ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಯುಗಾದಿ ಮೇಲೆ ಕೊರೊನಾ ಕರಿಛಾಯೆ

ಗಗನಕ್ಕೇರಿದ ಮಟನ್‌ ಬೆಲೆ; ಚಿಕನ್‌, ಮೊಟ್ಟೆ ಇಳಿಕೆ, ತರಕಾರಿಯೂ ತುಟ್ಟಿ
Last Updated 23 ಮಾರ್ಚ್ 2020, 20:30 IST
ಅಕ್ಷರ ಗಾತ್ರ

ಚಾಮರಾಜನಗರ: ಯುಗಾದಿಗೆ ಇನ್ನು ಒಂದು ದಿನ ಬಾಕಿ ಇದ್ದು, ಈ ಬಾರಿ ಹಬ್ಬದ ಸಂಭ್ರಮದ ಮೇಲೆ ಕೊರೊನಾ ವೈರಸ್‌ನ ಕರಿಛಾಯೆ ಬಿದ್ದಿದೆ.

ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಹಾಕಿರುವ ನಿರ್ಬಂಧಗಳ ಕಾರಣಕ್ಕೆ ಈ ವರ್ಷದ ಯುಗಾದಿಯ ಗೌಜಿ–ಗದ್ದಲ ಕಡಿಮೆ‌ ಇರುವ ನಿರೀಕ್ಷೆ ಇದೆ. ಹಾಗಿದ್ದರೂ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ.

ಭಾನುವಾರ ಜನತಾ ಕರ್ಫ್ಯೂ ನಂತರ ಸೋಮವಾರ ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಕೊರೊನಾ ಭೀತಿ ಆರಂಭವಾದ ನಂತರ ಚಿಕನ್‌ ಹಾಗೂ ಮೊಟ್ಟೆ ಬೆಲೆ ದಿನೇ ದಿನೇ ಕುಸಿಯುತ್ತಿದ್ದು, ಮಟನ್‌ ಬೆಲೆ ಗಗನಕ್ಕೇರಿದೆ. ಮೀನಿನ ಬೆಲೆಯೂ ಏರಿದೆ.ಹೂವುಗಳ ಬೆಲೆ ಸಂಪೂರ್ಣವಾಗಿ ಕುಸಿದಿದೆ.

ಜನತಾ ಕರ್ಫ್ಯೂ ಕಾರಣಕ್ಕೆ ಶನಿವಾರ ತರಕಾರಿ ಖರೀದಿಗೆ ಜನರು ಮುಗಿ ಬಿದ್ದುದರಿಂದ ಕೆಲವು ತರಕಾರಿಗಳ ಬೆಲೆ ದಿಢೀರ್‌ ಹೆಚ್ಚಾಗಿತ್ತು. ಮಂಗಳವಾರದಿಂದ ರಾಜ್ಯದಾದ್ಯಂತ ಮತ್ತು ಜಿಲ್ಲೆಯಲ್ಲೂ ಜನರು, ವಾಹನಗಳ ಓಡಾಟದ ಮೇಲೆ ನಿರ್ಬಂಧ ವಿಧಿಸಿರುವುದರಿಂದ ಸೋಮವಾರ ಮತ್ತೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ತರಕಾರಿ ಖರೀದಿಗೆ ಮುಂದಾದರು. ಹೀಗಾಗಿ,ತರಕಾರಿಗಳ ಬೆಲೆ ಹೆಚ್ಚಳವಾಗಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಿಗಳು.

ಬೀನ್ಸ್‌ ತುಟ್ಟಿ: ಬೀನ್ಸ್‌ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ವಾರ ₹25–₹30ರಷ್ಟಿದ್ದ ಕೆಜಿ ಬೀನ್ಸ್‌ ಬೆಲೆ ₹75ರಿಂದ ₹100ರವರೆಗೆ ಇದೆ. ಕ್ಯಾರೆಟ್‌ ಬೆಲೆಯಲ್ಲೂ ₹35ರಷ್ಟು ಹೆಚ್ಚಿದೆ.ಬೀನ್ಸ್‌, ಕ್ಯಾರೆಟ್‌ ಬೇಡಿಕೆ ಹೆಚ್ಚಿದ್ದು, ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲ. ಹೀಗಾಗಿ ಬೆಲೆ ಹೆಚ್ಚಾಗಿದೆ ಎಂದು ಹೇಳುತ್ತಾರೆ ವ್ಯಾಪಾರಿಗಳು.

ಟೊಮೆಟೊ₹8, ಈರುಳ್ಳಿ₹2, ಹಸಿಮೆಣಸಿನ ಕಾಯಿ₹5, ದಪ್ಪ ಮೆಣಸಿನಕಾಯಿ,ಬದನೆಕಾಯಿ₹15, ಬೀಟ್‌ರೂಟ್‌₹10, ಹೀರೆಕಾಯಿ₹5, ಹಾಗಲಕಾಯಿ₹20 ಹೆಚ್ಚಳವಾಗಿದೆ. ಹಣ್ಣುಗಳ ಪೈಕಿ ಸೇಬು₹40, ಕಲ್ಲಂಗಡಿ ₹5, ದಾಳಿಂಬೆ₹30 ಹೆಚ್ಚಳವಾಗಿದೆ. ಏಲಕ್ಕಿ ಬಾಳೆ₹10 ಕಡಿಮೆಯಾಗಿದೆ.

‘ನಾಳೆಯಿಂದ (ಮಾರ್ಚ್‌24) ಸೆಕ್ಷನ್‌ 144 ಜಾರಿಯಾದರೆ ತರಕಾರಿ ಮಾರಾಟಕ್ಕೆ ಅವಕಾಶ ಇರುವುದಿಲ್ಲ. ಆದ್ದರಿಂದ ಮುಂಜಾನೆಯೇ ಎಲ್ಲ ತರಕಾರಿಗಳನ್ನು ಖರೀದಿ ಮಾಡಿ ಮಾರಾಟ ಮಾಡುತ್ತಿದ್ದೇವೆ. ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆಯೂ ಏರಿಕೆಯಾಗಿದೆ. ಅಲ್ಲದೆ, ನಾಳೆ (ಮಾರ್ಚ್ 25) ಯುಗಾದಿ ಹಬ್ಬ ಇರುವುದರಿಂದ ಜನರು ಇಂದಿನಿಂದಲೇ ಕೆಲ ತರಕಾರಿಗಳನ್ನು ಖರೀದಿ ಮಾಡುತ್ತಿದ್ದಾರೆ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ‘ಪ್ರಜಾವಾಣಿ’ಗೆ ತಿಳಿಸಿದರು.

ಹೂವಿನ ಧಾರಣೆ ಕುಸಿತ: ಜಾತ್ರೆ, ಶುಭ ಸಮಾರಂಭಗಳು ಜರುಗದ ಕಾರಣದಿಂದ ಎಲ್ಲ ಹೂವುಗಳ ಬೆಲೆ ಕಡಿಮೆಯಾಗಿದೆ. ಕನಕಾಂಬರ₹100, ಸುಗಂಧರಾಜ₹140, ಸುಗಂಧರಾಜ ಹಾರ₹200, ಕಾಕಡ₹150, ಮಲ್ಲಿಗೆ₹200 ಕಡಿಮೆಯಾಗಿದೆ.

ಕೊರೊನಾ ಪರಿಣಾಮ: ‘ಜಿಲ್ಲೆಯಾದ್ಯಂತ ಕೊರೊನಾ ಹರಡದಂತೆ ಮುಂಜಾಗ್ರತಾ ಕ್ರಮವಹಿಸುವ ನಿಟ್ಟಿನಲ್ಲಿ ವಹಿಸಲಾದ ಕ್ರಮಗಳಿಗೆ ಹೂವಿನ ಧಾರಣೆ ಕುಸಿತ ಕಂಡಿದೆ. ಜನರು ಸೇರುವಂತಹ ಜಾತ್ರೆ, ಶುಭ ವಿವಾಹಗಳನ್ನು ನಡೆಸದಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದ ಬಳಿಕ ಹೂವುಗಳಿಗೆ ಬೇಡಿಕೆ ಕುಸಿಯಿತು. ಜಾತ್ರೆಗಳು ಜರುಗಿದರೆ ತಕ್ಕಮಟ್ಟಿಗೆ ವ್ಯಾಪಾರ ನಡೆಯುತ್ತಿತ್ತು. ಸದ್ಯಕ್ಕೆ ದರ ಏರಿಕೆಯಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ’ ಎಂದು ಹೂವಿನ ವ್ಯಾಪಾರಿ ರವಿ ಹೇಳಿದರು.

ಮೊಟ್ಟೆ ಗಣನೀಯ ಇಳಿಕೆ: ಕಳೆದೊಂದು ತಿಂಗಳಿಂದ ಮೊಟ್ಟೆಗೆ ಬೇಡಿಕೆ ಕುಸಿಯುತ್ತಿದೆ. ಪ್ರತಿ ಮೂರು ದಿನಗಳಿಗೆ ಏರಿಳಿತ ಕಂಡು ಬರುತ್ತಿದ್ದ ಮೊಟ್ಟೆ ಧಾರಣೆ ಈಗ ಇಳಿಕೆಯತ್ತ ಮುಖ ಮಾಡುತ್ತಿದೆ. ಕಳೆದ ವಾರ 100 ಮೊಟ್ಟೆಗೆ ₹320 ಇತ್ತು. ಈ ವಾರ ₹235 ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಗ್ಗವಾಗಲಿದೆ ಎನ್ನುತ್ತಾರೆ ವ್ಯಾಪಾರಿಗಳು.

ಚಿಕನ್‌ ಬೇಡ, ಮಟನ್‌ ಬೇಕು

ಕೊರೊನಾ ವೈರಸ್‌ ಹಾಗೂ ಹಕ್ಕಿಜ್ವರದ ಭಯಕ್ಕೆ ಜನರು ಕೋಳಿ ಮಾಂಸದಿಂದ ದೂರವಾಗುತ್ತಿದ್ದಾರೆ. ಹಾಗಾಗಿ ಮಟನ್‌ಗೆ ಬೇಡಿಕೆ ಹೆಚ್ಚಾಗಿದ್ದು, ಜನಸಾಮಾನ್ಯರಿಗೆ ಕೈಗೆಟುಕದಂತೆ ಆಗಿದೆ.

ಎರಡು ವಾರಗಳಿಂದೀಚೆಗೆ ಮಟನ್‌ ಬೆಲೆಯಲ್ಲಿ ಭಾರಿ ಏರಿಕೆ ಕಂಡು ಬರುತ್ತಿದೆ.ಮಾಂಸ ಮಾರುಕಟ್ಟೆಯಲ್ಲಿ ಕೆ.ಜಿ ಮಟನ್‌ ಬೆಲೆ₹550ರಿಂದ₹600 ರವರೆಗೆ ಇದೆ.

ಕಳೆದೆರಡು ವಾರಗಳಿಂದ ಕೊರೊನಾ ವೈರಸ್‌ ಹರಡುವಿಕೆ ಕಾರಣಕ್ಕಾಗಿ ಕುರಿ ಸಂತೆಗಳು ನಡೆಯುತ್ತಿಲ್ಲ. ಇದರಿಂದ ಮಟನ್‌ ಬೆಲೆ ಹೆಚ್ಚಳವಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

‘ಮೊದಲು₹ 300ರಿಂದ ₹350 ಇದ್ದಂತಹ ಮಟನ್‌ಈಗ ದಿಢೀರ್‌ ಬೆಲೆ ಏರಿಕೆ ಕಂಡಿದೆ.ಪ್ರತಿ ವಾರ ಸಂತೆಗಳಲ್ಲಿ ಕುರಿ, ಮೇಕೆಗಳ ಖರೀದಿ ಭರಾಟೆ ನಡೆಯುತ್ತಿತ್ತು. ಆಗ ನಿಗದಿತ ಬೆಲೆ ನಿರ್ಧರಿಸಿ ಖರೀದಿ ಮಾಡಿ ಮಾರಾಟ ಮಾಡುತ್ತಿದ್ದೆವು. ಕಳೆದೆರಡು ವಾರಗಳಿಂದ ಸಂತೆಗಳನ್ನು ನಿಷೇಧಿಸಲಾಗಿದೆ. ಹೀಗಾಗಿ, ಮಟನ್‌ ಬೆಲೆ ಏರಿಕೆ ಕಂಡಿದೆ’ ಎಂದು ಮಟನ್‌ ವ್ಯಾಪಾರಿ ತೌಸಿಫ್‌ ‘ಪ್ರಜಾವಾಣಿ’ಗೆ ಹೇಳಿದರು.

ಮೀನಿನ ಬೆಲೆಯೂ ಹೆಚ್ಚಳ: ಮೀನುಗಳ ಪೈಕಿಪಾಂಫ್ರೆಟ್‌ ಬೆಲೆ ಕೆ.ಜಿಗೆ ₹90, ಕಾಟ್ಲಾ ಕೆಜಿಗೆ ₹70ರಷ್ಟು ಜಾಸ್ತಿ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT