ಚಾಮರಾಜನಗರ: ಮುಂಬರುವ ಲೋಕಸಭಾ ಚುನಾವಣೆಗೆ ಏಳೆಂಟು ತಿಂಗಳು ಇರುವಂತೆಯೇ ರಾಜಕೀಯ ಪಕ್ಷಗಳ ಮುಖಂಡರಲ್ಲಿ ಲೆಕ್ಕಾಚಾರ ಆರಂಭವಾಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿರುವವರು ಟಿಕೆಟ್‌ಗಾಗಿ ಲಾಬಿ ಮಾಡುವುದಕ್ಕೆ ಆರಂಭಿಸಿದ್ದಾರೆ.
ಪಕ್ಷಗಳ ಮುಖಂಡರನ್ನು ಭೇಟಿ ಮಾಡುವುದು, ತಮ್ಮ ಅಭಿಮಾನಿಗಳ ಮೂಲಕ ಹೇಳಿಸುವುದು, ಸಂಸ್ಥೆಗಳ ಮೂಲಕ ಸೇವಾ ಕಾರ್ಯ ಹಮ್ಮಿಕೊಳ್ಳುವುದು, ಮಾಧ್ಯಮಗಳ ಮುಂದೆ ಬಹಿರಂಗವಾಗಿ ಆಕಾಂಕ್ಷಿಗಳು ಎಂದು ಹೇಳಿಕೊಳ್ಳುವುದನ್ನು ಶುರು ಮಾಡಿಕೊಂಡಿದ್ದಾರೆ.
ಮೀಸಲು ಕ್ಷೇತ್ರವಾದ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಿಲ್ಲೆಯ ನಾಲ್ಕು ಹಾಗೂ ಮೈಸೂರು ಗ್ರಾಮಾಂತರ ಭಾಗದ ನಾಲ್ಕು ಸೇರಿದಂತೆ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಪ್ರಮುಖ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ವಿವಿಧ ರೀತಿಯಲ್ಲಿ ಪಕ್ಷದ ಮುಖಂಡರಿಗೆ ತಮ್ಮ ಬಯಕೆಯ ಬಗ್ಗೆ ಸಂದೇಶ ರವಾನಿಸುತ್ತಿದ್ದಾರೆ.
ಬಿಜೆಪಿಯಲ್ಲಿ ಕೆಲವರು ಈಗಾಗಲೇ ಮಾಧ್ಯಮಗಳ ಮೂಲಕ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಬಹಿರಂಗವಾಗಿ ಯಾರೂ ಹೇಳಿಕೊಂಡಿಲ್ಲ. ಆದರೆ, ಪಕ್ಷದಲ್ಲಿ ಆಂತರಿಕವಾಗಿ ಹಲವರ ಹೆಸರುಗಳು ಓಡಾಡುತ್ತಿವೆ.
ಕಾಂಗ್ರೆಸ್‌ನಲ್ಲಿ ದೊಡ್ಡ ಪಟ್ಟಿ: ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ. ಆಕಾಂಕ್ಷಿಗಳಲ್ಲದೆ ಪಕ್ಷದ ಒಳಗಡೆ ಇತರೆ ಕೆಲವು ಮುಖಂಡರ ಹೆಸರೂ ಕೇಳಿಬರುತ್ತಿದೆ.
ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬಂದಿದ್ದ ಕೊಳ್ಳೇಗಾಲದ ಜಿ.ಎನ್.ನಂಜುಂಡಸ್ವಾಮಿ, ಈ ಹಿಂದೆ ಸಂಸದರಾಗಿದ್ದ ಕಾಗಲವಾಡಿ ಶಿವಣ್ಣ, ಸಿದ್ದರಾಜು, ಸಚಿವ ಎಚ್.ಸಿ.ಮಹದೇವಪ್ಪ ಅವರ ಮಗ ಸುನಿಲ್ ಬೋಸ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್, ಮೈಸೂರಿನ ಉದ್ಯಮಿ ಪ್ರಮೋದ್, ಚಾಮರಾಜನಗರದ ಮುಖಂಡ ಎಸ್.ನಂಜುಂಡಸ್ವಾಮಿ ಅವರ ಕುಟುಂಬದ ಸದಸ್ಯರೊಬ್ಬರು (ಮಗಳು ಡಾ.ರೇಣುಕಾದೇವಿ ಅಥವಾ ಮಗ ಮಹೇಶ್ ಕುದರ್) ಅವರು ಆಕಾಂಕ್ಷಿಗಳಾಗಿದ್ದಾರೆ. ಇವರಲ್ಲದೆ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಹಾಗೂ ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ ಅವರ ಹೆಸರೂ ಕೇಳಿ ಬರುತ್ತಿದೆ.
‘ಸಚಿವ ಎಚ್.ಸಿ.ಮಹದೇವಪ್ಪ ಅವರಿಗೆ ಲೋಕಸಭೆಗೆ ಸ್ಪರ್ಧಿಸುವುದು ಇಷ್ಟ ಇಲ್ಲ. ಅವರ ಮಗನಿಗೆ ಟಿಕೆಟ್ ಕೊಡಿಸಬೇಕು ಎಂಬುದು ಅವರ ಆಶಯ. ಆದರೆ, ಹೈಕಮಾಂಡ್, ನಿಲ್ಲಬೇಕು ಎಂದು ಸೂಚಿಸಿದರೆ ಅವರು ಸ್ಪರ್ಧಿಸಲೇ ಬೇಕಾಗುತ್ತದೆ’ ಎಂದು ಹೇಳುತ್ತಾರೆ ಮುಖಂಡರು.
‘ದಿವಂಗತ ಧ್ರುವನಾರಾಯಣ ಅವರಿಗೆ ಕ್ಷೇತ್ರದಲ್ಲಿ ಉತ್ತಮ ಹೆಸರು ಇರುವುದರಿಂದ ಅವರ ಮಗ ದರ್ಶನ್‌ಗೆ ಟಿಕೆಟ್ ನೀಡಬೇಕು ಎಂಬ ಸಲಹೆಯನ್ನು ಕೆಲವು ಮುಖಂಡರು ನೀಡಿದ್ದಾರೆ. ಆದರೆ, ಧ್ರುವನಾರಾಯಣ ಅಭಿಮಾನಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸ್ಪರ್ಧಿಸಲು ಒಪ್ಪುವುದು ಬೇಡ ಎಂದು ದರ್ಶನ್ ಮೇಲೆ ಒತ್ತಡ ಹಾಕುತ್ತಿದ್ದಾರೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಬಿಜೆಪಿಯಲ್ಲಿ ಆರು ಹೆಸರುಗಳು: ಹಾಲಿ ಸಂಸದರಾದ ಬಿಜೆಪಿಯ ಶ್ರೀನಿವಾಸ ಪ್ರಸಾದ್ ಅವರು ಮುಂದಿನ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿರುವುದರಿಂದ ಕಮಲ ಪಾಳಯದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ.
ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ, ಹಿರಿಯ ನಾಯಕ ಕೋಟೆ ಎಂ.ಶಿವಣ್ಣ, ಕೊಳ್ಳೇಗಾಲದ ಎನ್.ಮಹೇಶ್, ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಿದ್ದ ಎಸ್.ಬಾಲರಾಜ್, ತಿ.ನರಸೀಪುರದ ಪುರಸಭಾ ಸದಸ್ಯ ಅರ್ಜುನ್ ರಮೇಶ್, ಸಂಸದ ಶ್ರೀನಿವಾಸ ಪ್ರಸಾದ್ ಅಳಿಯ, ವೃತ್ತಿಯಲ್ಲಿ ವೈದ್ಯರಾಗಿರುವ ಎನ್.ಎಸ್.ಮೋಹನ್ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ.
ಕೋಟೆ ಎಂ.ಶಿವಣ್ಣ ಅವರು ಇತ್ತೀಚೆ್ಗೆ ಗುಂಡ್ಲುಪೇಟೆಯಲ್ಲಿ ಬಹಿರಂಗವಾಗಿ ತಾವು ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ. ಯುವ ಮುಖಂಡ ಅರ್ಜುನ್ ರಮೇಶ್ ಪತ್ರಿಕಾಗೋಷ್ಠಿ ಮೂಲಕ ತಮ್ಮನ್ನೂ ಟಿಕೆಟ್‌ಗೆ ಪರಿಗಣಿಸಬೇಕು ಎಂದು ಹೇಳಿದ್ದಾರೆ.
ಕೆ.ಶಿವರಾಂ ಅವರು ಈ ಹಿಂದಿನ ಚುನಾವಣೆಗಳಲ್ಲೂ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈಗ ಮತ್ತೆ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಎಸ್.ಎಸ್.ಮೋಹನ್ ಅವರ ಹೆಸರು ಹಿಂದೆಯೂ ಕೇಳಿ ಬಂದಿತ್ತು. ಅವರ ಸ್ನೇಹಬಳಗವು ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಆರಂಭಿಸಿದೆ. ಕೊಳ್ಳೇಗಾಲದ ಶಾಸಕರಾಗಿದ್ದ ಎನ್.ಮಹೇಶ್ ಚುನಾವಣೆ ಸ್ಪರ್ಧಿಸುವ ಬಗ್ಗೆ ಬಹಿರಂಗವಾಗಿ ಆಸಕ್ತಿ ತೋರಿಸಿಲ್ಲ. ಆದರೆ, ಅವರ ಹೆಸರು ಪಕ್ಷದಲ್ಲಿ ಚರ್ಚೆಯಾಗುತ್ತಿದೆ.
ಮುಂದಿನ ದಿನಗಳಲ್ಲಿ ಆಕಾಂಕ್ಷಿಗಳ ಪಟ್ಟಿಗೆ ಇನ್ನಷ್ಟು ಹೆಸರುಗಳು ಸೇರ್ಪಡೆಯಾಗಲಿವೆ ಎಂದು ಹೇಳುತ್ತಾರೆ ಎರಡೂ ಪಕ್ಷಗಳ ಮುಖಂಡರು.
Cut-off box - ‘ವರಿಷ್ಠರು ತೀರ್ಮಾನಿಸುತ್ತಾರೆ’ ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜಿ.ನಾರಾಯಣ ಪ್ರಸಾದ್ ‘ಪಕ್ಷದ ಟಿಕೆಟ್ ಸಿಗಬೇಕು ಎಂದು ಮುಖಂಡರು ಬಯಸುವುದು ತಪ್ಪಲ್ಲ. ಕೆಲವರು ತಾವು ಆಕಾಂಕ್ಷಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಹಲವು ಜನರ ಹೆಸರು ಪಕ್ಷದಲ್ಲಿ ಚರ್ಚೆಯಾಗುತ್ತಿರುವುದು ನಿಜ. ಆದರೆ ಅಭ್ಯರ್ಥಿ ಆಯ್ಕೆಗೆ ಪಕ್ಷದಲ್ಲಿ ಒಂದು ವ್ಯವಸ್ಥೆ ಇದೆ. ಸಂಸದೀಯ ಮಂಡಳಿ ಈ ಬಗ್ಗೆ ತೀರ್ಮಾನಿಸುತ್ತದೆ. ಅಂತಿಮವಾಗಿ ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕಾಗುತ್ತದೆ’ ಎಂದು ಹೇಳಿದರು.
Cut-off box - ‘ಪಕ್ಷದ ನಿರ್ಧಾರಕ್ಕೆ ಬಿಟ್ಟಿದ್ದು’ ‘ಟಿಕೆಟ್ ಆಕಾಂಕ್ಷಿಗಳಾಗುವುದು ತಪ್ಪಲ್ಲ. ಚುನಾವಣೆಗೆ ಇನ್ನೂ ಸಮಯವಿದೆ. ಹಲವು ಮುಖಂಡರ ಹೆಸರು ಕೇಳಿ ಬರುತ್ತಿರುವುದು ನಿಜ. ಅಭ್ಯರ್ಥಿಗಳು ಯಾರಾಗಬೇಕು ಎಂಬುದನ್ನು ಪಕ್ಷ ತೀರ್ಮಾನಿಸುದ್ದರೆ. ಹೈಕಮಾಂಡ್ ಆಯ್ಕೆ ಮಾಡುವ ಅಭ್ಯರ್ಥಿಯ ಗೆಲುವಿಗೆ ನಾವೆಲ್ಲರೂ ಶ್ರಮ ವಹಿಸುತ್ತೇವೆ’ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.