ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಂಸ, ಹೂವು, ತರಕಾರಿ ವ್ಯಾಪಾರಕ್ಕೂ ತಟ್ಟಿದ ಕೋವಿಡ್-19 ಬಿಸಿ

ಜಾತ್ರೆ ಸಂಭ್ರಮ: ಹೂವುಗಳ ಬೆಲೆ ಹೆಚ್ಚಳ; ಮೊಟ್ಟೆ ದರ ಇಳಿಕೆ, ಕೆಲ ತರಕಾರಿ ತುಟ್ಟಿ
Last Updated 16 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಚಾಮರಾಜನಗರ: ಕೊರೊನಾ ವೈರಸ್‌ ಭೀತಿ ಮಾಂಸ ಮಾರುಕಟ್ಟೆಯನ್ನೂ ಆವರಿಸಿದ್ದು, ಕೆಲ ಗ್ರಾಹಕರುಮಾಂಸ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಎರಡು ವಾರಗಳಿಂದ ಚಿಕನ್‌, ಮಟನ್‌ ಬೆಲೆ ಕಡಿಮೆಯಾಗುತ್ತಿದ್ದು, ಈ ವಾರ ಕೆ.ಜಿ ಮಾಂಸದ ಬೆಲೆ ಬೆಲೆ ₹10 ಕಡಿಮೆಯಾಗಿದೆ.

ಬೇಯಿಸಿದ ಮಾಂಸ ತಿಂದರೆ ಏನೂ ಸಮಸ್ಯೆ ಇಲ್ಲ ಎಂದು ವೈದ್ಯರು ಹೇಳುತ್ತಿದ್ದರೂ, ಜನರು ಮಾತ್ರ ಮಾಂಸ ಖರೀದಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ.

ಮೊಟ್ಟೆ ದರವೂ ಗಣನೀಯ ಕುಸಿತ ಕಾಣುತ್ತಿದೆ. ಮೊಟ್ಟೆ ಬೆಲೆ 15 ದಿನಗಳಿಂದ ಇಳಿಮುಖವಾಗಿದ್ದು, ಈ ವಾರ 100 ಮೊಟ್ಟೆಗಳ ಬೆಲೆ ₹15 ಕಡಿಮೆಯಾಗಿದೆ.₹320ಕ್ಕೆ ಸಿಗುತ್ತಿದೆ. ಮೀನಿನ ಬೆಲೆಯೂ ಕೆ.ಜಿಗೆ ₹10 ಕಡಿಮೆಯಾಗಿದೆ.

‘ಬೆಲೆ ಕುಸಿತಕ್ಕೆ ಕೊರೊನಾ ವೈರಸ್‌ ಭೀತಿಯೇ ಕಾರಣ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ಗ್ರಾಹಕರು ಮಾರುಕಟ್ಟೆ ಸಮೀಪ ಬರುವುದು ಕಡಿಮೆ ಮಾಡಿದ್ದಾರೆ. ಸ್ವಚ್ಛತೆ ಕಾಪಾಡುವಂತೆ ಜಿಲ್ಲಾಡಳಿತ, ನಗರಸಭೆ ಸೂಚನೆಗಳನ್ನೂ ನೀಡಿದೆ. ಅದನ್ನು ಪಾಲಿಸುತ್ತಿದ್ದೇವೆ. ವೈರಸ್‌ ಭಯ ದೂರವಾಗುವವರೆಗೂ ಬೇಡಿಕೆ ಸ್ವಲ್ಪ ಕಡಿಮೆ ಇರಬಹುದು. ಅಲ್ಲಿಯವರೆಗೂ ಕಾಯಲೇ ಬೇಕಾಗಿದೆ’ ಎಂದು ಮಾಂಸ ವ್ಯಾಪಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋಳಿ, ಮೊಟ್ಟೆ ಸೇವನೆಯಿಂದ ವೈರಸ್‌ ಹರಡುತ್ತದೆ ಎಂಬ ವದಂತಿ ಹರಡಿದೆ. ಇದನ್ನು ನಂಬಿ ಜನ ಮೊಟ್ಟೆ ಖರೀದಿಸಲು ಮುಂದಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿರುವುದರಿಂದ ಬೆಲೆ ಕುಸಿದಿದೆ. ಒಂದೆರಡು ವಾರ ಇದೇ ಸ್ಥಿತಿ ಇರಲಿದೆ’ ಎಂದು ಮೊಟ್ಟೆ ವ್ಯಾಪಾರಿಯೊಬ್ಬರು
ತಿಳಿಸಿದರು.

ಜಾತ್ರೆ ಸಡಗರ–ಹೂವಿನ ದರ ಹೆಚ್ಚಳ: ಇದು ಜಾತ್ರೆಗಳ ಸಮಯ. ಮಾರಿಹಬ್ಬ, ದೇವಸ್ಥಾನದ ಜಾತ್ರೆಗಳು, ಕೊಂಡೋತ್ಸವಗಳು ಜಿಲ್ಲೆಯಾದ್ಯಂತ ನಡೆಯುತ್ತಿದ್ದು, ಹೂವುಗಳಿಗೆ ಬೇಡಿಕೆ ಬಂದಿದೆ. ಹಾಗಾಗಿ, ಧಾರಣೆ ಕೊಂಚ ಹೆಚ್ಚಿದೆ.

ಚೆಂಡು ಹೂವು ₹15, ಸುಗಂಧರಾಜ₹30, ಸುಗಂಧರಾಜ ಹಾರ₹50, ಕಾಕಡ₹70, ಗುಲಾಬಿ (100ಕ್ಕೆ) ₹150, ಸೇವಂತಿ₹30, ಮಲ್ಲಿಗೆ₹100 ಹೆಚ್ಚಳವಾಗಿದೆ.

‘ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲೆಡೆ ಮಾರಿಹಬ್ಬ ಜಾತ್ರೆಯ ಸಂಭ್ರಮ ಮನೆ ಮಾಡಿದೆ. ದೇವಿ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರಕ್ಕೆ ಹೂವುಗಳ ಖರೀದಿ ನಡೆಯುತ್ತದೆ. ಇದರಿಂದ ಈಗ ಎಲ್ಲ ಹೂವುಗಳ ಬೆಲೆ ಏರಿಕೆಯಾಗಿದೆ’ ಎಂದು ಬಿಡಿ ಹೂವುಗಳ ವ್ಯಾಪಾರಿ ಶಾಂತು ಅವರು ‘ಪ್ರಜಾವಾಣಿ’ಗೆ ಹೇಳಿದರು.

ತರಕಾರಿಗಳ ಪೈಕಿ (ಹಾಪ್‌ಕಾಮ್ಸ್‌ನಲ್ಲಿ) ಕ್ಯಾರೆಟ್‌, ಹಾಗಲಕಾಯಿ₹10, ದಪ್ಪಮೆಣಸಿನ ಕಾಯಿ, ಬೀನ್ಸ್‌₹5 ಕಡಿಮೆಯಾಗಿದೆ. ಟೊಮೆಟೊ₹1, ಈರುಳ್ಳಿ₹3, ಬದನೆಕಾಯಿ₹3, ಗೋರಿಕಾಯಿ₹5, ತೆಂಗಿನ ಕಾಯಿ₹2 ಏರಿಕೆಯಾಗಿದೆ. ಉಳಿದ ತರಕಾರಿಗಳ ಬೆಲೆ ಯಥಾಸ್ಥಿತಿ ಮುಂದುವರಿದಿದೆ.

ಹಣ್ಣುಗಳ ಮಾರುಕಟ್ಟೆಯಲ್ಲಿ ಕಲ್ಲಂಗಡಿ₹2, ದಾಳಿಂಬೆ₹10 ಕಡಿಮೆ ಆಗಿದೆ. ಉಳಿದಂತೆ ಎಲ್ಲ ಹಣ್ಣುಗಳ ಬೆಲೆ ಎಂದಿನಂತೆಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT