ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಿಂದ ಮೃತಪಟ್ಟ ಸ್ನೇಹಿತನ ಪತ್ನಿಗೆ ಆಸರೆಯಾದ ಯುವಕ

ಬೆಂಗಳೂರಿನಲ್ಲಿ ಜ.27ರಂದು ಪುನರ್‌ವಿವಾಹ; ಸ್ವಾಮೀಜಿ, ಕುಟುಂಬಸ್ಥರು, ಸ್ನೇಹಿತರು ಭಾಗಿ
Last Updated 7 ಫೆಬ್ರುವರಿ 2022, 15:46 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌ ಎರಡನೇ ಅಲೆಯಲ್ಲಿ ಸೋಂಕಿನಿಂದ ಮೃತಪಟ್ಟಿದ್ದ ಸ್ನೇಹಿತನ ಪತ್ನಿಯನ್ನು ಮದುವೆಯಾಗಿ ಆಕೆ ಹಾಗೂ ಆಕೆಯ ಮಗನಿಗೆ ಯುವಕರೊಬ್ಬರು ಆಸರೆಯಾಗಿದ್ದಾರೆ.

ಬೆಂಗಳೂರಿನಲ್ಲಿ ನೆಲೆಸಿರುವ ತಾಲ್ಲೂಕಿನ ನಂಜದೇವನಪುರದ ಎಂ.ಲೋಕೇಶ್‌ (36), ತಮ್ಮ ಜೀವದ ಗೆಳೆಯನಾಗಿದ್ದ ಚೇತನ್‌ಕುಮಾರ್‌ ಅವರ ಪತ್ನಿ ಅಂಬಿಕಾ (30) ಅವರನ್ನು ಪೋಷಕರ ಸಮ್ಮತಿಯೊಂದಿಗೆ ಜ.27ರಂದುಬೆಂಗಳೂರಿನ ಕೆ.ಜಿ. ರಸ್ತೆಯಲ್ಲಿರುವ ಸರ್ಪಭೂಷಣ ಶಿವಯೋಗಿಗಳ ಮಠದ ಆವರಣದಲ್ಲಿ ಮದುವೆಯಾದರು.

ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಮಲ್ಲಿಕಾರ್ಜುನ ದೇವರು, ಹಂಸಭಾವಿಯ ಸಿದ್ಧಲಿಂಗ ಸ್ವಾಮೀಜಿ, ಶಿರಸಿಯ ಮಲ್ಲಿಕಾರ್ಜುನ ಸ್ವಾಮೀಜಿ, ಶಿಕಾರಿಪುರದ ಬಸವಲಿಂಗ ಸ್ವಾಮೀಜಿ ಹಾಗೂ ಹಾಗೂ ಇಬ್ಬರ ಸ್ನೇಹಿತರು ಮದುವೆಗೆ ಸಾಕ್ಷಿಯಾದರು.

ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು ಗ್ರಾಮದ ಚೇತನ್‌ಕುಮಾರ್ ಹಾಗೂ ಹನೂರಿನ ಅಂಬಿಕಾ ಎಂಟು ವರ್ಷದ ಹಿಂದೆ ವಿವಾಹವಾಗಿದ್ದರು. ಅವರಿಗೆ 7 ವರ್ಷದ ಮಗ ಇದ್ದಾನೆ.

ಬೆಂಗಳೂರಿನ ಕಾರ್ಖಾನೆಯೊಂದರಲ್ಲಿ ಉದ್ಯೋಗಿಯಾಗಿದ್ದ ಚೇತನ್‌ಕುಮಾರ್‌ ಅವರಿಗೆ ಕೋವಿಡ್‌ ಎರಡನೇ ಅಲೆಯಲ್ಲಿ ಸೋಂಕು ದೃಢಪಟ್ಟು ಆಸ್ಪತ್ರೆಯಲ್ಲಿ 15 ದಿನ ಚಿಕಿತ್ಸೆ ಪಡೆದರೂ, ಸ್ಪಂದಿಸದೆ ಮೃತಪಟ್ಟರು.ಪತಿಯ ಸಾವಿನಿಂದ ಅಂಬಿಕಾ ಕಂಗೆಟ್ಟಿದ್ದರು. ಖಿನ್ನತೆಗೂ ಒಳಗಾಗಿದ್ದರು.

ಮಠದಲ್ಲಿ ಉದ್ಯೋಗಿಯಾಗಿರುವ ಎಂ.ಲೋಕೇಶ್‌ ಹಾಗೂ ಚೇತನ್‌ಕುಮಾರ್‌ 13 ವರ್ಷಗಳಿಂದ ಒಡನಾಡಿಗಳು. ಮಠದ ಹಾಸ್ಟೆಲ್‌ನಲ್ಲಿ ಜೊತೆಯಾಗಿ ವ್ಯಾಸಂಗ ಮಾಡಿದ್ದ‌ರು. ಸ್ನೇಹಿತನ ಅಕಾಲಿಕ ಅಗಲಿಕೆ ಲೋಕೇಶ್‌ ಅವರಲ್ಲೂ ದುಃಖ ತರಿಸಿತ್ತು. ಸ್ನೇಹಿತನ ಕುಟುಂಬದ ಸ್ಥಿತಿಯನ್ನು ಕಂಡು ಮರುಗಿದ್ದರು. ಅವರಿಗೆ ಆಧಾರವಾಗಲು ನಿರ್ಧರಿಸಿದರು.

‘ಹಿರಿಯರ ಸಮ್ಮತಿಯಿಂದ ಮದುವೆ’

‘ಗಂಡನನ್ನು ಕಳೆದುಕೊಂಡು ಅಧೀರರಾಗಿದ್ದ ಅಂಬಿಕಾ ಬದುಕಿಗೆ ಆಸರೆಯಾಗಲು ಲೋಕೇಶ್‌ ಮುಂದೆ ಬಂದ. ಚೇತನ್‌ ಅವರ ತಂಗಿ, ಮನೆಯವರು, ಅಂಬಿಕಾ ಹಾಗೂ ಅವರ ತಂದೆ–ತಾಯಿ ಜೊತೆ ಮಾತನಾಡಿದೆವು. ಅಂಬಿಕಾ ಹಾಗೂ ಅವರ ತಂದೆ–ತಾಯಿ ಆರಂಭದಲ್ಲಿ ಒಪ್ಪಲಿಲ್ಲ. ಎಲ್ಲವನ್ನೂ ವಿವರಿಸಿದ ನಂತರ ಅವರಿಗೆ ಮನವರಿಕೆ ಆಗಿ ಒಪ್ಪಿಗೆ ನೀಡಿದರು. ಹಿರಿಯರೆಲ್ಲರ ಒಪ್ಪಿಗೆ ಪಡೆದು, ಆಹ್ವಾನ ಪತ್ರಿಕೆ ಮುದ್ರಿಸಿ ಮಠದಲ್ಲಿ, ಸ್ವಾಮೀಜಿ ಹಾಗೂ ಮುಖಂಡರ ಸಮ್ಮುಖದಲ್ಲಿ ಸರಳವಾಗಿ ಮದುವೆ ನಡೆಸಲಾಗಿದೆ’ ಎಂದು ಲೋಕೇಶ್‌ ಸ್ನೇಹಿತ ಹಾಗೂ ಈ ಮದುವೆ ನಡೆಯಲು ಕಾರಣಕರ್ತರಲ್ಲಿ ಒಬ್ಬರಾಗಿರುವ ಕೋಡಿಮೋಳೆಯ ಸಂಪತ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಚೇತನ್ ನನ್ನ ಗೆಳೆಯ. ಅವನ ಸಾವಿನಿಂದ ನೋವಾಗುವುದರ ಜೊತೆಗೆ, ಸಂತಸದಿಂದ ಇದ್ದ ಕುಟುಂಬದ ಪರಿಸ್ಥಿತಿ ಹೀಗಾಯಿತಲ್ಲ ಎಂದು ದುಃಖವಾಯಿತು. ಅಂಬಿಕಾ ಹಾಗೂ ಅವರ ಮಗನಿಗೆ ಆಸರೆಯಾಗಬೇಕು ಎಂದುಕೊಂಡೆ. ಗೆಳೆಯರ ಸಹಕಾರ ಹಾಗೂ ಹಿರಿಯರ ಸಮ್ಮತಿಯಿಂದ ಮದುವೆ ನಡೆದಿದೆ’ ಎಂದುಎಂ.ಲೋಕೇಶ್ ತಿಳಿಸಿದರು.

‘ಸಮಾಜಕ್ಕೆ ಮಾದರಿಯಾಗಿ ನನ್ನ ಸ್ನೇಹಿತ ಲೋಕೇಶ್‌ ನಡೆದುಕೊಂಡಿದ್ದಾನೆ. ಮದುವೆಯ ವಿಷಯ ಗೊತ್ತಾಗಿ ಕೆಲವರು ನಕಾರಾತ್ಮಕವಾಗಿ ಮಾತನಾಡುತ್ತಿದ್ದಾರೆ ಎಂಬ ಬೇಸರ ಅವನಿಗೆ ಇದೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡ ಎಂದು ಸ್ನೇಹಿತರೆಲ್ಲ ಹೇಳಿದ್ದೇವೆ. ಅವನು ಮಾಡಿರುವ ಕೆಲಸಕ್ಕೆ ಹೆಮ್ಮೆ ಇದೆ’ ಎಂದು ಸಂಪತ್‌ಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT