ಶನಿವಾರ, ಮೇ 21, 2022
28 °C
ಕೊಳ್ಳೇಗಾಲದ ಶಂಕನಪುರದ ಕವಿಯ ಮುಕುಟಕ್ಕೆ ರಾಜ್ಯೋತ್ಸವ ಪ್ರಶಸ್ತಿ ಗರಿ

ದಲಿತ ಕಾವ್ಯ, ಜಾನಪದ ಸಂಶೋಧನೆಯ ‘ಮಹಾದೇವ’ಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕವಿಯಾಗಿ, ಜಾನಪದ ಕ್ಷೇತ್ರದಲ್ಲಿ ಸಂಶೋಧಕರಾಗಿ ಗುರುತಿಸಿಕೊಂಡಿರುವ ಕೊಳ್ಳೇಗಾಲದ ಮಹಾದೇವ ಶಂಕನಪುರ ಅವರು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ (ಸಾಹಿತ್ಯ ವಿಭಾಗ) ಭಾಜನರಾಗಿದ್ದಾರೆ.  

ಜಿಲ್ಲೆಯ ಮಹಾನ್‌ ಕಾವ್ಯಪರಂಪರೆಗಳಾದ ಮಹದೇಶ್ವರ ಕಾವ್ಯ, ಮಂಟೇಸ್ವಾಮಿ ಕಾವ್ಯ, ಬಿಳಿಗಿರಿರಂಗನ ಕಾವ್ಯಗಳು ಹಾಗೂ ಜಿಲ್ಲೆಯ ಜಾನಪದ ಕಲೆಯ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿರುವ ಶಂಕನಪುರ ಅವರು, ಜಿಲ್ಲೆಯ ಹಲವಾರು ಜಾನಪದ ಕಲಾವಿದರನ್ನು ತಮ್ಮ ಲೇಖನಗಳು, ಕೃತಿಯ ಮೂಲಕ ರಾಜ್ಯದ ಜನರಿಗೆ ಪರಿಚಯಿಸಿರುವ ಕೀರ್ತಿಯನ್ನೂ ಪಡೆದಿದ್ದಾರೆ. ಕನ್ನಡ ದಲಿತ ಕಾವ್ಯ ಪರಂಪರೆಯ ಕೊಂಡಿ ಎಂಬ ಹೆಗ್ಗಳಿಕೆಯೂ ಅವರಿಗಿದೆ. 

ಇತ್ತೀಚೆಗಷ್ಟೇ ಇತಿಹಾಸ ಸಹಾಯಕ ಪ್ರಾಧ್ಯಾಪಕ ಹುದ್ದೆಯಿಂದ ನಿವೃತ್ತಿಯಾಗಿರುವ 60 ವರ್ಷದ ಎಸ್‌.ಮಹಾದೇವ ಅವರು ಕೊಳ್ಳೇಗಾಲದ ಶಂಕನಪುರ ಗ್ರಾಮದವರು. ಸಾಹಿತ್ಯ ವಲಯದಲ್ಲಿ ಮಹಾದೇವ ಶಂಕನಪುರ ಎಂದೇ ಖ್ಯಾತಿ.

ಜಾನಪದ ಅಧ್ಯಯನ ಮತ್ತು ಸಂಶೋಧನೆಗೆ ಸಂಬಂಧಿಸಿದ, 2001ರಲ್ಲಿ ಪ್ರಕಟವಾದ ಮಾರಿಹಬ್ಬಗಳು ಅವರ ಮೊದಲ ಕೃತಿ. ಮಂಟೇಸ್ವಾಮಿ ಮೂಮೆಂಟ್‌: ಚಿಕ್ಕಲ್ಲೂರು ಜಾತ್ರೆ (ಜಾನಪದ ಅಧ್ಯಯನ ಮತ್ತು ಸಂಶೋಧನೆ), ನಾಲಿಗೆ ಮೇಲಿನ ಚರಿತೆ (ಲೇಖನಗಳ ಸಂಗ್ರಹ), ಚಾಮರಾಜನಗರ ಜಿಲ್ಲೆಯ ಜಾನಪದ ಕಲಾವಿದರು, ಉರಿಗದ್ದಿಗೆ ಮೇಲೆ ಬೋಳು ಜಂಗಮನ ತಂಬೂರಿ ಪದ, ಮಂಟೇಸ್ವಾಮಿ (ಜಾನಪದ ಅಧ್ಯಯನ ಮತ್ತು ಸಂಶೋಧನೆ), ಮಲೆಯ ಮಾದಯ್ಯನ ಸಾಂಸ್ಕೃತಿಕ ಚರಿತ್ರೆ, ಮಂಟೇಸ್ವಾಮಿ ಮೌಖಿಕ ಚರಿತ್ರೆ ಅವರ ಪ್ರಮುಖ ಕೃತಿಗಳು.

ಮಾರಿಹಬ್ಬಗಳು ಕೃತಿಗೆ 2002ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪುಸ್ತಕ ಪ್ರಶಸ್ತಿ, 2002ರಲ್ಲಿ ಮೈಸೂರು ವಿವಿಯ ತೀನಂಶ್ರೀ ಪ್ರಶಸ್ತಿ, 2009ರಲ್ಲಿ ನಾಲಿಗೆ ಮೇಲಿನ ಚರಿತ್ರೆಗೆ ಕರ್ನಾಟಕ ದಲಿತ ಸಾಹಿತ್ಯ ಪರಿಷತ್ತು ಪುಸ್ತಕ ಪ್ರಶಸ್ತಿ,  2011ರಲ್ಲಿ ಕಾವ್ಯ ಉರಿಗದ್ದಿಗೆಗೆ ಕರ್ನಾಟಕ ದಲಿತ ಸಾಹಿತ್ಯ ಪರಿಷತ್ತು ಪುಸ್ತಕ ಪ್ರಶಸ್ತಿ, ಮಂಟೇಸ್ವಾಮಿ ಪ್ರತಿಷ್ಠಾನ ಪ್ರಶಸ್ತಿ, ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿ, ‘ಪ್ರಜಾವಾಣಿ’ ದೀಪಾವಳಿ ವಿಶೇಷ ಕಥಾ ಸ್ಪರ್ಧೆಗಳ ಕಾವ್ಯ ವಿಭಾಗದಲ್ಲಿ 2006, 2007 ಮತ್ತು 2009ರಲ್ಲಿ ಪ್ರಥಮ ಬಹುಮಾನ ಇವರ ಮುಡಿಗೇರಿವೆ.

ಮೌಖಿಕ ಪರಂಪರೆಗೆ ಅರ್ಪಣೆ: ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡ ಮಹಾದೇವ ಶಂಕನಪುರ ಅವರು, ‘ಸಾಹಿತ್ಯ ಮತ್ತು ಜಾನಪದ ಕ್ಷೇತ್ರದಲ್ಲಿ ನಾನು ಮಾಡಿರುವ ಕೆಲಸವನ್ನು ಸರ್ಕಾರ ಗುರುತಿಸಿರುವುದಕ್ಕೆ ಸಂತಸವಾಗಿದೆ. ಆದರೆ, ಪುನೀತ್‌ ರಾಜ್‌ಕುಮಾರ್‌ ಅವರ ನಿಧನದಿಂದ ಕನ್ನಡ ನಾಡು ದುಃಖತಪ್ತವಾಗಿರುವಾಗ ಪ್ರಶಸ್ತಿ ಬಂದಿರುವುದನ್ನು ಹೇಗೆ ಸಂಭ್ರಮಿಸುವುದು? ಸೂತಕದ ನಡುವೆಯೇ ಪ್ರಶಸ್ತಿ ಪಡೆಯಬೇಕಾಗಿದೆ’ ಎಂದರು. 

‘ಜಿಲ್ಲೆಯ ಮಹಾಕಾವ್ಯಗಳು ಹಾಗೂ ಮೌಖಿಕ ಚರಿತ್ರೆಯ ವಕ್ತಾರರ ಪರಂಪರೆಗೆ ಸಂದ ಗೌರವ ಇದು. ನನ್ನ ಊರು, ನನ್ನ ಜಿಲ್ಲೆ, ಹಾಗೂ ಜಿಲ್ಲೆಯ ಜಾನಪದ ಕಾವ್ಯ ಪರಂಪರೆಗೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ’ ಎಂದು ಅವರು ಹೇಳಿದರು. 

‘ಇದುವರೆಗೂ ನಾನು ಅಲಕ್ಷಿತನಾಗಿದ್ದೆ. ಈ ಬಾರಿ ಅರ್ಜಿ ಹಾಕದೆ, ಸಾರ್ವಜನಿಕರು ಮಾಡಿರುವ ಶಿಫಾರಸಿನ ಆಧಾರದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆ ಖುಷಿಯಂತು ಇದೆ. ನನ್ನನ್ನು ಪ್ರಶಸ್ತಿಗೆ ಶಿಫಾರಸು ಮಾಡಿದ ನನ್ನ ಹಿತೈಷಿಗಳೂ, ಸ್ನೇಹಿತರು, ವಿದ್ಯಾರ್ಥಿಗಳು ಹಾಗೂ ಕ್ಷೇತ್ರದ ಶಾಸಕ ಎನ್‌.ಮಹೇಶ್‌ ಅವರಿಗೆ ನಾನು ಸದಾ ಕೃತಜ್ಞ’ ಎಂದು ಮಹಾದೇವ ಶಂಕನಪುರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಸಾಹಿತಿಯಾಗಿ ಬೆಳೆಯಲು ‘ಪ್ರಜಾವಾಣಿ’ ಕಾರಣ

ಪ್ರಶಸ್ತಿಗೆ ಆಯ್ಕೆಯಾದ ಸಂದರ್ಭದಲ್ಲಿ ‘ಪ್ರಜಾವಾಣಿ’ಯನ್ನು ತುಂಬಾ ನೆನೆಸಿಕೊಳ್ಳುವುದಾಗಿ ಮಹಾದೇವ ಅವರು ಹೇಳಿದರು.

‘ನನ್ನ ಸಾಹಿತ್ಯದ ಬೆಳವಣಿಗೆಗೆ ಮೆಟ್ಟಿಲಾಗಿದ್ದೇ ‘ಪ್ರಜಾವಾಣಿ’. ದೀಪಾವಳಿ ವಿಶೇಷಾಂಕಕ್ಕಾಗಿ ಪ್ರತಿವರ್ಷ ನಡೆಸುವ ಕಥಾ, ಕಾವ್ಯ ಸ್ಪರ್ಧೆಯಲ್ಲಿ 2006ರಲ್ಲಿ ನನಗೆ ಕಾವ್ಯ ವಿಭಾಗದಲ್ಲಿ ಮೊದಲ ಬಹುಮಾನ ಬಂತು. 2007ರಲ್ಲಿ ಮತ್ತೆ ನನ್ನ ಕವಿತೆಗೆ ಮೊದಲ ಬಹುಮಾನ ಬಂತು. 2009ರಲ್ಲಿ ಮತ್ತೆ ನಾನೇ ಮೊದಲ ಬಹುಮಾನ ಪಡೆದೆ. ‘ಪ್ರಜಾವಾಣಿ’ಯ ಸಾಪ್ತಾಹಿಕ ಪುರವಣಿ, ಸಾಹಿತ್ಯ ಪುರವಣಿಗಳಲ್ಲೂ ನನ್ನ ಲೇಖನಗಳು ಪ್ರಕಟವಾದವು. ಸಾಹಿತ್ಯದಲ್ಲಿ ನನ್ನ ಬೆಳವಣಿಗೆಗೆ ಪ್ರಮುಖ ಕಾರಣವಾದ ಪತ್ರಿಕೆಯನ್ನು ಮರೆಯಲು ಸಾಧ್ಯವಿಲ್ಲ’ ಎಂದು ಅವರು ಹೆಮ್ಮೆಯಿಂದ ಹೇಳಿದರು. 

‘ಸಾಹಿತ್ಯ, ಜಾನಪದ ಕ್ಷೇತ್ರದಲ್ಲಿ ಕೃಷಿ ಮುಂದುವರೆಸುವೆ. ನನ್ನ ಆತ್ಮ ಚರಿತೆ ಬರೆಯುತ್ತೇನೆ. ಅಲಕ್ಷಿತ ಸಮುದಾಯ, ಸಂಸ್ಕೃತಿಯ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಿದ್ದೇನೆ. ಶೀಘ್ರದಲ್ಲಿ ಕಥಾ ಸಂಕಲನ ಹೊರತರುತ್ತೇನೆ. ಹೊಸ ಕವನ ಸಂಕಲನ ತರುವ ಸಿದ್ಧತೆಯಲ್ಲಿದ್ದೇನೆ’ ಎಂದು ಅವರು ತಮ್ಮ ಭವಿಷ್ಯದ ಯೋಜನೆಗಳನ್ನು ಮಹಾದೇವ ಅವರು ವಿವರಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು