ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ: ಮಾದಪ್ಪನ ಕ್ಷೇತ್ರದಲ್ಲಿ ಜಾತ್ರೆಯ ಸುಗ್ಗಿ

ಮಹಾಲಯ ಅಮಾವಾಸ್ಯೆ ಜಾತ್ರೆ ಇಂದಿನಿಂದ
Last Updated 22 ಸೆಪ್ಟೆಂಬರ್ 2022, 16:32 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಇಲ್ಲಿನ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರಸ್ವಾಮಿ ದೇವಾಲಯವು ಸರಣಿ ಜಾತ್ರೋತ್ಸವಗಳಿಗೆ ಸಜ್ಜುಗೊಂಡಿದ್ದು, ಮಹಾಲಯ‌ ಅಮಾವಾಸ್ಯೆ ಜಾತ್ರೆ ಶುಕ್ರವಾರದಿಂದ ಆರಂಭವಾಗಲಿದೆ.

ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಜಾತ್ರೆಗಳಿಗೆ ಅಂತಿಮ ಸಿದ್ಧತೆಯಲ್ಲಿ ತೊಡಗಿದೆ.

ಎರಡು ವರ್ಷಗಳಿಂದ ಕೋವಿಡ್‌ ಕಾರಣಕ್ಕೆ ಜಾತ್ರೆ, ವಿಶೇಷ ಮಹೋತ್ಸವಗಳು ಅದ್ಧೂರಿಯಾಗಿ ನಡೆದಿರಲಿಲ್ಲ. ಈ ಬಾರಿ ಕೋವಿಡ್‌ ಹಾವಳಿ ಕಡಿಮೆಯಾಗಿರುವುದರಿಂದ ಯಾವುದೇ ನಿರ್ಬಂಧಗಳು ಇಲ್ಲ. ವಿಜೃಂಭಣೆಯಿಂದ ಜಾತ್ರೆಯ ಆಚರಣೆಗಳು ನಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸಕಲ ಸಿದ್ಧತೆ: ಮಹಾಲಯ ಅಮಾವಾಸ್ಯೆ ಜಾತ್ರೆ ಮುಗಿದ ತಕ್ಷಣ ದಸರಾ ಜಾತ್ರೆಯೂ ಆರಂಭವಾಗಲಿದ್ದು, ಭಾರಿ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಇದೆ.

ಹೀಗಾಗಿ ಭಕ್ತರು ದೇವರ ದರ್ಶನ ಮಾಡಲು ವೇಳೆ ನೂಕು ನುಗ್ಗಲು ತಪ್ಪಿಸುವುದಕ್ಕಾಗಿ ಅಲ್ಲಲ್ಲಿ ಬ್ಯಾರಿಕೇಡ್ ಕಟ್ಟಿ ಸರತಿ ಸಾಲಿನಲ್ಲಿ ನಿಲ್ಲಲು ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ನೆರಳಿನ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ, ವಾಹನ ದಟ್ಟಣೆ ತಪ್ಪಿಸಲು ಪಾರ್ಕಿಂಗ್ ವ್ಯವಸ್ಥೆ, ಹೆಚ್ಚುವರಿ ಲಾಡು ಕೌಂಟರ್ ತೆರೆಯಲಾಗಿದೆ.

ಪಾದಯಾತ್ರೆ ಮೂಲಕ ಆಗಮಿಸುವ ಭಕ್ತರಿಗೆ ತಾಳುಬೆಟ್ಟದಿಂದ ಮಹದೇಶ್ವರಬೆಟ್ಟದವರೆಗೆ ರಸ್ತೆ ಬದಿಯಲ್ಲಿ ಅಲ್ಲಲ್ಲಿ ಕುಡಿಯುವ ನೀರು, ತಾತ್ಕಾಲಿಕ ಶೌಚಗೃಹ ವ್ಯವಸ್ಥೆ ಮಾಡಲಾಗುತ್ತಿದೆ. ದೇವಾಲಯ ಸುತ್ತಮುತ್ತ ಸೇರಿದಂತೆ ವಾಣಿಜ್ಯಮಳಿಗೆ, ಬಸ್ ನಿಲ್ಧಾಣ ಹಾಗೂ ಇನ್ನಿತರ ಕಡೆಗಳಲ್ಲಿ ಶುಚಿತ್ವ ಕಾಪಾಡಲು ಪ್ರಾಧಿಕಾರ ಕ್ರಮ ಕೈಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೆರೆಯ ತಮಿಳುನಾಡು, ರಾಜ್ಯದ ಬೆಂಗಳೂರು, ಮೈಸೂರು, ಕನಕಪುರ, ಮಂಡ್ಯ, ಮಳವಳ್ಳಿ ಹಾಗೂ ನಾನಾ ಕಡೆಗಳಿಂದ ಭಕ್ತರು ಆಗಮಿಸುವುದರಿಂದ ಕೆಎಸ್‌ಆರ್‌ಟಿಸಿಯು ಹೆಚ್ಚುವರಿ ಬಸ್‌ಗಳನ್ನು ಬಿಟ್ಟಿದೆ. ಅಲ್ಲದೆ ಅಲ್ಲಲ್ಲಿ ಆರೋಗ್ಯ ಶಿಬಿರಗಳನ್ನು ಸ್ಥಾಪಿಸಲು ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಿದ್ದಾರೆ.

1‌0ಕ್ಕೂ ಹೆಚ್ಚು ದಿನಗಳ ಉತ್ಸವ: ಮಹಾಲಯ ಅಮಾವಾಸ್ಯೆ ವಿಶೇಷ ಪೂಜೆ ಶುಕ್ರವಾರದಿಂದ ಆರಂಭಗೊಳ್ಳಲಿದ್ದು, ದಸರಾ ಮುಗಿಯುವವರೆಗೂ ಮಹದೇಶ್ವರ ಸ್ವಾಮಿಗೆ ಹಲವು ಉತ್ಸವಾದಿಗಳು ನಡೆಯಲಿವೆ.

ಶನಿವಾರ (ಸೆ 24) ಸ್ವಾಮಿಗೆ ಎಣ್ಣೆ ಮಜ್ಜನ ಮತ್ತು ತೈಲಾಭಿಷೇಕ ಹಾಗೂ ವಿಶೇಷ ಸೇವೆ ಉತ್ಸವಗಳು ಜರುಗಲಿವೆ. 25 ರಂದು ಮಹಾಲಯ ಅಮವಾಸ್ಯೆಯ ವಿಶೇಷ ಸೇವೆ ಉತ್ಸವ ಕಾರ್ಯಗಳು ನಡೆಯಲಿದೆ. ಇದಾಗ ಬಳಿಕ ದಸರಾ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಆರಂಭವಾಗಲಿವೆ. 26 ರಂದು ಶರನ್ನವರಾತ್ರಿ ವ್ರತಾರಂಭ, ಉಯ್ಯಾಲೋತ್ಸವ ಪ್ರಾರಂಭ ಪ್ರಾರಂಭವಾಗಲಿದೆ. ಅ 4ರಂದು ಮಹಾನವಮಿ, ಆಯುಧ ಪೂಜೆ ಜರುಗಲಿದೆ. ಅ.5ರಂದು ವಿಜಯದಶಮಿ, ಕುದುರೆ ವಾಹನೋತ್ಸವ, ದಶಮಿ ಪೂಜೆ ನರೆವೇರಲಿದೆ.

ಪರುಸೇವೆಯ ವಿಶೇಷ

ಎರಡು ವರ್ಷಗಳಿಂದ ಕೋವಿಡ್‌ ಕಾರಣಕ್ಕೆ ಭಕ್ತರಿಗೆ ಪರುಸೇವೆ ಮಾಡಲು ಅವಕಾಶ ಇರಲಿಲ್ಲ. ಇದೀಗ ಜಾತ್ರಾ ಮಹೋತ್ಸವಕ್ಕೆ ಅವಕಾಶ ಸಿಕ್ಕಿರುವುದರಿಂದ ಲಕ್ಷಾಂತರ ಭಕ್ತರು ಈ ಸೇವೆ ಮಾಡಲಿದ್ದಾರೆ.

ಗ್ರಾಮೀಣ ಭಾಗದಿಂದ ಬರುವ ಭಕ್ತರು ಅವರ ನೆಂಟರು, ಗ್ರಾಮದವರು ಒಟ್ಟುಗೂಡಿ ಸಂಗ್ರಹಿಸಿದ್ದ ದವಸಧಾನ್ಯದಲ್ಲಿ ಅಡುಗೆ ಸಿದ್ಧ ಪಡಿಸಲಾಗುತ್ತದೆ. ಮಹದೇಶ್ವರಸ್ವಾಮಿಗೆ ಪೂಜೆ ಮಾಡಿ ಬಳಿಕ ಪರುಸೇವೆ (ಪಂಕ್ತಿಸೇವೆ) ನೆರೆವೇರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT