ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ತಂಬಾಕು ವಿರೋಧಿ ದಿನ| ಮರಿಯಾಲ: ತಂಬಾಕು ಮುಕ್ತ ಗ್ರಾಮದತ್ತ...

ಜಿಲ್ಲೆಯ ಜನಸಂಖ್ಯೆಯಲ್ಲಿ ಶೇ 25ರಷ್ಟು ತಂಬಾಕು ವ್ಯಸನಿಗಳು
Last Updated 31 ಮೇ 2022, 4:19 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ ಆರೋಗ್ಯ ಇಲಾಖೆಯು ತಾಲ್ಲೂಕಿನ ಮರಿಯಾಲ ಗ್ರಾಮವನ್ನು ತಂಬಾಕು ಮುಕ್ತ ಗ್ರಾಮವನ್ನಾಗಿ ಮಾಡಲು ಹೆಜ್ಜೆಯಿಟ್ಟಿದೆ.

ಪ್ರತಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಒಂದು ಗ್ರಾಮವನ್ನು ತಂಬಾಕು ಮುಕ್ತ ಗ್ರಾಮವನ್ನಾಗಿ ಮಾಡಬೇಕು ಎಂದು ಸರ್ಕಾರ ಎಲ್ಲ ಜಿಲ್ಲೆಗಳಿಗೆ ಸೂಚಿಸಿದ್ದು, ಜಿಲ್ಲಾ ಆರೋಗ್ಯ ಇಲಾಖೆಯು ‘ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ’ದಡಿ ಮರಿಯಾಲ ಗ್ರಾಮವನ್ನು ಆಯ್ಕೆ ಮಾಡಿದೆ.

ಆಧಿಕಾರಿಗಳು, ಸಿಬ್ಬಂದಿ ಈಗಾಗಲೇ ಗ್ರಾಮದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ಮುಖಂಡರು, ಜನರೊಂದಿಗೆ ಸಭೆ ನಡೆಸಿದ್ದು, ಯೋಜನೆ ಅನುಷ್ಠಾನಕ್ಕೆ ಎಲ್ಲರ ಸಹಕಾರವನ್ನು ಕೋರಿದ್ದಾರೆ.

ಗ್ರಾಮದಲ್ಲಿ 350 ಮನೆಗಳಿವೆ. 1,165 ಜನರಿದ್ದಾರೆ. ಇಲಾಖೆ ಮಾಹಿತಿ ಕಲೆ ಹಾಕಿರುವ ಪ್ರಕಾರ, 150 ಜನರು ಬೀಡಿ, ಸಿಗರೇಟ್ ಅಥವಾ ಇತರೆ ತಂಬಾಕು ಉತ್ಪನ್ನ ಬಳಸುತ್ತಿದ್ದಾರೆ.

ಈ 150 ಜನರನ್ನು ಮನವೊಲಿಸಿ, ತಂಬಾಕು ಉತ್ಪನ್ನಗಳನ್ನು ಬಳಸದಂತೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

'ಈಗಾಗಲೇ ನಾವು ಮುಖಂಡರನ್ನು ಭೇಟಿ ಮಾಡಿ ಯೋಜನೆ ಪ್ರಸ್ತಾಪಿಸಿದ್ದೇವೆ. ಅವರು ಸಹಕಾರ ನೀಡುವ ಭರವಸೆ ನೀಡಿದ್ದಾರೆ’ ಎಂದು ಈ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ರಾಷ್ಟ್ರೀಯ ತಂಬಾಕು‌ ನಿಯಂತ್ರಣ ಕಾರ್ಯಕ್ರಮದ ಸಿಬ್ಬಂದಿಯೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.

ಈಗಾಗಲೇ ಶಾಲೆಯಲ್ಲಿ, ಗ್ರಾಮದಲ್ಲಿ ತಂಬಾಕು ವಿರೋಧಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ನಿಯಂತ್ರಣ ಸುಲಭ: ನಂಜನಗೂಡು ರಸ್ತೆಯ ಮರಿಯಾಲದ ವೃತ್ತದಲ್ಲಿ ಜೆಎಸ್‌ಎಸ್ ಐಟಿಐ ಕಾಲೇಜು ಇದೆ. ಕೋಟ್ಪಾ ಪ್ರಕಾರ, ಅದರ ಸುತ್ತಲಿನ 100 ಗಜಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳನ್ನು‌ ಮಾರಾಟ ಮಾಡುವಂತಿಲ್ಲ. ಗ್ರಾಮಕ್ಕೆ ಪ್ರವೇಶಿಸುತ್ತಿದ್ದಂತೆಯೇ ಸರ್ಕಾರಿ ಶಾಲೆ ಸಿಗುತ್ತದೆ. ಆ ಶಾಲೆಯ ಸುತ್ತಲೂ ಈ ನಿಯಮ ಅನ್ವಯವಾಗುತ್ತದೆ. ಹಾಗಾಗಿ, ಗ್ರಾಮದಲ್ಲಿ ತಂಬಾಕು ಬಳಕೆ ನಿಯಂತ್ರಣ ಸುಲಭವಾಗಲಿದೆ ಎಂಬ ಕಾರಣಕ್ಕೆ ಅಧಿಕಾರಿಗಳು ಮರಿಯಾಲವನ್ನು ಆಯ್ಕೆ ಮಾಡಿದ್ದಾರೆ.

ಶೇ 25 ಮಂದಿ ಬಳಕೆ:ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಜಿಲ್ಲೆಯಲ್ಲಿ 2019ರಿಂದ ಜಾರಿಗೆ ಬಂದಿದೆ. ಆ ಸಂದರ್ಭದಲ್ಲಿ ಜಿಲ್ಲೆಯಲ್ಲಿರುವ ತಂಬಾಕು ಬಳಕೆದಾರರನ್ನು ಗುರುತಿಸಲು ಆರೋಗ್ಯ ಇಲಾಖೆ ಸಮೀಕ್ಷೆ ಮಾಡಿತ್ತು. ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಶೇ 25ರಷ್ಟು ಮಂದಿ ಬೀಡಿ, ಸಿಗರೇಟ್ ಅಥವಾ ಗುಟ್ಕಾ ಹಾಗೂ ಇತರ ತಂಬಾಕು ಉತ್ಪನ್ನಗಳ ವ್ಯಸನಿಗಳಿರುವುದು ಬೆಳಕಿಗೆ ಬಂದಿದೆ.ಸಿಗರೇಟ್, ಗುಟ್ಕಾಗಿಂತ ಬೀಡಿ ಸೇದುವವರ ಸಂಖ್ಯೆಯೇ‌ ಹೆಚ್ಚಿದೆ.

ವ್ಯಸನಿಗಳ ಸಂಖ್ಯೆ ಇಳಿಕೆ
ತಂಬಾಕು ಉತ್ಪನ್ನಗಳ ಬಳಕೆಯ ದುಷ್ಪರಿಣಾಮಗಳ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿರುವುದರಿಂದ ಬಳಕೆದಾರರ ಸಂಖ್ಯೆ ಇಳಿಮುಖವಾಗಿರುವುದು ಅಧ್ಯಯನದಿಂದ ತಿಳಿದು ಬಂದಿದೆ ಎಂದು ಹೇಳುತ್ತಾರೆ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಅನುಷ್ಠಾನಾಧಿಕಾರಿ‌ ಡಾ.ನಾಗರಾಜು,ಎಂ.

'2016-17ರ ಜಾಗತಿಕ ವಯಸ್ಕ ತಂಬಾಕು ಸಮೀಕ್ಷೆ (ಜಿಎಟಿಎಸ್) ಪ್ರಕಾರ, ರಾಜ್ಯದಲ್ಲಿ 15 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಶೇ 22.8 ಮಂದಿ ಅಂದರೆ 1.5 ಕೋಟಿಯಷ್ಟು ಮಂದಿ ತಂಬಾಕು ವ್ಯಸನಿಗಳಾಗಿದ್ದಾರೆ. 2011ರಲ್ಲಿ‌ ನಡೆದಿದ್ದ ಸಮೀಕ್ಷೆಯಲ್ಲಿ ರಾಜ್ಯದಲ್ಲಿ ಶೇ 28ರಷ್ಟು ಮಂದಿ ತಂಬಾಕು ವ್ಯಸನಿಗಳಿದ್ದರು' ಎಂದು ಮಾಹಿತಿ ನೀಡಿದರು.

*

ಜಿಲ್ಲೆಯಲ್ಲಿ ತಂಬಾಕು ಬಳಕೆಯ ವಿರುದ್ಧ ನಿರಂತರವಾಗಿ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸಲಾಗುತ್ತಿದೆ
-ಡಾ.ನಾಗರಾಜು ಎಂ. ರಾಷ್ಟ್ರೀಯ ತಂಬಾಕು ಕಾರ್ಯಕ್ರಮ ನಿಯಂತ್ರಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT