ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ: ಮಾದಪ್ಪನ ಪ್ರತಿಮೆ ನಿರ್ಮಾಣಕ್ಕಿದ್ದ ತಡೆ ನಿವಾರಣೆ

ಒಂದು ಎಕರೆ ಖಾಸಗಿ ಜಮೀನು ಖರೀದಿ, ಪ್ರಾಧಿಕಾರದ ಹೆಸರಿಗೆ ಕ್ರಯಪತ್ರ
Last Updated 12 ಫೆಬ್ರುವರಿ 2020, 9:41 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನ ಸುಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದಲ್ಲಿ ದೀಪದಗಿರಿ ಒಡ್ಡುವಿನಲ್ಲಿ ಮಹದೇಶ್ವರ ಸ್ವಾಮಿಯ 100 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಕಾಮಗಾರಿ ಆರಂಭಕ್ಕೆ ಎದುರಾಗಿದ್ದ ತಡೆ ಕೊನೆಗೂ ನಿವಾರಣೆಯಾಗಿದೆ.

ಯೋಜನೆಗಾಗಿ ಈಗಾಗಲೇ ಮಂಜೂರಾಗಿದ್ದ 19 ಎಕರೆ ಜಮೀನಿನ ಜೊತೆಗೆ, ಕಾಮಗಾರಿ ಆರಂಭಿಸಲು ಅಗತ್ಯವಾಗಿದ್ದ ಹಾಗೂ ಖಾಸಗಿಯವರ ಬಳಿ ಇದ್ದ ಒಂದು ಎಕರೆ ಜಮೀನನ್ನು ಖರೀದಿಸಲು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಯಶಸ್ವಿಯಾಗಿದೆ.

ಖಾಸಗಿ ಜಮೀನಿನ ಮಾಲೀಕ ಸಿದ್ದಶೆಟ್ಟಿ ಹಾಗೂ ಕುಟುಂಬದೊಂದಿಗೆ ಜಿಲ್ಲಾಡಳಿತ ಮತ್ತು ಪ್ರಾಧಿಕಾರಗಳು ಎರಡು ತಿಂಗಳುಗಳಿಂದ ನಡೆಸುತ್ತಾ ಬಂದಿದ್ದ ಸಂಧಾನ ಯಶಸ್ವಿಯಾಗಿದ್ದು, ಮಾಲೀಕರು ಸೋಮವಾರ ಪ್ರಾಧಿಕಾರದ ಹೆಸರಿಗೆ ಜಮೀನಿನ ಕ್ರಯಪತ್ರ ಮಾಡಿಕೊಟ್ಟಿದ್ದಾರೆ.

₹20 ಕೋಟಿ ಯೋಜನೆ: ಮಹದೇಶ್ವರ ಸ್ವಾಮಿಯು ಹುಲಿ ಮೇಲೆ ಕುಳಿತ ಭಂಗಿಯ 100 ಅಡಿ ಎತ್ತರದ ಪ್ರತಿಮೆಯನ್ನು ₹20 ಕೋಟಿ ವೆಚ್ಚದಲ್ಲಿ ನಿರ್ಮಿಸಲು 2017ರಲ್ಲಿ ಯೋಜನೆ ರೂಪಿಸಲಾಗಿತ್ತು. ನಂತರ ಕಾಮಗಾರಿ ನನೆಗುದಿಗೆ ಬಿದ್ದಿತ್ತು.

ಜಿಲ್ಲಾಡಳಿತ ಯೋಜನೆಗಾಗಿ 19 ಎಕರೆ ಜಮೀನು ಮಂಜೂರು ಮಾಡಿತ್ತು. ಈ ಜಮೀನಿನ ಮಧ್ಯದಲ್ಲಿ ಒಂದು ಎಕರೆ ಖಾಸಗಿ ಜಮೀನು ಇತ್ತು. ಮಾಲೀಕರು ಮಾರಾಟಕ್ಕೆ ಒಪ್ಪಿರಲಿಲ್ಲ. ಇದರಿಂದ ಕೆಲಸ ಆರಂಭವಾಗಿರಲಿಲ್ಲ.

ಹಿಂದಿನ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಯೋಜನೆ ಅನುಷ್ಠಾನಕ್ಕೆ ವಿಶೇಷ ಮುತುವರ್ಜಿ ವಹಿಸಿದ್ದರು. ಮಾಲೀಕರ ಮನವೊಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು. ಜಮೀನು ಅಳೆದು, ಖಾತೆ ದುರಸ್ತಿ ಮಾಡಿ ಅಂತಿಮವಾಗಿ ಜಮೀನನ್ನು ಖರೀದಿಸಲು ಪ್ರಾಧಿಕಾರ ಯಶಸ್ವಿಯಾಗಿದೆ.

‘ತಕ್ಷಣದಿಂದಲೇ ಲೋಕೋಪಯೋಗಿ ಇಲಾಖೆಯು ಕಾಮಗಾರಿ ಆರಂಭಿಸಲಿದ್ದು, ಶೀಘ್ರದಲ್ಲಿ ಪ್ರತಿಮೆ ನಿರ್ಮಾಣ ಕಾರ್ಯ ಮುಗಿಯಲಿದೆ’ ಎಂಬ ವಿಶ್ವಾಸವನ್ನು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಪ್ರತಿಮೆ ನಿರ್ಮಾಣ ಆಗುತ್ತಿರುವ ಸ್ಥಳದ ಸುತ್ತಮುತ್ತಲ ಪ್ರದೇಶ ಅಭಿವೃದ್ಧಿಗೆ 40 ಎಕರೆ ಜಮೀನು ಬೇಕು. ಸದ್ಯ 20 ಎಕರೆ ಪ್ರಾಧಿಕಾರದ ಸ್ವಾಧೀನದಲ್ಲಿದ್ದು, ಮುಂದಿನ ದಿನಗಳಲ್ಲಿ ಹಂತಹಂತವಾಗಿ ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಗುವುದು’ ಎಂದು ಅವರು ಹೇಳಿದ್ದಾರೆ.

ಹೇಗಿರಲಿದೆ ಪ್ರತಿಮೆ?
ಕಲ್ಲನ್ನು ಹೋಲುವ ಬೃಹತ್‌ ಪೀಠದಲ್ಲಿ ನಿಂತಿರುವ ಹುಲಿಯ ಮೇಳೆ ತ್ರಿಶೂಲ ಹಿಡಿದಿರುವ ಮಹದೇಶ್ವರ ಸ್ವಾಮಿ ಕುಳಿತಿರುವ ಭಂಗಿಯಲ್ಲಿ ಪ್ರತಿಮೆಯನ್ನು ನಿರ್ಮಿಸಲು ನೀಲ ನಕ್ಷೆ ಸಿದ್ಧಪಡಿಸಲಾಗಿದೆ.

ಪೀಠವು 40x18 ಮೀಟರ್‌ ಅಗಲ ಹಾಘೂ 6 ಮೀಟರ್‌ ಎತ್ತರವಿರಲಿದೆ. ಇದರ ಒಳಾಂಗಣ ಮ್ಯೂಸಿಯಂ ರೀತಿ ಇರಲಿದೆ. ಮಹದೇಶ್ವರರ ಚರಿತ್ರೆಯನ್ನು ಬಿಂಬಿಸುವ ಕಲಾಕೃತಿಗಳು ಇಲ್ಲಿರಲಿವೆ.

20x10 ಮೀ ಅಗಲದ, 20 ಮೀಟರ್‌ ಎತ್ತರಕ್ಕೆ ಹುಲಿ ಮೇಲೆ ಕುಳಿತಿರುವ ಪ್ರತಿಮೆ ನಿರ್ಮಾಣವಾಗಲಿದೆ.

ಕಬ್ಬಿಣ, ಕಾಂಕ್ರೀಟ್‌ನಿಂದ ಪ್ರತಿಮೆಯನ್ನು ನಿರ್ಮಿಸಲಾಗುತ್ತಿದ್ದು, ಲೋಕೋಪಯೋಗಿ ಇಲಾಖೆಯ ಮೇಲ್ವಿಚಾರಣೆಯಲ್ಲಿ, ಮುರ್ಡೇಶ್ವರದಲ್ಲಿ ಶಿವನ ವಿಗ್ರಹ ಹಾಗೂ ಬೀದರ್‌ನ ಬಸವಕಲ್ಯಾಣದಲ್ಲಿ ಬಸವಣ್ಣನ ವಿಗ್ರಹ ಮಾಡಿದವರು ಮಾದಪ್ಪನ ಪ್ರತಿಮೆಯನ್ನು ನಿರ್ಮಿಸುತ್ತಿದ್ದು, ಈಗಾಗಲೇ ಕಾರ್ಯಾದೇಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT