ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸುಕಿದ ಮೋಡಕ್ಕೆ ಮುದುಡಿದ ಜೀವನ

ಮಾಂಡೂಸ್‌ ಚಂಡಮಾರುತ ಪರಿಣಾಮ; ಜಿಲ್ಲೆಯಾದ್ಯಂತ ತುಂತುರು ಮಳೆ
Last Updated 10 ಡಿಸೆಂಬರ್ 2022, 16:59 IST
ಅಕ್ಷರ ಗಾತ್ರ

ಚಾಮರಾಜನಗರ: ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಮಾಂಡೂಸ್‌ ಚಂಡಮಾರುತದ ಪ್ರಭಾವ ಜಿಲ್ಲೆಯ ಮೇಲೂ ಆಗಿದೆ. ಶನಿವಾರ ಜಿಲ್ಲೆಯಾದ್ಯಂತ ದಿನವಿಡೀ ದಟ್ಟ ಮೋಡದ ವಾತಾವರಣ ಇರುವುದರ ಜೊತೆಗೆ ತುಂತುರು ಮಳೆಯೂ ಆಗಿದೆ. ಶೀತ ಹವೆ, ಮೋಡ ಕವಿದ ವಾತಾವರಣ, ತುಂತುರು ಮಳೆಯಿಂದಾಗಿ ಜನಜೀವನವೂ ಮುದುಡಿತು.

ಮಾಂಡೂಸ್‌ ಚಂಡಮಾರುತದ ಪ್ರಭಾವ ಜಿಲ್ಲೆಯಾದ್ಯಂತ ಶುಕ್ರವಾರ ಬೆಳಿಗ್ಗೆಯಿಂದಲೇ ಕಂಡು ಬಂದಿತ್ತು. ಶುಕ್ರವಾರ ಸಂಜೆ ಹೊತ್ತಿಗೆ ಯಳಂದೂರು, ಚಾಮರಾಜನಗರ ಸೇರಿದಂತೆ ಹಲವು ಕಡೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಿತ್ತು.

ಶೀತ ಹವೆಯಿಂದಾಗಿ ಶುಕ್ರವಾರ ರಾತ್ರಿ, ಶನಿವಾರ ಮುಂಜಾನೆ ಚಳಿ ಜೋರಾಗಿತ್ತು. ಜನರು ಮನೆಯಿಂದ ಹೊರಗಡೆ ಬರಲು ಹಿಂಜರಿದರು. ಮೋಡ ಮುಸುಕಿದ್ದರಿಂದ ಇಡೀ ದಿನ ಮಳೆಗಾಲದಲ್ಲಿ ಮಲೆನಾಡಿನಲ್ಲಿರುವ ವಾತಾವರಣ ಇತ್ತು. 9 ಗಂಟೆಯ ಹೊತ್ತಿಗೆ ತುಂತುರು ಮಳೆ ಆರಂಭವಾಯಿತು. ಆ ಬಳಿಕ ದಿನವಿಡೀ ಬಿಟ್ಟು ಬಿಟ್ಟು ಮಳೆ ಬಂದು ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿತು. ಸಂಜೆಯ ಹೊತ್ತಿಗೆ ಜಿಟಿ ಜಿಟಿ ಮಳೆ ಸುರಿಯಿತು.

ದಿನಪೂರ್ತಿ ಚಳಿ: ತುಂತುರು ಮಳೆ, ಶೀತ ಹವೆಯಿಂದಾಗಿ ಚಳಿ ಹೆಚ್ಚಾಗಿ ಜನರು ಕಿರಿ ಕಿರಿ ಅನುಭವಿಸಿದರು. ಎರಡನೇ ಶನಿವಾರ ಆಗಿದ್ದರಿಂದ ಸರ್ಕಾರಿ ಕಚೇರಿ, ಬ್ಯಾಂಕ್‌ಗಳಿಗೆ ರಜೆ ಇತ್ತು. ಹಾಗಾಗಿ, ಜನರ ಓಡಾಟ ಕಡಿಮೆ ಇತ್ತು. ಆದರೆ ಶಾಲೆ, ಕಾಲೇಜುಗಳು ತೆರೆದಿದ್ದುದರಿಂದ ಮಕ್ಕಳು ತುಂತುರು ಮಳೆ, ಚಳಿಯ ನಡುವೆ ಶಾಲೆ, ಕಾಲೇಜುಗಳಿಗೆ ಹೆಜ್ಜೆ ಹಾಕಿದರು.

ಮಹಿಳೆಯರು, ಮಕ್ಕಳು, ವೃದ್ಧರು ದಿನಪೂರ್ತಿ ಸ್ವೆಟರ್‌, ಟೊಪ್ಪಿ, ಜಾಕೆಟ್‌, ಮಫ್ಲರ್‌ ಧರಿಸಿ ಚಳಿಯಿಂದ ರಕ್ಷಣೆ ಪಡೆದರು. ಶನಿವಾರ ಜಿಲ್ಲೆಯ ಗರಿಷ್ಠ ಉಷ್ಣಾಂಶ 21–22 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿದ್ದರೆ, ಕನಿಷ್ಠ ಉಷ್ಣಾಂಶ 18–19 ಡಿಗ್ರಿ ಸೆಲ್ಸಿಯಸ್‌ ಇತ್ತು.

ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಡಿ. 14ರವರೆಗೂ ಜಿಲ್ಲೆಯಾದ್ಯಂತ ಚಂಡಮಾರುತದ ಪರಿಣಾಮ ಇರಲಿದ್ದು, ಮೋಡ ಕವಿದ ವಾತಾವರಣ ಹಾಗೂ ಮಳೆಯಾಗುವ ಸಾಧ್ಯತೆ ಇದೆ.ಭಾನುವಾರ ಕೊಂಚ ಬಿರುಸಿನಿಂದಲೇ ಮಳೆಯಾಗಲಿದೆ.

ಕಟಾವಿಗೆ ತೊಂದರೆ: ಜಿಲ್ಲೆಯಲ್ಲಿ ಭತ್ತ, ರಾಗಿ, ಜೋಳ ಸೇರಿದಂತೆ ಹಲವು ಬೆಳೆಗಳು ಕಟಾವಿಗೆ ಬಂದಿದ್ದು, ಮಳೆಯಿಂದಾಗಿ ತೊಂದರೆಯಾಗಿದೆ. ಕಟಾವು ಮಾಡಿದ ಉತ್ಪನ್ನಗಳನ್ನು ಒಣಗಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT