ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಸಂಗ್ರಹಕಾರರಿಂದ ಮಾಕಳಿ ಬೇರಿಗೆ ಕುತ್ತು

ಕಾವೇರಿ ವನ್ಯಧಾಮ, ಮಲೆಮಹದೇಶ್ವರ ವನ್ಯಧಾಮದಲ್ಲಿ ಅಪರೂಪದ ಔಷಧ ಸಸ್ಯ
Last Updated 11 ಅಕ್ಟೋಬರ್ 2019, 19:46 IST
ಅಕ್ಷರ ಗಾತ್ರ

ಹನೂರು: ಚಾಮರಾಜನಗರ ಜಿಲ್ಲೆಯ ಎರಡು ಸಂರಕ್ಷಿತಾರಣ್ಯಗಳಾದ ಕಾವೇರಿ‌ವನ್ಯಧಾಮ ಮತ್ತು ಮಲೆಮಹದೇಶ್ವರ ವನ್ಯಧಾಮಗಳಲ್ಲಿರುವ ಅಪರೂಪದ ಸಸ್ಯ ಮಾಕಳಿ ಬೇರಿನ ಮೇಲೆ ಅಕ್ರಮವಾಗಿ ಕಿರು ‌ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವವರ ವಕ್ರ ದೃಷ್ಟಿ ಬಿದ್ದಿದೆ.

ತಮಿಳುನಾಡಿನಿಂದ ಕಾವೇರಿ ನದಿ ಅಥವಾ ಗಡಿ ದಾಟಿ ಅಕ್ರಮ ಅರಣ್ಯ ಉತ್ಪನ್ನ ಸಂಗ್ರಹಕಾರರು ರಾಜ್ಯದ ಅಭಯಾರಣ್ಯಗಳಿಗೆ ಬರುತ್ತಿದ್ದು, ಇವರಿಂದಾಗಿಔಷಧೀಯ ಗುಣಹೊಂದಿರುವ ಮಾಕಳಿ ಬೇರಿನ (ವೈಜ್ಞಾನಿಕ ಹೆಸರು: ಡೆಕಾಲೆಪಿಸ್ ಹ್ಯಾಮಿಲ್‍ಟೋನಿಯೈ) ಸಂತತಿಗೆ ಕುತ್ತು ಬಂದಿದೆ. ಸೆ. 21ರಂದು ಕಾವೇರಿ ವನ್ಯಧಾಮದಲ್ಲಿ ಅರಣ್ಯ ಅಧಿಕಾರಿಗಳು ಎಂಟು ಜನರನ್ನು ಬಂಧಿಸಿ 40 ಕೆ.ಜಿ.ಯಷ್ಟು ಒಣಗಿದ ಮಾಕಳಿ ಬೇರನ್ನು ವಶಪಡಿಸಿಕೊಂಡಿರುವ ಪ್ರಕರಣ ಇದಕ್ಕೆ ಪುಷ್ಟಿ ನೀಡುತ್ತದೆ.

ಅಕ್ರಮವಾಗಿ ಮಾಕಳಿ ಬೇರು ಸಂಗ್ರಹಿಸುತ್ತಿದ್ದ 8 ಜನರನ್ನು ಕಾವೇರಿ ವನ್ಯಧಾಮದ ಅರಣ್ಯಾಧಿಕಾರಿಗಳು ಬಂಧಿಸಿದ್ದರು. ತಮಿಳುನಾಡಿನವರಾದ ಆರೋಪಿಗಳು ಬಿಳಿಗುಂಡ್ಲುವಿನ ಬಳಿ ಕಾವೇರಿ ನದಿ ದಾಟಿ ಮೂರು ದಿನಗಳ ಕಾಲ ಅರಣ್ಯದೊಳಗೆ ಬಿಡಾರ ಹೂಡಿ ಸುಮಾರು 40 ಕೆ.ಜಿ.ಯಷ್ಟು ಮಾಕಳಿ ಬೇರು ಸಂಗ್ರಹಿಸಿದ್ದರು.

ಔಷಧೀಯ ಗುಣಗಳನ್ನು ಹೊಂದಿರುವ ಈ ಬೇರಿಗೆ ನಗರ ಪ್ರದೇಶಗಳಲ್ಲಿ ಅಪಾರ ಬೇಡಿಕೆ ಇದೆ. ಬಳ್ಳಿಯಾಕಾರದಲ್ಲಿ ಬೆಳೆಯುವ ಈ ಸಸ್ಯವು ಬೇಸಿಗೆಯಲ್ಲಿ ಸಂಪೂರ್ಣ ಎಲೆ ಉದುರಿಸುತ್ತದೆ. ಮಳೆಗಾಲದಲ್ಲಿ ಮರ, ಬಂಡೆಯ ಬಿರುಕುಗಳಲ್ಲಿ ಆಶ್ರಯ ಪಡೆದು 10 ಮೀ ಎತ್ತರದವರೆಗೂ ಬೆಳೆಯುತ್ತದೆ.

ಬೇರನ್ನು ಜ್ವರ, ಕೆಮ್ಮು, ಶೀತಕ್ಕೆ ಔಷಧವನ್ನಾಗಿ ಬಳಸುತ್ತಾರೆ. ಅಲ್ಲದೇ ಪಾನೀಯ, ಉಪ್ಪಿನಕಾಯಿ ತಯಾರಿಕೆಯಲ್ಲೂ ಬಳಕೆ ಇದೆ. ತಮಿಳುನಾಡಿನಲ್ಲಿ ಮಾಕಳಿ ಬೇರಿನ ಉಪ್ಪಿನಕಾಯಿ ಪ್ರಸಿದ್ಧಿ ಪಡೆದಿದೆ.

ಸಂಗ್ರಹ ನಿಷೇಧ:ಔಷಧೀಯ ಗುಣ ಮತ್ತು ಪರಾಗಸ್ಪರ್ಶ ಕ್ರಿಯೆಯಲ್ಲಿ ಈ ಬೇರು ಪ್ರಮುಖ ಪಾತ್ರ ವಹಿಸುವುದರಿಂದ ವನ್ಯಧಾಮಗಳಲ್ಲಿ ಮಾಕಳಿ ಬೇರು ಸಂಗ್ರಹಿಸುವುದನ್ನು ನಿಷೇಧಿಸಲಾಗಿದೆ.

ಮಲೆಮಹದೇಶ್ವರ ವನ್ಯಧಾಮದ ಹೂಗ್ಯಂ, ಪಿ.ಜಿ. ಪಾಳ್ಯ, ರಾಮಾಪುರ ಹಾಗೂ ಪಾಲಾರ್ ವನ್ಯಜೀವಿ ವಲಯಗಳು, ಕಾವೇರಿ ವನ್ಯಧಾಮದ ಕೌದಳ್ಳಿ ಹಾಗೂ ಗೋಪಿನಾಥಂ ವನ್ಯಜೀವಿ ವಲಯಗಳು ತಮಿಳುನಾಡಿನ ಗಡಿಯಲ್ಲಿವೆ. ನದಿಯ ಮೂಲಕ ಅಥವಾ ಕಾಡಿನ ಮೂಲಕ ಗಡಿ ದಾಟಿ ಬರುವ ಹವ್ಯಾಸಿ ಬೇರು ಸಂಗ್ರಹಕಾರರು ವಾರಗಟ್ಟಲೇ ಅರಣ್ಯದೊಳಗೆ ಬಿಡಾರ ಹೂಡಿ ಅಪಾರ ಪ್ರಮಾಣದಲ್ಲಿ ಬೇರು ಸಂಗ್ರಹಿಸಿ ಮಾರಾಟ ದಂಧೆಯಲ್ಲಿ ತೊಡಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ.

ಮಾರಾಟ ಹೇಗೆ?: ಸಂಗ್ರಹಿಸಿದ ಬೇರುಗಳನ್ನು ತಮಿಳುನಾಡಿಗೆ ತೆಗೆದುಕೊಂಡು ಹೋಗಿ ಮಧ್ಯವರ್ತಿಗಳಿಗೆ ಮಾರಾಟ ಮಾಡುತ್ತಾರೆ. ಅವರ ಬಳಿಯಿಂದ ಪ್ರತಿ ಕೆ.ಜಿಗೆ ₹ 300 ಪಡೆಯುತ್ತಾರೆ. ನಂತರ ಮಧ್ಯವರ್ತಿಗಳು ಬೇರೆಯವರಿಗೆ ₹ 600–₹ 700ಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಅಂಶ ಆರೋಪಿಗಳ ವಿಚಾರಣೆ ಸಂದರ್ಭದಲ್ಲಿ ಬೆಳಕಿಗೆ ಬಂದಿತ್ತು.

ಗಿರಿಜನರಿಗೂ ಸಂಗ್ರಹಿಸುವ ಹಕ್ಕಿಲ್ಲ

ಅರಣ್ಯ ವಾಸಿಗಳಾಗಿರುವ ಗಿರಿಜನರಿಗೆ (ಬುಡಕಟ್ಟು) ವಿವಿಧ ಕಿರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಲು ಅವಕಾಶ ನೀಡಲಾಗಿದೆ. ಆದರೆ, ಮಾಕಳಿ ಬೇರು ಸಂಗ್ರಹಿಸುವುದಕ್ಕೆ ಅವರಿಗೂ ನಿರ್ಬಂಧ ವಿಧಿಸಲಾಗಿದೆ.

ಈ ಬೇರಿನ ಬಗ್ಗೆ ಆಳವಾದ ಜ್ಞಾನ ಹೊಂದಿರುವ ಗಿರಿಜನರಿಗೆ ಅದನ್ನು ಸಂಗ್ರಹಿಸುವ ಹಕ್ಕು ನೀಡಬೇಕು ಎಂದು ಬುಡಕಟ್ಟು ಜನರು ಒತ್ತಾಯಿಸುತ್ತಿದ್ದಾರೆ.

‘ಮಾಕಳಿ ಬೇರಿನ ಬಗ್ಗೆ ಅರಿವಿಲ್ಲದವರು ಬೇರನ್ನು ಸಂಪೂರ್ಣವಾಗಿ ಕಿತ್ತುಹಾಕುತ್ತಾರೆ. ಅದರ ಸಂತತಿ ಸಂಪೂರ್ಣ ನಶಿಸಲು ಇದು ಪ್ರಮುಖ ಕಾರಣ. ತಾಯಿಬೇರನ್ನು ಕೀಳದೆ ಇದ್ದರೆ ಅದು ಮತ್ತೆ ಕವಲೊಡೆಯುತ್ತದೆ’ ಎಂದು ಸೋಲಿಗ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಮುತ್ತಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

**

ಮಲೆಮಹದೇಶ್ವರ ವನ್ಯಧಾಮದಲ್ಲಿ ಮಾಕಳಿ ಬೇರು ಸಂಗ್ರಹಣೆ ಸಂಬಂಧ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ.
– ವಿ. ಏಡುಕುಂಡಲು, ಡಿಸಿಎಫ್

**

ಬಂಧಿತ ಆರೋಪಿಗಳು ಕುಟುಂಬ ಸಮೇತ ಮಾಕಳಿ ಬೇರು ಸಂಗ್ರಹಣೆಯಲ್ಲಿ ತೊಡಗಿದ್ದರು ಎಂಬುದು ವಿಚಾರಣೆಯಲ್ಲಿ ಗೊತ್ತಾಗಿದೆ
– ಎಸ್. ರಮೇಶ್, ಡಿಸಿಎಫ್, ಕಾವೇರಿ ವನ್ಯಧಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT