ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ವಿವಿ ಕನ್ನಡ ಎಂ.ಎ: ಮಹದೇವಸ್ವಾಮಿಗೆ 14 ಚಿನ್ನದ ಪದಕಗಳ ಹಾರ

ಸತತ ಆರನೇ ವರ್ಷವೂ ಸ್ನಾತಕೋತ್ತರ ಕೇಂದ್ರಕ್ಕೆ ಪ್ರಥಮ ಸ್ಥಾನ
Last Updated 15 ಮಾರ್ಚ್ 2022, 3:01 IST
ಅಕ್ಷರ ಗಾತ್ರ

ಚಾಮರಾಜನಗರ:ಮೈಸೂರು ವಿಶ್ವವಿದ್ಯಾಲಯದ ಕಳೆದ ಶೈಕ್ಷಣಿಕ ಸಾಲಿನ ಎಂ.ಎ ಕನ್ನಡ ಕೋರ್ಸ್‌ನಲ್ಲಿ ನಗರದ ಹೊರವಲಯದಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿ ಪಿ.ಮಹದೇವಸ್ವಾಮಿ ಅವರು 14 ಚಿನ್ನದ ಪದಕಗಳು ಹಾಗೂ ಮೂರು ನಗದು ಬಹುಮಾನ ಪಡೆಯುವುದರ ಮೂಲಕ ವಿವಿಗೆ ಮೊದಲಿಗರಾಗಿದ್ದಾರೆ.

ಕನ್ನಡ ವಿಭಾಗದಲ್ಲಿ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು ಸತತ ಆರು ವರ್ಷಗಳಿಂದ ವಿಶ್ವವಿದ್ಯಾಲಯಕ್ಕೆ ಮೊದಲ ರ‍್ಯಾಂಕ್‌ ಗಳಿಸುತ್ತಿದ್ದಾರೆ. ಈ ಸಾಲಿನಲ್ಲಿ ಮಹದೇವಸ್ವಾಮಿ ಅವರು 14 ಪದಕಗಳನ್ನು ಗಳಿಸುವುದರ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. ಹಿಂದಿನ ಸಾಲಿನಲ್ಲಿ ಇದೇ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿನಿ ಮಾದಲಾಂಬಿಕ ಅವರು 10 ಚಿನ್ನದ ಪದಕಗಳನ್ನು ಗಳಿಸಿ ಸಾಧನೆ ಮಾಡಿದ್ದರು.

ಮಹದೇವಸ್ವಾಮಿ ಅವರಲ್ಲದೇ ಕನ್ನಡ ವಿಭಾಗದ ಇನ್ನೊಬ್ಬ ವಿದ್ಯಾರ್ಥಿ ದೊರೆಸ್ವಾಮಿ ಅವರು ಕೂಡ ಒಂದು ಚಿನ್ನದ ಪದಕ ಗಳಿಸಿದ್ದಾರೆ.

22ರಂದು ನಡೆಯಲಿರುವ 2021–22ನೇ ಸಾಲಿನ ಘಟಕೋತ್ಸವದಲ್ಲಿ ವಿವಿಯು ಇಬ್ಬರಿಗೂ ಚಿನ್ನದ ಪದಕ ಪ್ರದಾನ ಮಾಡಲಿದೆ.

ಕೇಂದ್ರದ ದಾಖಲೆ: 11 ವರ್ಷಗಳ ಹಿಂದೆ ಸ್ಥಾಪನೆಯಾದ ಡಾ.ಬಿ.ಆರ್.ಅಂಬೇಡ್ಕರ್ ಕೇಂದ್ರದಲ್ಲಿ ನಿರ್ದೇಶಕರ ಸ್ಥಾನ ಬಿಟ್ಟರೆ, ಕಾಯಂ ಬೋಧಕ ಸಿಬ್ಬಂದಿ ಇಲ್ಲ. ಎಲ್ಲರೂ ಅತಿಥಿ ಉಪನ್ಯಾಸಕರೇ. ಇತಿಮಿತಿಗಳ ನಡುವೆಯೂ ಕೇಂದ್ರವು ಉತ್ತಮ‌ ಶೈಕ್ಷಣಿಕ ಸಾಧನೆ‌ ಮಾಡುತ್ತಿದೆ. ಕಳೆದ ವರ್ಷ ಕನ್ನಡ ಸೇರಿದಂತೆ ವಿವಿಧ ವಿಭಾಗಗಳ ವಿದ್ಯಾರ್ಥಿಗಳು 26 ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದರು.

ಬಡ ಕುಟುಂಬದ ಸಾಧಕ: ಪಿ.ಮಹದೇವಸ್ವಾಮಿ ಅವರು ತಾಲ್ಲೂಕಿನ ನಾಗವಳ್ಳಿಯರು. ಪುಟ್ಟಬಸವಯ್ಯ– ನಾಗಮ್ಮ ದಂಪತಿಯ ಮಗ. 20 ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿರುವ ಮಹದೇವಸ್ವಾಮಿ ಅವರ ತಾಯಿ ನಾಗಮ್ಮ ಅವರು ಕೂಲಿ ಕೆಲಸಕ್ಕೆ ಹೋಗುತ್ತದೆ. ಬಡ ಕುಟುಂಬದಲ್ಲಿರುವ ಬಂದಿರುವ ಮಹದೇವಸ್ವಾಮಿ ಅವರು ಎರಡು ವರ್ಷಗಳ ಹಿಂದೆ ಬಿಇಡಿ ಕೋರ್ಸ್‌ನಲ್ಲೂ ವಿವಿಗೆ ಮೊದಲ ರ‍್ಯಾಂಕ್‌ ಗಳಿಸಿದ್ದರು. ಮಳವಳ್ಳಿಯ ಭಗವಾನ್‌ ಬುದ್ಧ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಅವರು ಬಿಇಡಿ ಕೋರ್ಸ್‌ ಮಾಡಿದ್ದರು.

’14 ಚಿನ್ನದ ಪದಕ ಬಂದಿರುವುದು ತುಂಬಾ ಖುಷಿ ತಂದಿದೆ. 6–8 ಚಿನ್ನದ ಪದಕ ಬರಬಹುದು ಎಂಬ ನಿರೀಕ್ಷೆ ಇತ್ತು. ಕನ್ನಡ ಸಾಹಿತ್ಯವನ್ನು ಇಷ್ಟಪಟ್ಟು ಆಸಕ್ತಿಯಿಂದ ಓದಿದ್ದಕ್ಕೆ ಸಾರ್ಥಕವಾಗಿದೆ. ಆತ್ಮವಿಶ್ವಾಸ ಹಾಗೂ ಶ್ರದ್ಧೆಯಿಂದ ಓದಿದ ಫಲ ಇದು‘ ಎಂದು ಮಹದೇವಸ್ವಾಮಿ ಅವರು ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.

‘ವಿಭಾಗದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಕೃಷ್ಣಮೂರ್ತಿ ಹನೂರು, ಇತರ ಬೋಧಕರು, ಸ್ನೇಹಿತರ ಸಹಕಾರ. ತಂದೆ ತಾಯಿಯರ ಆಶೀರ್ವಾದದಿಂದ ಈ ಸಾಧನೆ ಸಾಧ್ಯವಾಗಿದೆ’ ಎಂದು ಅವರು ಹೇಳಿದರು.

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ: ಕೆ.ಸೆಟ್‌ ಕೂಡ ತೇರ್ಗಡೆಯಾಗಿರುವ ಮಹದೇವಸ್ವಾಮಿ ಅವರು ಸದ್ಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡುತ್ತಿದ್ದಾರೆ. ಕೆಎಎಸ್‌ ಮಾಡಬೇಕು ಎಂಬ ಆಸೆ ಅವರಿಗಿದೆ.

ನೆರವಾದ ದೇವಚಂದ್ರ ಗ್ರಂಥಾಲಯ

‘ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದಲ್ಲಿರುವ ದೇವಚಂದ್ರ ಗ್ರಂಥಾಲಯವು ನನ್ನ ಸಾಧನೆಗೆ ನೆರವಾಗಿದೆ’ ಎನ್ನುವುದು ಮಹದೇವಸ್ವಾಮಿ ಅವರ ಮಾತು.

ಸಾವಿರ ಪುಸ್ತಕಗಳಿಂದ ಆರಂಭವಾಗಿರುವ ದೇವಚಂದ್ರ ಕನ್ನಡ ಗ್ರಂಥಾಲಯವು ಈಗ 15 ಸಾವಿರ ಪುಸ್ತಕಗಳನ್ನು ಹೊಂದಿದೆ. ಪ್ರೊ.ಕೃಷ್ಣಮೂರ್ತಿ ಅವರ ಪ್ರಯತ್ನದಿಂದಾಗಿ ಗ್ರಂಥಾಲಯವು ದೊಡ್ಡ ಮಟ್ಟಿಗೆ ಬೆಳೆದಿದ್ದು, ಈಗ ವಿದ್ಯಾರ್ಥಿಗಳ ಜ್ಞಾನರ್ಜನೆಗೆ ನೆರವಾಗುತ್ತಿದೆ. ಕೃಷ್ಣಮೂರ್ತಿ ಅವರ ಮನವಿ ಮೇರೆಗೆ ಹಲವು ಸಾಹಿತಿಗಳು, ಚಿಂತಕರು, ಸಾಹಿತ್ಯ ಪ್ರೇಮಿಗಳು ಈ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

‘ನನ್ನಲ್ಲಿರುವ ಸಾವಿರ ಪುಸ್ತಕಗಳನ್ನು ಇಟ್ಟು ಗ್ರಂಥಾಲಯವನ್ನು ಆರಂಭಿಸಿದ್ದೆವು. ಹಲವಾರು ಸಾಹಿತಿಗಳು, ದಾನಿಗಳು ಇಲ್ಲಿಗೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಇದು ವಿದ್ಯಾರ್ಥಿಗಳ ಓದಿಗೆ ನೆರವಾಗಿದೆ. ವಿಭಾಗದ ವಿದ್ಯಾರ್ಥಿಗಳಿಗೆ ಗ್ರಂಥಾಲಯದಿಂದ ಸಾಕಷ್ಟು ನೆರವಾಗುತ್ತಿದೆ. ಅವರ ಶೈಕ್ಷಣಿಕ ಸಾಧನೆಯಲ್ಲಿ ಗ್ರಂಥಾಲಯದ ಕೊಡುಗೆಯೂ ಇದೆ’ ಎಂದು ಪ್ರೊ.ಕೃಷ್ಣಮೂರ್ತಿ ಹನೂರು ಅವರು ‘ಪ್ರಜಾವಾಣಿ‘ಗೆ ತಿಳಿಸಿದರು.

‘ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ಜಿಲ್ಲೆಯ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿರುವುದು ಖುಷಿ ಕೊಟ್ಟಿದೆ. ಆಧುನಿಕ ಕಾಲದಲ್ಲಿ ನಮ್ಮ ಜಿಲ್ಲೆಯ ಮಕ್ಕಳೂ ಮುಂದೆ ಬರಬೇಕಲ್ಲವೇ? ಇಲ್ಲಿ ಸ್ನಾತಕೋತ್ತರ ಕೇಂದ್ರ ಇರುವುದರಿಂದ ಗ್ರಾಮೀಣ ಭಾಗದ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯುವುದಕ್ಕೆ ಅನುಕೂಲವಾಗಿದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT