ಗುರುವಾರ , ಮೇ 19, 2022
20 °C
ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದಲ್ಲಿ ಮಂಟೇಸ್ವಾಮಿ ಅಧ್ಯಯನ ಪೀಠ ಉದ್ಘಾಟನೆ

ಚಾಮರಾಜನಗರ: ವಸ್ತು, ವ್ಯಕ್ತಿ ನಿಷ್ಠ ಸತ್ಯಾನ್ವೇಷಣೆ ನಡೆಯಲಿ -ಸುತ್ತೂರು ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಅಧ್ಯಯನ ಪೀಠಗಳ ಸ್ಥಾಪನೆ ಉದ್ದೇಶ ಸತ್ಯಾನ್ವೇಷಣೆ ಮಾಡುವುದು. ಈ ಪೀಠಗಳು ವಸ್ತು, ವ್ಯಕ್ತಿ ನಿಷ್ಠವಾಗಿ ಅಧ್ಯಯನ, ಸಂಶೋಧನೆ ನಡೆಸಿ ಸತ್ಯವನ್ನು ಹೊರ ತೆಗೆಯಬೇಕು’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಗುರುವಾರ ಇಲ್ಲಿ ಹೇಳಿದರು. 

ನಗರದ ಹೊರವಲಯದಲ್ಲಿರುವ ಮೈಸೂರು ವಿ.ವಿ.ಯ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ಮಂಟೇಸ್ವಾಮಿ ಅಧ್ಯಯನ ಪೀಠ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಚಾಮರಾಜನಗರದಲ್ಲಿ ಮಂಟೇಸ್ವಾಮಿ ಅಧ್ಯಯನ ಪೀಠ ಸ್ಥಾಪನೆಯಾಗುತ್ತಿರುವುದು ಐತಿಹಾಸಿಕ ಬೆಳವಣಿಗೆ. ಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ ಜೀವನ ಚರಿತ್ರೆ, ಸಂದೇಶಗಳ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಬೇಕಿದೆ’ ಎಂದರು.

‘ರಾಚಪ್ಪಾಜಿ ಮೂಲತಃ ಕಲಬುರ್ಗಿ ಜಿಲ್ಲೆಯ ಕೊಡೆಕಲ್‌ ಬಸವಣ್ಣನ ಕ್ಷೇತ್ರದಿಂದ ಬಂದವರು ಎಂಬ ಐತಿಹ್ಯವಿದೆ. ಉತ್ತರ ಕರ್ನಾಟಕದಲ್ಲಿ ಶರಣ ಕ್ರಾಂತಿಯ ನಂತರ ಈ ಪವಾಡ ಪುರುಷರು ಕಾವೇರಿ ನದಿ ತೀರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಅಧ್ಯಯನ ಪೀಠವು ಈ ವಿಚಾರಗಳ ಬಗ್ಗೆ ಅಧ್ಯಯನ, ಸಂಶೋಧನೆ ನಡೆಸಬೇಕು’ ಎಂದು ಸಲಹೆ ನೀಡಿದರು. 

ಮಳವಳ್ಳಿ, ಆದಿಹೊನ್ನಾಯಕನಹಳ್ಳಿ ಹಾಗೂ ಕಪ್ಪಡಿ ಕ್ಷೇತ್ರದ ಶ್ರೀಕಂಠ ಸಿದ್ದಲಿಂಗರಾಜೇ ಅರಸ್‌ ಮಾತನಾಡಿ, ‘ಮಂಟೇಸ್ವಾಮಿ ಪರಂಪರೆಯು ಜಾತ್ಯತೀತ, ಏಕತೆ, ಸರಳತೆ, ಭಿಕ್ಷೆ ಹಾಗೂ ಭಕ್ತಿಯನ್ನು ಒಳಗೊಂಡಿರುವ ಪರಂಪರೆ. ಮುಂದಿನ ದಿನಗಳಲ್ಲಿಯೂ ಈ ಪರಂಪರೆ ಉಳಿದು ಬೆಳೆಯಲು ಸಂಶೋಧನೆ, ಅಧ್ಯಯನ ಪೀಠಗಳ ಅಗತ್ಯವಿದೆ. ಇದನ್ನು ಅರಿತು ಮೈಸೂರು ವಿಶ್ವವಿದ್ಯಾಲಯವು ಮಂಟೇಸ್ವಾಮಿ ಅಧ್ಯಯನ ಪೀಠ ಸ್ಥಾಪಿಸುತ್ತಿರುವುದು ಸಂತಸದ ವಿಚಾರ’ ಎಂದರು.

‘ಚಾಮರಾಜನಗರ ಜಿಲ್ಲೆಯು ಈ ಪ‍ರಂಪರೆಯ ಹೃದಯಭಾಗ. ಅಲ್ಲಿಯೇ ಈ ಅಧ್ಯಯನ ಪೀಠ ಸ್ಥಾಪನೆಯಾಗಿರುವುದು ಸೂಕ್ತವಾಗಿದೆ. ನಮ್ಮ ಮಠದಿಂದ ಮುಂದಿನ ಐದು ವರ್ಷದವರೆಗೆ ಪ್ರತಿ ವರ್ಷ ಈ ಪೀಠಕ್ಕೆ ₹ 50 ಸಾವಿರ ದೇಣಿಗೆ ನೀಡಲಾಗುವುದು’ ಎಂದು ಅವರು ಘೋಷಿಸಿದರು. 

ಮೈಸೂರು ವಿ.ವಿ. ಕುಲಪತಿ ಪ್ರೊ.ಜಿ.ಹೇಮಂತ್‌ ಕುಮಾರ್‌ ಮಾತನಾಡಿ, ‘ವಿ.ವಿ.ಯಲ್ಲಿ 20 ಅಧ್ಯಯನ ಪೀಠಗಳಿವೆ. ಎಲ್ಲವೂ ಸಕ್ರಿಯವಾಗಿ ಕೆಲಸ ಮಾಡುತ್ತಿವೆ ಎಂದು ನಾನು ಹೇಳಲಾರೆ. ಪೀಠಗಳನ್ನು ಸ್ಥಾಪನೆ ಮಾಡಿದರೆ ಸಾಲದು. ಅವು ಅರ್ಥಪೂರ್ಣವಾಗಿ ನಡೆದುಕೊಂಡು ಹೋಗಬೇಕು. ಮಂಟೇಸ್ವಾಮಿ ಪೀಠವು 10ರಂತೆ 11ನೇಯದ್ದು ಎಂಬಂತೆ ಆಗಬಾರದು. ಆರಂಭದಲ್ಲಿ ಸರ್ಕಾರ ಪೀಠಕ್ಕೆ ₹ 30 ಲಕ್ಷ ಅನುದಾನ ನೀಡಿತ್ತು. ಅದು ಸಾಕಾಗುವುದಿಲ್ಲ ಎಂದು ₹ 1 ಕೋಟಿಗಾಗಿ ಬೇಡಿಕೆ ಸಲ್ಲಿಸಿದ್ದೆವು. ಸರ್ಕಾರ ಮಂಜೂರು ಮಾಡಿದ ನಂತರ ಪೀಠ ಸ್ಥಾಪನೆ ಮಾಡಲಾಗಿದೆ’ ಎಂದರು.

ಚಾಮರಾಜನಗರದಲ್ಲಿ ಪೀಠ ಸ್ಥಾಪನೆಗೆ ಪ್ರಯತ್ನ ಪಟ್ಟಿದ್ದ, ಮೈಸೂರು ವಿ.ವಿ. ಸಿಂಡಿಕೇಟ್‌ ಸದಸ್ಯ ಪ್ರದೀಪ್‌ಕುಮಾರ್‌ ದೀಕ್ಷಿತ್‌ ಮಾತನಾಡಿ, ‘ಚಾಮರಾಜನಗರದಲ್ಲಿಯೇ ಪೀಠ ಸ್ಥಾಪನೆ ಮಾಡಬೇಕು ಎಂದು ಸಿಂಡಿಕೇಟ್‌ ಸಭೆಯಲ್ಲಿ ಪ್ರಸ್ತಾಪ ಮಾಡಿದಾಗ ಎಲ್ಲರೂ ಬೆಂಬಲಿಸಿದರು’ ಎಂದು ಹೇಳಿದರು.

ಕುಲಸಚಿವ ಆರ್.ಶಿವಪ್ಪ, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಆರ್‌.ಮಹೇಶ್‌, ಸಾಹಿತಿ ಮಲೆಯೂರು ಗುರುಸ್ವಾಮಿ ಮಾತನಾಡಿದರು. 

ಸಿಂಡಿಕೇಟ್‌ ಸದಸ್ಯರಾದ ಪ್ರೊ.ದೊಡ್ಡಾಚಾರಿ, ಡಾ.ದಾಮೋದರ್‌, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಂ.ಜಿ.ಮಂಜುನಾಥ್‌, ಜಾನಪದ ವಿಭಾಗದ ಮುಖ್ಯಸ್ಥ ನಂಜಯ್ಯ ಹೊಂಗನೂರು, ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ ಇದ್ದರು.

ಸಂಶೋಧನಾ ಬರಹಗಳು, ನೀಲಗಾರರ ಜೀವನ ಚರಿತ್ರೆ...
ಪ್ರಾಸ್ತಾವಿಕವಾಗಿ ಮಾತನಾಡಿದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಕೃಷ್ಣಮೂರ್ತಿ ಹನೂರು, ‘ಮಂಟೇಸ್ವಾಮಿ ಸೇರಿದಂತೆ ಇತರ ಜಾನಪದ ಪವಾಡ ಪುರುಷರ ಬಗ್ಗೆ, ಅವರ ಕಾವ್ಯಗಳ ಬಗ್ಗೆ ಹೊರಗಿನವರಿಗೆ ಕುತೂಹಲ ಇದೆ. ಆದರೆ, ಅದು ಅವರಿಗ ತಲುಪುತ್ತಿಲ್ಲ. ಅದಕ್ಕಾಗಿ ಇಂತಹ ಪೀಠಗಳ ಅಗತ್ಯವಿದೆ’ ಎಂದರು. 

‘1970ರಿಂದ ಇಲ್ಲಿಯವರೆಗೆ ಮಂಟೇಸ್ವಾಮಿ ಕಾವ್ಯದ ಆರು ಪಠ್ಯಗಳು ಬಂದಿವೆ. ಅವುಗಳನ್ನು ಇಟ್ಟುಕೊಂಡು ಲೇಖನಗಳನ್ನು ಬರೆಯಲು ತೀರ್ಮಾನಿಸಲಾಗಿದೆ. ಆರು ಮಂದಿ ಈಗಾಗಲೇ ಬರೆಯುತ್ತಿದ್ದಾರೆ. ಈ ಪೈಕಿ ಒಂದು ಪಠ್ಯ 100 ಪುಟಗಳಿವೆ. ಇದನ್ನು ಇಂಗ್ಲಿಷ್‌ಗೆ ಭಾಷಾಂತರಿಸಲಾಗುವುದು. ನಮ್ಮಲ್ಲಿ ಹಲವು ನೀಲಗಾರರಿದ್ದು, ಆರಂಭದಲ್ಲಿ ಕನಿಷ್ಠ 10 ಜನರ ಜೀವನ ಚರಿತ್ರೆ ದಾಖಲಿಸಲಾಗುವುದು. ಈ ಕಾವ್ಯಗಳನ್ನು ನೀಲಗಾರರಿಂದ ಹಾಡಿಸಿ ಅವುಗಳ ಚಿತ್ರೀಕರಣ ಮಾಡಿ ಯುಟ್ಯೂಬ್‌ ಚಾನಲ್ ಮೂಲಕ ಜನರಿಗೆ ತಲುಪಿಸಲು ಪ್ರಯತ್ನಿಸಲಾಗುವುದು. ಇದೆಲ್ಲವೂ ಮೂರ್ನಾಲ್ಕು ತಿಂಗಳುಗಳಲ್ಲಿ ಮಾಡಬಹುದಾಗಿದೆ’ ಎಂದು ಪೀಠದಿಂದ ನಡೆಸಲಿರುವ ಕಾರ್ಯಕ್ರಮಗಳನ್ನು ಅವರು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.