ಶುಕ್ರವಾರ, ಸೆಪ್ಟೆಂಬರ್ 17, 2021
30 °C

ಬುದ್ಧಿಮಾಂದ್ಯ ಬಾಲಕಿ ಅತ್ಯಾಚಾರ: ಯುವಕನಿಗೆ 20 ವರ್ಷ ಸಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಯಳಂದೂರು ತಾಲ್ಲೂಕಿನ ಗ್ರಾಮವೊಂದರಲ್ಲಿ ಅಂಗವಿಕಲ ಹಾಗೂ ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಯುವಕನಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯವು ಗುರುವಾರ ಆದೇಶ ಹೊರಡಿಸಿದೆ. 

ಅದೇ ತಾಲ್ಲೂಕಿನ ರವಿ ಅಲಿಯಾಸ್‌ ರವಿಕುಮಾರ್‌ (26) ಶಿಕ್ಷೆಗೆ ಗುರಿಯಾದ ಅಪರಾಧಿ. 2018ರ ಆಗಸ್ಟ್‌ 15ರಂದು ಈ ಘಟನೆ ನಡೆದಿತ್ತು. ಮೂರು ವರ್ಷಗಳಲ್ಲಿ ನ್ಯಾಯಾಲಯ ಪ್ರಕರಣವನ್ನು ಇತ್ಯರ್ಥ ಪಡಿಸಿದೆ. 

ಘಟನೆ ವಿವರ: ಒಂಬತ್ತು ವರ್ಷದ ಬಾಲಕಿಯು ಅಂಗವೈಕಲ್ಯದ ಜೊತೆಗೆ ಬುದ್ಧಿಮಾಂದ್ಯ ಸಮಸ್ಯೆಯಿಂದ ಬಳಲುತ್ತಿದ್ದಳು. 2018ರ ಆಗಸ್ಟ್‌ 15ರಂದು ಊರಿನ ಶಾಲೆಯಲ್ಲಿ ಆಟವಾಡುತ್ತಿದ್ದಾಗ ರವಿಯು ಬಾಲಕಿಯನ್ನು ಪುಸಲಾಯಿಸಿ, ಆಕೆಯ ಬಾಯಿಯನ್ನು ಮುಚ್ಚಿಕೊಂಡು ಶಾಲೆಯ ಮಹಡಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಈ ಕೃತ್ಯವನ್ನು ಕಂಡ ಇತರ ಮಕ್ಕಳು ಬಾಲಕಿಯ ಅಜ್ಜನಿಗೆ ವಿಷಯ ತಿಳಿಸಿದಾಗ, ಅವರು ಸ್ಥಳಕ್ಕೆ ಹೋದಾಗ ಬಾಲಕಿಯು ತನ್ನ ಅಜ್ಜನಿಗೆ ನಡೆದ ಘಟನೆ ವಿವರಿಸಿದ್ದಳು.

ಬಾಲಕಿಯ ತಾಯಿ ಯಳಂದೂರು ಠಾಣೆಗೆ ನೀಡಿದ ದೂರಿನ ಅನ್ವಯ, ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದ ಪೊಲೀಸರು ರವಿಯನ್ನು ಬಂಧಿಸಿದ್ದರು. ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು. 

ರವಿ ಮೇಲಿನ ಆರೋಪಗಳೆಲ್ಲವೂ ಸಾಬೀತಾಗಿರುವುದರಿಂದ ಆತನನ್ನು ಅಪರಾಧಿ ಎಂದು ಘೋಷಿಸಿದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಸದಾಶಿವ ಎಸ್‌ಸುಲ್ತಾನ್‌ಪುರಿ ಅವರು, 20 ವರ್ಷಗಳ ಶಿಕ್ಷೆ ಹಾಗೂ ₹2 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ದಂಡದ ಹಣ ಪಾವತಿಸಲು ವಿಫಲನಾದರೆ ಮತ್ತೆ 1 ವರ್ಷ ಕಠಿಣ ಶಿಕ್ಷೆ ಅನುಭವಿಸಬೇಕು ಎಂದು ಆದೇಶದಲ್ಲಿ ಅವರು ಆದೇಶದಲ್ಲಿ ತಿಳಿಸಿದ್ದಾರೆ. 

 

ಸಂತ್ರಸ್ತ ಬಾಲಕಿಗೆ ನೆರವು: ಸಂತ್ರಸ್ತ ಬಾಲಕಿಗೆ  ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ಹಾಗೂ ವಿದ್ಯಾಭ್ಯಾಸಕ್ಕೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು ಎಂದು ನ್ಯಾಯಾಧೀಶರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಅಲ್ಲದೇ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಪರಿಹಾರವಾಗಿ ಬಾಲಕಿಗೆ ₹2.50 ಲಕ್ಷ ನೀಡಬೇಕು ಎಂದೂ ಅವರು ಆದೇಶದಲ್ಲಿ ಹೇಳಿದ್ದಾರೆ. 

ಪ್ರಾಸಿಕ್ಯೂಷನ್‌ ಪರವಾಗಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಕೆ.ಯೋಗೇಶ್ ಅವರು ವಾದ ಮಂಡಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು