ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಬಾಪು, ಶಾಸ್ತ್ರಿ ಸ್ಮರಣೆ

ಜಿಲ್ಲಾಡಳಿತದಿಂದ ಗಾಂಧಿ ಜಯಂತಿ ಆಚರಣೆ
Last Updated 2 ಅಕ್ಟೋಬರ್ 2022, 15:32 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಾದ್ಯಂತ ಭಾನುವಾರ ಮಹಾತ್ಮ ಗಾಂಧೀಜಿ ಅವರ 154ನೇ ಜಯಂತಿಯನ್ನು ಆಚರಿಸಲಾಯಿತು. ಇದರ ಜೊತೆಗೆ ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನವನ್ನೂ ಆಚರಿಸಲಾಯಿತು.

ಜಿಲ್ಲಾಡಳಿತ, ವಿವಿಧ ಸರ್ಕಾರಿ ಇಲಾಖೆಗಳು, ಶಾಲಾ ಕಾಲೇಜುಗಳು, ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ಬಾಪು ಹಾಗೂ ಶಾಸ್ತ್ರಿ ಅವರ ಜಯಂತಿಯನ್ನು ಆಚರಿಸಿ, ದೇಶಕ್ಕೆ ಇಬ್ಬರೂ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.

ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗಾಂಧಿ ಜಯಂತಿ ಹಮ್ಮಿಕೊಳ್ಳಲಾಗಿತ್ತು. ಸರ್ವಧರ್ಮ ಗುರುಗಳ ಸಮ್ಮುಖದಲ್ಲಿ ಗಾಂಧೀಜಿಯವರನ್ನು ಸ್ಮರಿಸಲಾಯಿತು.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯತ್ರಿ ಮಾ‌ತನಾಡಿ, ‘ಭಾರತವು ಸರ್ವಧರ್ಮ ಸಮನ್ವಯದ ದೇಶವಾಗಿದೆ. ಎಲ್ಲರೂ ಎಲ್ಲ ಧರ್ಮಗಳನ್ನು ಪ್ರೀತಿಸಬೇಕು. ಶಾಂತಿ ನೆಲೆಸಲು ಸೌಹಾರ್ದತೆಯಿಂದ ಬದುಕಬೇಕು. ಅದೇ ನಾವು ಗಾಂಧಿಜೀಯವರಿಗೆ ಸಲ್ಲಿಸುವ ಗೌರವ’ ಎಂದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜು ಮಾತನಾಡಿ, ‘ಸತ್ಯದಿಂದ ನಡೆಯುವುದು ಹಾಗೂ ಅಹಿಂಸೆಯನ್ನು ಪಾಲಿಸುವುದುಗಾಂಧೀಜಿಯವರ ಸಂದೇಶ.ಯಾರೂ ಇನ್ನೊಬ್ಬರಿಗೆ ನೋವಾಗದಂತೆ ಪರಸ್ಪರ ಪ್ರೀತಿ, ವಿಶ್ವಾಸದಿಂದ ನಡೆದುಕೊಳ್ಳಬೇಕು’ ಎಂದರು.

ಹರವೆ ವಿರಕ್ತಮಠದ ಸರ್ಪಭೂಷಣ ಸ್ವಾಮೀಜಿ ಮಾತನಾಡಿ, ‘ಗಾಂಧಿ ಜಯಂತಿಯ ಜೊತೆಗೆ ದೇಶದಾದ್ಯಂತ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಮಹಾತ್ಮ ಗಾಂಧೀಜಿಯವರ ವಿಚಾರಧಾರೆಗಳನ್ನು ವರ್ಷದ 365 ದಿನವೂ ನಾವು ಸ್ಮರಿಸಬೇಕು. ಗಾಂಧೀಜಿಯವರು ಧರ್ಮ ಧರ್ಮಗಳ ನಡುವಿನ ಕಂದಕ ದೂರಮಾಡಲು ಶ್ರಮಿಸಿ, ಜನರಿಗೆ ಸರಳತೆ ಬೋಧಿಸಿದರು’ ಎಂದರು.

‘ಗಾಂಧೀಜಿಯವರ ಬಗ್ಗೆ 450ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ದೇಶದಾದ್ಯಂತ ಗಾಂಧೀಯವರ ಸಂಶೋಧನಾ ಕೇಂದ್ರಗಳನ್ನು ತೆರೆದು ಅವರ ಜೀವನ ದರ್ಶನದ ಬಗ್ಗೆ ಬೆಳಕು ಚೆಲ್ಲಲಾಗುತ್ತಿದೆ. ಶಾಂತಿದೂತ ಗಾಂಧಿಯನ್ನು ಇಡೀ ಜಗತ್ತನ್ನೇ ಒಪ್ಪಿಕೊಂಡಿದೆ. ಇಂದಿಗೂ ಅವರ ಆದರ್ಶ ಸಿದ್ಧಾಂತಗಳು ಎಲ್ಲರಿಗೂ ದಾರಿದೀಪಗಳಾಗಿವೆ’ ಎಂದು ಸ್ವಾಮೀಜಿ ತಿಳಿಸಿದರು.

ಕ್ರಿಶ್ಚಿಯನ್ ಧರ್ಮಗುರು ರೂಪೇಶ್‌ ಮಾತನಾಡಿ, ‘ಜಗತ್ತಿನ ಎಲ್ಲ ಧರ್ಮಗಳು ಮಾನವಿಕ ಪ್ರೀತಿಯನ್ನು ಸಾರುತ್ತವೆ. ಜನರು ದ್ವೇಷವನ್ನು ತೊರೆದು ಪ್ರೀತಿ, ವಿಶ್ವಾಸದಿಂದ ಜಗತ್ತನ್ನೇ ಗೆಲ್ಲಬಹುದು ಎಂದರು.

ಮುಸ್ಲಿಂ ಧರ್ಮಗುರು ‌ಮಹಮ್ಮದ್‌ ಇಸ್ಮಾಯಿಲ್‌ ಮಾತನಾಡಿ, ‘ಸಾಮಾಜಿಕ ಶಾಂತಿಗಾಗಿ ಗಾಂಧೀಜಿಯವರು ಸಾಕಷ್ಟು ವಿಚಾರಗಳನ್ನು ಜನರಲ್ಲಿ ಬಿತ್ತಿದ್ದಾರೆ. ಇಡೀ ದೇಶಕ್ಕೆ ಪ್ರೀತಿ, ಪ್ರೇಮ, ಶಾಂತಿ ಸಂದೇಶಗಳನ್ನು ಸಾರಿದರು. ಎಲ್ಲ ಧರ್ಮಗಳ ಸಾರವು ಶಾಂತಿಯಾಗಿದೆ. ಕೋಪ, ಅಹಂಕಾರ ಸಮಾಜದ ಸರ್ವನಾಶಕ್ಕೆ ಕಾರಣವಾಗಲಿವೆ’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ. ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣಿಕೊಪ್ಪ, ತಹಶೀಲ್ದಾರ್ ಬಸವರಾಜು ಸೇರಿದಂತೆ ಅಧಿಕಾರಿಗಳು ಇದ್ದರು.

ಗಾಯಕರಾದ ಬಿ. ಬಸವರಾಜು ಹಾಗೂ ಮಂಜುನಾಥ್ ಅವರು ರಘುಪತಿ ರಾಘವ ರಾಜಾರಾಂ, ಪತಿತ ಪಾವನ ಸೀತಾರಾಂ ಹಾಗೂ ಇತರೆ ಗೀತೆಗಳನ್ನು ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT