ಗುರುವಾರ , ಅಕ್ಟೋಬರ್ 29, 2020
28 °C
ಮಹದೇಶ್ವರ ಬೆಟ್ಟ: ಅಮಾವಾಸ್ಯೆ, ದಸರಾ ಜಾತ್ರೆಗೆ ಭಕ್ತರಿಗಿಲ್ಲ ಅವಕಾಶ

ಭಕ್ತರ ಸಂದಣಿ ನಿಯಂತ್ರಣಕ್ಕೆ ಬ್ಯಾರಿಕೇಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರ ಬೆಟ್ಟ: ಇಲ್ಲಿನ ಪ್ರಸಿದ್ಧ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಭಕ್ತರು ಕೋವಿಡ್‌–19 ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಡಲು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಕ್ರಮ ಕೈಗೊಂಡಿದೆ. 

ಭಕ್ತರು ಸರತಿ ಸಾಲಿನಲ್ಲಿ ಅಂತರ ಕಾಪಾಡಿಕೊಂಡು ದರ್ಶನಕ್ಕೆ ತೆರಳಲು ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದೆ. ಅನ್‌ಲಾಕ್‌ 5ನೇ ಹಂತ ಆರಂಭವಾದ ಬಳಿಕ ಬೆಟ್ಟಕ್ಕೆ ಭೇಟಿ ನೀಡುತ್ತಿರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಭಕ್ತರು ಕೋವಿಡ್‌  ನಿಯಮಗಳನ್ನು ಪಾಲಿಸದೇ ಇದ್ದುದು ಕಂಡು ಬಂದಿತ್ತು. 

ಇತ್ತೀಚೆಗೆ ಪ್ರಾಧಿಕಾರದ ಸಭೆ ನಡೆಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು, ಭಕ್ತರ ಸಂದಣಿ ಹೆಚ್ಚಿರುವ ಸಂದರ್ಭದಲ್ಲಿ ಕೋವಿಡ್‌–19 ತಡೆ ನಿಯಮಗಳನ್ನು ಪಾಲಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. 

‘ನೂಕು ನುಗ್ಗಲು ತಡೆಗೆ ಬ್ಯಾರಿಕೇಡ್‌ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಕೋವಿಡ್‌–19 ತಡೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅಂತರ ಗಂಗೆಯಲ್ಲಿ ಸ್ನಾನ ಮಾಡಲು ಅವಕಾಶವಿರುವುದಿಲ್ಲ, ಬೃಹತ್ ಶೌಚಾಲಯದಲ್ಲಿ ಮಾತ್ರ ಸ್ನಾನ ಮಾಡಬಹುದು. ರಾತ್ರಿ ತಂಗಲು ಅವಕಾಶ ಇಲ್ಲ’ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಪ್ರಾಧಿಕಾರದ ಪೆಟ್ರೋಲ್ ಬಂಕ್, ಅಂಗಡಿಗಳು, ಲಾಡು ಪ್ರಸಾದದ ಕೌಂಟರ್‌ಗಳು, ವಿಶೇಷ ದಾಸೋಹದ ಕೌಂಟರ್ ಗಳು, ಮಾಹಿತಿ ಕೇಂದ್ರ ತೆರೆದಿರುತ್ತವೆ. ದೇವಾಲಯದಲ್ಲಿ ದೇವರ ದರ್ಶನ, ಪೂಜೆ, ದಾಸೋಹ ಸೇವೆಗಳು ಮಾತ್ರ ಇರಲಿದ್ದು, ಭಕ್ತರು ಎಲ್ಲಿಯೂ ಗುಂಪು ಗುಂಪಾಗಿ ಸೇರದೆ ರಂಗಮಂದಿರಕ್ಕೆ ತೆರಳಿ, ವಿಶೇಷ ಸರತಿ ಸಾಲಿನ ಮೂಲಕವೇ ದೇವಾಲಯಕ್ಕೆ ಪ್ರವೇಶಿಸಬೇಕು’ ಎಂದು ಅವರು ಹೇಳಿದ್ದಾರೆ. 

₹500 ಪಾವತಿಸಿ ನೇರ ದರ್ಶನಕ್ಕೆ ಅವಕಾಶ ಇದ್ದು, ಅವಶ್ಯವಿದ್ದವರು ರಂಗಮಂದಿರದಲ್ಲಿನ ವಿಶೇಷ ಕೌಂಟರ್‌ನಲ್ಲಿ ಟಿಕೆಟ್ ಪಡೆದು ಗೇಟ್ ನಂ 4ರ ಮೂಲಕ ಪ್ರವೇಶಿಸಬಹುದು ಅವರು ಹೇಳಿದ್ದಾರೆ.  

ಭಕ್ತರಿಗೆ ನಿಷೇಧ: ‘ಇದೇ 15, 16ರಂದು ನಡೆಯಲಿರುವ ಎಣ್ಣೆ ಮಜ್ಜನ, ಅಮಾವಾಸ್ಯೆ ವಿಶೇಷ ಪೂಜೆಗೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಇದೇ 23, 24, 25 ರಂದು ದಸರಾ ಜಾತ್ರೆ ನಡೆಯಲಿದ್ದು, ಪ್ರಾಧಿಕಾರದ ಸಭೆಯಲ್ಲಿ ನಿರ್ಣಯಿಸಿದಂತೆ ಸರಳವಾಗಿ ನಡೆಯಲಿದೆ. ಆ ಸಂದರ್ಭಲ್ಲೂ ಭಕ್ತರಿಗೆ ಪ್ರವೇಶ ಅವಕಾಶ ಇರುವುದಿಲ್ಲ’ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಹೇಳಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು