ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಗತ್ಯ ಸುತ್ತಾಟ: ಬೈಕ್‌, ಕಾರುಗಳ ಜಪ್ತಿ

ದಿಗ್ಬಂಧನ ನಿಯಮ ಪಾಲಿಸದವರ ವಿರುದ್ಧ ಪೊಲೀಸರ ಕ್ರಮ
Last Updated 29 ಮಾರ್ಚ್ 2020, 15:24 IST
ಅಕ್ಷರ ಗಾತ್ರ

ಚಾಮರಾಜನಗರ: ಕೊರೊನಾ ವೈರಸ್‌ ಸೋಂಕು ತಡೆಗೆ ಜಿಲ್ಲೆಯಾದ್ಯಂತ ದಿಗ್ಬಂಧನ ಹೇರಿದ್ದರೂ ನಗರದಲ್ಲಿ ಕಾರಣವಿಲ್ಲದೆ ಸುತ್ತಾಡುತ್ತಿದ್ದವರ ಬೈಕುಗಳು ಹಾಗೂ ಕಾರುಗಳನ್ನು ಪೊಲೀಸರು ಭಾನುವಾರ ಜಪ್ತಿ ಮಾಡಿದ್ದಾರೆ.

ಡಿವೈಎಸ್‌ಪಿ ಜೆ.ಮೋಹನ್‌ ನೇತೃತ್ವದ ಪೊಲೀಸರ ತಂಡ ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಕಾರ್ಯಾಚರಣೆ ನಡೆಸಿ 25 ದ್ವಿಚಕ್ರ ವಾಹನಗಳು ಹಾಗೂ 20ಕ್ಕೂ ಹೆಚ್ಚು ಕಾರುಗಳನ್ನು ವಶಕ್ಕೆ ತೆಗೆದುಕೊಂಡಿತು.

‘ಸಣ್ಣ‌ಪುಟ್ಟ ಕಾರಣಗಳನ್ನು ಹೇಳುತ್ತಾ ಹಲವು ಜನರು ಅನಗತ್ಯವಾಗಿ ನಿರ್ಬಂಧದ ನಡುವೆಯೂ ಸುತ್ತಾಡುತ್ತಿದ್ದಾರೆ. ತಡೆದು ವಿಚಾರಣೆ ಮಾಡಿದಾಗ ಏನೇನೋ ಹೇಳುತ್ತಾರೆ. ಈ ಕಾರಣಕ್ಕಾಗಿ ಬೈಕ್, ಕಾರುಗಳನ್ನು ವಶಕ್ಕೆ ಪಡೆದಿದ್ದೇವೆ. ವಿನಾ ಕಾರಣ ಯಾರೂ ರಸ್ತೆಯಲ್ಲಿ ಓಡಾಡಬಾರದು ಎಂಬುದು ನಮ್ಮ ಕಾಳಜಿ. ಅವಶ್ಯಕ ವಸ್ತುಗಳ ಖರೀದಿಗೆ ಬಂದವರನ್ನು ವಿಚಾರಿಸಿ ಬಿಡಲಾಗುತ್ತಿದೆ’ ಎಂದು ಡಿವೈಎಸ್‌ಪಿ ಮೋಹನ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಳಿಗ್ಗೆಯಿಂದ ಕಾರ್ಯಾಚರಣೆ ನಡೆಸಿದ್ದೇವೆ. ವಾಹನಗಳ ದಾಖಲೆಗಳನ್ನು ಪರಿಶೀಲಿಸಿ ನಂತರ ಅವರಿಗೆ ನೀಡುತ್ತೇವೆ. ಹೀಗಿದ್ದರೂ ಜನರು ಅನಗತ್ಯವಾಗಿ ಓಡಾಡಿದರೆ, ವಾಹನಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಲು ಚಿಂತಿಸುತ್ತಿದ್ದೇವೆ’ ಎಂದು ಅವರು ಹೇಳಿದರು.

ಮಂಡಿಯೂರಿಸಿ ಪಾಠ: ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಅವರು ಶನಿವಾರ ರಾತ್ರಿ ನಗರದಲ್ಲಿ ದ್ವಿಚಕ್ರವಾಹನಗಳಲ್ಲಿ ಸುತ್ತಾಡುತ್ತಿದ್ದ ಹಲವರನ್ನು ಭುವನೇಶ್ವರಿ ವೃತ್ತದಲ್ಲಿ ವೃತ್ತಾಕಾರವಾಗಿ ಮಂಡಿಯೂರಿ ಕುಳಿತುಕೊಳ್ಳುವಂತೆ ಮಾಡಿ, ಗಿಗ್ಬಂಧನದ ಸಂದರ್ಭದಲ್ಲಿ ಸರ್ಕಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪಾಠ ಮಾಡಿದ್ದಾರೆ. ಇನ್ನು ಮುಂದೆ ಅನಗತ್ಯವಾಗಿ ಓಡಾಡುವುದಿಲ್ಲ ಎಂದು ಅವರಿಂದ ಪ್ರತಿಜ್ಞೆಯನ್ನೂ ಮಾಡಿಸಿಕೊಂಡಿದ್ದಾರೆ.

ನಂತರ ನಗರದ ಪ್ರಮುಖ ಬೀದಿಯಲ್ಲಿ ಸಂಚಾರ ನಡೆಸಿದ ಜಿಲ್ಲಾಧಿಕಾರಿ ಅವರು, ಕೊರೊನಾ ವೈರಸ್‌ ಹರಡುವಿಕೆ ತಡೆಗಟ್ಟಲು ಹೇರಲಾಗಿರುವ ದಿಗ್ಬಂಧನವನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT