ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಪ್ಪನ ಲಕ್ಷಾಂತರ ಭಕ್ತರ ಪಾದಯಾತ್ರೆ

ಹಳೆ ಮೈಸೂರು ಭಾಗ, ಬೆಂಗಳೂರು, ರಾಮನಗರ ಕನಕಪುರದಿಂದಲೂ ಭಕ್ತರ ದಂಡು
Last Updated 27 ಫೆಬ್ರುವರಿ 2022, 4:12 IST
ಅಕ್ಷರ ಗಾತ್ರ

ಹನೂರು:ಉತ್ತರದಿಂದ ದಕ್ಷಿಣಕ್ಕೆ ಬಂದು ತಾಲ್ಲೂಕಿನ ಮಹದೇಶ್ವರ ಬೆಟ್ಟದಲ್ಲಿ ನೆಲೆಸಿರುವ ಮಹದೇಶ್ವರ ಸ್ವಾಮಿ ಹಳೆ ಮೈಸೂರು ಭಾಗದ ಬಹುತೇಕರ ಆರಾಧ್ಯ ದೈವ. ತಮ್ಮ ಕಷ್ಟ ಕಾರ್ಪಣ್ಯಗಳನ್ನು ಬಗೆಹರಿಸುವ ನೆಚ್ಚಿನ ದೇವರಿಗೆ ಭಕ್ತರು ವಿವಿಧ ರೀತಿಯಲ್ಲಿ ಹರಕೆ ಕಾಣಿಕೆಗಳನ್ನು ಸಲ್ಲಿಸುತ್ತಾರೆ. ಈ ಪೈಕಿ ಪಾದಯಾತ್ರೆ ಸೇವೆ ಮುಖ್ಯವಾದುದು.

ಮಾದಪ್ಪನ ಭಕ್ತರ ಪಾದಯಾತ್ರೆ ಸೇವೆಗೆ ಸುಧೀರ್ಘ ಇತಿಹಾಸವಿದೆ. ವಾಹನಗಳೇ ಇಲ್ಲದಿದ್ದ ಕಾಲಘಟ್ಟದಲ್ಲಿ ಎತ್ತಿನ ಗಾಡಿಗಳ ಮೂಲಕ ಭಕ್ತರು ಬೆಟ್ಟಕ್ಕೆ ಆಗಮಿಸುತ್ತಿದ್ದರು. ಈ ವ್ಯವಸ್ಥೆ ಇಲ್ಲದವರು ಅನಿವಾರ್ಯವಾಗಿ ಕಾಲ್ನಡಿಗೆ ಮೂಲಕ ಬರುತ್ತಿದ್ದರು. ಇದು ಮುಂದೆ ಹರಕೆಯ ರೂಪವಾಗಿ ಪರಿವರ್ತನೆಯಾಯಿತು. ಈಚೆಗೆ ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ಬರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ.

ಚಾಮರಾಜನಗರ ಜಿಲ್ಲೆಯವರು ಮಾತ್ರವಲ್ಲದೇ, ಮೈಸೂರು, ಮಂಡ್ಯ, ಕನಕಪುರ, ಹಲಗೂರು, ರಾಮನಗರ ಹಾಗೂ ಬೆಂಗಳೂರು ನಗರ, ಗ್ರಾಮಾಂತರ ಭಾಗದಿಂದಲೂ ಪ್ರತಿ ವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆಯ ಮೂಲಕ ಬೆಟ್ಟಕ್ಕೆ ಬರುತ್ತಾರೆ. ಮಹಾಶಿವರಾತ್ರಿ, ಯುಗಾದಿ ಮತ್ತು ದೀಪಾವಳಿ ಜಾತ್ರೆಗೆ ಕಾಲ್ನಡಿಗೆಯಲ್ಲಿ ಬರುವವರ ಸಂಖ್ಯೆ ಹೆಚ್ಚು. ಅದರಲ್ಲೂ ಮಹಾಶಿವರಾತ್ರಿ ಜಾತ್ರೆಗೆ ಬರುವವರ ಸಂಖ್ಯೆ ಅಧಿಕ.

ಬೆಂಗಳೂರು, ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳ ವಿವಿಧ ಗ್ರಾಮಗಳಿಂದ ಬರುವ ಭಕ್ತರು ಕಾಲ್ನಡಿಗೆಯಲ್ಲಿ ಸಂಗಮಕ್ಕೆ ಬಂದು ಅಲ್ಲಿಂದ ಹಗ್ಗದ ಸಹಾಯದ ಮೂಲಕ ಕಾವೇರಿ ನದಿಯನ್ನು ದಾಟುತ್ತಾರೆ. ಬಳಿಕ ದಟ್ಟಾರಣ್ಯದ ಮಧ್ಯದೊಳಗೆ ಕಾಲ್ನಡಿಗೆಯಲ್ಲಿ ಸಾಗಿ ಬರುತ್ತಾರೆ. ಮಕ್ಕಳು, ಮಹಿಳೆಯರು ಹಾಗೂ ವೃದ್ಧರೆನ್ನದೆ ಹರಿಯುವ ಕಾವೇರಿ ನದಿ ದಾಟಿ ನೆತ್ತಿ ಸುಡುವ ಬಿಸಿಲನ್ನು ಲೆಕ್ಕಿಸದೇ ಬರುವ ಭಕ್ತರು ಭಕ್ತಿಯ ಪರಾಕಾಷ್ಠೆ ಮೆರೆಯುತ್ತಾರೆ.

ಅರಣ್ಯ ಇಲಾಖೆ ನೆರವು: ಕಾವೇರಿ ನದಿಯನ್ನು ದಾಟಿ ಬರುವ ಭಕ್ತರ ರಕ್ಷಣೆಗಾಗಿ ಅರಣ್ಯ ಇಲಾಖೆಯೂ ಸಹಕಾರ ನೀಡುತ್ತಾ ಬಂದಿದೆ. ಬಸವನಕಡದಿಂದ ಶಾಗ್ಯ ಗ್ರಾಮ ತಲುಪುವವರೆಗೂ ಮಾರ್ಗದುದ್ದಕ್ಕೂ ಅರಣ್ಯ ಇಲಾಖೆ ಸಿಬ್ಬಂದಿ ಪಾದಯಾತ್ರೆಯಲ್ಲಿ ಬರುವ ಭಕ್ತರ ರಕ್ಷಣೆಗಾಗಿ ನಿಂತಿರುತ್ತಾರೆ.

ಸ್ಥಳೀಯರಿಂದ ಉಪಹಾರ ವ್ಯವಸ್ಥೆ

ಪ್ರತಿ ವರ್ಷ ಮಹಾಶಿವರಾತ್ರಿ ಜಾತ್ರೆಗೆ ಕಾವೇರಿ ನದಿ ದಾಟಿ ಬರುವ ಭಕ್ತರಿಗೆ ಶಾಗ್ಯ ಗ್ರಾಮದಲ್ಲಿ ಸ್ಥಳೀಯರು ಆಹಾರ ಸಿದ್ಧಪಡಿಸಿ ವಿತರಿಸುತ್ತಾರೆ. ಸಂಗಮದಿಂದ ಕಾವೇರಿ ನದಿ ದಾಟಿ ಬಸವನಕಡ ಮುಖೇನ ಶಾಗ್ಯ ಗ್ರಾಮಕ್ಕೆ ಬರುವ ಭಕ್ತರು, ಅಲ್ಲಿ ಉಪಹಾರ ಸೇವಿಸಿ ಬಳಿಕ ತೋಮಿಯಾರ್ ಪಾಳ್ಯ, ಗುಳ್ಯ ಮೂಲಕ ಎಲ್ಲೇಮಾಳ ಮುಖ್ಯ ರಸ್ತೆ ತಲುಪಿ ಅಲ್ಲಿಂದ ಕೌದಳ್ಳಿ, ತಾಳಬೆಟ್ಟದಿಂದ ಬಸವನ ಹಾದಿಯಲ್ಲಿ ಸಾಗಿ ಬೆಟ್ಟ ತಲುಪಿ ಮಹದೇಶ್ವರ ಸ್ವಾಮಿಯ ದರ್ಶನ ಮಾಡಿ ಕೃತಾರ್ಥರಾಗುತ್ತಾರೆ.

ಮಾರ್ಗದ್ದುದ್ದಕ್ಕೂ ಅಲ್ಲಲ್ಲಿ ಗ್ರಾಮಸ್ಥರು, ಸ್ವಯಂ ಸೇವಕರು ಪಾದಯಾತ್ರಿಗಳಿಗೆ ಉಪಹಾರ ವ್ಯವಸ್ಥೆ ಮಾಡುವ ಮೂಲಕ ಸಹಕಾರ ನೀಡುತ್ತಾರೆ. ಕೋವಿಡ್‌ ಕಾರಣದಿಂದ ಕಳೆದೆರಡು ವರ್ಷಗಳಿಂದ ಈ ಕಾರ್ಯಕ್ರಮ ಸ್ಥಗಿತಗೊಂಡಿದೆ.

ಪ್ರಾಧಿಕಾರದಿಂದಲೂ ವ್ಯವಸ್ಥೆ: ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವೂ ನೆರವಾಗುತ್ತಾ ಬಂದಿದೆ. ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರಿಗಳು ಬರುವ ಮಾರ್ಗದುದ್ದಕ್ಕೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ. ಅಲ್ಲದೇ ಭಕ್ತರ ಅನುಕೂಲಕ್ಕಾಗಿ ಆಧುನಿಕ ಮೆಟ್ಟಿಲುಗಳ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT