಿಯಾಗಿ 60 ಹಾಸಿಗೆ ಸಾಮರ್ಥ್ಯದ ಚಿಕಿತ್ಸಾ ಕೇಂದ್ರ ಆರಂಭಿಸಲಾಗಿದೆ.

ಇತ್ತೀಚೆಗೆ ಕೇಂದ್ರಕ್ಕೆ ಭೇಟಿ ನೀಡಿದ್ದಡಾ.ಎಂ.ಆರ್.ರವಿ ಅವರು, ಓದುವ ಹವ್ಯಾಸ ಉಳ್ಳವರಿಗೆ ಅನುಕೂಲವಾಗುವಂತೆ ಗ್ರಂಥಾಲಯ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಆರೋಗ್ಯ ಇಲಾಖೆ ಗ್ರಂಥಾಲಯದ ಸೌಲಭ್ಯ ಕಲ್ಪಿಸಿದೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಹೆಸರಾಂತ ಕಾದಂಬರಿಕಾರರು, ಕವಿಗಳು, ಸಾಹಿತಿಗಳ ಕೃತಿಗಳು ಕೋವಿಡ್ ಕೇಂದ್ರ ಗ್ರಂಥಾಲಯದಲ್ಲಿದೆ.

ಕುವೆಂಪು, ದ.ರಾ.ಬೇಂದ್ರೆ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಲಂಕೇಶ್ ಸೇರಿದಂತೆ ಹಲವಾರು ಖ್ಯಾತ ಲೇಖಕರ ಪುಸ್ತಕಗಳು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತ ಕೃತಿ, ಮಹಾಪುರುಷರು, ಸಾಧಕರು, ಹೋರಾಟಗಾರರ ಆತ್ಮ ಕಥನಗಳು, ಸಂವಿಧಾನ, ಕರ್ನಾಟಕ ಸಂಸ್ಕೃತಿ, ಶಿಲ್ಪಕಲೆ, ದಾಸ ಸಾಹಿತ್ಯದಂತಹ ಪುಸ್ತಕಗಳು ಗ್ರಂಥಾಲಯದಲ್ಲಿವೆ.

ರೈತರಿಗಾಗಿ ಜಲಸಂರಕ್ಷಣೆ, ಶಾಲಾ ಮಕ್ಕಳಿಗೆ ಸಮನ್ವಿತ, ರಚನಾ ಪುಸ್ತಕಗಳು, ರಂಗಭೂಮಿ, ಆಸಕ್ತರಿಗೆ ರಂಗಭೂಮಿ ಕ್ಷೇತ್ರಕ್ಕೆ ಸಂಬಂಧಿಸಿದ ಕೃತಿಗಳು, ಆರೋಗ್ಯ, ಯೋಗ, ಔಷಧೀಯ ಗುಣಗಳ ಸಸ್ಯಗಳ ಬಗ್ಗೆ ಮಾಹಿತಿ ನೀಡುವ ಪುಸ್ತಕಗಳನ್ನೂ ಗ್ರಂಥಾಲಯದಲ್ಲಿ ಇಡಲಾಗಿದೆ. ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಬರೆದಿರುವ ವ್ಯಕ್ತಿತ್ವ ವಿಕಸನ, ಜೀವನ ಪ್ರೀತಿಯ ಮಹತ್ವ ಕುರಿತ ಕೃತಿಗಳೂ ಲಭ್ಯವಿವೆ.

‘ಕೋವಿಡ್ ಕೇಂದ್ರದಲ್ಲಿ ದಾಖಲಾಗುವವರು ಕಾಲ ಕಳೆಯಲು ಸದಭಿರುಚಿಯ ಪುಸ್ತಕಗಳನ್ನು ಒಳಗೊಂಡ ಗ್ರಂಥಾಲಯ ಪ್ರಾರಂಭಿಸುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಗ್ರಂಥಾಲಯ ಆರಂಭಗೊಂಡಿದ್ದು ಕೋವಿಡ್ ಕೇಂದ್ರದಲ್ಲಿ ಆರೈಕೆಯಲ್ಲಿರುವವರು ಇದನ್ನು ಸದುಪಯೋಪಡಿಸಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT