ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಾದ್ಯಂತ ವಿಸ್ತರಿಸಲು ಚಿಂತನೆ: ಸುಧಾಕರ್

‘ಮೈತ್ರಿ ಮುಟ್ಟಿನ ಕಪ್‘ ಯೋಜನೆಗೆ ಬಿಳಿಗಿರಿರಂಗನಬೆಟ್ಟದಲ್ಲಿ ಚಾಲನೆ
Last Updated 6 ಜುಲೈ 2022, 16:22 IST
ಅಕ್ಷರ ಗಾತ್ರ

ಚಾಮರಾಜನಗರ: ‘ರಾಜ್ಯದ ಪ್ರತಿಯೊಂದು ಹದಿ ಹರೆಯದ ಹೆಣ್ಣು ಮಗುವಿಗೂ ಮುಟ್ಟಿನ ಕಪ್ (ಮೆನ್ ಸ್ಟ್ರುವಲ್ ಕಪ್) ಉಚಿತವಾಗಿ ನೀಡಬೇಕು ಎಂಬುದು ಸರ್ಕಾರದ ಯೋಚನೆ. ಚಾಮರಾಜನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿರುವ ಈ ಯೋಜನೆಯನ್ನು ರಾಜ್ಯದ ಎಲ್ಲ ಕಡೆಗೆ ವಿಸ್ತರಿಸುವ ಚಿಂತನೆ ಇದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಬುಧವಾರ ಹೇಳಿದರು.

ಬಜೆಟ್‌ನಲ್ಲಿ ಘೋಷಿಸಲಾಗಿದ್ದ ಹದಿ ಹರೆಯದ ಹೆಣ್ಣು ಮಕ್ಕಳಿಗೆ ಮುಟ್ಟಿನ ಕಪ್ ವಿತರಿಸುವ ‘ಮೈತ್ರಿ ಕಪ್’ ಯೋಜನೆಗೆ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ವಿಜಿಕೆಕೆ ಕೇಂದ್ರದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

‘ಹೆಣ್ಣುಮಕ್ಕಳ ಹೃದಯ ಮುಟ್ಟುವಂತಹ ಯೋಜನೆ ಇದು. ನಮ್ಮದು ಮಾತೃ ಹೃದಯದ ಸರ್ಕಾರ. ಹೆಣ್ಣು ಮಕ್ಕಳ ಆರೋಗ್ಯದ ವಿಚಾರದಲ್ಲಿ ತಂದೆ ತಾಯಂದರು ಯೋಚನೆ ಮಾಡುವ ರೀತಿಯಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಯೋಚನೆ ಮಾಡಿ ಈ ಯೋಜನೆ ಜಾರಿಗೆ ತಂದಿದೆ’ ಎಂದರು.

'ಮುಟ್ಟು, ಋತುಸ್ರಾವದ ಬಗ್ಗೆ ಮಾತನಾಡಲು ಹೆಣ್ಣುಮಕ್ಕಳು ‌ಮುಜುಗರ ಪಡುತ್ತಾರೆ. ಇದೊಂದು ರೀತಿಯ ಪಿಡುಗು. ಋತುಸ್ರಾವ ರೋಗವಲ್ಲ. ಪ್ರತಿ ತಿಂಗಳೂ ದೇಹದಲ್ಲಿ ‌ನೈಸರ್ಗಿಕವಾಗಿ ನಡೆಯುವ ಪ್ರಕ್ರಿಯೆ. ಇದಕ್ಕಾಗಿ ನಾಚಿಕೆ, ಆತಂಕ ಪಡಬೇಕಾಗಿಲ್ಲ' ಎಂದರು.

'ಮುಟ್ಟಿನ ಕಪ್ ಪರಿಚಯ ಆಗುವುದಕ್ಕೂ ಮೊದಲು ಸ್ಯಾನಿಟರಿ ಪ್ಯಾಡ್ ಬಳಸಲಾಗುತ್ತಿತ್ತು. ಅದಕ್ಕೂ‌ ಮುನ್ನ ಹೆಣ್ಣುಮಕ್ಕಳು ಬಟ್ಟೆಯನ್ನು ಉಪಯೋಗಿಸುತ್ತಿದ್ದರು. ಬಟ್ಟೆ ಸ್ವಚ್ಛವಾಗಿಲ್ಲದಿರುವ ಕಾರಣಕ್ಕೆ ಮಹಿಳೆಯರು ಅನೇಕ ರೋಗಗಳಿಗೂ ತುತ್ತಾಗುತ್ತಿದ್ದರು. ಸ್ಯಾನಿಟರಿ ಪ್ಯಾಡ್ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುತ್ತದೆ. ವೈಯಕ್ತಿಕ ಆರೋಗ್ಯಕ್ಕೂ‌ ಒಳ್ಳೆಯದಲ್ಲ. ಪರಿಸರ ಸ್ನೇಹಿಯಾಗಿರುವ ಮುಟ್ಟಿನ ಕಪ್ ಅನ್ನು 6 ರಿಂದ 10 ವರ್ಷಗಳ ಕಾಲ ಬಳಸಬಹುದು' ಎಂದರು.

'ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಈ ಯೋಜನೆ ತಲುಪಬೇಕು ಎಂಬ ಕಾರಣದಿಂದ ಬುಡಕಟ್ಟು ಜನರು ವಾಸಿಸುವ ಬಿಳಿಗಿರಿರಂಗನಬೆಟ್ಟದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. ರಾಜ್ಯದ ಪ್ರತಿಯೊಬ್ಬ ಹೆಣ್ಣು ಮಗುವಿಗೂ ಈ ಕಪ್ ಅನ್ನು ಉಚಿತವಾಗಿ ವಿತರಿಸುವ ಉದ್ದೇಶವಿದೆ. ಹೆಣ್ಣುಮಕ್ಕಳು ಇದನ್ನು ಸ್ವಾಭಿಮಾನ, ವಿಶ್ವಾಸದಿಂದ ಬಳಸಬೇಕು' ಎಂದರು.

ಮಹಿಳೆಯರ ಆರೋಗ್ಯಕ್ಕೆ ಒತ್ತು: ‘ರಾಜ್ಯ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಿದೆ.‌ ಅದರಲ್ಲೂ ಮಹಿಳೆಯರ ಆರೋಗ್ಯಕ್ಕೆ ಗಮನ ಹರಿಸಿದೆ. ನಗರ ಪ್ರದೇಶಗಳಲ್ಲಿ ನಮ್ಮ‌ ಕ್ಲಿನಿಕ್ ಗಳನ್ನು ಆರಂಭಿಸಲಿದೆ.‌ ಮಹಿಳೆಯರಿಗಾಗಿ ಪ್ರತ್ಯೇಕ ಕ್ಲಿನಿಕ್ ಗಳನ್ನು ಆರಂಭಿಸಲಿದೆ’ ಎಂದು ಸುಧಾಕರ್‌ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಮಾತನಾಡಿ, 'ಬಜೆಟ್ ಘೋಷಣೆಗಳು ಬರೀ ಘೋಷಣೆಗಳಾಗಿರುತ್ತವೆ ಎಂಬ ಭಾವನೆ ಜನರಲ್ಲಿರುವ ಸಂದರ್ಭದಲ್ಲಿ, ಬಿಜೆಪಿ ಸರ್ಕಾರ ಅತ್ಯುತ್ತಮವಾದ ಯೋಜನೆಯೊಂದನ್ನು‌ರೂಪಿಸಿದೆ. ಋತುಚಕ್ರದ ಸಂದರ್ಭದಲ್ಲಿ ಹೆಣ್ಣುಮಕ್ಕಳು ಅನುಭವಿಸುವ ನೋವನ್ನು ಅರ್ಥ ಮಾಡಿಕೊಂಡು ಆರೋಗ್ಯ ಸಚಿವ ಸುಧಾಕರ್ ಅವರು ಈ ಕಾರ್ಯಕ್ರಮ ಜಾರಿಗೆ ತಂದಿದ್ದಾರೆ' ಎಂದು ಹೇಳಿದರು. ' ದೇಶದಲ್ಲೇ ಮೊದಲ ಬಾರಿಗೆ ಇಂತಹ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಎರಡು ಜಿಲ್ಲೆಗಳಿಗೆ ಮಾತ್ರ ಈ ಯೋಜನೆ ಸೀಮಿತವಾಗಬಾರದು. ಎಲ್ಲ ಕಡೆಗಳಿಗೂ ವಿಸ್ತರಿಸಬೇಕು’ ಎಂದು ಸಲಹೆ ನೀಡಿದರು.

ಶಾಸಕ ಎನ್‌.ಮಹೇಶ್‌ ಮಾತನಾಡಿ, ಈ ಯೋಜನೆಯು ಮಹಿಳೆಯರ ಆರೋಗ್ಯದ ವಿಚಾರದಲ್ಲಿ ಒಂದು ಮೈಲಿಗಲ್ಲು ಎಂದು ಬಣ್ಣಿಸಿದರು.

‘ಮುಜುಗರ ಬೇಡ, ಮುಕ್ತವಾಗಿ ಚರ್ಚಿಸಿ’

ಯೋಜನೆಯ ರಾಯಭಾರಿಯಾದ ಕ್ರಿಕೆಟ್ ಪಟು ವೇದಾ ಕೃಷ್ಣಮೂರ್ತಿ ಮಾತನಾಡಿ, ‘ಉತ್ತಮವಾಗಿರುವ ಈ ಯೋಜನೆ ಭಾಗವಾಗಿರುವುದಕ್ಕೆ ಖುಷಿಯಾಗಿದೆ. ಮುಟ್ಟು ಅಂದರೆ ಹೆಣ್ಣುಮಕ್ಕಳು ಮುಜುಗರ ಪಡುವ ಸ್ಥಿತಿ ಇದೆ. ಇಲ್ಲಿ ಅದರ ಬಗ್ಗೆ ಮುಕ್ತವಾಗಿ ಚರ್ಚೆ ಮಾಡುತ್ತಿರುವುದನ್ನು ನೋಡಿ ಹೆಮ್ಮೆಯಾಗುತ್ತದೆ. ಮುಟ್ಟಾಗುವುದು ಕಾಯಿಲೆ ಅಲ್ಲ. ನೈಸರ್ಗಿಕವಾದ ಪ್ರಕ್ರಿಯೆ.‌ ಹೆಣ್ಣು ಮಕ್ಕಳು ಇದರ ಬಗ್ಗೆ‌ ನಾಚಿಕೆ ಪಟ್ಟು ಕೊಳ್ಳದೆ, ಮುಕ್ತವಾಗಿ ತಂದೆ, ಅಣ್ಣ ತಮ್ಮಂದಿರೊಂದಿಗೆ ಚರ್ಚಿಸಬೇಕು. ಆಗುತ್ತಿರುವ ನೋವನ್ನು ಹಂಚಿಕೊಳ್ಳಬೇಕು. ಇದರಿಂದ ಧೈರ್ಯ ಬರುತ್ತದೆ’ ಎಂದು ಸಲಹೆ ನೀಡಿದರು.

‘ಮುಟ್ಟಿನ‌ಕಪ್ ತುಂಬಾ ಉಪಯುಕ್ತ. ನಾನೂ ಬಳಸುತ್ತೇನೆ. ಕ್ರಿಕೆಟ್ ಆಡುವಾಗಲೂ ಬಳಸಿದ್ದೇನೆ. ಆಟ ಆಡುವಾಗಲೇ ಏನು ಆಗಿಲ್ಲ ಎಂದ ಮೇಲೆ, ದಿನ ನಿತ್ಯ ಜೀವನದಲ್ಲಿ ಬಳಸುವಾಗ ಏನೂ ಸಮಸ್ಯೆಯಾಗದು. ಇದರ ಬಗ್ಗೆಯೂ ಹೆಣ್ಣು ‌ಮಕ್ಕಳು‌ ಮುಕ್ತವಾಗಿ ಚರ್ಚೆ ಮಾಡಬೇಕು. ಬಳಕೆ ವಿಧಾನ ಗೊತ್ತಿಲ್ಲದಿದ್ದರೆ ಸ್ನೇಹಿತರು, ಶಿಕ್ಷಕಿಯರು, ತಾಯಂದಿರ ಬಳಿ ಕೇಳಿ' ಎಂದರು.

ಪರಿಸರ ಸ್ನೇಹಿ: ಮತ್ತೊಬ್ಬ ರಾಯಭಾರಿ, ಚಿತ್ರ‌ನಟಿ ಅಮೃತಾ ಅಯ್ಯಂಗಾರ್ ಮಾತನಾಡಿ, 'ಇದು ಅತ್ಯುತ್ತಮ ಯೋಜನೆ. ಎಲ್ಲ ಹೆಣ್ಣುಮಕ್ಕಳು ಹೆಮ್ಮೆ ಪಡುವ ವಿಚಾರ. ಈ ಯೋಜನೆ ಭಾಗಿಯಾಗಿರುವುದಕ್ಕೆ ಖುಷಿ ಇದೆ. ಸ್ಯಾನಿಟರಿ ಪ್ಯಾಡ್‌ನಲ್ಲಿ ಪ್ಲಾಸ್ಟಿಕ್ ಅಂಶ ಹೆಚ್ಚು ಇರುತ್ತದೆ. ಅದರಲ್ಲಿ‌ ಬಳಸುವ ಜೆಲ್ ಹಾಗೂ ಇತರ ರಾಸಾಯನಿಕಗಳಿಂದ ಮಹಿಳೆಯರ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆ‌ ಇರುತ್ತದೆ. ಮುಟ್ಟಿನ ಕಪ್‌ನಲ್ಲಿ ಈ ಸಮಸ್ಯೆ ‌ಇಲ್ಲ. ಪರಿಸರ ಸ್ನೇಹಿ.‌ ಕಪ್ ಅನ್ನು ಹಲವು ವರ್ಷಗಳ ಕಾಲ ಬಳಸಬಹುದು. ಆದರೆ, ಸ್ವಚ್ಛವಾಗಿಟ್ಟುಕೊಳ್ಳಬೇಕು' ಎಂದರು.

ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ಬಿಳಿಗಿರಿ ರಂಗನಬೆಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾಕಮ್ಮ ನಾಗೇಶ್, ಉಪಾಧ್ಯಕ್ಷ ಪ್ರತಿಪ್ ಕುಮಾರ್, ಜಿಲ್ಲಾ ಬುಡಕಟ್ಟು ಅಭಿವೃದ್ಧಿ ಸಂಘದ ಅಧ್ಯಕ್ಷ ಸಿ.ಮಹದೇವು, ತಾಲ್ಲೂಕು ಸೋಲಿಗರ ಅಭಿವೃದ್ಧಿ ಸಂಘದ ಅಧ್ಯಕ್ಷ ದಾಸೇಗೌಡ, ಚುಡಾ ಅಧ್ಯಕ್ಷ ಪಿ.ಬಿ.ಶಾಂತಮೂರ್ತಿ ಕುಲಗಾಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ.ರಂದೀಪ್, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕಿ ಡಾ.ಎಂ. ಇಂದುಮತಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಎಂ. ವಿಶ್ವೇಶ್ವರಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT