ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಕರಗಿದ ಹಸಿರು ಜಿಲ್ಲೆಯ ಆತಂಕ

ಮಳವಳ್ಳಿಯ ಕೋವಿಡ್‌–19 ಸೋಂಕಿತ ಮದುವೆಯಲ್ಲಿ ಭಾಗವಹಿಸಿಲ್ಲ– ಅಧಿಕಾರಿಗಳ ಸ್ಪಷ್ಟನೆ
Last Updated 22 ಮೇ 2020, 11:52 IST
ಅಕ್ಷರ ಗಾತ್ರ

ಚಾಮರಾಜನಗರ: ಇದುವರೆಗೂ ಹಸಿರುವಲಯದಲ್ಲಿರುವ ಗಡಿ ಜಿಲ್ಲೆ ಚಾಮರಾಜನಗರಕ್ಕೆ ಕೋವಿಡ್‌–19 ಕಾಲಿಡುವ ಆತಂಕ ಸದ್ಯಕ್ಕೆ ಮತ್ತೆ ದೂರವಾಗಿದೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹೆಳವರಹುಂಡಿಯಲ್ಲಿ ನಡೆದಿದ್ದ ನಗರದ ಸೋಮವಾರಪೇಟೆಯ ಯುವತಿಯ ಮದುವೆಯಲ್ಲಿ ಮಂಡ್ಯದ ಸೋಂಕಿತ ವ್ಯಕ್ತಿಯೊಬ್ಬರು (ಪಿ–1471) ಭಾಗಿಯಾಗಿದ್ದಾರೆ ಎಂಬ ಸುದ್ದಿ ಜಿಲ್ಲೆಯಾದ್ಯಂತ ಕಾಳ್ಗಿಚ್ಚಿನಂತೆ ಹರಡಿ, ಜನತೆ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳಲ್ಲಿ ಆತಂಕ ಉಂಟು ಮಾಡಿತ್ತು.

ಸೋಂಕಿತ ವ್ಯಕ್ತಿ ಮದುವೆಗೆ ಬಂದಿಲ್ಲ; ಮದುವೆ ನಡೆದ ಮನೆಯ ಪಕ್ಕದ ಮನೆಗೆ ಬಂದಿದ್ದರು ಎಂಬ ಸಂಗತಿ ಈಗ ಬಯಲಾಗಿದ್ದು, ಎಲ್ಲರೂ ಕೊಂಚ ನಿರಾಳರಾಗಿದ್ದಾರೆ.

ಸೋಮವಾರಪೇಟೆಯ ವಧು ಹಾಗೂ ಕವಲಂದೆ ಬಳಿಯ ಹೆಳವರಹುಂಡಿ ವರನಿಗೆ ಇದೇ 20ರಂದು ಹೆಳವರ ಹುಂಡಿಯಲ್ಲಿ ಮದುವೆ ನಡೆದಿತ್ತು. ಸುಮಾರು 60 ಮಂದಿ ಮದುವೆಯಲ್ಲಿ ಭಾಗವಹಿಸಿದ್ದರು.

ಮಳವಳ್ಳಿಯ ಸರ್ಕಾರಿ ಅಧಿಕಾರಿಯೊಬ್ಬರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಆ ಬಳಿಕ ಅವರಿಗೆ ಕೋವಿಡ್‌–19 ಇರುವುದು ದೃಢಪಟ್ಟಿತ್ತು.

ಸುದ್ದಿ ಹರಡುತ್ತಲೇ ಸೋಮವಾರಪೇಟೆಯ ಹೆಳವರ ಬೀದಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರು ಆತಂಕಕ್ಕೆ ಒಳಗಾಗಿದ್ದರು. ಶುಕ್ರವಾರ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಂ.ಸಿ.ರವಿ ಹಾಗೂ ಇತರೆ ಸಿಬ್ಬಂದಿ ಸೋಮವಾರಪೇಟೆಯಲ್ಲಿರುವ ವಧುವಿನ ಮ‌ನೆ ಹಾಗೂ ಅವರ ಸಂಬಂಧಿಗಳನ್ನು ಭೇಟಿ ಮಾಡಿ ಮಾಹಿತಿ ಕಲೆ ಹಾಕಿದ್ದಾರೆ.

ನವ ದಂಪತಿ ಸೋಮವಾರಪೇಟೆಯಲ್ಲೇ ಇದ್ದಾರೆ. ಸದ್ಯ ಆರೋಗ್ಯ ಇಲಾಖೆ ಯಾರನ್ನೂ ಕ್ವಾರಂಟೈನ್‌ ಮಾಡಿಲ್ಲ. ಮನೆಯಲ್ಲೇ ಇರುವಂತೆ ವಧು ವರರು ಹಾಗೂ ಮದುವೆಯಲ್ಲಿ ಭಾಗಿಯಾದವರಿಗೆ ಸೂಚಿಸಿದೆ.

ಪಕ್ಕದ ಮನೆಗೆ ಬಂದಿದ್ದರು
ಸೋಂಕಿತ ವ್ಯಕ್ತಿ ಮದುವೆಯಲ್ಲಿ ಭಾಗಿಯಾಗಿಲ್ಲ. ಪಕ್ಕದ ಮನೆಯಲ್ಲಿರುವ ತಮ್ಮ ಅಜ್ಜಿಯನ್ನು ನೋಡಲು ಬಂದಿದ್ದರು ಎಂಬುದು ದೃಢಪಟ್ಟಿದೆ. ಮೈಸೂರು ಜಿಲ್ಲಾಡಳಿತ ಕೂಡ ಇದನ್ನು ಸ್ಪಷ್ಟಪಡಿಸಿದೆ.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು, ‘ಆತಂಕ ಪಡುವಂತಹದ್ದು ಏನಿಲ್ಲ. ಸೋಂಕಿತ ವ್ಯಕ್ತಿ ಮದುವೆಯಲ್ಲಿ ಭಾಗವಹಿಸಿಲ್ಲ. ಅವರು ಮದುವೆ ನಡೆದ ಮನೆಯ ಪಕ್ಕದ ಮನೆಗೆ ಬಂದಿದ್ದಾರೆ. ಮದುವೆಯಲ್ಲಿ ಭಾಗವಹಿಸಿದವರ ಸಂಪರ್ಕಕ್ಕೂ ಬಂದಿಲ್ಲ. ಆ ಗ್ರಾಮ ಮೈಸೂರು ಜಿಲ್ಲೆಗೆ ಸೇರಿರುವುದರಿಂದ ನಾವು ಆತಂಕ ಪಡಬೇಕಾಗಿಲ್ಲ’ ಎಂದು ಹೇಳಿದರು.

‘ಮದುವೆಯಲ್ಲಿ ಭಾಗವಹಿಸಿದವರು ಸೋಂಕಿತ ವ್ಯಕ್ತಿಯ ನೇರ ಸಂಪರ್ಕಕ್ಕೆ ಬಾರದೇ ಇರುವುದರಿಂದ ಕ್ವಾರಂಟೈನ್‌ ಮಾಡುವ ಅಗತ್ಯವಿಲ್ಲ. ಆದರೂ, ಮುನ್ನೆಚ್ಚರಿಕೆ ಕ್ರಮವಾಗಿ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಅವರ ಆರೋಗ್ಯದ ಮೇಲೆ ನಿಗಾ ಇಡಲಾಗುವುದು’ ಎಂದು ಅವರು ಹೇಳಿದರು.

ಮದುವೆಯಲ್ಲಿ ಭಾಗವಹಿಸಿದ್ದವರಲ್ಲಿ ವರನ ಕಡೆಯ ಎರಡು ಮೂರು ಮಂದಿ ಸೋಂಕಿತ ವ್ಯಕ್ತಿಯೊಂದಿಗೆ ಮಾತನಾಡಿದ್ದಾರೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT