ಸೋಮವಾರ, ಜನವರಿ 27, 2020
22 °C
ಹೂವುಗಳಿಗೆ ಕಡಿಮೆಯಾದ ಬೇಡಿಕೆ, ಮಾಂಸ ಧಾರಣೆ ಯಥಾಸ್ಥಿತಿ

ಚಾಮರಾಜನಗರ| ಈರುಳ್ಳಿ ಮತ್ತೆ ತುಟ್ಟಿ, ತರಕಾರಿ ಬೆಲೆ ಕೊಂಚ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಧನುರ್ಮಾಸದ ಆರಂಭದಲ್ಲಿ ಬೇಡಿಕೆ ಕಡಿಮೆಯಾಗಿದ್ದ ಕೆಲ ತರಕಾರಿಗಳ ಬೆಲೆ ಈ ವಾರ ಹೆಚ್ಚಳವಾಗಿದೆ. ಈರುಳ್ಳಿ ಮತ್ತೆ ತುಟ್ಟಿಯಾಗಿದ್ದು, ಕೆಜಿಗೆ ₹ 140ರ ವರೆಗೂ ಬೆಲೆ ಇದೆ.

ಹೂವುಗಳ ಮಾರುಕಟ್ಟೆಯಲ್ಲಿ ಬೇಡಿಕೆ ಇಳಿಮುಖವಾಗಿದೆ. ಮೊಟ್ಟೆ ದರ ಕೂಡ ಈ ವಾರ ಇಳಿಕೆ ಕಂಡಿದೆ. ಹಣ್ಣುಗಳು ಹಾಗೂ ಮಾಂಸ ಮಾರುಕಟ್ಟೆಯಲ್ಲಿ ದರ ಯಥಾಸ್ಥಿತಿ ಮುಂದುವರಿದಿದೆ.

ತರಕಾರಿಗಳ ಪೈಕಿ ಟೊಮೆಟೊ, ಕ್ಯಾರೆಟ್ ₹ 5, ಮರಗೆಣಸು, ಬೀನ್ಸ್‌ ₹ 20 ಹೆಚ್ಚಳವಾಗಿದೆ. ಉಳಿದಂತೆ ಅವರೆ, ತೊಗರಿ, ಮೂಲಂಗಿ ₹ 5 ಇಳಿಕೆ ಕಂಡಿದೆ.

‘ಧನುರ್ಮಾಸ ಆರಂಭಗೊಂಡ ಬಳಿಕ ತರಕಾರಿಗಳಿಗೆ ಬೇಡಿಕೆಯೂ ಕಡಿಮೆಯಾಗುತ್ತಿದೆ. ಮುಂದಿನ ಸಂಕ್ರಾಂತಿವರೆಗೂ ಬೆಲೆ ಏರಿಳಿತ ಕಂಡುಬರಲಿದೆ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಹೇಳುತ್ತಾರೆ.

ಬದಲಾಗದ ಹಣ್ಣುಗಳ ಬೆಲೆ: ಮಾರುಕಟ್ಟೆಯಲ್ಲಿ ಹಣ್ಣುಗಳ ಬೆಲೆ ವ್ಯತ್ಯಾಸವಾಗಿಲ್ಲ. ಆದರೆ, ಅಲ್ಲಲ್ಲಿ ತಳ್ಳುಗಾಡಿ, ಆಟೊಗಳಲ್ಲಿ ಸೇಬು, ಕಿತ್ತಳೆ, ದಾಳಿಂಬೆ ಮಾರಾಟ ಮಾಡುವ ಮಾರಾಟಗಾರರು ಗುಣಮಟ್ಟಕ್ಕೆ ತಕ್ಕಂತೆ ₹ 10ರಿಂದ ₹ 20 ಹೆಚ್ಚು ಕಡಿಮೆ ದರದಲ್ಲಿ ವ್ಯಾಪಾರ ಮಾಡುತ್ತಾರೆ.

ಶೂನ್ಯಮಾಸದಲ್ಲಿ ಮದುವೆ, ಗೃಹಪ್ರವೇಶ, ನಾಮಕರಣದಂತಹ ಶುಭ ಸಮಾರಂಭಗಳು ಜರುಗುವುದಿಲ್ಲ. ಹೀಗಾಗಿ, ಹೂವುಗಳಿಗೆ ಬೇಡಿಕೆ ಕಡಿಮೆ. ಆದರೆ, ದೇವಸ್ಥಾನಗಳಲ್ಲಿ ಪೂಜಾಕೈಂಕರ್ಯ ನಡೆಯುವುದರಿಂದ ಪೂಜಾ ದಿನಗಳ ಹಿಂದಿನ ದಿನಗಳಂದು ಕೊಂಚ ಬೆಲೆ ಏರಿಕೆ ಇರುತ್ತದೆ. 

‘ಚೆಂಡು ಹೂ, ಕನಕಾಂಬರ, ಗುಲಾಬಿ, ಮಲ್ಲಿಗೆ ಈ ವಾರ ಕೊಂಚ ಹೆಚ್ಚಳವಾಗಿದೆ. ಸುಗಂಧರಾಜ, ಕಾಕಡ ಭಾನುವಾರ, ಸೋಮವಾರ ಮಾತ್ರ ಏರಿಕೆ ಕಂಡಿದೆ. ಉಳಿದ ದಿನಗಳಲ್ಲಿ ಬೇಡಿಕೆಗೆ ತಕ್ಕಂತೆ ಸಾಧಾರಣ ಬೆಲೆ ಇರುತ್ತದೆ’ ಎಂದು ಬಿಡಿ ಹೂವುಗಳ ವ್ಯಾಪಾರಿ ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮೊಟ್ಟೆ ಧಾರಣೆ ಕೆಲವು ವಾರಗಳಿಂದ ಇಳಿಮುಖವಾಗಿದೆ. ಕಳೆದ ವಾರ 100 ಮೊಟ್ಟೆಗಳಿಗೆ ₹ 464 ಇತ್ತು. ಈ ವಾರ ₹ 450 ಆಗಿದೆ.

ಮಾಂಸ ಮಾರುಕಟ್ಟೆಯಲ್ಲಿ ಮೀನು, ಮಟನ್‌, ಚಿಕನ್‌ ಎಲ್ಲ ಬಗೆಯ ಮಾಂಸಗಳ ಬೆಲೆಯಲ್ಲಿ ವ್ಯತ್ಯಾಸ ಕಂಡುಬಂದಿಲ್ಲ. ಯಥಾಸ್ಥಿತಿ ಮುಂದುವರಿದಿದೆ.

ಈರುಳ್ಳಿ ಬೆಲೆ ಹೆಚ್ಚಳ

ಕಳೆದ ವಾರ ₹ 20 ಕಡಿಮೆಯಾಗಿದ್ದ ಈರುಳ್ಳಿ ಈ ವಾರ ಮತ್ತೆ ಏರಿಕೆ ಕಂಡಿದೆ. ಹಾಪ್‌ಕಾಮ್ಸ್‌ನಲ್ಲಿ ಈ ವಾರ ಕೆಜಿ ಈರುಳ್ಳಿ ₹ 80ರಿಂದ ₹ 120ರ ವರೆಗೆ ಬೆಲೆ ಇದೆ. ತಳ್ಳುಗಾಡಿಗಳಲ್ಲಿ ಈರುಳ್ಳಿ ಬೆಲೆ ₹ 100ರಿಂದ ₹ 140ರ ವರೆಗೂ ಮಾರಾಟ ನಡೆಯುತ್ತಿದೆ. ದಿನಸಿ ಅಂಗಡಿಗಳಲ್ಲಿ ಗುಣಮಟ್ಟದ ದೊಡ್ಡ ಗಾತ್ರದ ಈರುಳ್ಳಿಗೆ ಕೆಜಿಗೆ ₹ 140 ಇದೆ.  

ಸಿಗದ ನುಗ್ಗೆ: ಕೆಲವು ವಾರಗಳಿಂದ ನುಗ್ಗೆಕಾಯಿ ಮಾರುಕಟ್ಟೆಯಲ್ಲಿ ಹೆಚ್ಚು ಕಂಡು ಬರುತ್ತಿಲ್ಲ. ‘ಶುಭ ಸಮಾರಂಭಗಳ ಸಂದರ್ಭದಲ್ಲಿ ಕೆಜಿ ನುಗ್ಗೆಕಾಯಿ ₹ 300–₹ 350ರ ವರೆಗೆ ಬೆಲೆ ಇತ್ತು. ಈಗ ₹ 150ಕ್ಕೆ ಇಳಿದಿದೆ. ಆದರೆ, ಮಾರುಕಟ್ಟೆಗೆ ಆವಕವಾಗುತ್ತಿಲ್ಲ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿಗಳು  ಹೇಳುತ್ತಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು